ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೇಂದ್ರಕ್ಕೆ ರು. 1014 ಕೋಟಿ ಬರ ನೆರವಿಗೆ ಸಿಎಂ ಮನವಿ

Rashmi Kasaragodu
Updated On : 27 Dec 2013, 11:43 am

ಬೆಂಗಳೂರು: ಬರ ಪರಿಸ್ಥಿತಿ ನಿರ್ವಹಣೆಗಾಗಿ ರಾಜ್ಯಕ್ಕೆ ರು. 1014 ಕೋಟಿ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಆರ್.ಬಿ.ಸಿನ್ಹಾ ನೇತೃತ್ವದ ನಿಯೋಗದ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಗುರುವಾರ ಈ ವಿಷಯ ತಿಳಿಸಿದರು.
ಕೇಂದ್ರ ತಂಡ ಒಟ್ಟು 14 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.  98 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಒಟ್ಟು ರು. 1700 ಕೋಟಿ ನಷ್ಟವಾಗಿದೆ. ಆದರೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳ ಆಧಾರದ ಮೇಲೆ ರು. 1014 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಇಷ್ಟು ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಅಂಥ ಕಡೆಗಳಲ್ಲಿ ತುರ್ತು ಪರಿಹಾರ ಕಾರ್ಯ ನಡೆಸಬೇಕಿದೆ ಎಂದರು. ರಾಜ್ಯ ಸರ್ಕಾರ ತಯಾರಿಸಿರುವ ಅಂದಾಜು ಪಟ್ಟಿ ಪ್ರಕಾರ, ರು. 1016.99 ಕೋಟಿ ಕೃಷಿ ಉತ್ಪನ್ನಗಳು ನಷ್ಟವಾಗಿದ್ದು, ಪ್ರಕೋಪ ಪರಿಶಮನ ನಿಯಮಾವಳಿ ಪ್ರಕಾರ ರು. 202.33 ಕೋಟಿ ನೆರವು ಕೇಳಲಾಗಿದೆ, ರು. 702 ಕೋಟಿ ತೋಟಗಾರಿಕಾ ಉತ್ಪನ್ನಗಳ ನಷ್ಟವಾಗಿದ್ದು, ರು. 198.23 ಕೋಟಿ ನೆರವು ಕೇಳಿದ್ದೇವೆ. ಅಡಕೆ ಮತ್ತು ತೆಂಗು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡುವುದಕ್ಕೆ ರು. 292.50 ಕೋಟಿ, ಗೋಶಾಲೆಗಳನ್ನು ತೆರೆಯುವುದಕ್ಕೆ ರು. 32.77 ಕೋಟಿ, ಮೇವು ಬ್ಯಾಂಕ್ ತೆರೆಯುವುದಕ್ಕೆ ರು. 6.40 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆವತಿಯಿಂದ ಕುಡಿಯುವ ನೀರಿನ ತುರ್ತು ಪೂರೈಕೆಗಾಗಿ ರು. 280 ಕೋಟಿ  ನೆರವು ಕೇಳಲಾಗಿದೆ ಎಂದು ಹೇಳಿದರು.
ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಗೃಹ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಕೇಂದ್ರ ತಂಡದ ಸದಸ್ಯರಾದ ಆರ್.ಬಿ.ಸಿನ್ಹಾ, ಜಿ.ಕೆ.ಚೌಧರಿ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement