ದಿಲ್ಲಿ ದರ್ಬಾರ್ ಕೈ-ಆಪ್ ಭಿನ್ನ
ದೆಹಲಿ ಸರ್ಕಾರ ರಚನೆ ವಿಚಾರ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಈಗ ಆಮ್ ಆದ್ಮಿ ಪಕ್ಷ(ಆಪ್)ದಲ್ಲೂ ಬಿರುಕು ಸೃಷ್ಟಿಸಿದೆ. ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಬೆಂಬಲ...
ನವದೆಹಲಿ: ದೆಹಲಿ ಸರ್ಕಾರ ರಚನೆ ವಿಚಾರ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಈಗ ಆಮ್ ಆದ್ಮಿ ಪಕ್ಷ(ಆಪ್)ದಲ್ಲೂ ಬಿರುಕು ಸೃಷ್ಟಿಸಿದೆ.
ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಒಡಕು ಮೂಡಿದ್ದರೆ, ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಆಪ್ ಶಾಸಕ ವಿನೋದ್ ಕುಮಾರ್ ಬಿನ್ನಿ ತೀವ್ರ ಅಸಮಾಧಾನಗೊಂಡಿದ್ದಾರೆ.
ಈ ಸಂಬಂಧ ಮಂಗಳವಾರ ರಾತ್ರಿ ಕೇಜ್ರಿವಾಲ್ ಅವರನ್ನು ಭೇಟಿಯಾದ ಅವರು ಕೇವಲ ಹತ್ತೇ ನಿಮಿಷದಲ್ಲಿ ಸ್ಥಳದಿಂದ ಹೊರ ನಡೆದಿದ್ದಾರೆ. ಬುಧವಾರ ಭಾರಿ ರಹಸ್ಯವೊಂದನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಆಪ್ ಮುಖಂಡರು ತಕ್ಷಣ ಬಿನ್ನಿ ಅವರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಬಿನ್ನಿ ಅವರನ್ನು ಕಡೆಗಣಿಸಿಲ್ಲ. ಅವರಿಗೆ ಸರ್ಕಾರದಲ್ಲಿ ದೊಡ್ಡ ಪಾತ್ರ ನೀಡಲಾಗುವುದು ಎಂದು ಹೇಳಿದ್ದಾರೆ.
ಆಕ್ರೋಶ: ಇನ್ನೊಂದು ಕಡೆ ಆಮ್ ಆದ್ಮಿಗೆ ಬೆಂಬಲ ನೀಡುವ ವರಿಷ್ಠರ ಕ್ರಮದ ಕುರಿತು ಕಾಂಗ್ರೆಸ್‌ನಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಮ್ ಆದ್ಮಿಯನ್ನು ಬೆಂಬಲಿಸುವ ಬದಲು ಪ್ರತಿಪಕ್ಷ ಸ್ಥಾನದಲ್ಲಿ ಕೂರಬಹುದಿತ್ತು. ಜನರ ಅಭಿಪ್ರಾಯಗಳನ್ನು ಸದನದಲ್ಲಿ ಎತ್ತಬಹುದಿತ್ತು ಎಂದು ಕೆಲ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳಿ ಎಂದು ಅವರು ಒತ್ತಾಯಿಸಿದ್ದಾರೆ. ಈ ವಿಚಾರವನ್ನು ಸ್ವತಃ ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರೇ ಒಪ್ಪಿಕೊಂಡಿದ್ದಾರೆ.
