ಹೊರನಾಡಲ್ಲಿ ಕನ್ನಡ ಹರವಿದ ಜಿಎಸ್‌ಎಸ್
ಉಸ್ಮಾನಿಯ ವಿವಿಯಲ್ಲಿದ್ದಷ್ಟು ದಿನ ಜಿಎಸ್‌ಎಸ್ ವಿದ್ಯಾರ್ಥಿಗಳಿಗಾಗಿ ಸೆಮಿನಾರ್ ಹಮ್ಮಿಕೊಳ್ಳುತ್ತಿದ್ದರು.
ವಿದ್ಯಾರ್ಥಿಗಳೇ ಬರೆದ ಲೇಖನ, ಪ್ರಬಂಧಗಳನ್ನು 'ತಾವರೆ' ಎಂಬ ಸಾಹಿತ್ಯ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟಿಸಿ, ಪ್ರೋತ್ಸಾಹಿಸುತ್ತಿದ್ದರು.
ರಾಷ್ಟ್ರಕವಿ ಜಿಎಸ್‌ಎಸ್ ಹಾಗೂ ಉಸ್ಮಾನಿಯಾ ವಿವಿಗೆ ಅವಿನಾಭಾವ ಸಂಬಂಧವಿದೆ. 1963ರಿಂದ 1966ರ ವರೆಗೆ ವಿವಿಯ ಕನ್ನಡ ವಿಭಾಗದಲ್ಲಿ ರೀಡರ್ ಮತ್ತು ಮುಖ್ಯಸ್ಥರಾಗಿದ್ದರು ಅವರು. ಹೈದರಾಬಾದಿಗೆ ಬರುವುದಕ್ಕಿಂತ ಮುಂಚೆ ಅವರು ಮೈಸೂರು ವಿವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಒಂದು ದಿನ ವಾಕಿಂಗ್ ಹೋದಾಗ ಪ್ರೊ. ಪ್ರಭುಶಂಕರ್ ಭೇಟಿಯಾಗುತ್ತಾರೆ. ಆಗ ಅವರ ಜೊತೆ ಮಾತನಾಡುವ ವೇಳೆ, ಉಸ್ಮಾನಿಯಾ ವಿವಿಯಲ್ಲಿ ರೀಡರ್ ಪೋಸ್ಟ್‌ಗೆ ಅರ್ಜಿ ಹಾಕಿರುವ ವಿಷಯವನ್ನು ಪ್ರಭುಶಂಕರ ಅವರು ಜಿಎಸ್‌ಎಸ್ ಅವರಿಗೆ ಹೇಳುತ್ತಾರೆ. ಜಿಎಸ್‌ಎಸ್ ಅವರು ಕೂಡ ಇದೇ ಹುದ್ದೆಗೆ ಅರ್ಜಿ ಹಾಕಿಕೊಂಡಿರುತ್ತಾರೆ, ಆದರೆ, ಈ ವಿಷಯ ಅವರಿಗೆ ಹೇಳುವುದಿಲ್ಲ. ತಾವು ಸಂದರ್ಶನಕ್ಕೆ ಹೋದರೆ, ಎಲ್ಲಿ ಪ್ರಭುಶಂಕರ ಅವರಿಗೆ ಹುದ್ದೆ ತಪ್ಪಿಹೋಗುವುದೆಂಬ ಆತಂಕದಿಂದ ಅವರು ಹೈದರಾಬಾದಿನ ಉಸ್ಮಾನಿಯಾ ವಿವಿ ಸಂದರ್ಶನಕ್ಕೆ ಹೋಗುವುದನ್ನೇ ಬಿಟ್ಟುಬಿಡುತ್ತಾರೆ. ಪ್ರಭುಶಂಕರರು ಮಾತ್ರ ಸಂದರ್ಶನಕ್ಕೆ ಹೋಗಿದ್ದರು. ನೇಮಕ ಸಮಿತಿಯಲ್ಲಿ ಪ್ರೊ. ಹಾ.ಮಾ.ನಾಯಕ ಸದಸ್ಯರಾಗಿರುತ್ತಾರೆ. ಅವರು ಜಿಎಸ್‌ಎಸ್ ಅವರ ಅರ್ಜಿಯನ್ನು ನೋಡಿ, ಅವರು ಗೈರುಹಾಜರಿದ್ದರೂ ಹೊರನಾಡಿನಲ್ಲಿ ಕನ್ನಡ ಕಟ್ಟುವುದಕ್ಕೆ ಜಿಎಸ್‌ಎಸ್ ಅವರು ಸರಿಯಾದ ವ್ಯಕ್ತಿ ಎಂದು ಆಗಿನ ಉಪಕುಲಪತಿಗಳಿಗೆ ತಿಳಿಸಿ, ಈ ವ್ಯಕ್ತಿಯನ್ನೇ ಆಯ್ಕೆ ಮಾಡಿ, ಆತನನ್ನು ಕಳುಹಿಸುವ ಜವಾಬ್ದಾರಿ ತಮ್ಮದೆಂದು ಹೇಳಿ ಜಿಎಸ್‌ಎಸ್ ಅವರನ್ನೇ ಆಯ್ಕೆ ಮಾಡುತ್ತಾರೆ. ಹೀಗೆ ಜಿಎಸ್‌ಎಸ್ ಅವರು ಉಸ್ಮಾನಿಯ ವಿವಿ ಕನ್ನಡ ವಿಭಾಗಕ್ಕೆ ಬರುತ್ತಾರೆ. ಮೂರು ವರ್ಷಗಳ ಬಳಿಕ ಜಿಎಸ್‌ಎಸ್ ಬೆಂಗಳೂರು ವಿವಿ ಕನ್ನಡ ಅಧ್ಯಯನ ನಿರ್ದೇಶಕರಾಗಿ ಹೋಗುತ್ತಾರೆ.
ಕನ್ನಡ ವಿಭಾಗದಲ್ಲಿ ಖ್ಯಾತ ಭಾಷಾ ವಿಜ್ಞಾನಿ ಪ್ರೊ. ಬಿ. ರಾಮಚಂದ್ರರಾವ್, ಛಂದಶಾಸ್ತ್ರ, ವ್ಯಾಕರಣ ಪಂಡಿತರಾಗಿದ್ದ ಪ್ರೊ. ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿದ್ದರು. ಒಂದು ಸಲ ಪ್ರೊ. ವೆಂಕಟಾಚಲಾಶಾಸ್ತ್ರೀಗಳು ಹೈದರಾಬಾದಿಗೆ ಬಂದಾಗ ತಮ್ಮ ಅನುಭವಗಳನ್ನು ಹೀಗೆ ನಮ್ಮೊಂದಿಗೆ ಹೇಳಿಕೊಂಡಿದ್ದರು. "ನಾವು ಪ್ರತಿ ರವಿವಾರ ಚಂಪೂಕಾವ್ಯಗಳನ್ನು ಓದುವ ಹವ್ಯಾಸವನ್ನು ಹಾಕಿಕೊಂಡಿದ್ದೆವು. ನಾನು ಟಿವಿವೆಂ ಕಾವ್ಯದ ಛಂದಸ್ಸು, ವ್ಯಾಕರಣದ ಕುರಿತು ವಿವರಿಸುತ್ತಿದ್ದೆ. ಬಿ. ರಾಮಚಂದ್ರರಾವ್ ಅವರು ಕಾವ್ಯ ಭಾಷೆಯನ್ನು ಕುರಿತು ವಿವರಿಸುತ್ತಿದ್ದರು.
ಜಿಎಸ್‌ಎಸ್ ಅವರು ಕಾವ್ಯ ಸೌಂದರ್ಯ ಮತ್ತು ಮೀಮಾಂಸೆಗೆ ಸಂಬಂಧಿಸಿದ ವಿಷಯಗಳನ್ನು ವಿವರಿಸುತ್ತಿದ್ದರು" ಎಂದು ಹೇಳಿರುವುದು ಇಂದು ಕಣ್ಕಟ್ಟಿದಂತಿದೆ. ಏಕೆಂದರೆ, ಒಂದು ವಿಭಾಗದಲ್ಲಿ ಈ ಎಲ್ಲ ಪಂಡಿತರು, ತಮ್ಮ ವೈಯಕ್ತಿ ಅಹಂ ಬಿಟ್ಟು, ತನಗೆ ಗೊತ್ತಿಲ್ಲದ್ದನ್ನು, ತನ್ನ ಇನ್ನೊಬ್ಬ ಸ್ನೇಹಿತನಿಂದ ತಿಳಿದುಕೊಳ್ಳುವುದು, ತನ್ನ ಸ್ನೇಹಿತನಿಗೆ ಗೊತ್ತಿಲ್ಲದ್ದನ್ನು ತಾನು ಹೇಳಿ ತಿಳಿಸುವುದು ಅನನ್ಯ. ಇಂಥ ಒಂದು ಸ್ನೇಹಪರ ಚರ್ಚೆ ಸಾಧ್ಯವಾದಗಲೇ ವ್ಯಕ್ತಿ ಬೆಳೆಯಬಲ್ಲ. ತನ್ನ ಸುತ್ತಲಿನವರನ್ನು ಬೆಳೆಸಬಲ್ಲ ಎಂಬುದಕ್ಕೆ ಇಂದು ಜಿ.ಎಸ್.ಎಸ್. ಅವರೇ ನಿದರ್ಶನ.
-ಡಾ. ಲಿಂಗಪ್ಪ ಗೋನಾಲ
ಮುಖ್ಯಸ್ಥರು, ಕನ್ನಡ ವಿಭಾಗ, ಉಸ್ಮಾನಿಯಾ ವಿವಿ ಹೈದರಾಬಾದ್