ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೆಳೆ ವಿಮಾ ಪರಿಹಾರ ಇನ್ನು ಗ್ರಾಪಂ ಮಟ್ಟದಲ್ಲಿ ನಿರ್ಧಾರ

Rashmi Kasaragodu
Updated On : 26 Dec 2013, 12:31 pm

ಧಾರವಾಡ: ಇಷ್ಟು ದಿನ ಹೋಬಳಿ ಮಟ್ಟದಲ್ಲಿ ತೀರ್ಮಾನವಾಗುತ್ತಿದ್ದ ಬೆಳೆ ವಿಮಾ ನಷ್ಟ ಪರಿಹಾರ ಇನ್ಮುಂದೆ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ನಿರ್ಧಾರವಾಗಲಿದೆ!
ಹೋಬಳಿ ಮಟ್ಟದಲ್ಲಿ ಬೆಳೆ ವಿಮಾ ನಷ್ಟ ನಿರ್ಧರಿಸುವುದರಿಂದ ಬಹಳಷ್ಟು ರೈತರಿಗೆ ಅನ್ಯಾಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ವರ್ಷ ರಾಜ್ಯದ ಶಿವಮೊಗ್ಗ, ತುಮಕೂರು, ಗುಲ್ಬರ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಗ್ರಾಪಂ ಮಟ್ಟದಲ್ಲಿ ಈ ಯೋಜನೆ ಅಳವಡಿಸಿ ಯಶಸ್ವಿ ಆಗಿತ್ತು. ಆದ್ದರಿಂದ ಬರುವ ಮುಂಗಾರು ಹಂಗಾಮಿನಿಂದ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲೂ ಗ್ರಾಪಂ ಮಟ್ಟದಲ್ಲಿ ಬೆಳೆ ವಿಮಾ ನಷ್ಟದ ಪರಿಹಾರವನ್ನು ನಿರ್ಧರಿಸಲು ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಬೆಳೆ ವಿಮಾ ಸಮನ್ವಯ ಸಮಿತಿ ತೀರ್ಮಾನಿಸಿದೆ. ಸಮಿತಿಯ ಈ ನಿರ್ಧಾರಕ್ಕೆ ಸರ್ಕಾರವೂ ಒಪ್ಪಿಗೆ ಸೂಚಿಸಿದೆ.
ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ನಾಶವಾದಾಗ ವಿಮೆಯ ಮೂಲಕವಾದರೂ ರೈತರಿಗೆ ನಷ್ಟದ ಪ್ರಮಾಣ ತಗ್ಗಿಸಬಹುದು ಎಂದು ಬೆಳೆ ವಿಮೆ ಯೋಜನೆ ಜಾರಿ ಮಾಡಲಾಗಿತ್ತು. ಆದರೆ, ವಿಮಾ ಕಂಪನಿಯಿಂದ ರೈತರು ತುಂಬಿದ ವಿಮಾ ಮೊತ್ತಕ್ಕಿಂತ ಕಡಿಮೆ ಪರಿಹಾರದ ಹಣ ರೈತರಿಗೆ ಸಂದಿರುವುದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಾಕಷ್ಟು ಬಾರಿ ಸಾಬೀತಾಗಿದೆ. ಈ ರೀತಿ ಕಡಿಮೆ ಪರಿಹಾರ ಬರಲು ಪ್ರಮುಖ ಕಾರಣ ಹೋಬಳಿ ಮಟ್ಟದಲ್ಲಿ ಬೆಳೆ ವಿಮಾ ನಷ್ಟದ ಪ್ರಮಾಣವನ್ನು ಅಳೆಯುವುದು ಎಂದು ಸಾಕಷ್ಟು ಬಾರಿ ರೈತರು ಹೋರಾಟ ಮಾಡಿದ್ದರು.
ಹೋಬಳಿ ಮಟ್ಟದಲ್ಲಿ ನಾಲ್ಕೈದು ಅಥವಾ ಅದಕ್ಕಿಂತ ಹೆಚ್ಚಿನ ಗ್ರಾಪಂಗಳು ಬರುತ್ತಿದ್ದು, ಪೂರ್ತಿ ಹೋಬಳಿ ಮಟ್ಟದಲ್ಲಿ ಸಮ ಪ್ರಮಾಣದ ಮಳೆ ಅಥವಾ ಅದೇ ಪ್ರಮಾಣದಲ್ಲಿ ಬೆಳೆಗಳು ಬರುವುದಿಲ್ಲ. ಬೆಳೆ ವಿಮಾ ನಷ್ಟದ ಪರಿಹಾರವನ್ನು ಸಂಬಂಧಿಸಿದ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ನಿರ್ಧರಿಸುವುದರಿಂದ ಮಲತಾಯಿ ಧೋರಣೆ ಅನುಸರಿಸಿದಂತಾಗುತ್ತಿತ್ತು ಎಂಬ ಬೇಸರ ರೈತ ವರ್ಗಕ್ಕಿತ್ತು.
ಇದೀಗ ಗ್ರಾಪಂ ಮಟ್ಟದಲ್ಲಿ ಬೆಳೆ ವಿಮಾ ನಷ್ಟದ ಪರಿಹಾರ ನಿರ್ಧರಿಸುವುದರಿಂದ ಬೆಳೆ ನಷ್ಟವನ್ನು ಗ್ರಾಪಂ ವ್ಯಾಪ್ತಿಯ ಮೂರು ಅಥವಾ ನಾಲ್ಕು ಹಳ್ಳಿಗಳಲ್ಲಿ ಸಮೀಕ್ಷೆ ಮಾಡಿ ಪರಿಹಾರ ನೀಡಲಾಗುತ್ತದೆ. ಇದರಿಂದ ಬೆಳೆ ನಷ್ಟ ಹೊಂದಿದ ರೈತನಿಗೆ ವಿಮೆ ಹಣ ಸರಿಯಾದ ಪ್ರಮಾಣದಲ್ಲಿ ತಲುಪುತ್ತದೆ ಎಂಬ ಸಮಾಧಾನ ರೈತರಿಗಿದೆ.

ಬೆಳೆ ವಿಮೆ ಮೇಲೆ ಆಸೆ ಇಟ್ಟ ರೈತರಿಗೆ ಪ್ರತಿ ಬಾರಿ ನಿರಾಸೆಯಾಗುತ್ತಿತ್ತು. ಹಲವು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ನಮ್ಮ ಬೇಡಿಕೆಯಂತೆ ಬೆಳೆ ವಿಮಾ ನಷ್ಟ ಪರಿಹಾರದ ನಿರ್ಧಾರವನ್ನು ಹೋಬಳಿ ಮಟ್ಟದಿಂದ ಗ್ರಾಪಂ ಮಟ್ಟಕ್ಕೆ ವಿಸ್ತರಿಸಿದ್ದು ಸಂತಸ ತಂದಿದೆ.
- ಮಡಿವಾಳಪ್ಪ ದಿಂಡಲಕೊಪ್ಪ, ಧಾರವಾಡ ತಾಲೂಕು ಯಾದವಾಡ ಗ್ರಾಪಂ ಮಾಜಿ ಅಧ್ಯಕ್ಷ

ಈ ಯೋಜನೆ ಪೈಕಿ ಇನ್ಮುಂದೆ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಮುಂಚಿನಂತೆ ತಡವಾಗುವುದಿಲ್ಲ. ಆದಷ್ಟು ಬೇಗ ರೈತರಿಗೆ ವಿಮಾ ಪರಿಹಾರದ ಹಣ ಇತ್ಯರ್ಥ ಪಡಿಸಲು ಸರ್ಕಾರ ವಿಮಾ ಕಂಪನಿಗೆ ಸೂಚಿಸಿದೆ. ಹೀಗಾಗಿ ಪ್ರತಿ ಬಾರಿ ಬೆಳೆ ವಿಮೆ ಸಲುವಾಗಿ ಗೋಳಾಡುತ್ತಿದ್ದ ರೈತರ ಕಷ್ಟ ನೀಗಲಿದೆ.
- ಸಂಗಮೇಶ ಗಡಾದ, ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ

- ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement