ಹಣತೆ ಹಚ್ಚಿದ ಕವಿ ಕತ್ತಲ ಮನೆಗೆ
ಚರಿತ್ರೆ ಅಂದರೆ ಅದೊಂದು ಮಬ್ಬು ಕವಿದ
ಸುರಂಗ, ಪಂಜು ಹಿಡಿದು ಹೊರಟರೆ ನೀವು
ಪಿತೂರಿಗಳ ಸಂದಿಗೊಂದಿಗಳಲ್ಲಿ ಕೈ -ಕಾಲ್
ಮುರಿದು ಬಿದ್ದಿರುವ ಶತಮಾನಗಳ ನೋವು
ಆತ್ಮೀಯ ಸ್ನೇಹಿತ ಜಿಎಸ್ಸೆಸ್ ಇತ್ತೀಚಿನ ದಿನಗಳಲ್ಲಿ ಅಸ್ವಸ್ಥರಾಗಿದ್ದರು. ಯಾರನ್ನೂ ಗುರುತು ಹಿಡಿಯುವ ಸ್ಥಿತಿಯಲ್ಲಿ ಇರಲಿಲ್ಲ. ಇದೀಗ ಅವರನ್ನು ಕಳೆದುಕೊಂಡಿದ್ದು ಅತೀವ ಸಂತಾಪ ಎನಿಸುತ್ತಿದೆ.
- ಡಾ. ಜಿ.ಎಸ್. ಆಮೂರ, ಹಿರಿಯ ಸಾಹಿತಿ, ಧಾರವಾಡ
ಸಮನ್ವಯ ಕವಿಗಳಲ್ಲಿ ಒಬ್ಬರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ನಿಧನದಿಂದ ಸಾರಸ್ವತ ಲೋಕ ಬಡವಾಗಿದೆ. ಶಿವರುದ್ರಪ್ಪ ಅವರು ನಾಡು-ನುಡಿಗೆ ಅಪಾರ ಕೊಡುಗೆ ನೀಡಿದ್ದರು. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸಲಿ
- ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ
ಕನ್ನಡಿಗರ ಮನೆ-ಮನಗಳಲ್ಲಿ ಅಜರಾಮರವಾಗಿರುವಂತಹ ಹಾಡುಗಳನ್ನು ರಚಿಸಿದ ಸರಳ, ಸ್ನೇಹಪರ ವ್ಯಕ್ತಿತ್ವದ ಡಾ.ಜಿ.ಎಸ್. ಶಿವರುದ್ರಪ್ಪ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನುಪಮ.
- ಅನಂತಕುಮಾರ್, ಸಂಸದ
ತಮ್ಮ ಸಾಹಿತ್ಯದ ಮೂಲಕ ಕರ್ನಾಟಕಕ್ಕೆ ಅದರಲ್ಲೂ ಮಲೆನಾಡು ಪ್ರದೇಶಕ್ಕೆ ಪ್ರಖ್ಯಾತಿ ತಂದಿದ್ದವರು ಡಾ.ಜಿಎಸ್ಎಸ್. ತಮ್ಮ ಸಾಹಿತ್ಯ ಸೇವೆಗೆ ರಾಷ್ಟ್ರಕವಿ ಪುರಸ್ಕಾರ ಪಡೆದಿದ್ದ ಅವರ ನಿಧನದಿಂದ ಸಾರಸ್ವತ ಲೋಕಕ್ಕೆ ಭರಿಸಲಾರದ ನಷ್ಟವಾಗಿದೆ.
- ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಕನ್ನ್ನಡ ನಾಡು ಕಂಡ ಒಬ್ಬ ಮೇಧಾವಿ ಕವಿಯಾಗಿದ್ದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅಗಲಿಕೆಯಿಂದ ಕನ್ನ್ನಡ ಸಾಹಿತ್ಯ ಕ್ಷೇತ್ರಕ್ಕೆ ಭರಿಸಲಾಗದ ಹಾನಿಯಾಗಿದೆ. ರಾಷ್ಟ್ರಕವಿಯ ಅಗಲಿಕೆಯಿಂದ ಕನ್ನ್ನಡ ನಾಡು ಬಡವಾಗಿದೆ.
- ಡಾ.ಪ್ರಭಾಕರ ಕೋರೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ
ಜಿಎಸ್ಸೆಸ್ ಅವರ ಸಾವು ವಿಷಾದದ ಸಂಗತಿ. ಆಘಾತವಾಗಿ ನನ್ನನ್ನು ಕಾಡುತ್ತಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಹಿಂದೆ ಇಂಟರ್ ಮೀಡಿಯಟ್ ಕಾಲೇಜು ಆಗಿತ್ತು. ಆಗ ಅವರು ನನಗೆ ಉಪಾಧ್ಯಾಯರಾಗಿದ್ದರು.
- ನಾ. ಡಿಸೋಜ, ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷರು
ಮೈದುಂಬಿ ಹಾಡಿದ ಕವಿಯ ದೇಹಾಂತ್ಯ
ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ
ದಿನ ದಿನವೂ ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ
ನನ್ನೆದೆಯ ಹಸಿರ ಉಸಿರು ಕೂಗಿದರೂ ಬರಲಿಲ್ಲ ನಿಮಗೆ ಕರುಣೆ
ನನ್ನ ಹೃದಯದಲಿ ನೋವು ಮಿಡಿಯುತಿದೆ ನಾನು ನಿನಗೆ ಶರಣ
ಅಂತಃಕರಣ, ಮಾನವೀಯತೆಯಿಂದ ತುಂಬಿದ್ದ ಅವರ ವ್ಯಕ್ತಿತ್ವ ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಶಿಷ್ಯರನ್ನು ನೀಡಿದೆ. ಕುವೆಂಪು ಶಿಷ್ಯರಾಗಿ ವಿಶ್ವಮಾನವ ತತ್ವದಲ್ಲಿ ನಂಬಿಕೆ ಇಟ್ಟು ಅದರಂತೆ ನಡೆದವರು. ಅವರ ಅಗಲುವಿಕೆಯಿಂದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
- ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
ರಾಷ್ಟ್ರಕವಿ ಜಿಎಸ್ಎಸ್ ಇಲ್ಲವಾದುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸಂದರ್ಭದಲ್ಲಿ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಜಿಎಸ್ಎಸ್ ಅಗಲಿಕೆ ದುಃಖ ಭರಿಸುವ ಶಕ್ತಿ ನೀಡಲಿ
- ಡಾ. ಶಿವಕುಮಾರ ಸ್ವಾಮೀಜಿ, ಸಿದ್ಧಗಂಗಾ ಮಠಾಧೀಶರು
ಕನ್ನಡ ಸಾರಸ್ವತ ಲೋಕದ ಮೇರು ಮುಕುಟದಂತಿದ್ದ ಡಾ. ಜಿ.ಎಸ್.ಶಿವರುದ್ರಪ್ಪ ಅವರು ದೈವಾಧೀನರಾದದ್ದು ವಿಷಾದದ ಸಂಗತಿ. ದಯಾಮಯನು ಅವರ ಆತ್ಮಕ್ಕೆ ಶಾಂತಿಯನ್ನೂ, ಬಂಧು ಬಾಂಧವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನೂ ದಯ ಪಾಲಿಸಲಿ
- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ
ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ನಿಧನದಿಂದ ನಾಡಿಗೆ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಶಿವರುದ್ರಪ್ಪ ಅವರು ಈ ನಾಡು ಕಂಡ ಆದರ್ಶ ಕವಿ. ಸರ್ಕಾರ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು.
- ವಾಟಾಳ್ ನಾಗರಾಜ್, ಮಾಜಿ ಶಾಸಕ
ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಶಿವರುದ್ರಪ್ಪ ಅವರ ಹೆಸರು ಜನಮಾನಸದಲ್ಲಿ ಚಿರಾಯುವಾಗಿ ನೆಲೆ ನಿಲ್ಲುವಂತ ಕಾರ್ಯಕ್ರಮಗಳನ್ನು ಸರ್ಕಾರ ಆರಂಭಿಸಬೇಕು. ಕನ್ನಡಿಗರ ಮನದಲ್ಲಿ ಅವರು ಸದಾ ಅಮರರಾಗಿರುತ್ತಾರೆ.
-ಡಾ.ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಸಾಹಿತ್ಯ ಕೃಷಿ ಮಾತ್ರವಲ್ಲ ಹಲವಾರು ಸಾಹಿತಿಗಳನ್ನು ಬೆಳೆಸಿದ ಅನೇಕ ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ನಿಧನದಿಂದ ಕನ್ನಡ ನಾಡು ಮಾತ್ರವಲ್ಲ ಇಡಿ ಭಾರತ ದೇಶವೇ ಬಡವಾಗಿದೆ. ವಿದೇಶದಲ್ಲೂ ಕನ್ನಡ ಡಿಂಡಿಮವನ್ನು ಮೊಳಗಿಸಿದ್ದರು.
- ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ಎದೆ ತುಂಬಿ ಹಾಡಿದವರ ಕಂಠ ಕಟ್ಟಿತು
ಹಣತೆ ಹಚ್ಚುತ್ತೇನೆ ನಾನೂ; / ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ ನೀನು ಯಾರೋ ಮತ್ತೆ / ನಾನು ಯಾರೋ....
ಕನ್ನಡ ಸಾಹಿತ್ಯ, ಸಂಸ್ಕೃತಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಎಸ್ಎಸ್, ಕನ್ನಡ ಕಾವ್ಯ ಮೀಮಾಂಸೆಯಲ್ಲಿ ತಿನಂಶ್ರೀ ನಂತರ ಅಪೂರ್ವ ಕೊಡುಗೆ ನೀಡಿದವರು. ಕುವೆಂಪುರಂತೆ ಕನ್ನಡ ವಿಭಾಗದ ಬೆಳವಣಿಗೆಗೆ ಶ್ರಮಿಸಿದವರು.
- ಪ್ರೊ. ಜಿ.ಎಚ್. ನಾಯಕ, ವಿಮರ್ಶಕ
ಜಿಎಸ್ಎಸ್ ಅವರು ನಮ್ಮ ಕಾಲದ ಒಂದು ಸೇತುವೆ. ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸಕ್ರಾಂತಿ ಸೃಷ್ಟಿಸಿದವರು. ವಿಮರ್ಶೆ ನಿಜವಾಗಿ ಆಗಿದ್ದು ಅವರ ಕಾಲದಲ್ಲಿ. ಮುಕ್ತ ಮನಸ್ಸಿನ ಚಿಂತಕ ಅವರು, ಎಲ್ಲರಿಗೂ ಗುರು.
- ಡಾ.ಯು.ಆರ್.ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ತೃತ ಸಾಹಿತಿ
ಜಿಎಸ್ಎಸ್ ನಮ್ಮ ಕಾಲದ ಪ್ರತಿಷ್ಠಿತ ಕವಿ. ಅವರು ಕಾವ್ಯವಲ್ಲದೆ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದರು. ಅವರು ಕಾವ್ಯ ತತ್ವದ ವಿಮರ್ಶಕರಾಗಿದ್ದರು. ಒಳ್ಳೆಯ ಉಪಾಧ್ಯಾಯರಾಗಿ ಹೆಸರು ಮಾಡಿದ್ದರಲ್ಲದೆ, ಸರಳ ಜೀವಿ.
- ಪ್ರೊ.ಜಿ.ವೆಂಕಟಸುಬ್ಬಯ್ಯ, ಸಾಹಿತಿ
ಆದಿಕವಿ ಪಂಪನಿಂದ ಪ್ರಾರಂಭವಾದ ಕನ್ನಡದ ಪರಂಪರೆ ಈ ಆಧುನಿಕ ಯುಗದೊಳಗೂ ಕುವೆಂಪು, ಜಿಎಸ್ಎಸ್ರಂತಹ ಮಹಾನ್ ಸಾಹಿತಿಗಳ ದಾರಿಯಲ್ಲಿ ಸಾಗಿದೆ. ಸಾಹಿತ್ಯ ಕೃಷಿಯಲ್ಲಿ ಜಿಎಸ್ಎಸ್ ಅವರದ್ದು ಮೈಲುಗಲ್ಲು.
- ಪ್ರೊ.ಚಂದ್ರಶೇಖರ ಪಾಟೀಲ, ಸಾಹಿತಿ
ಕುವೆಂಪು ಅವರ ನೇರ ಉತ್ತರಾಧಿಕಾರಿಯಾಗಿದ್ದ ಜಿ.ಎಸ್. ಶಿವರುದ್ರಪ್ಪನವರ ಕೊರತೆ ಯಾರಿಗೂ ತುಂಬಲಾಗದು. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಘನತೆವೆತ್ತ ಪ್ರಾಧ್ಯಾಪಕ, ಸರ್ವಶ್ರೇಷ್ಠ ಸಂಘಟಕ, ಶ್ರೇಷ್ಠ ಕವಿ, ಆಡಳಿತಗಾರ.
- ಡಾ. ಎಂ.ಎಂ. ಕಲಬುರ್ಗಿ, ಹಿರಿಯ ಸಂಶೋಧಕ, ಧಾರವಾಡ
ಸಾಹಿತ್ಯದ ಕೊಂಡಿಯೊಂದು ಕಳಚಿದಂತಾಗಿದೆ. ಅವರು ರಚಿಸಿರುವ ಕೃತಿ, ಕವನಗಳನ್ನು ರಚಿಸಲು ಬೇರಾರಿಂದಲೂ ಸಾಧ್ಯವಿಲ್ಲವೇನೋ ಎನಿಸುತ್ತದೆ. ಅವರ ಪ್ರತಿಯೊಂದು ಬರಹವೂ ಅದ್ಭುತ, ಅಮೋಘ ಎಂದರೆ ತಪ್ಪಾಗಲಾರದು.
- ಡಾ.ಸಿದ್ದಲಿಂಗಯ್ಯ, ಸಾಹಿತಿ