ಮಗ ಕಟ್ಟಿದ ಅನಾಥಾಶ್ರಮದಲ್ಲಿ ಆಗಾಗ ಉಳಿದುಕೊಳ್ಳುತ್ತಿದ್ದರು
ಚಾಮರಾಜನಗರ: ಜಿಲ್ಲೆಯ ಗಾಂಧಿವಾದಿ ಹುಚ್ಚೇಗೌಡರೊಂದಿಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಒಡನಾಟವಿತ್ತು, ಆಗಾಗ ಪತ್ರ ವ್ಯವಹಾರದ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಚಾಮರಾಜನಗರಕ್ಕೆ ಹಲವು ಬಾರಿ ಭೇಟಿ ನೀಡಿರುವ ಶಿವರುದ್ರಪ್ಪನವರು ತಮ್ಮ ಪುತ್ರ ದೀನಬಂಧು ಶಿಕ್ಷಣ ಸಂಸ್ಥೆ ಹುಟ್ಟು ಹಾಕುವ ಮುನ್ನ ವಾಸ್ತವ್ಯ ಹೂಡಿದ್ದ ಬಾಡಿಗೆ ಮನೆಗೂ ಕೆಲವೊಮ್ಮೆ ಬಂದು ಉಳಿದುಕೊಂಡಿದ್ದರು. ದೀನಬಂಧು ಶಿಕ್ಷಣ ಸಂಸ್ಥೆ ಪರಿಕಲ್ಪನೆ ರೂವಾರಿ ಶಿವರುದ್ರಪ್ಪನವರ ಮಗ ಪ್ರೊ.ಜಿ.ಎಸ್. ಜಯದೇವ. ಅವರು ಜೆಎಸ್ಎಸ್ ಸಂಸ್ಧೆಗೆ 1977ರಲ್ಲಿ ಉಪನ್ಯಾಸಕರಾಗಿ ಚಾಮರಾಜನಗರಕ್ಕೆ ಬಂದಾಗ ಇಲ್ಲಿನ ಪಿಡಬ್ಲ್ಯೂಡಿ ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದರು. ಆ ಸಂದರ್ಭದಲ್ಲಿ ಜಿ.ಎಸ್. ಶಿವರುದ್ರಪ್ಪ ಪತ್ನಿ ಜತೆಗೂಡಿ ಇಲ್ಲಿ ಕೆಲವು ಕಾಲ ಇದ್ದರು. ಆ ಸಮಯದಲ್ಲಿ ಗಾಂಧಿವಾದಿ ಹುಚ್ಚೇಗೌಡ ಅವರು ಜಿ.ಎಸ್. ಜಯದೇವ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅದು ಶಿವರುದ್ರಪ್ಪನವರೊಂದಿಗೂ ಒಡನಾಟ ಬೆಳೆಯುತ್ತಾ ಬಂದಿತು. ಆಗಾಗ್ಗೆ ಪತ್ರ ವ್ಯವಹಾರವೂ ನಡೆಯುತ್ತಿತ್ತು.
1992ರಲ್ಲಿ ಜಿ.ಎಸ್. ಜಯದೇವ್ ಅವರು ದೀನಬಂಧು ಆಶ್ರಮ ಸ್ಥಾಪನೆ ಮಾಡಿದ ಮೇಲೆ ಆಗಾಗ್ಗೆ ಆಶ್ರಮದಲ್ಲಿ ಬಂದು ಉಳಿದುಕೊಳ್ಳುತ್ತಿದ್ದರು. ಮಗನ ಅನಾಥ ಮಕ್ಕಳ ಮೇಲಿನ ಪ್ರೀತಿ ಕಂಡು ಪ್ರಶಂಶೆ ವ್ಯಕ್ತಪಡಿಸುತ್ತಿದ್ದರು. ಜಯದೇವ್ ಅವರನ್ನು ಕಂಡರೆ ಅವರಿಗೆ ಅಚ್ಚುಮೆಚ್ಚು. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ದೀನಬಂಧು ಆಶ್ರಮದಲ್ಲಿ ಬಂದು ತಂಗಿದ್ದರು. ಅದಕ್ಕಿಂತ ಮುಂಚೆ ಚಾಮರಾಜನಗರದಲ್ಲಿ ನಡೆದ ಜಿ.ಪಿ. ರಾಜರತ್ನಂ ಶತಮಾನೋತ್ಸವ, ರಂಗ ತರಂಗ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವರುದ್ರಪ್ಪನರು ಹಾಸಿಗೆ ಹಿಡಿದ ಮೇಲೆ ಜಯದೇವ್ ದೀನಬಂಧು ಮಕ್ಕಳ ಯೋಗಕ್ಷೇವು ಜತೆಗೆ ತಂದೆಯ ಯೋಗಕ್ಷೇವು ನೋಡಿಕೊಳ್ಳುತ್ತಿದ್ದರು.
ಹಾಡು ಹಳೆಯದಾದರೇನು... ಭಾವ ನವನವೀನ
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಿನಿಮಾ ಹಾಡಿನ ಸಾಹಿತ್ಯ ಅಂದಾಕ್ಷಣ ಮೊದಲು ನೆನಪಾಗುವುದು 'ಮಾನಸ ಸರೋವರ' ಚಿತ್ರ. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಾಥ್, ಪದ್ಮವಾಸಂತಿ, ರಾಮಕೃಷ್ಣ ಮುಖ್ಯ ಪಾತ್ರಧಾರಿಗಳು. ಎರಡು ಹಾಡುಗಳ ಪೈಕಿ 'ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು, ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು' ಎನ್ನುವ ಹಾಡು ನಾಯಕ ಭಗ್ನಪ್ರೇಮಿಯಾದಾಗ ಬರುವ ಹಾಡು. ಪಿ.ಬಿ. ಶ್ರೀನಿವಾಸ್ ಅವರ ಸಿರಿ ಕಂಠದಲ್ಲಿ ಮೂಡಿದ ಈ ಹಾಡು ಇಂದಿಗೂ ಕೇಳುಗನ ಪಾಲಿಗೆ ನಿಜವಾಗಲೂ 'ಹೊನ್ನು'. ದುರಂತ ಅಂದರೆ ತಮ್ಮ ಚಿತ್ರಕ್ಕೆ ಈ ಹಾಡನ್ನು ಬಳಸಿಕೊಂಡ ನಿರ್ದೇಶಕ, ಗಾಯಕ ಮತ್ತು ಹಾಡಿನ ರಚನೆ ಮಾಡಿದವರು ಈಗಿಲ್ಲ. ಇನ್ನು ಇದೇ ಚಿತ್ರದಲ್ಲಿ ಬಳಕೆಯಾಗಿರುವ ಮತ್ತೊಂದು ಹಾಡು 'ಹಾಡು ಹಳೆಯದಾದರೇನು ಭಾವ ನವನವೀನ' ಬರುವಷ್ಟರಲ್ಲಿ ನಾಯಕ ಪ್ರೀತಿಸಿದ ನಾಯಕಿ ಸರಿಹೋಗಿರುತ್ತಾಳೆ. ಮತ್ತೆ ಹಳೆಯ ನೆನಪುಗಳನ್ನು ಇಬ್ಬರು ಮೆಲುಕು ಹಾಕುವ ನೆಪದಲ್ಲಿ, ಅವರ ನಡುವಿನ ನೆನಪುಗಳು ಕಾಡಿದಾಗ ವಾಣಿ ಜಯರಾಮ್ ಅವರ ಕಂಠದಲ್ಲಿ ಜಿಎಸ್ಎಸ್ರ ಸಾಹಿತ್ಯ ಹಾಡಿನ ರೂಪ ಪಡೆಯುತ್ತದೆ. ಇನ್ನು 'ಪ್ಯಾರಿಸ್ ಪ್ರಣಯ' ಚಿತ್ರದಲ್ಲಿನ 'ಎಂದೆ ತುಂಬಿ ಹಾಡಿದೆನು ಅಂದು ನಾನು' ಹಾಡು ಎಲ್ಲರ ಎದೆಯಲ್ಲೂ ಕಾಯಂ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ 'ಸ್ತ್ರೀ ಶಕ್ತಿ' ಚಿತ್ರದಲ್ಲಿ ಬಳಕೆಯಾದ 'ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ಮಿಂದು...' ಎನ್ನುವ ಪ್ರೇಮ ಗೀತೆಯನ್ನು ಸಿನಿ ಪ್ರೇಮಿಗಳಿಗೆ ಕೇಳುವ ಭಾಗ್ಯ ಸಿಕ್ಕಿದೆ.
- ದೇವರಾಜು ಕಪ್ಪಸೋಗೆ