ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಕ್ಕಳಿಗೆ ಕ್ಷೀರಭಾಗ್ಯ; ಡೈರಿಗಳಿಗೆ ದೌರ್ಭಾಗ್ಯ

Rashmi Kasaragodu
Updated On : 26 Dec 2013, 11:51 am

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಜಾರಿ ಮಾಡಿರುವ 'ಕ್ಷೀರಭಾಗ್ಯ' ಈಗ ಹಾಲು ಉತ್ಪಾದಕರ ಸಂಘ(ಡೈರಿ)ಗಳಿಗೆ ಅಕ್ಷರಶಃ 'ದೌರ್ಭಾಗ್ಯ'ವಾಗಿ ಪರಿಣಮಿಸಿದೆ.
ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಇತರೆಡೆ ಕೆಎಂಎಫ್ನಿಂದ ಹಾಲು ಉತ್ಪಾದಕರ ಸಂಘಗಳಿಗೆ ಬಿಲ್ ಪಾವತಿ ವಿಳಂಬವಾಗುತ್ತಿದ್ದು, ಇದರಿಂದ ಸಂಘಗಳು ಮತ್ತು ರೈತರು ಹೈರಾಣಾಗಿದ್ದಾರೆ. ಕ್ಷೀರಭಾಗ್ಯ ಆರಂಭವಾಗುವ ಮೊದಲು ಸರಿಯಾದ ವೇಳೆಗೆ ಬಿಲ್ ಪಾವತಿಯಾಗುತ್ತಿತ್ತು. ಆದರೀಗ ಮೂರ್ನಾಲ್ಕು ಬಿಲ್ಗಳು ಬಾಕಿ ಉಳಿಯುತ್ತಿವೆ. ಇದರಿಂದ ಹಾಲು ಉತ್ಪಾದಕರ ಸಂಘಗಳು ರೈತರಿಗೆ ತಡವಾಗಿ ಬಿಲ್ ಪಾವತಿ ಮಾಡುತ್ತಿವೆ. ಹೀಗಾಗಿ, ಹೈನುಗಾರಿಕೆಯ ಮೇಲೆಯೇ ಜೀವನ ನಡೆಸುವ ಕುಟುಂಬಗಳು ಇಕ್ಕಟ್ಟಿಗೆ ಸಿಲುಕಿವೆ.
ಹಾಲು ಉತ್ಪಾದನಾ ಸಂಘಗಳು ನೀಡುವ ಹಾಲಿಗೆ ಕೆಎಂಎಫ್ ಪ್ರತಿ 10 ದಿನಗಳಿಗೊಮ್ಮೆ ತಿಂಗಳಲ್ಲಿ ಮೂರು ಬಾರಿ ಬಿಲ್ ಪಾವತಿಸುತ್ತದೆ. ಈ ಮೊದಲು ಪ್ರತಿ ತಿಂಗಳ ಮೊದಲ ವಾರ ಮೊದಲ ಬಿಲ್ ಪಾವತಿಯಾಗುತ್ತಿತ್ತು. ಆದರೆ, ಕ್ಷೀರಭಾಗ್ಯ ಆರಂಭವಾದ ಮೇಲೆ ತಿಂಗಳ ಮೊದಲ ಬಿಲ್ಲೇ ತಿಂಗಳು ತಡವಾಗಿ ಅಂದರೆ ಮಾರನೇ ತಿಂಗಳ ಮೊದಲ ಅಥವಾ ಎರಡನೇ ವಾರ ಪಾವತಿಯಾಗುತ್ತಿದೆ.

ಪ್ರತಿದಿನ ರೈತರ ಗಲಾಟೆ: ಬಿಲ್ ಪಾವತಿ ವಿಳಂಬವಾಗುತ್ತಿರುವುದರಿಂದ ರೈತರು ನಿತ್ಯ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಜೊತೆ ಜಗಳ ಕಾಯುತ್ತಾರೆ. ಇದು ಸಂಘಗಳಿಗೂ ತಲೆನೋವಾಗಿ ಪರಿಣಮಿಸಿದೆ.
ಇನ್ನು ಕೆಲವು ಸಂಘಗಳು ಸಾಲ ಮಾಡಿ ಹಣ ತಂದು ಬಿಲ್ ಪಾವತಿಸುತ್ತಿವೆ. ಇನ್ನೂ ಕೆಲವರು ಬಿಲ್ ಪಾವತಿಯಾಗುವವರೆಗೂ ಕಾಯಲೆಬೇಕು. ಅಲ್ಲದೆ, ರೈತರಿಂದ ಬೈಯಿಸಿಕೊಳ್ಳಬೇಕಾದ ಪರಿಸ್ಥಿತಿ. ಬಿಲ್ ಪಾವತಿ ವಿಳಂಬದಿಂದ ಹಳೆಯ ಹಾಲು ಉತ್ಪಾದಕರ ಸಂಘಗಳಿಗೆ ಅಷ್ಟೇನೂ ಸಮಸ್ಯೆಯಾಗುತ್ತಿಲ್ಲ. ಈ ಸಂಘಗಳಲ್ಲಿ ಸಂಗ್ರಹವಿರುವ ದುಡ್ಡಿನಿಂದ ಅವರು ಹೇಗೋ ನಿಭಾಯಿಸಿಕೊಳ್ಳುತ್ತಾರೆ. ಆದರೆ, ಹೊಸದಾಗಿ ಆರಂಭವಾಗಿರುವ ಸಂಘಗಳಿಗೆ ತೀವ್ರ ಸಮಸ್ಯೆಯಾಗಿದೆ.

ಕಾರಣ ಏನು?
ರೈತರು ಉತ್ಪಾದಿಸಿ ನೀಡಿದ ಹಾಲಿಗೆ ಕೆಎಂಎಫ್ ನೇರವಾಗಿ ಹಾಲು ಉತ್ಪಾದಕ ಸಂಘಗಳಿಗೆ ಬಿಲ್ ಪಾವತಿ ಮಾಡುತ್ತಿತ್ತು. ಕ್ಷೀರಭಾಗ್ಯ ಯೋಜನೆ ಆರಂಭವಾದ ಬಳಿಕ ಸರ್ಕಾರ ಜಿಪಂಗೆ ಕ್ಷೀರಭಾಗ್ಯದ ಅನುದಾನ ರವಾನಿಸುತ್ತದೆ. ನಂತರ ಜಿಪಂ ಕೆಎಂಎಫ್ಗೆ, ಕೆಎಂಎಫ್ ಹಾಲು ಉತ್ಪಾದನಾ ಸಂಘಗಳಿಗೆ ಹಣ ಪಾವತಿಸುತ್ತವೆ. ಈ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಬಿಲ್ ಪಾವತಿಯಲ್ಲಿ ತಡವಾಗುತ್ತಿದೆ.

ಕ್ಷೀರಭಾಗ್ಯ ಆರಂಭವಾದ ಮೇಲೆ ಬಿಲ್ ಪಾವತಿ ವಿಳಂಬವಾಗುತ್ತಿದೆ. ಹೀಗಾಗಿ, ನಾವು ರೈತರೊಂದಿಗೆ ಬಿಲ್ ವಿಷಯವಾಗಿ ಜಗಳ ಕಾಯುವಂತಾಗಿದೆ. ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿರುವುದು ಸ್ವಾಗತಾರ್ಹ. ಅದರಂತೆ ಶೀಘ್ರವಾಗಿ ಬಿಲ್ ಪಾವತಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉತ್ಪಾದನಾ ಸಂಘಗಳಿಗೆ ಹಾಲು ಹಾಕಲು ಮುಂದಾಗುತ್ತಾರೆ. ಶೀಘ್ರ ಈ ಸಮಸ್ಯೆ ಪರಿಹರಿಸಿ.
- ಶಂಕರಗೌಡ ರಾಯನಗೌಡ್ರ, ಖಾಸಿಂಸಾಬ ತಡಹಾಳ, ವಿವಿಧ ಹಾಲು ಉತ್ಪಾದನಾ ಸಂಘಗಳ ಕಾರ್ಯದರ್ಶಿಗಳು


ಬಿಲ್ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ನಿಜ. ಮೊದಲು ಕೆಎಂಎಫ್ ನೇರವಾಗಿ ಹಾಲು ಉತ್ಪಾದಕರ ಸಂಘಗಳಿಗೆ ಬಿಲ್ ಪಾವತಿಸುತ್ತಿತ್ತು. ಆದರೆ ಕ್ಷೀರಭಾಗ್ಯ ಆರಂಭವಾದ ಮೇಲೆ ಸರ್ಕಾರದಿಂದ ಜಿಲ್ಲಾ ಪಂಚಾಯ್ತಿಗೆ, ಜಿಪಂ ನಿಂದ ಕೆಎಂಎಫ್ಗೆ, ಕೆಎಂಎಫ್ನಿಂದ ಹಾಲು ಉತ್ಪಾದನಾ ಸಂಘಗಳಿಗೆ ಬಿಲ್ ಪಾವತಿಯಾಗುತ್ತಿದೆ. ಹೀಗಾಗಿ, ವಿಳಂಬವಾಗುತ್ತಿದೆ. ಈ ಮೊದಲು ಪೌಡರ್ ವಿತರಣೆ ಸಂಗರ್ಭದಲ್ಲಿ ತುಂಬಾ ವಿಳಂಬವಾಗುತ್ತಿತ್ತು. ಅದಕ್ಕೆ ಹೋಲಿಸಿದರೆ ಈಗ ಶೀಘ್ರ ಪಾವತಿಯಾಗುತ್ತಿದೆ.
- ಡಾ. ಕೆ. ರಾಮಚಂದ್ರ ಭಟ್, ವ್ಯವಸ್ಥಾಪಕ ನಿದೇಶಕರು, ಕೆಎಂಎಫ್ (ಧಾರವಾಡ)

- ಮಹಮ್ಮದ ರಫೀಕ್ ಬೀಳಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement