ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೊಳೆತ ಸೇಬನ್ನು ಬದಲಾಯಿಸಿ ಕೊಟ್ಟರು ಮುಕೇಶ್ ಅಂಬಾನಿ!

ಸ್ವರೂಪದಲ್ಲಿ ಇದೊಂದು ಚಿಲ್ಲರೆ ತಕರಾರು. ಆದರೆ ಇದರಲ್ಲಿ ಒಂದು ದೊಡ್ಡ ಪಾಠವಿದೆ ಎಂದೇ ನನ್ನ ಭಾವನೆ. ಆದದ್ದು ಇಷ್ಟೇ, ರಿಲಯನ್ಸ್ ಪ್ರೆಶ್ ಎಂಬ ತಾಜಾ ಹಣ್ಣು...

Rashmi Kasaragodu
Updated On : 25 Dec 2013, 12:10 pm

ಬೆಂಗಳೂರು: ಸ್ವರೂಪದಲ್ಲಿ ಇದೊಂದು ಚಿಲ್ಲರೆ ತಕರಾರು. ಆದರೆ ಇದರಲ್ಲಿ ಒಂದು ದೊಡ್ಡ ಪಾಠವಿದೆ ಎಂದೇ ನನ್ನ ಭಾವನೆ. ಆದದ್ದು ಇಷ್ಟೇ, ರಿಲಯನ್ಸ್ ಪ್ರೆಶ್ ಎಂಬ ತಾಜಾ ಹಣ್ಣು-ತರಕಾರಿಗಳನ್ನು ಮಾರುವ ಸಂಸ್ಥೆಯ ಬೆಂಗಳೂರಿನ ಒಂದು ಮಳಿಗೆಯಲ್ಲಿ ನಾನು 2012ರ ಅಕ್ಟೋಬರ್ ತಿಂಗಳಲ್ಲಿ ಇತರ ವಸ್ತುಗಳ ಜೊತೆಯಲ್ಲಿ ನಾಲ್ಕು ಸಿಮ್ಲಾ ಸೇಬು ಖರೀದಿಸಿದೆ. ಮನೆಗೆ ತಂದಮೇಲೆ ಅವುಗಳಲ್ಲಿ ಒಂದನ್ನು ನನ್ನ ಮಗಳು ತಿನ್ನುವುದಕ್ಕೆಂದು ಕಚ್ಚಿದಾಗ ಅದು ಒಳಗೆ ಕೊಳೆತಿರುವುದು ಗಮನಕ್ಕೆ ಬಂತು.
 ಮಾರನೆ ದಿನ ನಾನು ಅದನ್ನು ಖರೀದಿಸಿದ ಮಳಿಗೆಗೇ ತೆಗೆದುಕೊಂಡು ಹೋಗಿ ಅದರ ಬದಲಿಗೆ ಬೇರೆ ಹಣ್ಣನ್ನು ಕೊಡುವಂತೆ ಕೇಳಿದೆ. ಆದರೆ ಅಲ್ಲಿಯ ಸಿಬ್ಬಂದಿ ಹಣ್ಣು, ತರಕಾರಿಗಳನ್ನು ಬದಲಾಯಿಸಿ ಕೊಡುವುದಿಲ್ಲ ಎಂದು ನಿಯಮಗಳನ್ನು ಹೇಳಿದರು. ನನ್ನ ಬೇಡಿಕೆಯನ್ನು ತಳ್ಳಿಹಾಕಿದರು.
ಈಗ ನನಗೆ ಉಳಿದಿರುವ ದಾರಿಯಾದರೂ ಯಾವುದು? ನಾನು ಕಂಪನಿಯ ಚೇರ್ಮನ್ ಮುಕೇಶ್ ಅಂಬಾನಿಯವರಿಗೆ ಒಂದು ಪತ್ರವನ್ನು ಬರೆದೆ. ನನಗೆ ದೊರೆತ ಇ-ಮೇಲ್ ಮತ್ತು ರಿಜಿಸ್ಟರ್ಡ್ ಅಂಚೆಯ ಮೂಲಕ ಅವರಿಗೆ ಕಳುಹಿಸಿದೆ. ನಾನು ಅವರಿಗೆ ಕೆಲವು ಸರಳ ಪ್ರಶ್ನೆಗಳನ್ನು ಕೇಳಿದೆ.
 ಹೊರಗಡೆ ಮಿಂಚುತ್ತಿರುವ ಸೇಬು ಒಳಗಡೆ ಕೆಟ್ಟುಹೋಗಿದೆ ಎಂದು ಗುರುತಿಸುವುದಾದರೂ ಹೇಗೆ? ಅದು ನಿಮಗೂ ಗೊತ್ತಾಗುವುದಿಲ್ಲ ನಿಜ. ಆದರೆ ಅದನ್ನು ಗಮನಕ್ಕೆ ತಂದಾಗ ನಿಮ್ಮ ಗ್ರಾಹಕರಿಗೆ ನೀವು ಗೌರವ ಕೊಡಬೇಕಲ್ಲವೆ? ನಾನು ತಂದಿದ್ದು ಟೊಮೆಟೋನೋ ಈರುಳ್ಳಿಯೋ ಆಗಿರಲಿಲ್ಲ. ಯಾವುದನ್ನು ಬದಲಿಸಬಹುದು ಯಾವುದನ್ನು ಬದಲಿಸಲಾಗದು ಎಂದು ನಿಮ್ಮ ಸಿಬ್ಬಂದಿಗೆ ತರಬೇತಿ ಕೊಡುವವರು ಯಾರು?     
ಸಭ್ಯ ವ್ಯವಹಾರ ಎನ್ನುವುದು ಇರುತ್ತದೆ. ಅದರ ಪ್ರಕಾರ ನಿಮ್ಮ ಸಿಬ್ಬಂದಿ ನನಗೆ ಸೇಬನ್ನು ಬದಲಿಸಿಕೊಡಬೇಕಿತ್ತು. ಏಕೆಂದರೆ ನಿಮ್ಮದು ರಿಲಯನ್ಸ್ ಫ್ರೆಶ್! ಅಲ್ಲಿ ನಾವು ಕೊಳೆತ ಹಣ್ಣನ್ನು ನಿರೀಕ್ಷಿಸಿಯೇ ಇರುವುದಿಲ್ಲ. ನಾವು ನಿಮ್ಮ ಸಂಸ್ಥೆಯನ್ನು ನಂಬಿರುವಾಗ ನೀವು ನಮ್ಮನ್ನು ಅಪಮಾನಿಸುವುದು ಸರಿಯೆ?
 ಕೊಳೆತ ಸೇಬನ್ನು ಮಾರುವುದು ಮತ್ತು ಭಾರತದ ಅತ್ಯಂತ ದೊಡ್ಡ ಶ್ರೀಮಂತನಾಗುವುದು! ಎಂಥ ವ್ಯಂಗ್ಯ ಇದು!! ಇದು 'ಆಮ್ ಆದ್ಮಿ ಇನ್ ಆ್ಯಪಲ್ ರಿಪಬ್ಲಿಕ್‌' ಅಂದ ಹಾಗೆ? ನೀವು ಭಾರತದ ದೊಡ್ಡ ಶ್ರೀಮಂತನಾಗಿರುವುದಕ್ಕೆ ಅಭಿನಂದನೆಗಳು.
 ಇದು ಒಂದು ಸೇಬಿನ ಪ್ರಶ್ನೆಯಲ್ಲ. ಬಿಸಿನೆಸ್ ಎಥಿಕ್ಸ್ ಪ್ರಶ್ನೆ. ಇದನ್ನು ರಸ್ತೆ ಬದಿಯ ವ್ಯಾಪಾರಿಯೂ ಅರಿತಿದ್ದಾನೆ. ಈ ಕಾರಣಕ್ಕಾಗಿಯೇ ನಿಮ್ಮಂಥ ದೈತ್ಯ ವ್ಯಾಪಾರಿಗಳು ಬಂದರೂ ಆತ ಉಸಿರಾಡಿಸುತ್ತಿದ್ದಾನೆ. ಮತ್ತೊಮ್ಮೆ ನೆನಪಿಸುತ್ತೇನೆ, ಇದು ಕೇವಲ ಒಂದು ಸೇಬಿನ ಪ್ರಶ್ನೆಯಲ್ಲ. ನಿಮ್ಮ ಸಿಬ್ಬಂದಿಯನ್ನು ವ್ಯಾವಹಾರಿಕ ಜಾಣ್ಮೆಯಿಂದ ತರಬೇತುಗೊಳಿಸಿರಿ, ಕೇವಲ ಗಣಿತದಿಂದಲ್ಲ.
