ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕನ್ನಡ ಹೋರಾಟಕ್ಕೂ ಮಿಡಿದ ಕವಿ ಹೃದಯ

Vishwanath S
Updated On : 24 Dec 2013, 12:03 pm

ಬೆಂಗಳೂರು: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಎಂದರೆ ನೆನಪಾಗುವುದು ನವೋದಯ ಸಾಹಿತ್ಯದ ಅಪರೂಪದ ಕವನಗಳು, ವಿಮರ್ಶಾ ಗ್ರಂಥಗಳು, ಪ್ರವಾಸ ಕಥನಗಳು. ಆದರೆ, ಅವರು ಒಬ್ಬ ಕನ್ನಡ ಹೋರಾಟಗಾರರೂ ಆಗಿದ್ದರು ಎಂಬುದು ಅನೇಕ ಮಂದಿಗೆ ಗೊತ್ತೇ ಇಲ್ಲ.
ಹೌದು, ಯಾವತ್ತೂ ಯಾವುದೇ ವಿವಾದಕ್ಕೆ ಸಿಲುಕದ, ಬೇರೆಯವರಿಗೆ ನೋವಾಗದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದ ಜಿಎಸ್‌ಎಸ್, ಕನ್ನಡದ ವಿಚಾರ ಬಂದಾಗ ಎದೆ ಉಬ್ಬಿಸಿ ನಿಲ್ಲುತ್ತಿದ್ದರು. ಹೋರಾಟ, ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜಿಎಸ್‌ಎಸ್ ಎಂದರೆ ಸಾಹಿತಿ ಮಾತ್ರವಲ್ಲ, ಅವರೊಬ್ಬ ಕನ್ನಡದ ಹೋರಾಟಗಾರರೂ ಹೌದು. ಹೀಗಾಗಿ ಇವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ಕನ್ನಡಪರ ಹೋರಾಟಕ್ಕೂ ನಷ್ಟವಾಗಿದೆ ಎನ್ನುತ್ತಾರೆ  ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್.
ಜಿಎಸ್‌ಎಸ್ ಅವರ ಕನ್ನಡಪರ ಹೋರಾಟವನ್ನು ಅವರು ನೆನಪಿಸಿಕೊಳ್ಳುವುದು ಹೀಗೆ...
ಗೋಕಾಕ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಾ. ಚಿದಾನಂದಮೂರ್ತಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮೊದಲ ದಿನ ಏ. 13, 1982ರಲ್ಲಿ ಚಳವಳಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಜಿಎಸ್‌ಎಸ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಗೋಪಾಲಗೌಡ ವೃತ್ತದಲ್ಲಿ ಕನ್ನಡ ಗುಡಿಸಲು ಹಾಕಿ ಸಾಹಿತಿಗಳ, ಕಲಾವಿದರ ಬಳಗ ಆರಂಭವಾಯಿತು. ಕನ್ನಡದ ಪರವಾದ ಗೋಕಾಕ್ ಚಳವಳಿಗೆ ಸಾಹಿತಿಗಳು ಪ್ರವೇಶಿಸಿದ ದಿನ ಅದು. ಅಂದು ಮೆರವಣಿಗೆಯಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸೇರಿದಂತೆ ಸೇರಿ 55 ಸಾಹಿತಿಗಳಿದ್ದರು. ಅದರಲ್ಲಿ ಜಿಎಸ್‌ಎಸ್ ಕೂಡ ಒಬ್ಬರು.
ಗೋಕಾಕ್ ವರದಿ ಜಾರಿಗೆ ಆಗ್ರಹಿಸಿ ಗೋಪಾಲಗೌಡ ವೃತ್ತದಲ್ಲಿ ಸರದಿ ಉಪವಾಸ ಸತ್ಯಾಗ್ರಹ ಆರಂಭವಾಯಿತು. ಉಪವಾಸ ಕುಳಿತ ಸಾಹಿತಿಗಳ ಮೊದಲ ತಂಡದಲ್ಲಿ ರಂ.ಶೀ ಮುಗಳಿ, ಎಂ.ವಿ. ಸೀತಾರಾಮಯ್ಯ, ಸಿದ್ದಯ್ಯ ಪುರಾಣಿಕ್, ಎಚ್.ಎಸ್. ಪಾರ್ವತಿ ಅವರೊಂದಿಗೆ ಜಿಎಸ್‌ಎಸ್ ಕೂಡ ಇದ್ದರು. ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜೈಲುವಾಸವನ್ನೂ ಅವರು ಅನುಭವಿಸಿದ್ದರು.
ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಕ್ರಿಯಾ ಸಮಿತಿ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ವ್ಯವಹರಿಸಿ ಎಂದು ಒತ್ತಾಯಿಸುವ ಕರಪತ್ರ ಹಂಚುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಇದರಲ್ಲೂ ಜಿಎಸ್‌ಎಸ್ ಪಾಲ್ಗೊಂಡು ಕರಪತ್ರಗಳನ್ನು ಹಂಚಿದ್ದರು. ಕನ್ನಡಪ್ರಭ ಆವರಣದಲ್ಲಿ ಹಿಂದೆ ನಬಾರ್ಡ್ ಕಚೇರಿ ಇತ್ತು. ಸಂಸ್ಥೆ ಕನ್ನಡ ವಿರೋಧಿಯಾಗಿದೆ ಎಂದು ಆರೋಪಿಸಿ ನಬಾರ್ಡ್ ಕಚೇರಿ ಮುಂದೆ ಕನ್ನಡಪರ ಹೋರಾಟಗಾರರು 125 ದಿನ ಧರಣಿ ನಡೆಸಿದ್ದರು. ಈ ಹೋರಾಟವನ್ನು ಉದ್ಘಾಟಿಸಿದ ಜಿಎಸ್‌ಎಸ್ ಅವರು ಹೋರಾಟಕ್ಕೆ ತಾವೂ ಕೈಜೋಡಿಸಿದ್ದರು.
1994ರಲ್ಲಿ ದೂರದರ್ಶನದಲ್ಲಿ ಉರ್ದು ವಾರ್ತೆ ಆರಂಭಿಸಲಾಗಿತ್ತು. ಇದಕ್ಕೆ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು, ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ 1994ರ ಏಪ್ರಿಲ್ 9ರಂದು ದೂರದರ್ಶನ ಕೇಂದ್ರದ ಮುಂದೆ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಆಗ ಬೆಂಗಳೂರಿನಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಇಡೀ ಬೆಂಗಳೂರಿನಲ್ಲಿ ವಾಹನಗಳ ಓಡಾಟವೇ ಇಲ್ಲದಿದ್ದಾಗ ಅದರ ನಡುವೆಯೂ ಯಾರದ್ದೋ ಸ್ಕೂಟರ್‌ನಲ್ಲಿ ದೂರದರ್ಶನ ಕೇಂದ್ರದ ಮುಂದೆ ಆಗಮಿಸಿದ್ದ ಜಿಎಸ್‌ಎಸ್ ಅವರು ಚಳವಳಿ ಉದ್ಘಾಟಿಸಿ ಅದರಲ್ಲಿ ಪಾಲ್ಗೊಂಡಿದ್ದರು. ಸಾಹಿತಿಗಳು, ಕಲಾವಿದರ ಬಳಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಕನ್ನಡಶಕ್ತಿ ಕೇಂದ್ರದ ಗೌರವ ಸಲಹೆಗಾರರು.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿ ಮೊಟ್ಟ ಮೊದಲು ಒತ್ತಾಯ ಆರಂಭಿಸಿದ್ದು ಕನ್ನಡ ಗೆಳೆಯರ ಬಳಗ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕನ್ನಡ ಗೆಳೆಯರ ಬಳಗದ ಅಡಿಯಲ್ಲಿ 7 ಸಾಹಿತಿಗಳು ತಮ್ಮ ಸಹಿ ಹಾಕಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement