ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಪಹೃತ ವಿದ್ಯಾರ್ಥಿಗೂ ಲೈಂಗಿಕ ಕಿರುಕುಳ

Rashmi Kasaragodu
Updated On : 25 Dec 2013, 12:30 pm

ಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ ಸಹಪಾಠಿಯಿಂದಲೇ ಬಲವಂತವಾಗಿ ಅತ್ಯಾಚಾರ ನಡೆಸಿ, ಚಿತ್ರೀಕರಿಸಿದ್ದ ಉಳ್ಳಾಲದ ರಕ್ಕಸರು, ವಿದ್ಯಾರ್ಥಿ ಕೈ ಮುರಿದು, ತೀವ್ರ ಲೈಂಗಿಕ ಹಲ್ಲೆ ನಡೆಸಿದ್ದಾರೆ.
ವಿದ್ಯಾರ್ಥಿನಿ ಮೇಲೆಯೂ ಹೀನಾತಿಹೀನ ತೀವ್ರ ಲೈಂಗಿಕ ಕಿರುಕುಳ ನೀಡಿರುವುದು ಆರೋಪಿಗಳೇ ಚಿತ್ರೀಕರಿಸಿದ ವೀಡಿಯೋದಲ್ಲಿ ದಾಖಲಾಗಿದೆ. ಜತೆಗೆ ವಿದ್ಯಾರ್ಥಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಕಿರುಕುಳ ನೀಡಿದ್ದಾರೆ. ವಿದ್ಯಾರ್ಥಿಯ ಬಲಗೈ ಮುರಿದಿದ್ದು, ಕಣ್ಣಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಈ ವಿಚಾರ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ.
ಈ ಹಿಂದೆ ಪುರುಷರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣ ದಾಖಲಿಸುವಂತಿರಲಿಲ್ಲ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಐಪಿಸಿ 375, 376 ತಿದ್ದುಪಡಿ ಮಾಡಲಾಗಿದೆ. ಪುರುಷರ ಮೇಲೆ ಯಾರೇ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದರೂ ಗಂಭೀರ ಪ್ರಕರಣ ದಾಖಲಿಸಬಹುದು. ಈ ಪ್ರಕರಣದಲ್ಲಿ ಇದುವರೆಗೆ ವಿದ್ಯಾರ್ಥಿನಿಯ ದೂರಿನಂತೆ ಅಪಹರಣ, ಲೈಂಗಿಕ ಕಿರುಕುಳ ಪ್ರಕರಣ ಮಾತ್ರ ದಾಖಲಾಗಿದೆ.