ದೆಹಲಿ ಮತದಾರರು ನಮ್ಮನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಉಳಿದವರು ಸರ್ಕಾರ ರಚಿಸುತ್ತಾರೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಅಲ್ಲ. ಆದರೆ, ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಈಗಾಗಲೇ ಘೋಷಿಸಿದ್ದೇವೆ. ಹಾಗಾಗಿ ಅದನ್ನು ನಾವೀಗ ಪಾಲಿಸಲೇಬೇಕು ಎಂದು ದ್ವಿವೇದಿ ಹೇಳಿದ್ದಾರೆ. ಆಮ್ ಆದ್ಮಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಧಾರವನ್ನು ಖಂಡಿಸಿ ಸೋಮವಾರವಷ್ಟೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಕನ್ನಡ ಸೇರಿ 7 ಭಾಷೆಯಲ್ಲಿ ವಿಡಿಯೋ: ಕಾಂಗ್ರೆಸ್ ಬೆಂಬಲ ಪಡೆದು ದೆಹಲಿಯಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಆಮ್ ಆದ್ಮಿ ಪಕ್ಷ ಈಗ ತನ್ನ ನಿರ್ಧಾರ ಸಮರ್ಥಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅದು ಕನ್ನಡ ಸೇರಿ ಏಳು ಭಾಷೆಗಳಲ್ಲಿ ಯೂಟ್ಯೂಬ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಆಮ್ ಆದ್ಮಿ ಪಕ್ಷ ಸರ್ಕಾರ ರಚನೆಗೆ ಸಂಬಂಧಿಸಿ ತನ್ನ ತೀರ್ಮಾನ ಪ್ರಕಟಿಸುವ ಮೊದಲೇ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಸರ್ಕಾರ ರಚಿಸುವ ವಿಚಾರದಲ್ಲಿ ನಮ್ಮ ಎದುರು ಎರಡು ಅಭಿಪ್ರಾಯಗಳಿವೆ. ಒಂದು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ದೂರ ಇರಿ ಎನ್ನುವುದು. ಇನ್ನೊಂದು ನಮಗೆ ಅಧಿಕಾರ ನಡೆಸಲು ಗೊತ್ತು ಎನ್ನುವುದನ್ನು ಸಾಧಿಸಿ ತೋರಿಸಿ ಎನ್ನುವುದು ಎಂದು ವಿಡಿಯೋ ಹೇಳುತ್ತದೆ. ಬಳಿಕ ಆಮ್ ಆದ್ಮಿ ಸರ್ಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲವಷ್ಟೇ ನೀಡುತ್ತದೆ. ಆ ಪಕ್ಷಕ್ಕೆ ಯಾವುದೇ ಸಚಿವ ಸ್ಥಾನ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಸರ್ಕಾರಿ ಬಂಗ್ಲೆ ತಿರಸ್ಕರಿಸಿದ ಕೇಜ್ರಿವಾಲ್
ದೆಹಲಿಯ ಮುಂದಿನ ಸಿಎಂ ಆಗಲಿರುವ ಕೇಜ್ರಿವಾಲ್ ಸೋಮವಾರವಷ್ಟೇ ವಿಶೇಷ ಭದ್ರತೆಯನ್ನು ತಿರಸ್ಕರಿಸಿದ್ದರು. ಈಗ ಮುಖ್ಯಮಂತ್ರಿಗಳಿಗೆ ನೀಡಲಾಗುವ ಸರ್ಕಾರಿ ಬಂಗ್ಲೆಯನ್ನೂ ಅವರು ತಿರಸ್ಕರಿಸಿದ್ದಾರೆ. ನಾನೊಬ್ಬ 'ಆಮ್ ಆದ್ಮಿ ಮುಖ್ಯಮಂತ್ರಿ' ನನಗೆ ಇದರ ಅವಶ್ಯಕತೆ ಇಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಸಿಸೋಡಿಯಾ, ಬಿರ್ಲಾ ಸಂಪುಟಕ್ಕೆ
ಕೇಜ್ರಿವಾಲ್ ಜತೆಗೆ ಆರು ಸಚಿವರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮನೀಷ್ ಸಿಸೋಡಿಯಾ, ರಾಖಿ ಬಿರ್ಲಾ, ಸೋಮನಾಥ್ ಭಾರ್ತಿ, ಸೌರಭ್ ಭಾರದ್ವಾಜ್, ಗಿರೀಶ್ ಸೋನಿ ಮತ್ತು ಸತ್ಯೇಂದ್ರ ಜೈನ್ ಕೇಜ್ರಿವಾಲ್ ಜತೆಗೆ ಪ್ರಮಾಣ ಸ್ವೀಕರಿಸಲಿದ್ದಾರೆ.
ಅಣ್ಣಾ ಹೋಗಲ್ಲ
26ರಂದು ನಡೆಯಲಿರುವ ಅರವಿಂದ ಕೇಜ್ರಿವಾಲ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೋಗಲ್ಲ. ಹೌದು. ಈ ವಿಚಾರವನ್ನು ಸ್ವತಃ ಅಣ್ಣಾ ಅವರೇ ಸ್ಪಷ್ಟಪಡಿಸಿದ್ದಾರೆ. 'ಈವರೆಗೂ ನನಗೆ ಆಹ್ವಾನ ಪತ್ರಿಕೆ ಸಿಕ್ಕಿಲ್ಲ. ಸಿಕ್ಕರೂ ನಾನು ಹೋಗುವುದಿಲ್ಲ. ನನ್ನ ಆರೋಗ್ಯ ಸರಿ ಇಲ್ಲ. ಕೇಜ್ರಿವಾಲ್ ಜತೆಗೆ ಡಿ. 26ರಂದು ಮಾತನಾಡುತ್ತೇನೆ' ಎಂದು ಅಣ್ಣಾ ತಿಳಿಸಿದ್ದಾರೆ.