ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಂಬೈ ವಿರುದ್ಧ ಕರ್ನಾಟಕಕ್ಕೆ ಜಯ

ರಾಜ್ಯದ ಕ್ರಿಕೆಟ್ ಅಭಿಮಾನಿಗಳು ಬುಧವಾರ ಇನ್ನಿಲ್ಲದ ಸಂಭ್ರಮಪಟ್ಟರು. ಅನುಭವಿ ಆಟಗಾರರ ಮಾರ್ಗದರ್ಶನವಿಲ್ಲದ, ಯುವಕರಿಂದ ...

Rashmi Kasaragodu
Updated On : 26 Dec 2013, 12:20 pm

ಬೆಂಗಳೂರು: ರಾಜ್ಯದ ಕ್ರಿಕೆಟ್ ಅಭಿಮಾನಿಗಳು ಬುಧವಾರ ಇನ್ನಿಲ್ಲದ ಸಂಭ್ರಮಪಟ್ಟರು. ಅನುಭವಿ ಆಟಗಾರರ ಮಾರ್ಗದರ್ಶನವಿಲ್ಲದ, ಯುವಕರಿಂದ ಕೂಡಿದ ರಾಜ್ಯ ಕ್ರಿಕೆಟ್ ತಂಡ ರಣಜಿ ಇತಿಹಾಸದಲ್ಲಿ ಮಾಡಿದ ಸಾಧನೆ ಅವರ ಸಂಭ್ರಮಕ್ಕೆ ಕಾರಣವಾಗಿತ್ತು. ಹೌದು, 72 ವರ್ಷಗಳ ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಲಾಢ್ಯ ಮುಂಬೈ ವಿರುದ್ಧ ಜಯ ಸಾಧಿಸಿದೆ.
ಮೊದಲ ಇನಿಂಗ್ಸ್ ಮುನ್ನಡೆ ಪಡೆದು ಬೀಗುತ್ತಿದ್ದ ಮುಂಬೈ, ದ್ವಿತೀಯ ಇನಿಂಗ್ಸ್‌ನಲ್ಲಿ ಕರ್ನಾಟಕದ ಮಾರಕ ಬೌಲಿಂಗ್ ದಾಳಿಗೆ ನಲುಗುವ ಮೂಲಕ 121 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಮೊದಲ ಇನಿಂಗ್ಸ್ ಹಿನ್ನೆಡೆ ಲೆಕ್ಕಿಸದೆ, ದ್ವಿತೀಯ ಇನಿಂಗ್‌ನಲ್ಲಿ ಉತ್ತಮ ಬ್ಯಾಟಿಂಗ್ ಬೌಲಿಂಗ್ ಪ್ರದರ್ಶಿಸಿದ ಕರ್ನಾಟಕ, ತೀವ್ರ ಕುತೂಹಲ ಕೆರಳಿಸಿದ್ದ ಎ ಗುಂಪಿನ ರಣಜಿ ಪಂದ್ಯದಲ್ಲಿ 160 ರನ್‌ಗಳಿಂದ ಐತಿಹಾಸಿಕ ಜಯ ಸಾಧಿಸಿದೆ.             
ಈ ಪಂದ್ಯ ಸೇರಿದಂತೆ ರಣಜಿ ಟ್ರೋಫಿಯಲ್ಲಿ ಉಭಯ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಮುಂಬೈ ಜಯ ದಾಖಲಿಸಿದೆ. 11 ಪಂದ್ಯಗಳು ಡ್ರಾದಲ್ಲಿ ಇಂತ್ಯಗೊಂಡಿವೆ. ಇದರಲ್ಲಿ ಕರ್ನಾಟಕ 5 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಪಡೆದರೆ, ಮುಂಬೈ 6 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದುಕೊಂಡಿದೆ.
ಈ ಜಯದೊಂದಿಗೆ 6 ಅಂಕ ಗಿಟ್ಟಿಸಿದ ಕರ್ನಾಟಕ ತಂಡ, 7 ಲೀಗ್ ಪಂದ್ಯಗಳಿಂದ ಒಟ್ಟು 32 ಅಂಕಗಳನ್ನು ಗಳಿಸಿ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಅಲ್ಲದೆ, ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಮೊನಚಾದ ಬೌಲಿಂಗ್ ಪ್ರದರ್ಶಿಸಿದ ಶರತ್ ಕೇವಲ 12 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ನಾಯಕ ವಿನಯ್ ಕುಮಾರ್ 32 ರನ್ ನೀಡಿ 3 ವಿಕೆಟ್ ಪಡೆದರು. ಈ ಇಬ್ಬರಿಗೆ ಸಾಥ್ ನೀಡಿದ ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಕಬಳಿಸಿದರು. ಪರಿಣಾಮ ದ್ವಿತೀಯ ಇನಿಂಗ್ಸ್‌ನಲ್ಲಿ 281 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡ ಕೇವಲ 121 ರನ್ ಗಳಿಸುವಷ್ಟರಲ್ಲೇ ಸೋಲಿನ ಕಹಿ ಅನುಭವಿಸುವಂತಾಯಿತು.
ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 251 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ್ದ ಮುಂಬೈ 269 ರನ್ ಕಲೆ ಹಾಕುವ ಮೂಲಕ 18 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು. ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ 299 ರನ್ ಕಲೆ ಹಾಕುವ ಮೂಲಕ ಮುಂಬೈಗೆ 281 ರನ್‌ಗಳ ಗುರಿ ನೀಡಿತ್ತು. ಆದರೆ, ಬ್ಯಾಟಿಂಗ್ ವೈಫಲ್ಯ ಕಂಡ ಮುಂಬೈ ಕರ್ನಾಟಕದ ವಿರುದ್ಧ ಅಜೇಯವಾಗಿ ಉಳಿದಿದ್ದ ತನ್ನ ದಾಖಲೆಯನ್ನು ಕಳೆದುಕೊಂಡಿತು.
ಹಿಮ್ಮಡಿ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದರೂ, ಬೆಳಗಿನ ಅವಧಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ವಿನಯ್ ಕುಮಾರ್, ಮುಂಬೈನ ಅಗ್ರ ಕ್ರಮಾಂಕದ ವಿಕೆಟ್ ಕಬಳಿಸುವ ಮೂಲಕ ತಂಡವನ್ನು ಜಯದತ್ತ ಸಾಗುವಂತೆ ಮಾಡಿದರು. ಕೇವಲ 9 ಓವರ್‌ಗಳೊಳಗೆ 21 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಮುಂಬೈ, ನಂತರ 100 ರನ್ ಗಡಿ ದಾಟುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಕಷ್ಟದಲ್ಲಿ ಸಿಲುಕಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ನೆರವಾಗಿದ್ದ ಸಿದ್ದೇಶ್ ಲಾಡ್ (24) ಮತ್ತು ಜಾವೇದ್ ಖಾನ್ (15) ಮೇಲೆ ಮುಂಬೈ ಭಾರೀ ಭರವಸೆ ಇಟ್ಟುಕೊಂಡಿತ್ತು. ಆದರೆ ಅಲ್ಪ ಮೊತ್ತಕ್ಕೆ ತೃಪ್ತಿಟ್ಟ ಈ ಇಬ್ಬರು ಆಟಗಾರರು ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ದಿನದ ಆಟ ಆರಂಭಿಸಿದ ಕರ್ನಾಟಕ ಕೇವಲ 12 ರನ್‌ಗಳಿಗೆ ಉಳಿದೆರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಆಲೌಟ್ ಆಯಿತು. ಕರ್ನಾಟಕಕ್ಕೆ ಇನ್ನೊಂದು ಲೀಗ್ ಪಂದ್ಯ ಬಾಕಿ ಉಳಿದಿದ್ದು, ದೆಹಲಿ ವಿರುದ್ಧ ತವರಿನಿಂದ ಹೊರಗೆ ನಡೆಯಲಿರುವ ಈ ಪಂದ್ಯದಲ್ಲಿ ಕರ್ನಾಟಕ ನಿರಾಳವಾಗಿ ಆಡಬಹುದಾಗಿದೆ.

ಸಾಧನೆ ಮಾಡಿದ 14ನೇ ನಾಯಕ: 2006 ಡಿಸೆಂಬರ್‌ನಲ್ಲಿ ಹೈದರಾಬಾದ್ ವಿರುದ್ಧ ಸೋಲನುಭವಿಸಿದ ನಂತರ, 6 ವರ್ಷಗಳ ಕಾಲ ಅಜೇಯವಾಗಿ ಉಳಿದಿದ್ದ ಮುಂಬೈಗೆ ಮಣ್ಣು ಮುಕ್ಕಿಸುವಲ್ಲಿ, ಆರ್. ವಿನಯ್ ಕುಮಾರ್ ನಾಯಕತ್ವದ ರಾಜ್ಯ ತಂಡ ಯಶಸ್ವಿಯಾಯಿತು. ಇದುವರೆಗೂ ಕರ್ನಾಟಕ ರಣಜಿ ತಂಡವನ್ನು ಒಟ್ಟು 13 ನಾಯಕರು ಮುನ್ನಡೆಸಿದ್ದಾರೆ. 14ನೇ ನಾಯಕ ವಿನಯ್ ಕುಮಾರ್ ಈ ಸಾಧನೆ ಮಾಡಿದ್ದಾರೆ.

ಕರ್ನಾಟಕ ಯುವ ಆಟಗಾರರಿಂದ ಕೂಡಿದ ತಂಡ. ಪ್ರಸಕ್ತ ಋತುವಿನಲ್ಲಿ ಇದುವರೆಗೂ ಆಕರ್ಷಕ ಪ್ರದರ್ಶನ ನೀಡಿದೆ. ಒಂದು ಲೀಗ್ ಪಂದ್ಯ ಸೇರಿದಂತೆ ಮುಂದಿನ ನಾಲ್ಕು ಪಂದ್ಯಗಳಲ್ಲಿ ತಂಡ ಜಯ ಸಾಧಿಸಬೇಕು. ಈ ನಿಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ತಂಡ ಈ ಬಾರಿ ರಣಜಿ ಟ್ರೋಫಿ ಗೆಲ್ಲಬೇಕು.
-ಜಾವಗಲ್ ಶ್ರೀನಾಥ್, ಮಾಜಿ ವೇಗದ ಬೌಲರ್

ಆಕ್ರಮಣಕಾರಿ ಪ್ರದರ್ಶನ ನೀಡುತ್ತಿರುವ ರಾಜ್ಯ ತಂಡ ಮುಂಬೈ ವಿರುದ್ಧ ಮೊದಲ ಜಯ ಸಾಧಿಸಿ ದೊಡ್ಡ ಸಾಧನೆ ಮಾಡಿದೆ. ಈ ಹಿಂದೆ 2009ರ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕೇವಲ 6 ರನ್‌ಗಳ ಅಂತರದಿಂದ ಸೋಲನುಭವಿಸಿದ್ದೆವು. ಐತಿಹಾಸಿಕ ಜಯ ಸಾಧಿಸಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ಆಟಗಾರರು ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ಭವಿಷ್ಯದಲ್ಲಿ ಶ್ರೇಷ್ಠ ಅವಕಾಶ ಕಾಣಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲೂ ಆಟಗಾರರು ಶ್ರೇಷ್ಠ ಪ್ರದರ್ಶನ ತೋರುತ್ತಿದ್ದು, ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
-ಬೃಜೇಶ್ ಪಟೇಲ್, ಕಾರ್ಯದರ್ಶಿ ಕೆಎಸ್‌ಸಿಎ

ಎ ಗುಂಪಿನ ಅಂಕ ಪಟ್ಟಿ
ತಂಡ    ಪಂದ್ಯಗಳ    ಗೆಲವು    ಸೋಲು    ಡ್ರಾ    ಅಂಕ
ಕರ್ನಾಟಕ    7    4    0    3    32
ಗುಜರಾತ್    7    2    0    5    26
ಮುಂಬೈ    7    3    1    3    23
ಪಂಜಾಬ್    7    3    2    2    23
ದೆಹಲಿ    7    2    1    3    19
ವಿದರ್ಭ    8    1    3    4    12
 ಒಡಿಶಾ    7    1    3    3    11
ಜಾರ್ಖಂಡ್    7    0    2    4    9
ಹರ್ಯಾಣ    7    1    5    1    7

ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 251
ಮುಂಬೈ ಮೊದಲ ಇನಿಂಗ್ಸ್ 269
ಕರ್ನಾಟಕ ದ್ವಿತೀಯ ಇನಿಂಗ್ಸ್ 299
(ಮಂಗಳವಾರದಿಂದ ಮುಂದುವರಿದಿದೆ)
ಕೆಪಿ ಅಪ್ಪಣ್ಣ ಸಿ ತಾರೆ ಬಿ ಠಾಕೂರ್     16 (27)
ಎಚ್.ಎಸ್ ಶರತ್ ಬಿ ಖಾನ್     6 (38)
ಅಭಿಮನ್ಯು ಮಿಥುನ್ ಅಜೇಯ     0 (0)
ಇತರೆ  (ಲೆಗ್ ಬೈ 4, ಬೈ1, ನೋಬಾಲ್ 2)     7ವಿಕೆಟ್ ಪತನ: 1-32, 2-32, 3-165, 4-185, 5-222, 6-250, 7-269, 8-276, 9-299, 10-299.

ಬೌಲಿಂಗ್ ವಿವರ
ಜಾವೇದ್ ಖಾನ್ 15-1-69-3
ನೇತ್ರವಾಲ್ಕರ್  14-4-42-2
ದಾಭೋಲ್ಕರ್ 21-0-89-2
ಠಾಕೂರ್ 16.3-0-71-2
ಪವಾರ್ 8-4-11-1
ಯಾದವ್ 4-0-12-0

ಮುಂಬೈ ದ್ವಿತೀಯ ಇನಿಂಗ್ಸ್ 121
ಕೌಸ್ತುಭ್ ಪವಾರ್ ಸಿ ಗೌತಮ್ ಬಿ ಶರತ್     10 (71)
ಸುಬ್ರಮಣ್ಯನ್ ಬಿ ವಿನಯ್ ಕುಮಾರ್     13 (23)
ಆದಿತ್ಯ ತಾರೆ ಬಿ ವಿನಯ್ ಕುಮಾರ್     0 (2)
ಜಾಫರ್ ಸಿ ಸಬ್ ಮಾಯಾಂಕ್ ಬಿ ಮಿಥುನ್     3 (11)
ಹಿಕೆನ್ ಶಾ ಎಲ್‌ಬಿ ಗೋಪಾಲ್     28 (81)
ಸಿದ್ದೇಶ್ ಲಾಡ್ ಸಿ ಸಮರ್ಥ್ ಬಿ ಶರತ್     24 (69)
ಸೂರ್ಯಕುಮಾರ್ ಸಿ ನಾಯರ್ ಬಿ ಗೋಪಾಲ್     0 (6)
ಶಾರ್ದೂಲ್ ಠಾಕೂರ್ ಬಿ ಮಿಥುನ್     10 (15)
ನೇತ್ರವಾಲ್ಕರ್ ಎಲ್‌ಬಿ ಶರತ್     0 (8)
ಜಾವೇದ್ ಖಾನ್ ಸಿ ನಾಯರ್ ಬಿ ವಿನಯ್     15 (20)
ವಿಶಾಲ್ ದಾಭೋಲ್ಕರ್ ಅಜೇಯ     3 (4)
ವಿಕೆಟ್ ಪತನ: 1-19, 2-21, 3-36, 4-50, 5-93, 6-93, 7-93, 8-100, 9-115, 10-121.

ಬೌಲಿಂಗ್ ವಿವರ
ವಿನಯ ಕುಮಾರ್ 13.3-4-32-3
ಮಿಥುನ್ 12-4-28-2
ಶರತ್ 10-5-12-3
ಬಿನ್ನಿ 9-3-19-0
ಪಾಂಡೆ 1-1-0-0
ಸಮರ್ಥ್ ಆರ್. 2-0-3-0
ಗೋಪಾಲ್ 4-2-13-2

ನನಗೆ ದೊರೆತ ಪಂದ್ಯಶ್ರೇಷ್ಠ ಗೌರವವನ್ನು ತಂದೆಗೆ ಅರ್ಪಿಸುತ್ತೇನೆ. ಮುಂಬೈ ವಿರುದ್ಧ ಜಯ ಸಾಧಿಸಿರುವುದು ಸಂತಸ ಉಂಟುಮಾಡಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ನಾವು ಉತ್ತಮ ಮೊತ್ತ ಕಲೆ ಹಾಕಿದ್ದರಿಂದ ಗೆಲ್ಲುವ ವಿಶ್ವಾಸದಲ್ಲಿದ್ದೆವು. ಹೀಗಾಗಿ ಬಲಿಷ್ಠ ಪ್ರದರ್ಶನ ನೀಡಲು ಸಹಾಯವಾಯಿತು.
-ಎಚ್.ಎಸ್ ಶರತ್, ಪಂದ್ಯಶ್ರೇಷ್ಠ

- ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement