26 ಮಂದಿ ಬೆಂಕಿಗೆ ಆಹುತಿ
ಮೆಹಬೂಬ್ನಗರ ಬಳಿಯ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆಂಧ್ರದ ಪುಟ್ಟಪರ್ತಿ ಬಳಿಯ ಪ್ರಶಾಂತಿ..
ಪಿಟಿಐ ಅನಂತಪುರ ಡಿ.28
ಮೆಹಬೂಬ್ನಗರ ಬಳಿಯ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆಂಧ್ರದ ಪುಟ್ಟಪರ್ತಿ ಬಳಿಯ ಪ್ರಶಾಂತಿ ನಿಲಯಂ ನಿಲ್ದಾಣ ಬಳಿ ಬೆಂಗಳೂರು - ನಾಂದೇಡ್ ರೈಲಿನ ಬೋಗಿಯೊಂದಕ್ಕೆ ಬೆಂಕಿ ಬಿದ್ದು 2 ಮಕ್ಕಳು ಸೇರಿ 26 ಮಂದಿ ಸಜೀವ ದಹನವಾಗಿದ್ದಾರೆ.
ಶನಿವಾರ ಬೆಳಗಿನ ಜಾವ 3.45ಕ್ಕೆ ರೈಲಿನ ಎಸಿ ಟೈರ್ 3 ಬಿ - 1 ಕೋಚ್ಗೆ ಬೆಂಕಿ ಬಿದ್ದಿದೆ. ಈ ಸಂದರ್ಭದಲ್ಲಿ ಈ ಬೋಗಿಯಲ್ಲಿ 65 ಮಂದಿ ಇದ್ದರು ಎಂದು ಹೇಳಲಾಗಿದ್ದು, ಬೆಂಕಿಯ ಕಾವಿನ ತೀವ್ರತೆಗೆ ಕೆಲವರು ಎಚ್ಚರಗೊಂಡಿದ್ದಾರೆ. ಹೀಗಾಗಿ ಹಲವಾರು ಮಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಉಳಿದ 26 ಮಂದಿ ಮಲಗಿದ್ದಲ್ಲೇ ಜೀವಂತ ದಹನವಾಗಿದ್ದಾರೆ. 13 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅನಂತಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸತ್ತವರಲ್ಲಿ ಅಧಿಕ ಮಂದಿ ಕರ್ನಾಟಕದವರೇ ಎಂದು ಹೇಳಲಾಗಿದೆ. ಆದರೆ ಶವಗಳು ಗುರುತು ಸಿಗಲಾರದಷ್ಟು ಸುಟ್ಟಿರುವುದರಿಂದ, ಡಿಎನ್ಎ ಪರೀಕ್ಷೆ ನಂತರವಷ್ಟೇ ಸತ್ತವರ ಬಗ್ಗೆ ನಿಖರವಾಗಿ ಗೊತ್ತಾಗಲಿದೆ. ಪಾರ್ಥಿವ ಶರೀರಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಚಾಲಕನೇ ಹೀರೋ: ಬೆಳಗಿನ ಜಾವ 3.10 ರಿಂದ 3.15ರ ವೇಳೆಗೆ ರೈಲಿಗೆ ಬೆಂಕಿ ಬಿದ್ದಿರುವುದನ್ನು ಚಾಲಕ ಗಮನಿಸಿದ್ದ. ಕೂಡಲೇ ಕೊತ್ತಚೆರವು ಎಂಬಲ್ಲಿ ರೈಲನ್ನು ನಿಲ್ಲಿಸಿ ಬೆಂಕಿ ಬಿದ್ದ ಬೋಗಿಯನ್ನು ಇತರೆ ಬೋಗಿಗಳಿಂದ ಪ್ರತ್ಯೇಕಿಸಿದ. ಇಲ್ಲದಿದ್ದರೆ ಬೆಂಕಿ ಇತರೆ ಕೋಚ್ಗಳಿಗೂ ಹರಡುವ ಸಾಧ್ಯತೆ ಇತ್ತು. ಬೋಗಿಗೆ ಬೆಂಕಿ ಬಿದ್ದದ್ದಕ್ಕೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ದಹಿಸಬಲ್ಲ ವಸ್ತುಗಳಿಂದಾಗಿ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ರೇಲ್ವೆಯ ಸುರಕ್ಷತಾ ಆಯುಕ್ತರ ಮಟ್ಟದ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ.
