ಸಾಹಿತಿಗಳೇ ಸಮಾಜ ಕಟ್ಟಿ, ಮುರಿಯಬೇಡಿ
ವಿದ್ಯಾಗಿರಿ, ರತ್ನಾಕರವರ್ಣಿ ವೇದಿಕೆ: ಸಾಹಿತಿ ಸಮಾಜ ಕಟ್ಟುವ ಕೆಲಸ ಮಾಡಬೇಕೇ ವಿನಃ ಸಮಾಜ ಮುರಿಯುವ ಕೆಲಸ ಮಾಡಬಾರದು. ಯಾರಾದರೂ ಸಮಾಜ ಮುರಿದರೆ ಅದನ್ನು ತಡೆ ಹಿಡಿಯುವ ಕೆಲಸವನ್ನು ಹಿರಿಯ ಸಾಹಿತಿಗಳು ಮಾಡಬೇಕು. ದೇಶಕಟ್ಟುವ ಹೊಣೆ ಹಿರಿಯ ಸಾಹಿತಿಗಳು, ವಿದ್ವಾಂಸರು ಹೊತ್ತುಕೊಳ್ಳಬೇಕು ಎಂದು ಕೇಂದ್ರ ಪರಿಸರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದರು.
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಸಮಾರೋಪ ಭಾಷಣ ಮಾಡಿದ ಮೊಯ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಇರಬಾರದು. ನಮ್ಮ ಭಾಷೆ ನಮಗೆ ಇರಬೇಕು ಎಂದರೆ ಆ ಭಾಷೆ ಸತ್ತು ಹೋಗುತ್ತದೆ. ವಿಕಾಸವೇ ಬದುಕು, ಸಂಕೋಚವೇ ಮೃತ್ಯು. ಆಯ್ಕೆ ನಮ್ಮ ಬಳಿ ಇದೆ. ಭಾಷೆಗಳಿಂದ ಹೃದಯ ಶ್ರೀಮಂತಿಕೆ ಹೆಚ್ಚಬೇಕು ಎಂದರು.
ಜಾಗತೀಕರಣದಿಂದ ಹಿಂದೆ ಹೋಗಬಾರದು. ಭೂತಕಾಲದಲ್ಲಿ ಇದ್ದರೆ ಇತಿಹಾಸವಾಗುತ್ತೀರಿ. ಭವಿಷ್ಯದ ಎತ್ತರಕ್ಕೆ ಏರುವ ಮನೋಭೂಮಿಕೆ ಬೇಕು. ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕೃತಿಕ ಅನನ್ಯತೆ ಪ್ರತ್ಯೇಕವಾಗಿ ಇರಬಾರದು, ಸಮಾನ ಭಾಗವಾಗಿ ಬರಬೇಕು. ಸಾಂಸ್ಕೃತಿಕವಾಗಿ ಬದುಕಬೇಕಾದರೆ ಸಮಾನ ಧರ್ಮ ಹಂಚಿಕೊಂಡು ಬದುಕಬೇಕು. ಇದಕ್ಕೆ ಸ್ಪೂರ್ತಿ ಕವಿಗಳಿಂದ, ಸಾಹಿತಿಗಳಿಂದ ಬರಬೇಕು. ಭಾರತದಲ್ಲಿ ಹುಟ್ಟಿದ ಮಹಾಕವಿಗಳಲ್ಲಿ ಕರ್ನಾಟಕದವರೇ ಹೆಚ್ಚು. ಜ್ಞಾನಪೀಠ ಪ್ರಶಸ್ತಿ ಕನ್ನಡಿಗರಿಗೆ ಹೆಚ್ಚು ಸಿಗುತ್ತಿರುವುದು ಈಗಿನ ಭಾಷೆ, ಸಾಂಸ್ಕೃತಿಕ ಸಮೃದ್ಧಿಯಿಂದಲ್ಲ. ಸಾವಿರಾರು ವರ್ಷಗಳ ಹಿಂದಿನ ಸಾಹಿತ್ಯ, ಸಾಂಸ್ಕೃತಿಕ ಗರಿಮೆಯಿಂದ. ಎಲ್ಲ ವಿಶ್ವ ಸಮ್ಮೇಳನಕ್ಕಿಂತಲೂ ವಿಶ್ವನುಡಿಸಿರಿ ವಿರಾಸತ್ ಮಿಗಿಲು. ಇದೇ ರೀತಿ ಮುಂದುವರಿದರೆ ವಿಶೇಷ ವಿಮಾನದಲ್ಲಿ ವಿದೇಶಿಯರು ಬರಬಹುದು. ಸಾವಿರ ಕಂಬದ ಜೈನ ಬಸದಿಯ ಜೈನಕಾಶಿ ಮೂಡುಬಿದರೆ ಇತಿಹಾಸದ ಮುತ್ತಿನ ಮಾಲಿಕೆಯಲ್ಲಿ ಸಮ್ಮೇಳನ ಶಾಶ್ವತವಾಗಿ ಉಳಿಯಲಿದೆ ಎಂದರು.
ಮೂಡುಬಿದರೆಗೆ ವಿಶ್ವ ಪರಂಪರೆ ಪಟ್ಟ: ಮೂಡುಬಿದರೆ ಬಸದಿಗಳೇ ಮೊದಲಾದ ಪ್ರಾಚೀನ ಪರಂಪರೆ ತಾಣವಾಗಿದೆ. ವಿಶ್ವ ಪರಂಪರೆ ಪಟ್ಟ ಸಿಗಲಿದೆ. ಇದನ್ನು ರಕ್ಷಣೆ ಮಾಡಲು ನೆರವು ನೀಡುವುದಾಗಿ ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದೇನೆ. ಇಂಡಿಯಾ ಆಯಿಲ್ ಫೌಂಡೇಷನ್ ಮೂಲಕ ವೈಶಾಲಿ, ಖುಜರಾಹೋ, ತಾಜ್ಮಹಲ್ ಅನೇಕ ಕೇಂದ್ರಗಳನ್ನು ಪರಂಪರೆ ತಾಣವಾಗಿ ಉಳಿಸಿಕೊಳ್ಳಲಾಗುತ್ತಿದೆ. ಮೂಡುಬಿದರೆಗೆ ಪರಂಪರೆ ತಾಣ ಮಾನ್ಯತೆ ಪಡೆಯುವ ಅರ್ಹತೆ ಇದೆ ಎಂದರು. ನನ್ನ ಯಾವುದೇ ಮಹಾಕಾವ್ಯ ಕೃತಿಗಳು ಹೊರಬರಬೇಕಿದ್ದರೆ ಬಿ.ಎ. ವಿವೈಕ್ ರೈ ಅವರ ಸರ್ಟಿಫಿಕೆಟ್ ಅಗತ್ಯ. ಅದಕ್ಕಾಗಿ ಅವರನ್ನು ಗುರುಸ್ಥಾನದಲ್ಲಿ ಇಟ್ಟಿದ್ದೇನೆ ಎಂದು ವೀರಪ್ಪ ಮೊಯ್ಲಿ ಹೇಳಿದರು.
ಹಿಂದಣ ಹೆಜ್ಜೆ ಅರಿವಿಲ್ಲದೆ ಮುಂದಣ ಹೆಜ್ಜೆ ಇಡಲಾಗದು- ರೈ: ಸಮ್ಮೇಳನಾಧ್ಯಕ್ಷ ಬಿ.ಎ. ವಿವೇಕ್ ರೈ ಮಾತನಾಡಿ, ಹಿಂದಣ ಹೆಜ್ಜೆಯ ಅರಿವಿಲ್ಲದೆ ಮುಂದಣ ಹೆಜ್ಜೆ ಇಡಲಾಗದು. ಹಿಂದಣ ಹೆಜ್ಜೆಯಾಗಿ ಇಲ್ಲಿ ಸಾಹಿತಿಗಳಿದ್ದಾರೆ, ಮುಂದಣ ಹೆಜ್ಜೆ ಇಡುವ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಮನಮುಟ್ಟುವಂತೆ ಮಾಡಿದ ಈ ಸಮ್ಮೇಳನ ನಿಜಕ್ಕೂ ಸಾರ್ಥಕ ಎಂದರು. ಮನುಷ್ಯರನ್ನು ಹೊರಗಡೆಯಿಂದ ನೋಡಿ ತೀರ್ಪು ನೀಡುತ್ತೇವೆ. ಆದರೆ ಜನರನ್ನು ಅರ್ಥ ಮಾಡಿಕೊಳ್ಳಲು ಇಂಥ ಸಮ್ಮೇಳನಕ್ಕೆ ಬರಬೇಕು. ಇಲ್ಲಿ ಬೆರೆಯುವ ಅವಕಾಶ ಲಭಿಸುತ್ತದೆ. ಕಡೇ ಪಕ್ಷ ಗರ್ವರಸ ಕಳೆದುಕೊಳ್ಳಲಾದರೂ, ಅಹಂಕಾರ ನಿರಸನಕ್ಕಾದರೂ ಬರಬೇಕು ಎಂದರು. ಕೃಷಿ, ಜಾನಪದ, ಸಾಹಿತ್ಯ, ಸಂಸ್ಕೃತಿ, ಯಕ್ಷಗಾನ ಕಲೆಗಳಲ್ಲಿ ಒಂದು ಇನ್ನೊಂದರಲ್ಲಿ ಪರಸ್ಪರ ಕಲಿಯುವುದು ಇದೆ. ಕೃಷಿಯಲ್ಲಿರುವ ಶ್ರಮ, ಶಿಸ್ತು ನಾವು ಕಲಿಯದೆ ಹೋದರೆ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ಅನ್ಯೋನ್ಯತೆ ಎನ್ನುವುದು ಮಾತಿನ ಮೂಲಕ ಅಲ್ಲ ಕೃತಿ ಮೂಲಕ. ಸಾಹಿತಿಗಳು ವ್ಯಂಗ್ಯ ಮಾತನಾಡುವುದು ಜಾಸ್ತಿ ಎಂಬ ತಪ್ಪು ಕಲ್ಪನೆ ಹೊರಗಡೆಯವರಿಗಿದೆ. ಬಂದು ನೋಡಿದ ಬಳಿಕವೇ ಅದು ನಿವಾರಣೆ ಸಾಧ್ಯ ಎಂದರು. ವಿಐಪಿಗಳಿಗೆ ವಿಶೇಷ ಊಟ ಹಾಕಬಹುದೋ ಏನೋ ಎಂಬ ದೃಷ್ಟಿಯಿಂದ ನಾನು ಸಮ್ಮೇಳನದ ಎಲ್ಲ ಊಟದ ಸ್ಥಳಗಳಿಗೆ ಹೋದೆ. ಆದರೆ ಎಲ್ಲೆಡೆ ಒಂದೇ ರೀತಿ ಊಟ. ಪಂಕ್ತಿಭೇದ ಇರಲಿಲ್ಲ. ಇಲ್ಲಿರುವ ವಿದ್ಯಾರ್ಥಿಗಳು, ಕಾರ್ಯಕರ್ತರು ಎಲ್ಲರೂ ಸನ್ಮತಿಗಳು. ಎಲ್ಲೆಡೆ ಅಚ್ಚುಕಟ್ಟುತನ ಇತ್ತು. ಎಲ್ಲ ವ್ಯವಸ್ಥೆಯೂ ಚೆನ್ನಾಗಿತ್ತು. ಇಲ್ಲಿನ ವಿದ್ಯಾರ್ಥಿಗಳು ವೃತ್ತಿಪರ ಕಲಾವಿದರಂತೆ ಇದ್ದಾರೆ ಎಂದು ವಿವೇಕ ರೈ ಶ್ಲಾಘಿಸಿದರು.
- ಜಿತೇಂದ್ರ ಕುಂದೇಶ್ವರ