20 ಶವಗಳ ಗುರುತು, 11 ಶವ ಹಸ್ತಾಂತರ
ನಾಂದೇಡ್ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ ಮೃತಪಟ್ಟ 26 ಪ್ರಯಾಣಿಕರ ಪೈಕಿ 20 ಪ್ರಯಾಣಿಕರ ಶವಗಳ ಗುರುತು ಪತ್ತೆ ಹಚ್ಚಲಾಗಿದ್ದು...
ಕನ್ನಡಪ್ರಭ ವಾರ್ತೆ ಬೆಂಗಳೂರು ಡಿ.29
ನಾಂದೇಡ್ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ ಮೃತಪಟ್ಟ 26 ಪ್ರಯಾಣಿಕರ ಪೈಕಿ 20 ಪ್ರಯಾಣಿಕರ ಶವಗಳ ಗುರುತು ಪತ್ತೆ ಹಚ್ಚಲಾಗಿದ್ದು, 11 ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ದುರಂತದ ಕಾರಣಗಳ ಪತ್ತೆಗೆ ಆಂಧ್ರಪ್ರದೇಶದ ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಭಾನುವಾರ ತನಿಖೆ ಆರಂಭಿಸಿದ್ದಾರೆ. 13 ಮಂದಿ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು, ಘಟನೆಗೆ ಕಾರಣ ಪತ್ತೆ ಮಾಡಲು ಸಹಾಯಕವಾಗುವ ಸಾಕ್ಷ್ಯಗಳ ಪತ್ತೆ ಕಾರ್ಯ ಆರಂಭಿಸಿದೆ. ಬೆಂಗಳೂರಿನಲ್ಲಿ ಶನಿವಾರ ರಾತ್ರಿ 6 ಶವಗಳು, ಭಾನುವಾರ 5 ಶವಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ಶವ ತೆಗೆದುಕೊಂಡು ಹೋದ 8 ಜನರ ಪೈಕಿ ಇಬ್ಬರು ವಾರಸುದಾರರು ಮಾತ್ರ ರೇಲ್ವೆ ಅಧಿಕಾರಿಗಳಿಂದ 50 ಸಾವಿರ ಪರಿಹಾರ ಸ್ವೀಕರಿಸಿದ್ದಾರೆ. ಭಾನುವಾರ ನೈಋತ್ಯ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ಅನಿಲ್ ಕುಮಾರ್ ಅಗರ್ವಾಲ್ ಸೇರಿದಂತೆ ರೇಲ್ವೆ ಅಧಿಕಾರಿಗಳು, ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಮುಂದೆ ಮೊಕ್ಕಾಂ ಹೂಡಿದ್ದರೂ ಸಂಬಂಧಿಗಳ ಗೊಂದಲ ತಪ್ಪಲಿಲ್ಲ. ಹೀಗಾಗಿ ರೇಲ್ವೆ ಅಧಿಕಾರಿಗಳೊಂದಿಗೆ ಮೃತರ ಸಂಬಂಧಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಸಂಬಂಧಿಕರ ಆಕ್ರಂದನ
ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಬಳಿ ಸೇರಿದ್ದ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ದುರಂತದಲ್ಲಿ ಶವಗಳು ಸುಟ್ಟು ಕರಕಲಾಗಿದ್ದ ಹಿನ್ನೆಲೆಯಲ್ಲಿ ಕನಿಷ್ಠ ಪಕ್ಷ ತಮ್ಮವರನ್ನು ಕಡೇ ಬಾರಿ ಕಣ್ತುಂಬ ನೋಡಬೇಕು ಎನ್ನುವ ಆಸೆಯೂ ಈಡೇರಿಲ್ಲ. ಬೆಂಕಿಯಿಂದ ಅದಾಗಲೇ ಅರೆಬರೆ ಸುಟ್ಟಿದ್ದ ಶವಗಳನ್ನು ಹೆಚ್ಚು ಹೊತ್ತು ಹೊರಗೆ ಇಡಲು ಸಾಧ್ಯವಾಗದ ಕಾರಣ ಅಂತ್ಯಸಂಸ್ಕಾರಕ್ಕೆ ವೇಗವಾಗಿ ತಮ್ಮ ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು.
ಗಾಯಾಳು ಬೆಂಗಳೂರಿಗೆ ಶಿಫ್ಟ್
ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಟೇಶ್ ಹಾಗೂ ತನುಶ್ರೀ ಎಂಬುವರನ್ನು ನಗರದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನರಹರಿ ರಾವ್ ಎಂಬುವರಿಗೆ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಾಮೂರ್ತಿ ಎಂಬುವರಿಗೆ ಮೈಸೂರಿನ ರೇಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶವಗಳ ಗುರುತಿಗೆ ಪರೇಡ್
ಬೇರೆ ಬೇರೆ ಊರುಗಳಿಂದ ಮೃತರ ಸಂಬಂಧಿಗಳು ವಿಕ್ಟೋರಿಯಾ ಶವಾಗಾರಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಪ್ರತಿ ಕುಟಂಬ ಸದಸ್ಯರನ್ನು ಹಂತ ಹಂತವಾಗಿ ಶವಾಗಾರದ ಒಳಗೆ ಕರೆದುಕೊಂಡು ಹೋಗಿ ತಮ್ಮವರ ಶವಗಳನ್ನು ಗುರುತಿಸಲು ಅವಕಾಶ ನೀಡಲಾಗಿತ್ತು. ಮೃತರ ಮೈ ಮೇಲಿನ ವಸ್ತುಗಳು ಹಾಗೂ ಅರೆ ಬರೆ ಸುಟ್ಟಿದ್ದ ಮುಖ ಚಹರೆ ಹಾಗೂ ಇತರ ಲಕ್ಷಣಗಳ ಆಧಾರದ ಮೇಲೆ ಶವಗಳನ್ನು ಗುರುತಿಸಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ವಾರಸುದಾರರಿಗೆ ಒಪ್ಪಿಲಾಗಿದೆ.
ಪತ್ತೆಯಾಗಿರುವ 20 ಮೃತರು
ಔರಾಂಗಬಾದ್ನ ಈಶ್ವರ ನಗ್ರೆ (70), ಜೂಹಿ ನಗ್ರೆ (9) ಅನಿರುದ್ಧ ಕುಲಕರ್ಣಿ (24), ಕೆಂಗೇರಿಯ ಅವಳಿ ಸಹೋದರಿಯರಾದ ಪದ್ಮಿನಿ (61) ಲಲಿತಾ (61), ಆಂಧ್ರದ ಆದೋನಿಯ ಬಸವರಾಜ್ (65), ಸರ್ವಮಂಗಳ (30), ಆದೋನಿಯ ಅನಿಲ್ ಕುಮಾರ್ (43), ಆಂದ್ರಪ್ರದೇಶದ ಖಂಡೋಬಾ ಕುಲಕರ್ಣಿ (33), ಕೊಡಿಗೆಹಳ್ಳಿಯ ರಾಠಿ ಪ್ರೇಮಲತಾ (61), ಚಂಪಾಲಾಲ್ ರಾಠಿ, ಅನಂತಪುರ ಮೂಲದ ಶ್ರೀಲತಾ (26), ಬೀದರ್ನ ಭೀಮಯ್ಯ, ರಾಯಚೂರಿನ ಡಾ.ಅಸ್ರಾ (31), ಚಾಮರಾಜಪೇಟೆ ಸುಧಾ (32), ಲೀಲಾ (62) ರಮಾನಂದಂ (65), ಮೈಸೂರಿನ ಎಸ್.ಆರ್.ಕೃಷ್ಣಮೂರ್ತಿ (70), ರಾಯಚೂರಿನ ಸುಭಾಷ್ ರೆಡ್ಡಿ, ಜಯನಗರದ ಶ್ರೀನಿವಾಸ್ (28), ಶ್ರೀಲತಾ (26).
ಶಂಕಿತ ಮೃತರು ಅಥವಾ ನಾಪತ್ತೆಯಾದವರು 9 ಜನ
ರಾಯಚೂರು ಮೂಲದ ಆರ್.ಟಿ. ನಗರ ನಿವಾಸಿ ಇಬ್ರಾಹಿಂ ರಾಹಿ, ಆಂಧ್ರಪ್ರದೇಶದ ವಿನಯ್ ಪ್ರತಾಪ್, ರಾಯಚೂರಿನ ಡಾ.ಅಸ್ರಾ, ಎನ್. ಕಿಶೋರ್ ಕುಮಾರ್, ರಾಧಾಕೃಷ್ಣ, ಬಲ್ಬೀರ್ ಕೌರ್, ಅಮನ್ ಪ್ರೀತ್ ಕೌರ್, ರಾಹುಲ್ ಹಾಗೂ ಕವಿತಾ ನಗ್ರೆ. ರೈಲ್ವೆ ಇಲಾಖೆ ಬಳಿ 6 ಶವಗಳಿವೆ. ಇನ್ನೂ 3 ಮಂದಿ ನಾಪತ್ತೆಯಾದರೋ? ಬದುಕಿದ್ದಾರೋ ಎಂಬ ಮಾಹಿತಿ ಲಭ್ಯವಾಗಿಲ್ಲ.
ವಾರಸುದಾರರಿಗೆ ನೀಡಲಾಗಿರುವ ಶವಗಳು
ರಮಾನಂದಂ, ಲೀಲಾ, ಸುಧಾ, ಜೂಹಿ ನಗ್ರೆ, ಖಂಡೋಬಾ ಕುಲಕರ್ಣಿ, ಎಚ್.ಕೆ. ಬಸವರಾಜ, ಸರ್ವಮಂಗಳಾ, ಸುಭಾಷ್ ರೆಡ್ಡಿ, ಭೀಮಯ್ಯ, ರಾಠಿ ಪ್ರೇಮಲತಾ ಹಾಗೂ ರಾಠಿ ಚಂಪಾಲಾಲ್. ಶವವನ್ನು ತೆಗೆದುಕೊಂಡು ಹೋದವರ ಪೈಕಿ ಜೂಹಿ ನಗ್ರೆ ಹಾಗೂ ಖಂಡೋಬಾ ಕುಲಕರ್ಣಿ ಕುಟುಂಬ ಸದಸ್ಯರಿಗೆ ರೇಲ್ವೆ ಇಲಾಖೆ 50 ಸಾವಿರ ಪರಿಹಾರ ವಿತರಿಸಿದ್ದು ಉಳಿದ 4.5 ಲಕ್ಷ ಪರಿಹಾರವನ್ನು ವಾರಸುದಾರರ ಮನೆಗಳಿಗೆ ತೆರಳಿ ನೀಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.