ವರದಿ ಬಂದ ಬಳಿಕ ಘಟನೆಗೆ ಕಾರಣವೇನು ಎಂಬ ಬಗ್ಗೆ ತಿಳಿಯಲಿದೆ ಎಂದಿದ್ದಾರೆ. ನತದೃಷ್ಟ ರೈಲು ಬೆಂಗಳೂರಿನಿಂದ ಶುಕ್ರವಾರ ರಾತ್ರಿ 10.45ಕ್ಕೆ ಹೊರಟಿತ್ತು. ಈ ರೈಲಿನಲ್ಲಿ 16 ಕೋಚ್ಗಳಿದ್ದವು. ಬೆಂಕಿ ಬಿದ್ದ ಬೋಗಿಯಲ್ಲಿ 65 ಮಂದಿ ಪ್ರಯಾಣಿಕರಿದ್ದರು. ದುರಂತವೆಂದರೆ ಇದೇ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಎರಡನೇ ರೈಲು ದುರಂತವಿದು. ಕಳೆದ ವರ್ಷದ ಮಾರ್ಚ್ನಲ್ಲಿ ಪೆನುಕೊಂಡ ಬಳಿ ಹಂಪಿ ಎಕ್ಸ್ಪ್ರೆಸ್ ಅಪಘಾತವಾಗಿ 25 ಮಂದಿ ಮೃತಪಟ್ಟಿದ್ದರು.
5 ಲಕ್ಷ ಪರಿಹಾರ: ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಗಾಯಗೊಂಡವರಿಗೆ 1 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ 50 ಸಾವಿರ ಪರಿಹಾರ ಘೋಷಿಸಲಾಗಿದೆ.
'ಶಾಖ ತಾಗಿ ಎದ್ದೆ': ನಾವು ಐವರಿದ್ದೆವು. ಅದು ಭಾರಿ ನಿದ್ರೆಯ ಸಮಯ. ಯಾಕೋ ಬಿಸಿ ತಾಗಿದಂತಾಗುತ್ತಿದೆಯಲ್ಲಾ ಎಂಬ ಕಾರಣಕ್ಕಾಗಿ ಎದ್ದೆ. ನೋಡಿದರೆ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಪತ್ನಿ ಮತ್ತು ಮಾವ ಸೇರಿ ಉಳಿದವರನ್ನು ಎಬ್ಬಿಸಲು ಯತ್ನಿಸಿದೆ. ಇವರಿಬ್ಬರು ಏಳಲಿಲ್ಲ. ಉಳಿದ ನಾವು ಮೂವರು ಎದ್ದೆವು. ರೈಲಿನಿಂದ ಹಾರಿ ಜೀವ ಉಳಿಸಿಕೊಂಡೆವು. ಆದರೆ ಪತ್ನಿ ಮತ್ತು ಮಾವನನ್ನು ಕಳೆದುಕೊಂಡೆ ಎಂದು ಬದುಕಿಬಂದವರೊಬ್ಬರು ಹೇಳುತ್ತಾರೆ.
ಬೆಂಗಳೂರಿನ ಪಾಟೀಲ್ ಎಂಬುವರು ತಂದೆಯ ಜೊತೆ ಪ್ರಯಾಣಿಸುತ್ತಿದ್ದರು. ಇವರೂ ಕೂಡ ಬಿಸಿ ತಾಗಿದ್ದರಿಂದ ಎಚ್ಚೆತ್ತಿದ್ದರು. ತಂದೆಯನ್ನು ಒಳಗೊಂಡೇ ರೈಲಿನಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅಲ್ಲಿಂದ ಪೆನುಕೊಂಡಕ್ಕೆ ತೆರಳಿ, ಬಳಿಕ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.
ಸುಭಾಷ್ ರೆಡ್ಡಿ ಎಸ್. ಪಾಟೀಲ್ ನಾಪತ್ತೆ
ಮಹಾಮಂಡಳ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಡಿ.26 ರಂದು ಬೆಂಗಳೂರಿಗೆ ಬಂದಿದ್ದ ಸುಭಾಷ್ ಅವರು ಶುಕ್ರವಾರ ರಾತ್ರಿ ರಾಯಚೂರಿಗೆ ಹೊರಟಿದ್ದರು. ಸೀಟು ಖಚಿತಗೊಂಡಿರದ ಹಿನ್ನೆಲೆಯಲ್ಲಿ ರಾತ್ರಿ 12.30ಕ್ಕೆ ಪತ್ನಿಗೆ ಕರೆ ಮಾಡಿ ಮಾತನಾಡಿದ್ದು ಕೊನೆ ಎಂದು ನೌಕರರ ಸಂಘದ ಅಧ್ಯಕ್ಷ ಮುನಿರಾಜು ತಿಳಿಸಿದ್ದಾರೆ. ರೆಡ್ ಕ್ರಾಸ್ ಹಾಗೂ ಸೇವಾ ದಳ ನಿರ್ದೇಶಕರು ಆಗಿದ್ದ ಸುಭಾಷ್ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು. ನೌಕರರ ಬೇಡಿಕೆಗಳಿಗೆ ಧ್ವನಿಯಾಗಿದ್ದರು ಎಂದು ಮುನಿರಾಜು ತಿಳಿಸಿದ್ದಾರೆ. ಸುಭಾಷ್ (45) ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ರಾಯಚೂರಿನಲ್ಲಿ ವಾಸವಿದ್ದರು.
ಸಾಫ್ಟ್ವೇರ್ ಎಂಜಿನಿಯರ್
ಓರಾಕಲ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ರಾಯಚೂರು ಮೂಲದ ರಾಹುಲ್ ಪತಂಗೆ (25) ಎಂಬುವರು ಕಾಣೆಯಾಗಿದ್ದಾರೆ. ಎರಡು ದಿನಗಳ ಅಮೇರಿಕದಿಂದ ಬೆಂಗಳೂರಿಗೆ ಬಂದಿದ್ದ ರಾಹುಲ್ ಸ್ವಂತ ಊರು ರಾಯಚೂರಿಗೆ ಹೋಗುತ್ತಿದ್ದರು. 1 ವರ್ಷದ ಹಿಂದೆ ಪುಣೆಯಿಂದ ಕೆಲಸದ ಮೇಲೆ ರಾಹುಲ್ ಅಮೆರಿಕಕ್ಕೆ ಹೋಗಿದ್ದರು. ವಾಪಸ್ ಬೆಂಗಳೂರಿಗೆ ಬಂದು ಸ್ನೇಹಿತರನ್ನು ಭೇಟಿ ಮಾಡಿಕೊಂಡು ರಾಯಚೂರಿಗೆ ಮರಳುತ್ತಿದ್ದರು. ಸುದ್ದಿ ತಿಳಿದ ರಾಹುಲ್ ಕುಟುಂಬ ಸದಸ್ಯರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ನವ ದಂಪತಿ
ಆಂಧ್ರಪ್ರದೇಶದ ಅನಂತಪುರ ಮೂಲದ ಶ್ರೀಲತಾ ಹಾಗೂ ಶ್ರೀನಿವಾಸ್ ದಂಪತಿ ನಾಪತ್ತೆಯಾಗಿದ್ದಾರೆ. ಜಯನಗರದಲ್ಲಿ ವಾಸವಿದ್ದ ದಂಪತಿ 6 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಇಬ್ಬರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು.
ಸಂಗೀತ ವಿದ್ವಾಂಸ ಎಸ್.ಆರ್. ಕೃಷ್ಣಮೂರ್ತಿ
ಸ್ಟಾರ್ ಆಫ್ ಮೈಸೂರು ಸಂಜೆ ಪತ್ರಿಕೆ ಸಾಂಸ್ಕೃತಿಕ ವರದಿಗಾರ, ಸಂಗೀತ ವಿದ್ವಾಂಸ ಮೈಸೂರಿನ ಬೋಗಾಯ್ ನಿವಾಸಿ ಎಸ್.ಆರ್. ಕೃಷ್ಣಮೂರ್ತಿ (70) ನಾಪತ್ತೆಯಾಗಿದ್ದಾರೆ. ಕಾರ್ಯಕ್ರಮ ನಿಮಿತ್ಯ ರಾಯಚೂರಿಗೆ ಹೋಗುತ್ತಿದ್ದ ಕೃಷ್ಣಮೂರ್ತಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಕೃಷ್ಣಮೂರ್ತಿ ಅವರ ಮಾಹಿತಿ ಕೋರಿ ಅವರ ಸೊಸೆ ಸುಚರಿತಾ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದರು. ಗಾಯಾಳುಗಳ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೆ ತೀವ್ರ ಗೊಂದಲಕ್ಕೆ ಒಳಗಾಗಿದ್ದರು.
ಇಂಥ ಘಟನೆ ನಡೆಯಬಾರದಿತ್ತು, ಇದು ದುರಂತ ಘಟನೆ. ಸುರಕ್ಷತಾ ಆಯುಕ್ತರ ಮಟ್ಟದ ಸಮಿತಿ ರಚಿಸಲಾಗಿದ್ದು, ತನಿಖೆಯ ಬಳಿಕವಷ್ಟೇ ಘಟನೆಗೆ ಕಾರಣ ಗೊತ್ತಾಗಲಿದೆ.
- ಮಲ್ಲಿಕಾರ್ಜುನ ಖರ್ಗೆ, ರೇಲ್ವೆ ಸಚಿವ
ಬೆಂಗಳೂರಿನಿಂದ
170 ಕಿ.ಮೀ. ದೂರ ಆಂಧ್ರದ ಪುಟ್ಟಪರ್ತಿ ಬಳಿಕ ಪ್ರಶಾಂತಿ ನಿಲಯಂ ನಿಲ್ದಾಣ ಬಳಿ
ಸಮಯ
ಶನಿವಾರ ಬೆಳಗಿನ ಜಾವ 3.45 ಶಾರ್ಟ್ಸರ್ಕ್ಯೂಟ್ ಅಥವಾ ದಹಿಸಬಲ್ಲ ವಸ್ತುಗಳಿಂದ ದುರಂತ?
ಪರಿಹಾರ
ರು. 500000 ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ರೇಲ್ವೆ ಸಚಿವ ಖರ್ಗೆ
ಸಹಾಯವಾಣಿ
ಮಾಹಿತಿಗಾಗಿ ನೈಋತ್ಯ ರೇಲ್ವೆ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಸುನಂದಾ ಅರುಳ್ರನ್ನು ಸಂಪರ್ಕಿಸಿ : 9731666001