ವಿಕೃತ ಕಾಮಿಗಳು: ವಿಕೃತ ಕಾಮಿ, ರಕ್ಕಸರು ಈ ಹಿಂದೆ ಅನೇಕ ಬಾರಿ ಗೆಳೆಯ-ಗೆಳತಿಯರನ್ನು ಅಪಹರಿಸಿ ಅತ್ಯಾಚಾರ ನಡೆಸಿ ಚಿತ್ರೀಕರಿಸುತ್ತಿದ್ದರು ಎದು ತಿಳಿದುಬಂದಿದೆ.
'ನಿರ್ಭಯ ಪ್ರಕರಣ ಬಳಿಕ ತಿದ್ದುಪಡಿ ಕಾನೂನಿನಂತೆ ಹುಡುಗರ ಮೇಲೆ ಬಲಾತ್ಕಾರವಾಗಿ ಅನೈಸರ್ಗಿಕ ಕ್ರಿಯೆ ನಡೆಸಿದರೆ ಅತ್ಯಾಚಾರ ಪ್ರಕರಣ ದಾಖಲಿಸಬಹುದು.  ಆರೋಪಿಗಳು ಬಲವಂತ ಮಾಡಿ ಪ್ರಚೋದಿಸುತ್ತಿರುವುದರಿಂದ ಸಾಮೂಹಿಕ ಅತ್ಯಾಚಾರ ಪ್ರಕರಣ ಎಂದು ದಾಖಲಿಸಬಹುದು' ಎಂದು ನ್ಯಾಯವಾದಿ ಪಿ.ಪಿ. ಹೆಗ್ಡೆ ವಿಶ್ಲೇಷಿಸುತ್ತಾರೆ.
ಈ ಬಗ್ಗೆ ನ್ಯಾಯವಾದಿ, ಮಕ್ಕಳ ಹಕ್ಕು ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ಹೇಳುವುದು ಹೀಗೆ- 'ಸಂತ್ರಸ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೇಳಿಕೆಗಳ ಮೇಲೆ ಪ್ರಕರಣದ ಗಂಭೀರತೆಯನ್ನು ಹೇಳಬಹುದು. ಸಂತ್ರಸ್ತರು ಭೀತಿಯಲ್ಲಿರುವುದರಿಂದ ಅವರಲ್ಲಿ ಧೈರ್ಯ ತುಂಬಿದ ಬಳಿಕವೇ ಹೇಳಿಕೆ ಪಡೆದು ಗಂಭೀರ ಪ್ರಕರಣ ದಾಖಲಿಸಬಹುದು'.
'ಪ್ರಕರಣ ತನಿಖೆಯಲ್ಲಿದೆ, ಸದ್ಯಕ್ಕೆ ಅಪಹರಣ, ಬ್ಲ್ಯಾಕ್ಮೇಲ್ ಜತೆಗೆ ಲೈಂಗಿಕ ಕಿರುಕುಳ ದೂರ ದಾಖಲಿಸಿದ್ದೇವೆ. ತನಿಖೆ ನಡೆಸಿದ ಬಳಿಕ ಅರೋಪ ಪಟ್ಟಿ ದಾಖಲಿಸುವಾಗ ಎಲ್ಲ ವಿಚಾರಗಳನ್ನು ಪರಿಗಣಿಸಲಾಗುವುದು' ಎಂದು ಪೊಲೀಸ್ ಕಮಿಷನರ್ ಹಿತೇಂದ್ರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಏನಿದು ಘಟನೆ?
ಬುಧವಾರ ರಾತ್ರಿ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಗೆಳೆಯನ ಜತೆಗೆ ಕೋಟೆಕಾರ್ನ ಬಾರ್ ಒಂದರಿಂದ ಹೊರಗೆ ಬಂದು ಕಾರ್ ಹತ್ತುತ್ತಿದ್ದ ವೇಳೆ ಕೊಪ್ಪಲ ಸಫ್ವಾನ್ ನೇತೃತ್ವದ ತಂಡ ಅವರದೇ ಕಾರಿನಲ್ಲಿ ಅಪಹರಿಸಿದ್ದರು. ಇನ್ನೊಂದು ಕಾರಿನಲ್ಲಿ ದುರುಳರ ಮತ್ತೊಂದು ತಂಡ ಜತೆಯಲ್ಲಿಯೇ ಬರುತ್ತಿತ್ತು.
ರಾತ್ರಿ ಇಡೀ ಕಣ್ಣಿಗೆ ಬಟ್ಟೆ ಕಟ್ಟಿ ತಿರುಗಾಡಿಸಿ, ಪಾಳು ಬಿದ್ದ ಮನೆಯಲ್ಲಿ ವಿದ್ಯಾರ್ಥಿನಿಯನ್ನು ಬೆದರಿಸಿ ಗೆಳೆಯನಿಂದಲೇ ಬಲವಂತವಾಗಿ ಅತ್ಯಾಚಾರ ನಡೆಸಿ, ಇದನ್ನು ಚಿತ್ರೀಕರಿಸಿದ್ದಾರೆ. ವಿದ್ಯಾರ್ಥಿಯನ್ನು ಒತ್ತೆ ಇಟ್ಟು, ಗುರುವಾರ ಬೆಳಗ್ಗೆ ಬಿಡುಗಡೆ ಮಾಡಿ 3 ಲಕ್ಷ ತರುವಂತೆ ಬೆದರಿಸಿದ್ದಾರೆ.
ಗೆಳೆಯನನ್ನು ಬದುಕಿಸಲು ಯುವತಿ ಹಣ ಒಟ್ಟು ಮಾಡುತ್ತಿದ್ದಾಗ ಸಹಪಾಠಿಗಳಿಗೆ ವಿಚಾರ ತಿಳಿದು, ನ್ಯಾಯವಾದಿ ಮೂಲಕ ಪೊಲೀಸರನ್ನು ಸಂಪರ್ಕಿಸಲಾಗಿತ್ತು.
ಪೊಲೀಸರು ಆರೋಪಿಯನ್ನು ಯುವತಿಯಿಂದ ಹಣ ಪಡೆಯುತ್ತಿದ್ದ ವೇಳೆ ಹಿಡಿಯಲು ಯೋಜನೆ ರೂಪಿಸಿದರೂ ಆರೋಪಿಗಳು ಪೊಲೀಸರ ಮೇಲೆಯೇ ಕಾರ್ ಏರಿಸಿ ಪರಾರಿಯಾಗಿದ್ದರು. ಶನಿವಾರ ಮುಂಜಾನೆ ಸುರತ್ಕಲ್ ಮನೆಯೊಂದರಲ್ಲಿ 8 ಮಂದಿ ಆರೋಪಿಗಳನ್ನು ಕಮಿಷನರ್ ಹಿತೇಂದ್ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement