ಭ್ರಷ್ಟರ ಪ್ರಾಮಾಣಿಕತೆ ಪಾಠ ನಂಬಬಹುದೇ? ಮೋದಿ ಮಹಾಗರ್ಜನೆ
ಭ್ರಷ್ಟಾಚಾರದಲ್ಲಿ ಮುಳುಗಿರುವವರೇ ಈಗ ಭ್ರಷ್ಟಾಚಾರದ ವಿರುದ್ಧ ಉಪದೇಶ ಮಾಡುತ್ತಿದ್ದಾರೆ..
ಮುಂಬೈ: ಭ್ರಷ್ಟಾಚಾರದಲ್ಲಿ ಮುಳುಗಿರುವವರೇ ಈಗ ಭ್ರಷ್ಟಾಚಾರದ ವಿರುದ್ಧ ಉಪದೇಶ ಮಾಡುತ್ತಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ನಾನು ಶನಿವಾರ ಕಾಂಗ್ರೆಸ್ನ ದೊಡ್ಡ ನಾಯಕರೊಬ್ಬರ ಭಾಷಣ ಆಲಿಸಿದೆ. ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರು. ಭ್ರಷ್ಟಾಚಾರದಲ್ಲಿ ಮುಳುಗಿರುವವರೇ ಭ್ರಷ್ಟಾಚಾರದ ಬಗ್ಗೆ ಉಪದೇಶ ನೀಡುತ್ತಿದ್ದರು. ಇಷ್ಟು ಧೈರ್ಯ ಯಾರಿಗೂ ಬರುವುದಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗೆದ್ದಿದ್ದರೂ ತಾವು ಏನೂ ಮಾಡೇ ಇಲ್ಲ ಎನ್ನುವ ರೀತಿ ಅವರು ಮಾತನಾಡುತ್ತಿದ್ದರು' ಎಂದು ರಾಹುಲ್ ಗಾಂಧಿ ಹೆಸರೆತ್ತದೆ ಮೋದಿ ವ್ಯಂಗ್ಯವಾಡಿದ್ದಾರೆ.
ಒಂದು ಕಡೆ ಆದರ್ಶ ಹಗರಣದಲ್ಲಿ ಭ್ರಷ್ಟ ಸಚಿವರ ರಕ್ಷಣೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗುತ್ತದೆ. ಇನ್ನೊಂದು ಕಡೆ ಕಾಂಗ್ರೆಸ್ ಮುಖಂಡರೊಬ್ಬರು ದೆಹಲಿಯಲ್ಲಿ ಭ್ರಷ್ಟಾಚಾರದ ಕುರಿತು ಉಪದೇಶ ಮಾಡುತ್ತಾರೆ ಎಂದು ಹೇಳಿದ್ದಾರೆ ಮೋದಿ.
ಕಾಂಗ್ರೆಸ್ ಹೇಳುವುದೊಂದು ಮಾಡುವುದೊಂದು. ಕಾಂಗ್ರೆಸ್ ನಾಯಕರು ಸರ್ಕಾರದಲ್ಲಿ ಇರಲಿ ಬಿಡಲಿ. ಎಲ್ಲ ಕೆಲಸ ಕಾರ್ಯಗಳು ಅವರ ನಿರ್ದೇಶನದಂತೆಯೇ ನಡೆಯುತ್ತವೆ. ಇದೇ ಮಂದಿ ಭಾಷಣ ಮಾಡಲು ಹೊರಟರೆ ಇನ್ನೊಂದು ಸರ್ಕಾರ ಅಥವಾ ಇನ್ನೊಂದು ದೇಶಕ್ಕಾಗಿ ಮಾತನಾಡುತ್ತಿದ್ದಾರೆಯೇ ಎನ್ನುವ ಅನುಮಾನ ಮೂಡದೇ ಇರದು ಎಂದರು.
10000 ಟೀವಾಲಾಗಳು!
ನರೇಂದ್ರ ಮೋದಿ ಅವರ ಮಹಾಗರ್ಜನೆ ರ್ಯಾಲಿಗೆ 10 ಸಾವಿರ ಟೀವಾಲಾಗಳನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಈ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ಟೀವಾಲಾಗಳಿಗೆ ವಿಶೇಷ ಪಾಸ್ ಅನ್ನು ನೀಡಲಾಗಿದೆ ಎಂಬುದು ಗೊತ್ತಾಯಿತು. ಇದು ಬದಲಾವಣೆಯ ಸಂಕೇತ. ಸಾಮಾನ್ಯರೂ ವಿಐಪಿ ಆಗುವ ದಿನಗಳು ಬರಲಿವೆ ಎಂದರು.
* ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶವನ್ನು ಒಗ್ಗೂಡಿಸಲು ಮುಂದಾದರೆ ಕಾಂಗ್ರೆಸ್ ಸಹೋದರರನ್ನು ಸಹೋದರರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದೆ. ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ರಚಿಸಿದೆ.
* ದೇಶವನ್ನು ವೋಟ್ಬ್ಯಾಂಕ್ ರಾಜಕೀಯದಿಂದ ಮುಕ್ತಗೊಳಿಸದ ಹಾಗೂ ಅಭಿವೃದ್ಧಿಪಥದಲ್ಲಿ ಕೊಂಡೊಯ್ಯದ ಹೊರತು ನಾವು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ.
* ಮನಮೋಹನ ಸಿಂಗ್ ಸರ್ಕಾರ ಮುಸ್ಲಿಂ ಬಾಹುಳ್ಯವುಳ್ಳ 90 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅವರ ಕಲ್ಯಾಣಕ್ಕಾಗಿ ಬೃಹತ್ ಯೋಜನೆಗಳನ್ನು ಪ್ರಕಟಿಸಿತು. ಮುಸ್ಲಿಮರು ತಮಗೆ ಒಳ್ಳೆಯ ದಿನ ಬಂದಿದೆ ಎಂದು ನಂಬಿದರು. ಮಾಧ್ಯಮಗಳೂ ಹಾಗೇ ಬರೆದವು. ಆದರೆ, ಸಂಸತ್ತಿನಲ್ಲಿ ಈ ವಿಚಾರದ ಕುರಿತು ಪ್ರಶ್ನಿಸಿದಾಗ ಆ ಜಿಲ್ಲೆಗಳಲ್ಲಿ ಮೂರು ವರ್ಷಗಳಲ್ಲಿ ಒಂದೇ ಒಂದು ರುಪಾಯಿಯನ್ನೂ ಸರ್ಕಾರ ವೆಚ್ಚ ಮಾಡದಿರುವ ವಿಚಾರ ಬೆಳಕಿಗೆ ಬಂತು. ಇದು ಕಾಂಗ್ರೆಸ್ನ ವೋಟ್ ಬ್ಯಾಂಕ್ ರಾಜಕೀಯಕ್ಕೆ ಒಂದು ಉದಾಹರಣೆ.
* ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ನಮ್ಮ ಇತಿಹಾಸವಾಗಲಿ, ಭೂಗೋಳವಾಗಲಿ ಮೂಲವಲ್ಲ. ಬದಲಾಗಿ ಇದಕ್ಕೆಲ್ಲ ಕಾಂಗ್ರೆಸ್ ಆಡಳಿತವೇ ಕಾರಣ.
* ಮುಂಬರುವ ಚುನಾವಣೆಯಲ್ಲಿ ಪಕ್ಷದ ಆಧಾರದ ಬದಲು ದೇಶಕ್ಕಾಗಿ ಮತಯಾಚಿಸಬೇಕು. ವಂಶಾಡಳಿತದಿಂದ ದೇಶವನ್ನು ಮುಕ್ತಗೊಳಿಸಬೇಕು, ಭ್ರಷ್ಟಾಚಾರ, ಹಣದುಬ್ಬರ, ದುರಾಡಳಿತದಿಂದ ದೇಶವನ್ನು ಮುಕ್ತಗೊಳಿಸಬೇಕು. ದೇಶದ ಏಕತೆಯನ್ನು ಕಾಯ್ದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ.
* ಎಲ್.ಕೆ.ಆಡ್ವಾಣಿ ನೇತೃತ್ವದಲ್ಲಿ ಬಿಜೆಪಿಯ ಎಲ್ಲ ಸಂಸದರು ತಾವು ವಿದೇಶದಲ್ಲಿ ಕಾಳಧನ ಇಟ್ಟಿಲ್ಲ ಎಂದು ಲಿಖಿತವಾಗಿ ಹೇಳಿದ್ದಾರೆ. ಮೂರು ವರ್ಷಗಳೊಳಗೆ ಈ ಹಣವನ್ನು ವಾಪಸ್ ತಂದು ಬಡವರಿಗೆ ಹಂಚುವ ಕೆಲಸವನ್ನು ಕಾಂಗ್ರೆಸ್ ಮಾಡಲಿ.
* ಮಹಾರಾಷ್ಟ್ರದಿಂದ ಪ್ರತ್ಯೇಕಗೊಂಡಾಗ ಗುಜರಾತ್ನಲ್ಲಿ ಏನೇನೂ ಇರಲಿಲ್ಲ. ಆದರೆ, ಇಂದು ಗುಜರಾತ್ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ.
* ಕ್ವಿಟ್ ಇಂಡಿಯಾ ಘೋಷಣೆ ಮೊಳಗಿದ ಮುಂಬೈನಿಂದಲೇ ಕಾಂಗ್ರೆಸ್ ಮುಕ್ತ ಭಾರತದ ಧ್ವನಿ ಹೊರಡಲಿ. ಇದು ದೇಶದ ಮೂಲೆ ಮೂಲೆಗೂ ತಲುಪಲಿ.
ಯಾರು ಅಸಲಿ..?
ಮುಂಬೈನಲ್ಲಿ ತಮ್ಮ ಮೇಣದ ಪ್ರತಿಮೆ ಅನಾವರಣ ಗೊಳಿಸಿದ ಮೋದಿ ಪೋಸ್ ನೀಡಿದ್ದು ಹೀಗೆ.
ರ್ಯಾಲಿಗೆ ಜನಸಾಗರ
ಮುಂಬೈನಲ್ಲಿ ಭಾನುವಾರ ನಡೆದ ಮೋದಿ ಅವರ 'ಮಹಾಗರ್ಜನೆ' ರ್ಯಾಲಿಯಲ್ಲಿ ಸೇರಿದ್ದ ಜನಸಾಗರ.
ಮೋದಿ ಗಬ್ಬರ್ಸಿಂಗ್
ಬಹ್ರೇಚ್: ಮೋದಿ ಹಾಗೂ ಮುಲಾಯಂರನ್ನು ಕಾಂಗ್ರೆಸ್ ಮುಖಂಡ ಬೇಣಿ ಪ್ರಸಾದ್ ವರ್ಮಾ ಅವರು 'ಗಬ್ಬರ್ಸಿಂಗ್'ಗೆ ಹೋಲಿಸಿದ್ದಾರೆ. ಶೋಲೆ ಚಿತ್ರದ 'ಗಬ್ಬರ್' ಜನರನ್ನು ಬೆದರಿಸುತ್ತಾನೆ. ಮೋದಿ, ಮುಲಾಯಂ ಕೂಡ ಮತಕ್ಕಾಗಿ ಜನರನ್ನು ಬೆದರಿಸುತ್ತಾರೆ ಎಂದಿದ್ದಾರೆ ಬೇಣಿ.