ನಮ್ಮಿಬ್ಬರ ಸ್ನೇಹಕ್ಕೆ ಕಾವ್ಯವೇ ಸೇತುವೆ
ನಮ್ಮಿಬ್ಬರದ್ದು ಅರವತ್ತು ವರ್ಷಗಳ ಸ್ನೇಹ. ಈ ಸ್ನೇಹಕ್ಕೆ ಸೇತುವೆಯಾಗಿದ್ದು ಕಾವ್ಯ. ನಾನು ಮತ್ತು ಶಿವರುದ್ರಪ್ಪನವರು ಕಾಲೇಜಿನಲ್ಲಿದ್ದಾಗಲೇ ಜೀವನ, ಜಯಂತಿ, ಪ್ರಬುದ್ಧ ಕರ್ನಾಟಕ ಹಾಗೂ ವಿಶೇಷ ಸಂಚಿಕೆಗಳಿಗೆ ಕವನಗಳನ್ನು ಬರೆಯುತ್ತಿದ್ದೆವು. ಹೀಗೆ ಸಾಹಿತ್ಯದ ಸಾಧನೆಯಲ್ಲಿ ಸಮಾನಾಂತರ ಬೆಳವಣಿಗೆ ಕಂಡ ನಾವು ಒಡಲೆರಡು ಜೀವ ಒಂದು.
ಕಳೆದ ಆಗಸ್ಟ್ 16ರಂದು ಬೆಂಗಳೂರಿನ ಅವರ ಮನೆಗೆ ನಾನು ಕುಟುಂಬ ಸಮೇತ ಹೋದಾಗ, ಗಾಲಿ ಖುರ್ಚಿ ಮೇಲೆ ಕುಳಿತ ಅವರು 'ಹೇಗಿದ್ದೀರಾ, ಇತ್ತೀಚೆಗೆ ಏನು ಬರೆದ್ರಿ' ಎಂದು ಕೇಳಿದರು. ಆಗ ನಾನು 'ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಭಿನಂದನಾ ಗ್ರಂಥಕ್ಕೆ ಲೇಖನ ನೀಡಿದ್ದೇನೆ' ಎಂದೆ. 'ಅಯ್ಯೋ ನಾನೂ ಬರೆಯಬೇಕಿತ್ತು. ನಾನು ಹೇಳುತ್ತೇನೆ, ಬರೆದು ಕೊಡುತ್ತೀರಾ' ಎಂದರು. ಅವರು ಎಷ್ಟು ಹಣ್ಣಾಗಿದ್ದರೆಂದರೆ, ಮೂರು ಪ್ಯಾರಾ ಹೇಳಲು ಹದಿನೈದು ನಿಮಿಷ ಸಮಯ ತೆಗೆದುಕೊಂಡರು. ನಂತರದ ದಿನಗಳಲ್ಲೂ ಅವರನ್ನು ಭೇಟಿಯಾಗಿದ್ದೇನೆ. ಆದರೆ, ನಮ್ಮನ್ನು ಗುರುತು ಹಿಡಿಯುವುದು ಕಷ್ಟವಾಗಿತ್ತು.
ದಾವಣಗೆರೆಯಲ್ಲಿ ಉಪನ್ಯಾಸಕರಾಗಿದ್ದಾಗ 1951ರಲ್ಲಿ ಧಾರವಾಡಕ್ಕೆ ಬಂದಿದ್ದರು. ಧಾರವಾಡದ ಮಾಳಮಡ್ಡಿಯಲ್ಲಿ ನನ್ನ ಕೋಣೆಯಲ್ಲಿಯೇ ಇದ್ದ ಶಿವರುದ್ರಪ್ಪನವರಿಗೆ ಇಲ್ಲಿನ ರೊಟ್ಟಿ, ಚಟ್ನಿ, ಪಲ್ಯವೆಂದ್ರೆ ಎಲ್ಲಿಲ್ಲದ ಪ್ರೀತಿ. ಖಾನಾವಳಿಗೆ ಹೋಗಿ ಇಬ್ಬರೂ ಊಟ ಮಾಡಿ ಬರುತ್ತಿದ್ದೆವು. ಕಾವ್ಯದ ಮೂಲಕ ಸ್ನೇಹ ಹುಟ್ಟಿ ಪರಸ್ಪರ ಹೆಚ್ಚಿನ ಬಾಂಧವ್ಯ ಹುಟ್ಟಿತು. ನಂತರ ಅವರು ಮೈಸೂರು, ಬೆಂಗಳೂರಿಗೆ ಹೋದರು. ನಾನು ಅವರಲ್ಲಿ ಹೋದಾಗ ಅಥವಾ ಅವರು ನಮ್ಮಲ್ಲಿಗೆ ಬಂದಾಗ ನಮ್ಮ ನಮ್ಮ ಮನೆಗಳಲ್ಲಿಯೇ ಉಳಿದುಕೊಳ್ಳುತ್ತಿದ್ದೆವು.
ಇಬ್ಬರೂ ನವೋದಯದ ಉತ್ಕೃಷ್ಟದ ಕಾಲದಲ್ಲಿ ಬರವಣಿಗೆ ಆರಂಭಿಸಿದವರು. ಅವರಿಗೆ ಕುವೆಂಪು ಗುರುವಾಗಿದ್ದರು. ಬೇಂದ್ರೆಯವರ ಬಗ್ಗೆಯೂ ಅಪಾರ ಅಭಿಮಾನವಿತ್ತು. ನನಗೆ ಪ್ರೊ. ಮಾಳವಾಡರು ಗುರುವಾಗಿದ್ದರು. 1949ರಲ್ಲಿ ನನ್ನ 'ಕಾವ್ಯಾಕ್ಷಿ' ಮೊದಲ ಕವನ ಸಂಕಲನಕ್ಕೆ ಬೇಂದ್ರೆ ಅವರು ಮುನ್ನುಡಿ ಬರೆದರೆ, ಅವರ ಮೊದಲ ಕವನ ಸಂಕಲನ 'ಸಾಮಗಾನ'ಕ್ಕೆ ಕುವೆಂಪು ಅವರು ಮುನ್ನುಡಿ ಬರೆದರು. ಧಾರವಾಡದಲ್ಲಿ ನಾವೆಲ್ಲಾ ಗೋಕಾಕ ಚಳವಳಿ ಆರಂಭಿಸಿದರೆ, ಬೆಂಗಳೂರಲ್ಲಿ ಅವರೂ ಗೋಕಾಕ ಚಳವಳಿಯಲ್ಲಿ ಉಪವಾಸ ಮಾಡಿದ್ದರು. ಇಬ್ಬರಿಗೂ ಪಂಪ, ರಾಜ್ಯೋತ್ಸವ, ಹಂಪಿ ವಿವಿಯಿಂದ ನಾಡೋಜ ಹಾಗೂ ಅಂಬಿಕಾತನಯದತ್ತ ಪ್ರಶಸ್ತಿಗಳು ಲಭಿಸಿವೆ. ಆದರೆ, ಶಿವರುದ್ರಪ್ಪನವರು ಪ್ರಾಚೀನ ಕನ್ನಡದಿಂದ ಆಧುನಿಕ ಕನ್ನಡದ ಸಮಗ್ರ ಸಾಹಿತ್ಯದ ದೃಷ್ಟಿಯಿಂದ ವಿಮರ್ಶೆ ಮಾಡಿದರು.
ಶಿವರುದ್ರಪ್ಪನವರು ಬೆಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ಅನೇಕ ವಿಶಿಷ್ಟ ಕಾರ್ಯಗಳನ್ನು ಕೈಗೊಂಡರು. ಸಾಹಿತ್ಯ ವಾರ್ಷಿಕ ಪುಸ್ತಕ ತಂದು, ವರ್ಷವಿಡೀ ಬಂದ ಸಾಹಿತ್ಯದ ಪ್ರಕಾರಗಳನ್ನು ಈ ಸಂಚಿಕೆಯಲ್ಲಿ ತಮ್ಮ ವಿಭಾಗದ ಸಿಬ್ಬಂದಿಯಿಂದ ವಿಮರ್ಶಿಸುತ್ತಿದ್ದರು. ಇನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಅನೇಕ ಹೊಸ ಯೋಜನೆಗಳನ್ನು ಜಾರಿ ಮಾಡಿದರು. ಸಾಮಾನ್ಯರಿಗೆ ಸಾಹಿತ್ಯ ಚರಿತ್ರೆ ಮಾಲೆ ತಂದು ಎಲ್ಲರ ಗೌರವಕ್ಕೂ ಪಾತ್ರರಾಗಿದ್ದರು.
ನವೋದಯ, ನವ್ಯ, ದಲಿತ, ಬಂಡಾಯ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ ಶಿವರುದ್ರಪ್ಪನವರು ಯಾವುದೇ ಪಂಥಕ್ಕೆ ಬಿಗಿಯಾಗಿ ಹಿಡಿದುಕೊಳ್ಳಲಿಲ್ಲ. ಎಲ್ಲ ಪಂಥಗಳಲ್ಲಿನ ಒಳ್ಳೆಯ ಅಂಶಗಳನ್ನು ಮಾತ್ರ ಹೀರಿಕೊಂಡು ರಾಷ್ಟ್ರಕವಿಯಾದರು. ಅವರ ಸೌಂದರ್ಯ ಸಮೀಕ್ಷೆ ಸಾಹಿತ್ಯ ಚರಿತ್ರೆಯೂ ಆರು ಸಂಪುಟಗಳನ್ನು ಕಂಡಿದೆ. ಅವರು ಕವಿಯಾಗಿ, ಪ್ರಾಧ್ಯಾಪಕರಾಗಿ ದೊಡ್ಡ ಬದುಕು ಕಂಡವರು. ಅವರ ಬರವಣಿಗೆಯಂತೆ ಬದುಕಿ ತೋರಿದವರು. ಇಂಥ ಹಿರಿಯ ಸ್ನೇಹ ಜೀವಿಯನ್ನು ನಾವೀಗ ಕಳೆದುಕೊಂಡಿದ್ದು, ತೀವ್ರ ಸಂತಾಪವಾಗಿದೆ. ಜಿ.ಎಸ್. ಶಿವರುದ್ರಪ್ಪನವರಿಗೆ ಹೃದಯಪೂರ್ವ ಅಂತಃಕರಣದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
-ಚನ್ನವೀರ ಕಣವಿ
ನಿರೂಪಣೆ: ಬಸವರಾಜ ಹಿರೇಮಠ