ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆನೆಗಳಿಗಿನ್ನು 'ಹಳಿ' ಬಂದ್

Vishwanath S
Updated On : 24 Dec 2013, 11:52 am

ಬೆಂಗಳೂರು: ಹೆಚ್ಚುತ್ತಿರುವ ಕಾಡಾನೆಗಳ ದಾಳಿ ತಡೆಯಲು ಸರ್ಕಾರ ರೇಲ್ವೆ ಹಳಿಗಳ ಮೊರೆ ಹೋಗುತ್ತಿದೆ.
ರೈಲಿಗೂ, ಕಾಡಾನೆಗಳಿಗೂ ಏನು ಸಂಬಂಧ ಎಂಬ ಪ್ರಶ್ನೆಯೇ.
ಅಂದರೆ ಕಾಡಿನಿಂದ ನಾಡಿಗೆ ಬರುವ ಅನೆಗಳನ್ನು ತಡೆಯಲು ತಂತಿ ಬೇಲಿಗಳ ಬದಲಿಗೆ, ರೇಲ್ವೆ ಹಳಿಗಳನ್ನೇ ಬಳಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಈ ರೀತಿ ವ್ಯವಸ್ಥೆ ವಿದೇಶದ ಕಾಡುಗಳಲ್ಲಿ ಇದೆಯಂತೆ. ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲು ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಜಿಲ್ಲೆಗಳ ಗಡಿ ಭಾಗದಲ್ಲಿ ಕಾಡಾನೆ ಹಾವಳಿ ವಿಪರೀತ. ಮೇವಿಗಾಗಿ ಮತ್ತು ದಿಕ್ಕು ತಪ್ಪಿ ಆನೆಗಳು ನಾಡಿಗೆ ಬರುತ್ತಿರುವುದರಿಂದ ಆನೆ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ. ಇದನ್ನು ತಡೆಯಲು ಅರಣ್ಯ ಇಲಾಖೆ ಕಂದಗಳನ್ನು ನಿರ್ಮಿಸಿದರೂ, ವಿದ್ಯುತ್ ಬೇಲಿಗಳನ್ನು ಹಾಕಿದರೂ ಪ್ರಯೋಜನ ಆಗಿಲ್ಲ. ಮಾತ್ರವಲ್ಲ, ಅನೆಗಳನ್ನು ವಾಪಸ್ ಕಾಡಿಗೆ ಓಡಿಸಲು ಸುಸಜ್ಜಿತ ಸಿಬ್ಬಂದಿಯನ್ನೇ ನಿಯೋಜಿಸಿದ್ದೂ ಆಯ್ತು. ಇದ್ಯಾವುದೂ ನಿರೀಕ್ಷಿತ ರೀತಿಯಲ್ಲಿ ಫಲಿಸಿಲ್ಲ.
ಏಕೆಂದರೆ, ಆನೆಗಳು ಅನೇಕ ಕಡೆ ತಂತಿಬೇಲಿಯನ್ನು ಕಿತ್ತೊಗೆದವು. ಕಂದಕಗಳಿಗೆ ಕಲ್ಲು, ಮಣ್ಣು, ಮರಗಳನ್ನು ತುಂಬಿ ದಾಟಲಾರಂಭಿಸಿದವು. ಹೀಗಾಗಿ ಅರಣ್ಯ ಇಲಾಖೆ ಈಗ ಆನೆಗಳ ತಡೆಗೆ ರೇಲ್ವೆ ಕಂಬಿ ಬಳಸಲು ಮುಂದಾಗುತ್ತಿದೆ. ಇದಕ್ಕಾಗಿ ಸುಮಾರು 200 ಕೋಟಿ ವೆಚ್ಚದ ಯೋಜನೆಯನ್ನೂ ಸಿದ್ಧಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಏನಿದು ರೈಲು ಕಂಬಿ ಯೋಜನೆ?
ರೇಲ್ವೆ ಇಲಾಖೆ ಪ್ರತಿ 6 ವರ್ಷಕ್ಕೊಮ್ಮೆ ಹಳಿಗಳಿಗೆ ಬಳಸಿದ ಕಂಬಿಗಳನ್ನು ಬದಲಿಸುತ್ತದೆ. ಈ ಹಳೇ ಕಂಬಿಗಳು ಯಥೇಚ್ಚವಾಗಿ ಸಿಗುತ್ತದೆ. ಇದನ್ನು ರೈಲ್ವೆ ಇಲಾಖೆಯಿಂದ ಖರೀದಿಸಲು ಇಲಾಖೆ ಮುಂದಾಗಿದೆ. ಆನೆಗಳು ಕಾಡಿನಿಂದ ನಾಡು ಪ್ರವೇಶಿಸುವ ಅನೇಕ ಮಾರ್ಗಗಳನ್ನು ಗುರುತಿಸಲಾಗಿದ್ದು, ಈ ಜಾಗಗಳಲ್ಲಿ ಮಾಮೂಲಿ ಕಂದಕಗಳನ್ನು ಮಾಡುವ ಬದಲು ಈ ಕಂಬಿಗಳನ್ನು ಬೇಲಿ ಮಾದರಿಯಲ್ಲಿ ಹಾಕಲಾಗುತ್ತದೆ. 6 ಅಡಿ ಎತ್ತರದ ವರೆಗೂ ನಾಲ್ಕೈದು ಕಂಬಿಗಳನ್ನು ಸುಮಾರು 10ರಿಂದ 15 ಕಿ.ಮೀ.ವರೆಗೂ ಹಾಕಲಾಗುತ್ತದೆ. ಇವುಗಳನ್ನು ಆನೆ ದಾಟುವುದಕ್ಕೂ ಆಗಬಾರದು ಮತ್ತು ಮುರಿಯವುದಕ್ಕೂ ಸಾಧ್ಯವಾಗದಂತೆ ಅಳವಡಿಸಲಾಗುತ್ತದೆ. ಈ ಪ್ರಯೋಗ ದಕ್ಷಿಣ ಆಫ್ರಿಕಾದ ಅನೇಕ ಕಾಡುಗಳಲ್ಲಿ ಯಶಸ್ವಿಯಾಗಿದ್ದರಿಂದ ಇಲ್ಲಿಯೂ ಪ್ರಯೋಗಿಸಲು ಇಲಾಖೆ ತೀರ್ಮಾನಿಸಿದೆ. ಸದ್ಯಕ್ಕೆ ಈ ಕಂಬಿ ಯೋಜನೆ ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ವ್ಯಾಪ್ತಿಯ ಹಲವೆಡೆ ಜಾರಿಗೆ ಬರುತ್ತದೆ. ನಂತರ ಉತ್ತರ ಕನ್ನಡದ ಯಲ್ಲಾಪುರ, ದಾಂಡೇಲಿ, ಭದ್ರಾ ಅರಣ್ಯ ಪ್ರದೇಶ, ಕಾವೇರಿ ವನ್ಯಧಾಮ ಸೇರಿದಂತೆ ಅನೇಕ ಕಡೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಆರಣ್ಯ ಸಂರಕ್ಷಣಾಧಿಕಾರಿ ಅಜಯ್‌ಮಿಶ್ರಾ ಹೇಳಿದ್ದಾರೆ.

ಇನ್ನೂ 2 ತಿಂಗಳು ಆನೆ ಕಾಟ
ಅರಣ್ಯ ಇಲಾಖೆಯ ಅನೆ ಯೋಜನೆ ಅಧಿಕಾರಿಗಳ ಪ್ರಕಾರ ಕಳೆದ 10 ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವಿಪರೀತ. ಈ ಪ್ರದೇಶದಲ್ಲಿ ಜನ ಹೆಚ್ಚಾಗಿ ಬತ್ತ ಬೆಳೆಯುವುದರಿಂದ ಅದರಿಂದ ಆಕರ್ಷಿತವಾಗಿ  ಆನೆಗಳು ನಾಡಿಗೆ ಬರುವುದು ಇತ್ತೀಚಿಗೆ ಪರಿಪಾಠವಾಗಿದೆ. ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಮಿತಿ ಮೀರಿದೆ.ಈ ಪ್ರದೇಶಗಳಲ್ಲಿ ಬತ್ತದ ಕಟಾವು ಆರಂಭವಾಗಿದ್ದು, ಇನ್ನೂ ಎರಡು ತಿಂಗಳು ಬತ್ತದ ಬೆಳೆಯ ಕಾಲವೇ ಇರುತ್ತದೆ. ಆದ್ದರಿಂದ ಅನೇಕ ಕಾಟ ಸದ್ಯಕ್ಕೆ ತಪ್ಪುವುದಿಲ್ಲ ಎಂದೂ ಆನೆ ಯೋಜನೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಜಿಲ್ಲೆಗಳಲ್ಲಿ ಆನೆ ಹಾವಳಿ ಇದ್ದೇ ಇರುತ್ತದೆ. ಹೊಸ ಹೊಸ ತಂತ್ರಗಳಿಂದ ಕಾಡಾನೆಗಳ ಹಾವಳಿ ತಡೆಯುಲು ಯತ್ನಿಸುತ್ತಿದ್ದೇವೆ. ಇದರಲ್ಲಿ ರೇಲ್ವೆ ಕಂಬಿ ಬೇಲಿ ಯೋಜನೆ ಹೆಚ್ಚು ಫಲ ನೀಡಲಿದೆ ಎಂಬ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕ ತಕ್ಷಣ ಬೇಲಿ ಅಳವಡಿಸುವ ಕೆಲಸ ಆರಂಭವಾಗುತ್ತದೆ.
- ವಿನಯ್ ಲೂತ್ರ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement