ರಾಜ್ಯಕ್ಕೆ ವಿದ್ಯುತ್ 'ಬರ'ಸಿಡಿಲು
ರಾಜ್ಯದ ಜನತೆಗೆ ಈಗ ಕರೆಂಟ್ ಎಂಬ ಶಬ್ಧ ಕೇಳಿದರೆ ಸಾಕು ಶಾಕ್ ಹೊಡೆದವರಂತೆ ಹೌಹಾರುತ್ತಾರೆ. ಅನಿಯಮಿತ ಲೋಡ್ಶೆಡ್ಡಿಂಗ್ನಿಂದ ಕಂಗೆಟ್ಟಿದ್ದಾರೆ. ಕೆಲವೆಡೆ ನೀರು ಪೂರೈಕೆಯೂ ಸಮರ್ಪಕವಾಗಿ ಆಗುತ್ತಿಲ್ಲ. ಕಾರಣ ಕೇಳಿದರೆ ಮತ್ತದೇ ವಿದ್ಯುತ್ ಸಮಸ್ಯೆ. ಇಂಥ ಸಮಸ್ಯೆಗಳ ಸರಮಾಲೆ 'ಕನ್ನಡಿಪ್ರಭ'ದಲ್ಲಿ ಮುಂದುವರಿದಿದೆ.
ದೀಪದ ಬುಡಕ್ಕೇ ಕತ್ತಲು ಗುರು!
ರಾಯಚೂರು: ನಾಡಿಗೆ ಹೆಚ್ಚು ವಿದ್ಯುತ್ ಪೂರೈಸುತ್ತಿರುವ ರಾಯಚೂರು ಜಿಲ್ಲೆಗೆ ವಿದ್ಯುತ್ ಕೊರತೆ ಕಾಡುತ್ತಿದೆ. ಹೌದು. ಜಿಲ್ಲೆಗೆ ಬೇಕಿರುವ ವಿದ್ಯುತ್ 120 ಮೆವ್ಯಾ. ಆದರೆ ಪೂರೈಕೆಯಾಗುತ್ತಿರುವುದು ಕೇವಲ 60 ಮೆವ್ಯಾ ಮಾತ್ರ. ಅಷ್ಟೇ ಅಲ್ಲ, ನಿತ್ಯ ತ್ರಿಫೇಸ್ ವಿದ್ಯುತ್ ತೀವ್ರ ಕಡಿತಗೊಳಿಸಲಾಗಿದೆ. ಮೂರು ತಾಸು ತ್ರಿಫೇಸ್ ಸಿಗುವುದೇ ಕಷ್ಟ. ಅನಿರ್ದಿಷ್ಟಾವಧಿ ಲೋಡ್ ಶೆಡ್ಡಿಂಗ್ ಇದೆ. ಆರ್ಟಿಪಿಎಸ್ ಘಟಕಗಳು ದುರಸ್ತಿಗೀಡಾದಾಗಲೆಲ್ಲ ನಗರ ಸೇರಿ ಜಿಲ್ಲಾದ್ಯಂತ 4ರಿಂದ 6 ಗಂಟೆ ವಿದ್ಯುತ್ ಕಡಿತ ಸಾಮಾನ್ಯ. ಸದ್ಯ ಆರ್ಟಿಪಿಎಸ್ನ 3ನೇ ಘಟಕವು ವಾರ್ಷಿಕ ದುರಸ್ತಿಯಲ್ಲಿದೆ. 5ನೇ ಘಟಕ ಮತ್ತು 7ನೇ ಘಟಕಗಳು ದುರಸ್ತಿಗೀಡಾಗಿದ್ದು ವಿದ್ಯುತ್ ಉತ್ಪಾದನೆ ಪ್ರಮಾಣ ಕುಸಿದಿದೆ. ಹೀಗಾಗಿ ನಗರದಲ್ಲಿ ಪ್ರದೇಶದಲ್ಲೂ ಸದ್ಯ ದಿನವೊಂದಕ್ಕೆ 4 ರಿಂದ 6 ತಾಸು ವಿದ್ಯುತ್ ಕಡಿತವಿದೆ. ಗ್ರಾಮೀಣ ಪ್ರದೇಶದಲ್ಲಿ ದಿನವೊಂದಕ್ಕೆ 3 ತಾಸು ಮಾತ್ರ ತ್ರಿಫೇಸ್ ಲಭ್ಯವಾಗುತ್ತಿದೆ. ಸಂಜೆ ರಿಂದ ಮರುದಿನ ಮಧ್ಯಾಹ್ನ 12ರವರೆಗೆ ಗ್ರಾಮೀಣ ಭಾಗದಲ್ಲಿ ಸಿಂಗಲ್ ಫೇಸ್ ಇದೆ. ಬಹುಭಾಗ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಗ್ರಾಮೀಣ ಭಾಗದಲ್ಲಿ 6 ಗಂಟೆ ಮಾತ್ರ ಲೋಡ್ ಶೆಡ್ಡಿಂಗ್ ಇರಬೇಕು. ಆದರೆ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಕಡಿತ ಜಾರಿಯಲ್ಲಿದೆ. ಇದನ್ನು ಯಾರೂ ಕೇಳದಂತೆ ಆಗಿದೆ.
ತಪ್ಪದ ಕರೆಂಟ್ ಕಿರಿಕಿರಿ
ಕೋಲಾರ: ಕರೆಂಟ್ ಕೈಕೊಡುತ್ತಿರುವುದರಿಂದ ರೈತರು, ಕೈಗಾರಿಕೋದ್ಯಮಿಗಳು, ಕಾರ್ಮಿಕರು ನಿತ್ಯ ಪರಿತಪಿಸುವಂತಾಗಿದೆ. ಕೋಲಾರ ಜಿಲ್ಲೆಯ ನರಸಾಪುರ, ಮಾಲೂರು ಮತ್ತು ಕೋಲಾರದ ಟಮಕ ಕೈಗಾರಿಕೆ ಪ್ರದೇಶದಲ್ಲಿ ಅಸಮರ್ಪಕ ವಿದ್ಯುತ್ನಿಂದಾಗಿ ಕೈಗಾರಿಕೋದ್ಯಮಿಗಳು ಲೇ ಆಫ್ ಮಾಡುವ ಹಂತ ತಲುಪಿದ್ದಾರೆ. ರೈತರೂ ಪರಿತಪಿಸುತ್ತಿದ್ದಾರೆ. ಪಂಪ್ಸೆಟ್ಗಳಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರೇಷ್ಮೆಗೂಡು ಸಾಕಣೆ, ಕೋಳಿ ಸಾಕಣೆ, ಗಿರಣಿ ಮಾಲೀಕರು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಕೋಲಾರ ಜಿಲ್ಲೆಗೆ ನಿತ್ಯ ಕನಿಷ್ಠ 120 ಮೆಗಾವ್ಯಾಟ್ ಅವಶ್ಯಕತೆ ಇದೆ. ಲಭ್ಯವಾಗುತ್ತಿರುವುದು ಕೇವಲ 30ರಿಂದ 35 ಮೆಗಾವ್ಯಾಟ್. ಗ್ರಾಮೀಣದಲ್ಲಿ ನಿತ್ಯ 2ರಿಂದ 3 ಗಂಟೆ ತ್ರಿಫೇಸ್ ಹಾಗೂ 4ರಿಂದ 5 ಗಂಟೆ ಸಿಂಗಲ್ ಫೇಸ್ ಪೂರೈಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಅಲ್ಲದೆ, ಒಂದು ಪಾಕೇಟ್ ನೀರಿಗೆ 2 ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮ ಸ್ಥಾಪನೆ ಮಾಡಿ ಕರೆಂಟ್ ಮತ್ತು ನೀರಿನ ಸಮಸ್ಯೆ ಜೊತೆಗೆ ಕೆಲ ಸಂಘಟನೆಗಳ ಧಮಕಿಯಿಂದ ಬೇಸತ್ತಿರುವ ಉದ್ಯಮಿಗಳು ಸರ್ಕಾರ ಮೂಲ ಸೌಕರ್ಯ ನೀಡುವಲ್ಲಿ ವಿಫಲವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರೆಂಟ್ ಕಣ್ಣಾಮುಚ್ಚಾಲೆ
ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯಾಪ್ತಿಯಲ್ಲೂ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಸೆಸ್ಕ್ಗೆ ಲೋಡ್ ಶೆಡ್ಡಿಂಗ್ ಸಹಿತ ಅಗತ್ಯವಿರುವ ವಿದ್ಯುತ್ 950 ಮೆಗಾವ್ಯಾಟ್. ಆದರೆ ಪೂರೈಕೆಯಾಗುತ್ತಿರುವ ವಿದ್ಯುತ್ 770 ಮೆಗಾವ್ಯಾಟ್. ಲೋಡ್ಶೆಡ್ಡಿಂಗ್ ರಹಿತವಾಗಿ ಬೇಕಾಗಿರುವ ವಿದ್ಯುತ್- 1200 ಮೆಗಾವ್ಯಾಟ್. ಬೇಡಿಕೆಗಿಂತ ಕಡಿಮೆ ವಿದ್ಯುತ್ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಶುಕ್ರವಾರದಿಂದ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ತಲಾ 1 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಪ್ರಮಾಣ ದಿನಕ್ಕೆ 10 ಗಂಟೆ. ನಂಜನಗೂಡು, ಎಚ್.ಡಿ. ಕೋಟೆ,. ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ, ಟಿ.ನರಸೀಪುರ ಸೇರಿದಂತೆ ಬಹುತೇಕ ಕಡೆ ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಕೇಳುವುದೇ ಬೇಡ. ಇದು ಕೆಲವೆಡೆ ಕುಡಿಯುವ ನೀರು ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಟಿ.ನರಸೀಪುರ ಪಪಂನಲ್ಲಿ ಲೋಡ್ ಶೆಡ್ಡಿಂಗ್ನಿಂದಾಗಿಯೇ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ ಎಂದು ಅಲ್ಲಿನ ಮುಖ್ಯಾಧಿಕಾರಿ ಹೇಳಿದ್ದಾರೆ. ವಿದ್ಯುತ್ ಉತ್ಪಾದನೆಯಲ್ಲಿ ತೊಂದರೆಯಾಗಿದ್ದು, ನಿರೀಕ್ಷಿತ ಪ್ರಮಾಣದ ವಿದ್ಯುತ್ ಸರಬರಾಜು ಆಗದೆ ಇರುವುದರಿಂದ ಅನಿಯಮಿತ ಕಡಿತ ಜಾರಿಗೆ ಕಾರಣ ಎಂಬುದು ಸೆಸ್ಕ್ ಹೇಳಿಕೆ.
ಮಂಡ್ಯದಲ್ಲೂ ಕರೆಂಟ್ ಕಾಟ ಜೋರು
ಮಂಡ್ಯ: ಮಂಡ್ಯ ಜಿಲ್ಲೆಯಲ್ಲೂ ವಿದ್ಯುತ್ ಕಡಿತದ ಬಿಸಿ ಜೋರಾಗಿದೆ. ಯಾವುದೇ ಪೂರ್ವ ಸೂಚನೆಗಳಿಲ್ಲದೆ ಕಡಿತಗೊಳಿಸಿರುವುದರಿಂದ ಜನತೆ ಕಂಗಾಲಾಗಿದ್ದಾರೆ. ಕೆಪಿಟಿಸಿಎಲ್ಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಪ್ರತಿನಿತ್ಯ 270 ಮೆಗಾವ್ಯಾಟ್ ಬೇಡಿಕೆ ಇದೆ. ಇದರಲ್ಲಿ 150 ಮೆಗಾವ್ಯಾಟ್ನ್ನು ಇಂಧನ ಇಲಾಖೆ ಸರಬರಾಜು ಮಾಡುತ್ತಿದೆ. ಸುಮಾರು 60ರಿಂದ 70 ಮೆಗಾವ್ಯಾಟ್ ಕೊರತೆ ನಿತ್ಯವೂ ಎದ್ದು ಕಾಡುತ್ತಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಪ್ರತಿ ನಿತ್ಯ ಸಂಜೆ ಮತ್ತು ಬೆಳಗ್ಗೆ ಕನಿಷ್ಠ 2ರಿಂದ 3 ತಾಸು ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಕನಿಷ್ಠ 9 ತಾಸುಗಳವರೆಗೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ. ಗ್ರಾಮಾಂತರದಲ್ಲಿ ನಿತ್ಯ 6 ಗಂಟೆ ತ್ರಿಫೇಸ್, 9 ಗಂಟೆ ಸಿಂಗಲ್ ಫೇಸ್ನಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಜಿಲ್ಲಾದ್ಯಂತ 3.22 ಲಕ್ಷಕ್ಕೂ ಅಧಿಕ ಮನೆ ಬಳಕೆಯ ಗ್ರಾಹಕರಿದ್ದಾರೆ. 36 ಸಾವಿರ ವಾಣಿಜ್ಯ, 9500 ಕೈಗಾರಿಕಾ ವಿದ್ಯುತ್ ಸಂಪರ್ಕಗಳಿವೆ. ಕುಡಿಯುವ ನೀರಿಗಾಗಿ 3800 ಹಾಗೂ ಬೀದಿದೀಪಗಳಿಗಾಗಿ 3700 ಸಂಪರ್ಕಗಳನ್ನು ಕಲ್ಪಿಸಿಕೊಡಲಾಗಿದೆ. ಗ್ರಾಮಾಂತರದಲ್ಲಿ 89,519 ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. 11 ಸಾವಿರಕ್ಕೂ ಅಧಿಕ ಅನಧಿಕೃತ ಪಂಪ್ಸೆಟ್ಗಳು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿವೆ. ಇವರೆಲ್ಲವೂ ಈಗ ತತ್ತರಿಸುವಂತಾಗಿದೆ.
ಕರೆಂಟ್ ಕಾಟ ಹೆಚ್ಚಾಯ್ತು ಕಣ್ರಿ!
ಹಾವೇರಿ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳೆರಡೂ ಕಡೆ ಕಳೆದೆರಡು ದಿನಗಳಿಂದ ಪದೇಪದೆ ವಿದ್ಯುತ್ ಕಡಿತವಾಗುತ್ತಿದೆ. ಬೇಸಿಗೆಗೂ ಮುನ್ನವೇ ಹೆಸ್ಕಾಂ ಕತ್ತಲೆಯ ಶಾಕ್ ನೀಡುತ್ತಿದ್ದು, ಕೃಷಿ ಪ್ರಧಾನ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ನಗರ ಪ್ರದೇಶದಲ್ಲಿ 3ರಿಂದ 4 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗುತ್ತಿದೆ. ಅದೂ ಪೀಕ್ ಅವರ್ಗಳಲ್ಲೇ ಹೆಚ್ಚು. ಇನ್ನು ಗ್ರಾಮೀಣ ಭಾಗದಲ್ಲಿ 8 ಗಂಟೆ ಕರೆಂಟ್ ತೆಗೆಯಲಾಗುತ್ತಿದೆ. ಗ್ರಾಮೀಣ ಭಾಗಕ್ಕೆ 6 ಗಂಟೆ ತ್ರಿಫೇಸ್ ಪೂರೈಕೆಯಾಗುತ್ತಿದೆ. 6ರಿಂದ 7 ಗಂಟೆ ಸಿಂಗಲ್ ಫೇಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪಂಪ್ಸೆಟ್ ಆಧಾರಿತ ಕೃಷಿ ಹೆಚ್ಚಿದ್ದು, ವಿದ್ಯುತ್ ವ್ಯತ್ಯಯ ರೈತರ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿ ಸದ್ಯ ನಿತ್ಯ ಸುಮಾರು 102 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದೆ. 40 ಮೆಗಾ ವ್ಯಾಟ್ ಪೂರೈಕೆಯಾಗುತ್ತಿದೆ. ಬೇಡಿಕೆಯ ಶೇ.40ರಷ್ಟು ವಿದ್ಯುತ್ ಪೂರೈಕೆಯಾಗುತ್ತಿದೆ. ಶೇಂಗಾ, ತರಕಾರಿ ಇನ್ನಿತರ ಬೆಳೆಗೆ ಸರಿಯಾಗಿ ನೀರು ಹಾಯಿಸಲಾಗದೇ ರೈತರು ಪರಿತಪಿಸುತ್ತಿದ್ದಾರೆ. ನಗರದಲ್ಲಿ ರಾತ್ರಿ 7ರಿಂದ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಬೀದರ್ನಲ್ಲೂ ವಿದ್ಯುತ್ಗೆ ಬರ
ಬೀದರ್: ಬೀದರ್ ಜಿಲ್ಲೆಯ ಹಲಬರ್ಗಾ ಮತ್ತು ಹುಮನಾಬಾದ್ನಲ್ಲಿ 220ಕೆವಿಯ ಎರಡು ವಿದ್ಯುತ್ ಘಟಕಗಳಿದ್ದು ಕಳೆದ ಮೂರ್ನಾಲ್ಕು ದಿನಗಳಿಂದೀಚೆಗೆ ದಿನಪೂರ್ತಿ ವಿದ್ಯುತ್ ಕಡಿತವಾಗಿ ಗ್ರಾಹಕರು ಪರದಾಡಿದ್ದೂ ಇದೆ. ಬೀದರ್ ಜಿಲ್ಲೆಗೆ ಒಟ್ಟಾರೆಯಾಗಿ 150ರಿಂದ 170 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದ್ದು ಸಾಮಾನ್ಯವಾಗಿ ಬೇಡಿಕೆಯಂತೆ ಸಿಗುವ ವಿದ್ಯುತ್ ಕಳೆದ ಮೂರ್ನಾಲ್ಕು ದಿನಗಳಿಂದ 90 ಮೆ.ವ್ಯಾಟ್ ಮಾತ್ರ ಪೂರೈಕೆಯಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ವಿದ್ಯುತ್ ಸ್ಥಗಿತದಂಥ ಸಮಸ್ಯೆಗಳು ಗ್ರಾಹಕರನ್ನು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗೀಡು ಮಾಡಿದೆ.
ಬೇಡಿಕೆ ಹೆಚ್ಚಾಯ್ತು, ಆದರೆ...
ಧಾರವಾಡ: ಹುಬ್ಬಳ್ಳಿ ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶಗಳು ನಿರಂತರ ಬೆಳೆಯುತ್ತಿವೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಕಷ್ಟವಾಗುತ್ತಿದೆ. ಧಾರವಾಡ ಜಿಲ್ಲೆಗೆ ಪ್ರತಿದಿನ 400 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದ್ದು, ಸದ್ಯ 300 ಮೆಗಾವ್ಯಾಟ್ ವಿದ್ಯುತ್ ಮಾತ್ರ ಪೂರೈಸಲಾಗುತ್ತಿದೆ. ಹೀಗಾಗಿ 100 ಮೆಗಾವ್ಯಾಟ್ ಅಭಾವವಿದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಕೊರತೆ ಇರುವುದರಿಂದ ಸಹಜವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಧಾರವಾಡ ಗ್ರಾಮೀಣ ಫೀಡರ್ ನಿರಂತರ ಜ್ಯೋತಿ ಗ್ರಾಮಗಳನ್ನು ಹೊರತುಪಡಿಸಿ 12 ಗಂಟೆ ಲೋಡ್ ಶೆಡ್ಡಿಂಗ್ ಇದೆ. ಇದರ ಜೊತೆಗೆ 24 ಗಂಟೆಗಳಲ್ಲಿ 6 ಗಂಟೆ ಮಾತ್ರ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದ್ದು, 18 ತಾಸು ಲೋಡ್ಶೆಡ್ಡಿಂಗ್ ಇರುತ್ತದೆ. ಬೆಳೆಗಳಿಗೆ ಬೇಕಾಗಿರುವ ಅಗತ್ಯ ನೀರು ಪೂರೈಕೆಯಾಗುತ್ತಿಲ್ಲ.
ಕಾರಣ: ನೀರಾವರಿ ರೈತರ ಸಂಖ್ಯೆ ಹೆಚ್ಚಾಗಿದ್ದು ಪಂಪಸೆಟ್ಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಹೆಸ್ಕಾಂ ವ್ಯವಸ್ಥಾಪಕ ಎಂಜಿನಿಯರ್ ಕೃಷ್ಣಮೂರ್ತಿ.
ನೀರಿಗೆ ಹಾಹಾಕಾರ; ಜನತೆಯೂ ತತ್ತರ
ರಾಮನಗರ: ಬೆಸ್ಕಾಂನ ಅಘೋಷಿತ ಲೋಡ್ ಶೆಡ್ಡಿಂಗ್ ಪರಿಣಾಮ ನಾಗರಿಕರು, ಕೊಳವೆ ಬಾವಿ ನಂಬಿದ ರೈತರು, ಪರೀಕ್ಷೆ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ವಿದ್ಯುತ್ ಬವಣೆ ಹೆಚ್ಚಿದೆ. ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳಲ್ಲಿ ಈಗಾಗಲೇ 3 ರಿಂದ 4 ತಾಸು, ಮಾಗಡಿ ಮತ್ತು ಕನಕಪುರ, ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ 4 ರಿಂದ 5 ತಾಸು, ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ವಿದ್ಯುತ್ ಕಡಿತವಿದೆ. ಗ್ರಾಮೀಣ ಪ್ರದೇಶದಲ್ಲಿ ನಿತ್ಯ 6 ತಾಸು ತ್ರೀಫೇಸ್ ವಿದ್ಯುತ್ ನೀಡಲಾಗುತ್ತಿದೆ. ಅಸಲಿಗೆ ಒಟ್ಟಾರೆ ವಿದ್ಯುತ್ ನೀಡುತ್ತಿರುವುದು 4 ರಿಂದ 5 ತಾಸು ಮಾತ್ರ. ಹಗಲು 4 ತಾಸು ಮತ್ತು ರಾತ್ರಿ 2 ತಾಸು. ಆದರೂ ರಾತ್ರಿ ಪಾಲನ್ನು ಬೆಸ್ಕಾಂ ಕಡಿತಗೊಳಿಸಿದೆ. ಹಗಲು ಮತ್ತು ರಾತ್ರಿ ತಲಾ 3 ಪಾಳಿಯನ್ನು ವಾರಕ್ಕೊಮ್ಮೆ ಬದಲಿಸಬೇಕು. ಇಲ್ಲೂ ಲಾಬಿಯಿದೆ. ಮಾಗಡಿ ಹೊರತುಪಡಿಸಿ ರಾಮನಗರ ಜಿಲ್ಲೆಯ ಉಳಿದ 3 ತಾಲೂಕುಗಳಿಗೆ ನಿತ್ಯ 130 ಮೆ.ವ್ಯಾ. ವಿದ್ಯುತ್ ಬೇಡಿಕೆಯಿದೆ. ಪೂರೈಕೆ ಆಗುತ್ತಿರುವುದು 60-70 ಮೆ.ವ್ಯಾ. ಮಾತ್ರ.