ಒಂದು ಗ್ರಿಡ್, ಒಂದು ದೇಶ ಕೇಂದ್ರದ ಜತೆ ಇಂದು ಜೋಡಣೆ
ದೇಶದ ವಿದ್ಯುತ್ ವಲಯದಲ್ಲಿ ಡಿ.30ರಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಡೀ ಭಾರತ ಒಂದೇ ವಿದ್ಯುತ್ ಜಾಲದ ಮೂಲಕ ಜೋಡಣೆಯಾಗಲಿರುವ ...
ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಡಿ.29
ದೇಶದ ವಿದ್ಯುತ್ ವಲಯದಲ್ಲಿ ಡಿ.30ರಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಡೀ ಭಾರತ ಒಂದೇ ವಿದ್ಯುತ್ ಜಾಲದ ಮೂಲಕ ಜೋಡಣೆಯಾಗಲಿರುವ ಮಹತ್ವದ ದಿನವಿದು.
ರಾಯಚೂರಿನಲ್ಲಿ ಸ್ಥಾಪನೆಯಾಗಿರುವ 400.765 ಕೆ.ವಿ. ಬೃಹತ್ ವಿದ್ಯುತ್ ಉಪ ಕೇಂದ್ರ ರಾಜ್ಯದ ಮೊದಲ ಅತಿ ದೊಡ್ಡ ಉಪ ಕೇಂದ್ರವಾಗಿದೆ. ಅದು ಸೊಲ್ಲಾಪುರದ 400.765 ಕೆವಿ ವಿದ್ಯುತ್ ಉಪ ಕೇಂದ್ರದೊಡನೆ ಸಂಪರ್ಕ ಸಾಧಿಸುವ ಮೂಲಕ ಇಡೀ ದೇಶದ ಗ್ರಿಡ್ ಜೋಡಣೆಯಾಗಲಿದೆ. ಆ ಮೂಲಕ ಇಡೀ ದೇಶ ವಿದ್ಯುತ್ ಸಂಪರ್ಕ ಜಾಲದಲ್ಲಾದರೂ ವೈವಿಧ್ಯತೆಯಲ್ಲಿ ಏಕತೆ ಸಾಧಿಸಲಿದೆ. 'ಒಂದು ದೇಶ ಒಂದು ಗ್ರಿಡ್' ಜಾರಿಯಾದಲ್ಲಿ ದಕ್ಷಿಣ ಪ್ರಾದೇಶಿಕ ಗ್ರಿಡ್ ಉತ್ತರ, ಪೂರ್ವ, ವಾಯವ್ಯ ಮತ್ತು ಪಶ್ಚಿಮ ಭಾರತದ ಪ್ರಾದೇಶಿಕ ಗ್ರಿಡ್‌ಗಳೊಂದಿಗೆ ಜೋಡಣೆ ಸಾಧ್ಯವಾಗುತ್ತದೆ.
ಇದರಿಂದ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ದಕ್ಷಿಣ ಪ್ರಾದೇಶಿಕ ಗ್ರಿಡ್ ಕೊರತೆ ನಿವಾರಿಸಿಕೊಳ್ಳುವ ಸಾಧ್ಯತೆ ಇರುವುದು ದಕ್ಷಿಣದ ರಾಜ್ಯಗಳಿಗೆ ವರವಾಗಿ ಪರಿಣಮಿಸಲಿದೆ.
ಬೇಡಿಕೆಗೆ ಅನುಗುಣವಾಗಿ ಪೂರೈಕೆ: ಯೋಜನೆ ಮತ್ತು ಕಾರ್ಯಾಚರಣೆ ದೃಷ್ಟಿಯಿಂದ ಭಾರತದ ವಿದ್ಯುತ್ ವ್ಯವಸ್ಥೆಯನ್ನು 5 ಪ್ರಾದೇಶಿಕ ಗ್ರಿಡ್ಗಳನ್ನಾಗಿ ವಿಂಗಡಿಸಲಾಗಿತ್ತು. 90ರ ದಶಕದ ಆರಂಭದಲ್ಲಿ ಪ್ರಾದೇಶಿಕ ಗ್ರಿಡ್ಗಳನ್ನು ಪರಸ್ಪರ ಜೋಡಿಸುವ ಮೂಲಕ ರಾಷ್ಟ್ರೀಯ ಗ್ರಿಡ್ ಸ್ಥಾಪಿಸುವ ಪರಿಕಲ್ಪನೆಗೆ ಚಾಲನೆ ದೊರೆಯಿತು. ಆರಂಭದಲ್ಲಿ ಪ್ರಾದೇಶಿಕ ಗ್ರಿಡ್ಗಳಲ್ಲಿ ಹೆಚ್ಚುವರಿಯಾದ ವಿದ್ಯುತ್ತನ್ನು ಪರಸ್ಪರ ಹಂಚಿಕೊಳ್ಳುವ ಉದ್ದೇಶದಿಂದ ಪ್ರಾದೇಶಿಕ ಗ್ರಿಡ್ಗಳ ಜೋಡಣೆ ಯೋಜಿಸಲಾಗಿತ್ತು. ನಂತರದ ದಿನಗಳಲ್ಲಿ ಪ್ರಾದೇಶಿಕ ಸ್ವಾವಲಂಬನೆಗಿಂತ ಇಡೀ ರಾಷ್ಟ್ರದ ವಿದ್ಯುತ್ ಬೇಡಿಕೆ ಗಮನದಲ್ಲಿರಿಸಿ ಗ್ರಿಡ್ಗಳ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಯಿತು.
1991ರಿಂದ ಜೋಡನೆ ಆರಂಭ
1991ರ ಅಕ್ಟೋಬರ್ನಲ್ಲಿ ವಾಯವ್ಯ ಮತ್ತು ಪೂರ್ವ ಪ್ರಾದೇಶಿಕ ಗ್ರಿಡ್ಗಳನ್ನು ಪರಸ್ಪರ ಜೋಡಿಸಲಾಯಿತು. 2003ರ ಮಾರ್ಚ್ನಲ್ಲಿ ಪಶ್ಚಿಮ ಪ್ರಾದೇಶಿಕ ಗ್ರಿಡ್ ಮತ್ತು ಪೂರ್ವ ಹಾಗೂ ವಾಯವ್ಯ ಪ್ರಾದೇಶಿಕ ಗ್ರಿಡ್ಗಳನ್ನು ಪರಸ್ಪರ ಸಂಪರ್ಕಿಸಲಾಯಿತು. 2006ರ ಆಗಸ್ಟ್ನಲ್ಲಿ ಉತ್ತರ ಪ್ರಾದೇಶಿಕ ಗ್ರಿಡ್ ಮತ್ತು ಪೂರ್ವ ಪ್ರಾದೇಶಿಕ ಗ್ರಿಡ್ಗಳಿಗೆ ಸಂಪರ್ಕ ಕಲ್ಪಿಸಲಾಯಿತು. ಸದ್ಯ ಉತ್ತರ, ಪೂರ್ವ, ಪಶ್ಚಿಮ ಮತ್ತು ವಾಯವ್ಯ ಪ್ರಾದೇಶಿಕ ಗ್ರಿಡ್ಗಳು ಪರಸ್ಪರ ಜೋಡಣೆಯಾಗಿದ್ದು, ಒಂದೇ ಫ್ರೀಕ್ವೆನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸೋಮವಾರದಿಂದ ಈ ಎಲ್ಲ ಪ್ರಾದೇಶಿಕ ಗ್ರಿಡ್ಗಳೊಂದಿಗೆ ದಕ್ಷಿಣ ಪ್ರಾದೇಶಿಕ ಗ್ರಿಡ್ ಕೂಡ ಜೋಡಣೆಯಾಗಲಿದ್ದು, ಇಡೀ ದೇಶವೇ ಏಕ ಫ್ರೀಕ್ವೆನ್ಸಿಯ ವಿದ್ಯುತ್ ಬಳಕೆ ಪ್ರಾರಂಭಿಸಲಿದೆ.
ಹೆಚ್ಚುವರಿ ವಿದ್ಯುತ್ ಲಭ್ಯ
ಗ್ರಿಡ್ ಜೋಡಣೆಯಿಂದ ಹೆಚ್ಚುವರಿ ವಿದ್ಯುತ್ ಸಂಪನ್ಮೂಲ ಹೊಂದಿರುವ ಗ್ರಿಡ್ನಿಂದ ಕೊರತೆ ಅನುಭವಿಸುತ್ತಿರುವ ಗ್ರಿಡ್ಗಳಿಗೆ ವಿದ್ಯುತ್ ವರ್ಗಾವಣೆ ಮಾಡುವ ಮೂಲಕ ನೈಸರ್ಗಿಕ ಸಂಪನ್ಮೂಲದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯುತ್ ಮಾರುಕಟ್ಟೆ ಪ್ರಬಲಗೊಂಡು ಪ್ರಾದೇಶಿಕ ಗ್ರಿಡ್ಗಳ ನಡುವೆ ವಿದ್ಯುತ್ ವ್ಯಾಪಾರ ಸುಲಭ ಸಾಧ್ಯವಾಗಲಿದೆ. ಗ್ರಿಡ್ಗಳ ಜೋಡಣೆ ಹೊಣೆಗಾರಿಕೆಯನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಡಿಪಿಜಿಸಿಐಎಲ್ ಯಶಸ್ವಿಯಾಗಿ ನಿಭಾಯಿಸಿದ್ದು, ಅಭಿನಂದನಾರ್ಹವೇ ಸರಿ.
ಹೆಚ್ಚುವರಿ ವಿದ್ಯುತ್ ಲಭ್ಯ
ಗ್ರಿಡ್ ಜೋಡಣೆಯಿಂದ ಹೆಚ್ಚುವರಿ ವಿದ್ಯುತ್ ಸಂಪನ್ಮೂಲ ಹೊಂದಿರುವ ಗ್ರಿಡ್ನಿಂದ ಕೊರತೆ ಅನುಭವಿಸುತ್ತಿರುವ ಗ್ರಿಡ್ಗಳಿಗೆ ವಿದ್ಯುತ್ ವರ್ಗಾವಣೆ ಮಾಡುವ ಮೂಲಕ ನೈಸರ್ಗಿಕ ಸಂಪನ್ಮೂಲದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯುತ್ ಮಾರುಕಟ್ಟೆ ಪ್ರಬಲಗೊಂಡು ಪ್ರಾದೇಶಿಕ ಗ್ರಿಡ್ಗಳ ನಡುವೆ ವಿದ್ಯುತ್ ವ್ಯಾಪಾರ ಸುಲಭ ಸಾಧ್ಯವಾಗಲಿದೆ.
ಕ.ಮ. ರವಿಶಂಕರ