ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿದ್ಯುತ್ ಮಿತವ್ಯಯಕ್ಕೆ ಶರ್ಮಾ ಉಪಾಯ

ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಗೆ ವಿದ್ಯುತ್ ಕೊರತೆ ಒಂದು ಕಾರಣವಾದರೆ, ಅಷ್ಟೇ ಪ್ರಮಾಣದಲ್ಲಿ ಬೇಕಾಬಿಟ್ಟಿ ವಿದ್ಯುತ್ ಬಳಕೆ ಮತ್ತೊಂದು ಕಾರಣ...

Vishwanath S
Updated On : 22 Dec 2013, 12:40 pm

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಡಿ.21
ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಗೆ ವಿದ್ಯುತ್ ಕೊರತೆ ಒಂದು ಕಾರಣವಾದರೆ, ಅಷ್ಟೇ ಪ್ರಮಾಣದಲ್ಲಿ ಬೇಕಾಬಿಟ್ಟಿ ವಿದ್ಯುತ್ ಬಳಕೆ ಮತ್ತೊಂದು ಕಾರಣ.
ಈ ನಿಟ್ಟಿನಲ್ಲಿ ವಿದ್ಯುತ್ ಸಮರ್ಪಕ ಬಳಕೆ ಕುರಿತಂತೆ ಜಾಗೃತಿ ಮೂಡಿಸಬೇಕು ಎಂಬ ಕೋರಿಕೆಯನ್ನು 2006ರಿಂದಲೇ ಮೈಸೂರು ಗ್ರಾಹಕರ ಪರಿಷತ್ತಿನ ಶಂಕರ ಶರ್ಮ ಸರ್ಕಾರದ ಮುಂದಿಡುತ್ತಲೇ ಬಂದಿದ್ದಾರೆ.
ಈ ಕುರಿತಂತೆ 2006ರ ಫೆ. 5ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು. 2008ರ ಜುಲೈನಲ್ಲಿ ಅಂದಿನ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೂ ಪತ್ರ ಕಳುಹಿಸಿದ್ದರು. ವಿದ್ಯುತ್ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು. ಇದಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದರು.
ಸರ್ಕಾರ ಮತ್ತು ವಿದ್ಯುತ್ ಕಂಪನಿಗಳು ಕೇವಲ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಗೆ ಮಾತ್ರ ಆದ್ಯತೆ ನೀಡುವುದಲ್ಲ. ಜತೆಗೆ ವಿದ್ಯುತ್ತಿನ ಸಮರ್ಪಕ ಬಳಕೆ, ಉಳಿತಾಯದ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಸರ್ಕಾರವನ್ನು ಕೋರಿದ್ದ ಅವರು, ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕೆಲವು ಅಲ್ಪಾವಧಿ ಮತ್ತು ದೀರ್ಘಾವಧಿ  ಕಾರ್ಯಕ್ರಮಗಳನ್ನೂ ಸರ್ಕಾರದ ಗಮನಕ್ಕೆ ತಂದಿದ್ದರು. ಈ ಪೈಕಿ ಕೆಲವು ಕಾರ್ಯಕ್ರಮಗಳನ್ನು ವಿದ್ಯುತ್ ಪೂರೈಕೆ ಕಂಪನಿಗಳು ಜಾರಿಗೆ ತಂದವಾದರೂ ಅದು ಕೆಲ ದಿನಗಳಿಗಷ್ಟೇ ಸೀಮಿತವಾಗಿತ್ತು.
ಸಲಹೆಗಳೇನು?
ರಾಜ್ಯದ ವಿದ್ಯುತ್ ಉತ್ಪಾದಕರ ಜತೆ ಒಪ್ಪಂದ ಮಾಡಿಕೊಂಡು ಅವರು ಉತ್ಪಾದಿಸುವ ವಿದ್ಯುತ್ತನ್ನು ರಾಜ್ಯಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
ಉತ್ತಮ ಗುಣಮಟ್ಟದ ಸಿಎಫ್‌ಎಲ್ ಬಲ್ಬ್‌ಗಳನ್ನು ಸಂಗ್ರಹಿಸಿ ಗ್ರಾಹಕರಿಗೆ ಒದಗಿಸಬೇಕು. ಇದರಿಂದ ಸಾಕಷ್ಟು ವಿದ್ಯುತ್ ಉಳಿತಾಯ ಸಾಧ್ಯ.

*  ರಾಜ್ಯದ ವಿದ್ಯುತ್ ಉತ್ಪಾದಕರ ಜತೆ ಒಪ್ಪಂದ ಮಾಡಿಕೊಂಡು ಅವರು ಉತ್ಪಾದಿಸುವ ವಿದ್ಯುತ್ತನ್ನು ರಾಜ್ಯಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
*  ಎಸ್ಕಾಂಗಳು ಉತ್ತಮ ಗುಣಮಟ್ಟದ ಸಿಎಫ್‌ಎಲ್ ಬಲ್ಬ್‌ಗಳನ್ನು ಸಂಗ್ರಹಿಸಿ ಗ್ರಾಹಕರಿಗೆ ಒದಗಿಸಬೇಕು. ಇದರಿಂದ ಸಾಕಷ್ಟು ವಿದ್ಯುತ್ ಉಳಿತಾಯ ಸಾಧ್ಯ.
*  ಸಮರ್ಪಕ ವಿದ್ಯುತ್ ಬಳಕೆ ಮತ್ತು ಸಂರಕ್ಷಣೆ ಕುರಿತಂತೆ ಜನಜಾಗೃತಿ ಮೂಡಿಸಬೇಕು. ಪ್ರತಿ ತಿಂಗಳು ಶೇ. 5ರಿಂದ 10ರಷ್ಟು ವಿದ್ಯುತ್ ಉಳಿತಾಯ ಮಾಡುವಂತೆ ಅವರ ಮನವೊಲಿಸಬೇಕು.
*  ಬೆಳಗ್ಗೆ 6ರಿಂದ 8 ಮತ್ತು ಸಂಜೆ 6ರಿಂದ 8 ಗಂಟೆ ಮಧ್ಯೆ ಅಗತ್ಯ ವಿದ್ಯುತ್ ದೀಪಗಳನ್ನು ಹೊರತುಪಡಿಸಿ ಅನಗತ್ಯವಾಗಿ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಬಳಸದಂತೆ ಜನರ ಗಮನ ಸೆಳೆಯುವ ಕಾರ್ಯ ಮಾಡಬೇಕು.
*  ಇಂಧನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಮಾಡಿದರೆ ಇದರಿಂದ ಸಾಕಷ್ಟು ಲಾಭವಾಗುತ್ತದೆ. ವಾಣಿಜ್ಯ ಬಳಕೆ ಮಾಡುವ ವಿದ್ಯುತ್ತಿನಲ್ಲಿ ತಿಂಗಳಿಗೆ ಶೇ. 5ರಿಂದ 10ರಷ್ಟು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಬೇಕು.
*  ಅತಿ ಹೆಚ್ಚು ವಿದ್ಯುತ್ ಬಳಸುವ ಹೋರ್ಡಿಂಗ್ಸ್, ಜಾಹೀರಾತು ಫಲಕಗಳನ್ನು ನಿಷೇಧಿಸಬೇಕು.
*  5 ಕಿಲೋವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಶಾಪಿಂಗ್ ಮಾಲ್‌ಗಳು ಸೇರಿದಂತೆ ಮುಖ್ಯವಲ್ಲದ ವಾಣಿಜ್ಯ ಸಂಸ್ಥೆಗಳು ರಾತ್ರಿ 7ರಿಂದ 10 ಗಂಟೆವರೆಗೆ ಬಳಸುವ ವಿದ್ಯುತ್ತಿಗೆ ಮಿತಿ ಹೇರಬೇಕು.
*  ವಿದ್ಯುತ್ ಬೇಡಿಕೆ ಇರುವ ಸಂದರ್ಭದಲ್ಲಿ ಸೌಂದರ್ಯಕ್ಕಾಗಿ ಇಲ್ಲವೇ ಅಲಂಕಾರಕ್ಕಾಗಿ ವಿದ್ಯುತ್‌ದೀಪಗಳನ್ನು ಬಳಸುವುದಕ್ಕೆ ನಿರ್ಬಂಧ ಹೇರಬೇಕು.
*  ಮಿತಿಮೀರಿ ಬೀದಿದೀಪಗಳ ಬಳಕೆಗೆ ಮಿತಿ ಹೇರಲು ಅವಕಾಶಗಳಿವೆ. ನಗರ ಪ್ರದೇಶಗಳಲ್ಲಿ ಅನಗತ್ಯವಾಗಿ ಅತಿ ಹೆಚ್ಚು ಪ್ರಕಾಶಮಾನವಾದ ಬೀದಿದೀಪ ಅಳವಡಿಸಲಾಗುತ್ತದೆ. ಹೀಗಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಸಂದರ್ಭದಲ್ಲಿ ಪ್ರತಿ 2 ಬೀದಿದೀಪಗಳ ಪೈಕಿ ಒಂದನ್ನು ಆರಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು.
*  ಕೈಗಾರಿಕೆಗಳಲ್ಲಿ ವಿದ್ಯುತ್ ಉಳಿತಾಯ ಮಾಡಲು ಸಾಕಷ್ಟು ಅವಕಾಶಗಳಿವೆ. ಆದ್ದರಿಂದ ಕೈಗಾರಿಕಾ ಸಂಸ್ಥೆಗಳ ಜತೆ ಮಾತುಕತೆ ನಡೆಸಿ ಪ್ರತಿ ತಿಂಗಳು ಶೇ. 5ರಿಂದ 10ರಷ್ಟು ಕಡಿಮೆ ವಿದ್ಯುತ್ ಬಳಸುವಂತೆ ಮನವೊಲಿಸಬೇಕು. ಜತೆಗೆ ವಾರಕ್ಕೆ ಒಂದು ಅಥವಾ 2 ರಜೆ ದಿನ ಘೋಷಿಸುವುದು ಅಥವಾ ದಿನಕ್ಕೆ ಒಂದು ಅಥವಾ ಎರಡು ಪಾಳಿಯಲ್ಲಿ ಮಾತ್ರ ಯಂತ್ರಗಳು ಓಡುವಂತೆ ಮಾಡಬೇಕು.
*  ಬೀದಿದೀಪಗಳು ಹಗಲು ವೇಳೆ ಉರಿಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹಗಲು ಬೀದಿದೀಪ ಉರಿದರೆ ಅದಕ್ಕೆ ಸಂಬಂಧಪಟ್ಟವರನ್ನು ಜವಾಬ್ದಾರಿ ಮಾಡಬೇಕು. ಜತೆಗೆ ಬೆಳಕು ಬಂದಾಗ ಬೀದಿದೀಪ ಆರುವ ತಾಂತ್ರಿಕತೆಯನ್ನು ಅಳವಡಿಸಬೇಕು.
*  ಪರ್ಯಾಯ ವ್ಯವಸ್ಥೆ ಇರುವ ಸಂದರ್ಭದಲ್ಲಿ ಹವಾನಿಯಂತ್ರಕಗಳನ್ನು ಬಳಸದಂತೆ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಬೇಕು. ಶೇ. 10ರಷ್ಟು ವಿದ್ಯುತ್ ಉಳಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಬೇಕು.
*  ಸರ್ಕಾರಿ ಕಚೇರಿಗಳು, ಕಟ್ಟಡಗಳಲ್ಲಿ ಲಿಫ್ಟ್ ಸೇರಿದಂತೆ ಅನಗತ್ಯ ವಿದ್ಯುತ್ ವ್ಯಯವಾಗುವ ಸಲಕರಣೆಗಳ ಬಳಕೆಗೆ ನಿಯಂತ್ರಣ ಹೇರಬೇಕು.
*  ವಿದ್ಯುತ್ ಪೂರೈಕೆ ಮತ್ತು ಸರಬರಾಜು ಸಂದರ್ಭದಲ್ಲಿ ಆಗುವ ನಷ್ಟವನ್ನು ಶೇ. 10ಕ್ಕಿಂತ ಕಡಿಮೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
*  ಕ್ರಿಕೆಟ್, ಹಾಕಿ, ಫುಟ್‌ಬಾಲ್ ಮೈದಾನಗಳಲ್ಲಿ ಫ್ಲಡ್‌ಲೈಟ್‌ಗಳಿಗೆ ವಿದ್ಯುತ್ ಬದಲಾಗಿ ಸೋಲಾರ್ ಬಳಕೆಗೆ ಸೂಚನೆ ನೀಡಬೇಕು.
*  ಮನೆ, ವಾಣಿಜ್ಯ ಕಟ್ಟಡಗಳಲ್ಲಿ ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಅಲ್ಲಿನ ಬಳಕೆಗೆ ಬೇಕಾದ ವಿದ್ಯುತ್ ಉತ್ಪಾದಿಸುವಂತೆ ನೋಡಿಕೊಳ್ಳಬೇಕು. ಸೋಲಾರ್ ವಿದ್ಯುತ್ ಅಥವಾ ಬಯೋವಾಸ್ ವಿದ್ಯುತ್ತಿನಿಂದ ವಿದ್ಯುತ್ ಗ್ರಿಡ್‌ಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ.
*  ನವೀಕರಿಸಬಹುದಾದ ಇಂಧನ ವಲಯಕ್ಕೆ ಆದ್ಯತೆ ನೀಡಬೇಕು. ಸೋಲಾರ್ ವಾಟರ್ ಹೀಟರ್‌ಗಳನ್ನು ಬಳಸಬೇಕು.
ಇಂತಹ ಸಾಕಷ್ಟು ಸಲಹೆಗಳನ್ನು ಅವರು ನೀಡಿದ್ದಾರೆ. ಅಲ್ಲದೆ, ವಿದ್ಯುತ್ ವಲಯದಲ್ಲಿ ಆದ್ಯತೆ ಮೇಲೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆಯೂ ಅವರು ಸರ್ಕಾರಕ್ಕೆ ಮಾಹಿತಿ, ವಿವರಗಳನ್ನು ನೀಡಿದ್ದಾರೆ.
ಎಲ್ಲೆಲ್ಲಿ ಏನೇನು ಸಮಸ್ಯೆ
*  ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪಂಪ್‌ಸೆಟ್‌ಗಳಿಗೆ 18 ಗಂಟೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದ್ದು, ಕೇವಲ 6 ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
*  ರಾಮನಗರ ಜಿಲ್ಲೆಯಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ವಾಣಿಜ್ಯ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಿದೆ. ಚನ್ನಪಟ್ಟಣ, ಕನಕಪುರ ಸೇರಿದಂತೆ ಜಿಲ್ಲಾದ್ಯಂತ ನೀರು ಪೂರೈಕೆಗೆ ತೊಂದರೆಯಾಗಿದ್ದು ನೀರಿಗೆ ಹಾಹಾಕಾರ ಉಂಟಾಗಿದೆ. ಜಿಲ್ಲೆಗೆ 130 ಮೆವ್ಯಾ ವಿದ್ಯುತ್ ಬೇಡಿಕೆ ಪೈಕಿ 60ರಿಂದ 70 ಮೆವ್ಯಾ ಮಾತ್ರ ಪೂರೈಕೆ ಮಾಡಲಾಗುತ್ತಿದೆ.
*  ಕೋಲಾರ ಜಿಲ್ಲೆಗೆ 120 ಮೆವ್ಯಾ ವಿದ್ಯುತ್ ಪೈಕಿ ಕೇವಲ 30ರಿಂದ 35 ಮೆವ್ಯಾ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರು, ವಾಣಿಜ್ಯ ವಹಿವಾಟಿಕೆ ಅಡಚಣೆ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ 4ರಿಂದ 5 ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ನೀರು ಸಿಗದಿದ್ದರಿಂದ ಜನತೆ ಮಿನರಲ್ ವಾಟರ್ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
*  ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಆರ್‌ಟಿಪಿಎಸ್ ಇದ್ದರೂ ವಿದ್ಯುತ್ ಕೊರತೆ ಕಾಟ ತಪ್ಪಿಲ್ಲ. ಪ್ರತಿದಿನ 120 ಮೆವ್ಯಾ ವಿದ್ಯುತ್ ಪೈಕಿ 60 ಮೆವ್ಯಾ ಮಾತ್ರ ಪೂರೈಕೆ ಮಾಡಲಾಗುತ್ತಿದೆ. ನಗರ, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನಿಯಮಿತವಾಗಿ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿದೆ. ದಿನಕ್ಕೆ 3 ಗಂಟೆಗಳ ಕಾಲ ತ್ರಿಫೇಸ್ ಸಿಕ್ಕರೆ ಹೆಚ್ಚು ಎನ್ನುವ ಸ್ಥಿತಿ ಇದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement