ಜಿಎಸ್ಎಸ್ ಸಮಾಧಿ ಸ್ಥಳಕ್ಕೆ ವಿವಾದದ ಬಿಸಿ
ಬೆಂಗಳೂರು: ರಾಷ್ಟ್ರಕವಿ ಜಿ.ಎಸ್..ಶಿವರುದ್ರಪ್ಪ ಅವರ ಸಮಾಧಿ ಸ್ಥಳದ ಬಗ್ಗೆ ರಂಗಕರ್ಮಿಗಳ ವಲಯದಲ್ಲಿ ಆಕ್ಷೇಪಗಳು ಕೇಳಿ ಬಂದಿವೆ.
ಕಲಾ ಗ್ರಾಮದಲ್ಲಿ ಜಿಎಸ್ಎಸ್ ಸಮಾಧಿಗೆ ಸ್ಥಳ ನಿಗದಿ ಮಾಡಿರೋ ಸರ್ಕಾರದ ಮೇಲೀಗ ಅತಿಕ್ರಮಣ ಆರೋಪ ಕೇಳಿ ಬಂದಿದೆ. ಸಮಾಧಿಗೆ ಸ್ಥಳ ನಿಗದಿ ಮಾಡುವ ಮುನ್ನ ಜಾಗದ ಉಸ್ತುವಾರಿ ಹೊತ್ತಿರೋ ರಾಷ್ಟ್ರೀಯ ನಾಟಕ ಶಾಲೆ ಗಮನಕ್ಕೂ ತರದೇ ಅತಿಕ್ರಮಣ ಮಾಡಿ ಸ್ಥಳ ನಿಗದಿ ಮಾಡಿದೆ ಅನ್ನೋ ಆರೋಪ ಈಗ ಚರ್ಚೆಗೆ ಗ್ರಾಸವಾಗಿದೆ. ಜಿಎಸ್ಎಸ್ ಅಂತ್ಯಕ್ರಿಯೆ ಆಗಿ ಎರಡು ದಿನವಷ್ಟೇ ಆಗಿದೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಸಮಾಧಿ ಸ್ಥಳ ಈಗ ವಿವಾದಕ್ಕೀಡಾಗಿದೆ. ನಿಧನ ಬಳಿಕ ಅಂತ್ಯಕ್ರಿಯೆ ಬೆಂಗಳೂರು ವಿವಿ ಆವರಣದಲ್ಲೇ ಆಗಬೇಕು ಎಂಬುದು ಜಿಎಸ್ಎಸ್ ಅವರ ಕೊನೆಯ ಆಸೆಯಾಗಿತ್ತು. ಕೊನೆ ಆಸೆಯನ್ನ ಸರ್ಕಾರ ಮರು ಮಾತಿಲ್ಲದೇ ಈಡೇರಿಸಿದೆ. ಇದರಂತೆ ಕಲಾ ಗ್ರಾಮದಲ್ಲಿ ಅಂತ್ಯಕ್ರಿಯೆಯೂ ನಡೆದು ಹೋಗಿದೆ. ಇದೇ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚಿಂತನೆ ಕೂಡ ನಡೀತಿದೆ.
ವಿವಾದಕ್ಕೆ ಕಾರಣವಾಗಿರುವುದು ಜಿಎಸ್ಎಸ್ ಅವರ ಸಮಾಧಿ ಸ್ಥಳವನ್ನ ನಿಗದಿ ಮಾಡಿರುವ ಬಗ್ಗೆ ಅಸಲಿಗೆ, ಕಲಾ ಗ್ರಾಮದಲ್ಲಿ ಒಟ್ಟು 3 ಎಕರೆ ನೋಂದಣಿಯಾಗಿ ವಶದಲ್ಲಿರುವುದು ರಾಷ್ಟ್ರೀಯ ನಾಟಕ ಶಾಲೆ. ಬಿಜೆಪಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಜಾಗ ಹಸ್ತಾಂತರ ಮಾಡಿದ್ದರು. ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆಯೂ ನೆರವೇರಿದೆ. ತನ್ನ ಜಾಗಕ್ಕೆ ನಾಟಕ ಶಾಲೆ ಗಡಿಯನ್ನೂ ಗುರುತಿಸಿದೆ. ಒಂದು ಎಕರೆಯಲ್ಲಿ ಕೇಂದ್ರದ ಮುಖ್ಯ ಕಟ್ಟಡ ನಿರ್ಮಾಣ ಆಗಬೇಕಾದ ಜಾಗದಲ್ಲೇ ಜಿಎಸ್ಎಸ್ ಸಮಾಧಿ ಮಾಡಲಾಗಿದೆ ಒಂಬುದು ರಂಗಕರ್ಮಿಗಳ ಅಳಲು. ಉನ್ನತ ಮೂಲಗಳು ಈ ವಿಚಾರವನ್ನು ಸುವರ್ಣ ನ್ಯೂಸ್ಗೆ ತಿಳಿಸಿದೆ.
ಒಂದು ಎಕರೆಯನ್ನ ಜಿಎಸ್ಎಸ್ ಅವರ ಸಮಾಧಿಗೆ ಕೊಡೋ ಮೊದಲು ಸರ್ಕಾರ ಎನ್ಎಸ್ಡಿ ಅಭಿಪ್ರಾಯವನ್ನ ಕೇಳಿಲ್ಲ. ಎನ್ಎಸ್ಡಿ ಗಮನಕ್ಕೂ ತರದೇ ಕಲ್ಲು ಬಾಂದುಗಳನ್ನ ಕಿತ್ತು ಹಾಕಿದೆ ಎಂಬ ಆರೋಪವೂ ಇದೆ. ಬೆಂಗಳೂರಿನಲ್ಲಿ ನಾಟಕ ಶಾಲೆ ಆರಂಭವಾಗಬೇಕು ಎನ್ನುವ ಬೇಡಿಕೆ ಈಡೇರಿದ್ದು ಹತ್ತು ವರ್ಷಗಳ ಹೋರಾಟದ ಬಳಿಕ. ಅದೀಗ ವ್ಯರ್ಥ ಆಗುವುದೇನೋ ಎಂಬ ಅನುಮಾನ ರಂಗಕರ್ಮಿಗಳನ್ನು ಕಾಡುತ್ತಿದೆ. ನಾಟಕ ಶಾಲೆ ಆವರಣದಲ್ಲೇ ಸಮಾಧಿ ಆಗಬೇಕಿರುವುದರಿಂದ ಕೇಂದ್ರದಿಂದ ಬರುವ ಅನುದಾನವೂ ಕೈ ತಪ್ಪುವ ಭೀತಿ ಎದುರಾಗಿದೆ.
ಅಂತ್ಯಕ್ರಿಯೆ ಆಗಿರುವ ಜಾಗದಲ್ಲೇ ಜಿಎಸ್ಎಸ್ ಸ್ಮಾರಕ ನಿರ್ಮಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಸ್ಮಾರಕ ನಿರ್ಮಾಣವಾದರೆ ನಾಟಕ ಶಾಲೆಗೆ ಸರ್ಕಾರ ಪರ್ಯಾಯ ಜಾಗ ನೀಡುವುದೇ? ಈ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ. ಜಾಗದ ಬಗ್ಗೆ ತಕರಾರು ತೆಗೆದರೆ ಕವಿ ಮತ್ತು ಕನ್ನಡ ವಿರೋಧಿ ಅನ್ನುವ ಹಣೆಪಟ್ಟಿ ಅಂಟಿಸಿಕೊಳ್ಳಬೇಕಾಗುತ್ತದೆ ಎಂಬುದು ರಂಗಕರ್ಮಿಗಳ ಅಳಲು.
ಜಿ. ಮಹಂತೇಶ್