 ನನ್ನ ಈ ಪತ್ರಕ್ಕೆ ಉತ್ತರವನ್ನು ನಾನು ದೀರ್ಘ ಕಾಲ ಕಾಯಬೇಕಾಯಿತು. ಈ ತಿಂಗಳ 12ನೇ ತಾರೀಖು ರಿಲಯನ್ಸ್ ಕಸ್ಟಮರ್ ಕೇರ್‌ನಿಂದ ನನಗೊಂದು ಇ-ಮೇಲ್ ಬಂತು.  ನಿಮ್ಮ ಕಾರ್ಡ್‌ನಲ್ಲಿ ಇಷ್ಟು ರುಪಾಯಿಗಳು ಉಳಿದಿವೆ.  ಅದನ್ನು ರಿಡೀಮ್ ಮಾಡಿಸಿಕೊಳ್ಳಿ. ನಿಮ್ಮ ಸಮಸ್ಯೆಗಳೇನಿದ್ದರೂ ಅದನ್ನು ನಮಗೆ ತಿಳಿಸಿ ಎಂಬುದು ಅದರ ಸಾರ. ನಾನು ಅದಕ್ಕೆ ಉತ್ತರಿಸುತ್ತ, ಒಂದು ವರ್ಷದ ಹಿಂದೆ ನಿಮ್ಮ ಚೇರ್ಮನ್‌ಗೆ ಬರೆದ ದೂರಿಗೆ ಇನ್ನೂ ಉತ್ತರಿಸಿಲ್ಲ. ನೀವಾದರೂ ಉತ್ತರಿಸುವಿರಾ ಎಂದು ಪ್ರಶ್ನಿಸಿ, ಮುಕೇಶ್ ಅಂಬಾನಿಗೆ ನಾನು ಬರೆದ ಪತ್ರವನ್ನು ಲಗತ್ತಿಸಿ ಅವರಿಗೆ ಉತ್ತರಿಸಿದೆ. ಕಳೆದೊಂದು ವರ್ಷದಿಂದ ನಿಮ್ಮ ಮಳಿಗೆಗೆ ಕಾಲಿಟ್ಟಿಲ್ಲ ಎಂಬುದನ್ನೂ ಸೇರಿಸಿದೆ.
 ಇದರ ಉತ್ತರಕ್ಕೆ ನಾನು ಬಹಳ ದಿನ ಕಾಯಬೇಕಾಗಿ ಬರಲಿಲ್ಲ. ಎರಡೇ ದಿನಗಳಲ್ಲಿ, ನನಗಾಗಿರುವ ಅನನುಕೂಲಕ್ಕೆ ಕ್ಷಮೆಯಾಚಿಸಿದ್ದಲ್ಲದೆ ನಮ್ಮವರು ನಿಮ್ಮನ್ನು ಶೀಘ್ರವೇ ಸಂಪರ್ಕಿಸುವರು ಎಂಬ ಸಂದೇಶ. ನಂತರ ಸ್ಥಳೀಯ ರಿಲಯನ್ಸ್ ಫ್ರೆಶ್ ಮಳಿಗೆಯವರು ದೂರವಾಣಿಯಲ್ಲಿ ಸಂಪರ್ಕಿಸಿ ತಮ್ಮ ವಿಷಾದವನ್ನು ವ್ಯಕ್ತಪಡಿಸಿದ್ದಲ್ಲದೆ ಒಂದು ಕಿಲೋ ತಾಜಾ ಸೇಬನ್ನು ಮನೆಗೆ ಕಳುಹಿಸಿಕೊಟ್ಟರು. ತಡವಾದರೂ ನನಗೆ ನ್ಯಾಯ ದೊರಕಿತ್ತು.

ಒಂದು ಸೇಬಿನ ಬೆಲೆ ರು. 4 ಸಾವಿರ
ವ್ಯಾವಹಾರಿಕ ಜಾಣ್ಮೆ ಇಲ್ಲದ ಸಿಬ್ಬಂದಿ ಕಂಪನಿಗೆ ಮಾಡಿದ ನಷ್ಟ ಎಷ್ಟು?ತಿಂಗಳಲ್ಲಿ ನಾನು ರಿಲಯನ್ಸ್ ಫ್ರೆಶ್‌ನಿಂದ ರು. 1000-1500 ರವರೆಗೆ ಖರೀದಿ ಮಾಡುತ್ತಿದ್ದೆ. ಈ 14 ತಿಂಗಳಲ್ಲಿ ಕನಿಷ್ಠ ರು. 20 ಸಾವಿರದ ವ್ಯವಹಾರವನ್ನು ಕಂಪನಿ ಕಳೆದುಕೊಂಡಿತು. ಶೇ.20 ಲಾಭವೆಂದರೂ ರು. 4 ಸಾವಿರ ಕಂಪನಿಗೆ ನಷ್ಟ. ಇದು ಒಂದು ಸೇಬಿನ ಬೆಲೆ!

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement