ಸೈನೈಡ್ ಕಿಲ್ಲರ್ ಮೋಹನ್ ಕುಮಾರ್‌ಗೆ ಮರಣದಂಡನೆ
ಮಂಗಳೂರು: ಪ್ರೀತಿಯ ನೆಪದಲ್ಲಿ ಅತ್ಯಾಚಾರವೆಸಗಿ ಯುವತಿಯರನ್ನು ಸೈನೈಡ್ ನೀಡಿ ಅಮಾನುಷವಾಗಿ ಕೊಲೆ ಮಾಡುತ್ತಿದ್ದ ಮೋಹನ್‌ಕುಮಾರ್‌ಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಬಂಟ್ವಾಳ ಬರಿಮಾರ್‌ನ ಅನಿತಾ, ವಾಮದಪದವಿನ ಲೀಲಾವತಿ, ಸುಳ್ಯ ಪೆರುವಾಜೆ ಸುನಂದ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶನಿವಾರ ತೀರ್ಪು ಪ್ರಕಟಿಸಲಾಗಿದೆ. ಮೂರು ಪ್ರತ್ಯೇಕ ಪ್ರಕರಣ ಸೇರಿ ಗಲ್ಲು ಶಿಕ್ಷೆ ವಿಧಿಸಿದ್ದು ರಾಜ್ಯದಲ್ಲಿ ಇದೇ ಮೊದಲು. ಯುವತಿಯರನ್ನು ತನ್ನ ಲೈಂಗಿಕ ಸುಖಕ್ಕೆ ಬಳಸಿ ನಂತರ ಅವರಿಗೆ ಸೈನೈಡ್ ನೀಡಿ ಕೊಲೆ ಮಾಡುತ್ತಿದ್ದ.
ಬಳಿಕ ಅವರಲ್ಲಿದ್ದ ಆಭರಣವನ್ನು ಮಾರಾಟ ಮಾಡಿ ಮಜಾ ಮಾಡುತ್ತಿದ್ದ ಮೋಹನ್‌ಗೆ ಇದೊಂದು ಹವ್ಯಾಸವೇ ಆಗಿತ್ತು. ಇದುವರೆಗೆ ಸುಮಾರು 20 ಯುವತಿಯರನ್ನು ಮೋಹನ್‌ಕುಮಾರ್ ಈ ರೀತಿ ಕೊಲೆ ಮಾಡಿದ್ದಾನೆ. 3 ಪ್ರಕರಣದಲ್ಲಿ ಒಟ್ಟು 40 ಸಾಕ್ಷಿಗಳು ಮೋಹನ್ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ. ಒಟ್ಟು 225 ಪುಟದ ವರದಿಯನ್ನು ಅರ್ಧಗಂಟೆ ಸುದೀರ್ಘವಾಗಿ ಓದಿದ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಪ್ರಕಟಿಸಿ, 'ಇನ್ನು ಮುಂದೆ ಇಂಥ ಪ್ರಕರಣಕ್ಕೆ ಈ ಪೆನ್ನು ಬಳಕೆಯಾಗದಿರಲಿ' ಎಂದು ಪೆನ್ ನಿಬ್ಬನ್ನು ಮುರಿದರು. ಇದಲ್ಲದೇ ಇನ್ನೂ 17 ಪ್ರಕರಣಗಳು ಸಾಕ್ಷಿಗಳ ಕೊರತೆಯಿಂದ ವಿಚಾರಣೆ ಬಾಕಿಯುಳಿದಿವೆ. 10 ಪ್ರಕರಣಗಳ ಅರ್ಧ ವಿಚಾರಣೆ ಮುಗಿದಿದೆ. 7 ಪ್ರಕರಣಗಳನ್ನು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿವೆ.
ತನ್ನ ಕೇಸ್‌ಗೆ ತಾನೇ ವಾದ ಮಾಡಿದ್ದ: ಸರ್ಕಾರಿ ವಕೀಲರನ್ನು ನೇಮಿಸಿಕೊಳ್ಳದೆ ತಾನೇ ವಾದ ಮಾಡಿಕೊಳ್ಳುತ್ತಿದ್ದ ಮೋಹನ್, ಸಾಕ್ಷಿದಾರರನ್ನು ತಬ್ಬಿಬ್ಬುಗೊಳಿಸುತ್ತಿದ್ದ. ನೀಟಾಗಿ ಶೇವಿಂಗ್, ಹೇರ್‌ಡೈ, ಇಸ್ತ್ರಿ ಹಾಕಿದ ಶರ್ಟ್, ಪ್ಯಾಂಟ್ ಹಾಕಿ ಕೋರ್ಟ್‌ಗೆ ಆಗಮಿಸುತ್ತಿದ್ದ. ನ್ಯಾಯಾಧೀಶರೆದುರು ಮೋಹನ್ ತನ್ನ ತಪ್ಪನ್ನು ಯಾವತ್ತೂ ಒಪ್ಪಿಕೊಂಡಿಲ್ಲ. ನ್ಯಾಯಾಧೀಶರೆದುರೇ ತನ್ನ ತಪ್ಪನ್ನು ಮರೆಮಾಚುತ್ತಿದ್ದ.