ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಮಗಾರಿ ಮಾಡಿದ್ದಾರೆ ಅಂದ್ರು, ಕುರುಹೇ ಕಾಣುತ್ತಿಲ್ಲ!

ಶಿರಾಡಿ ಘಾಟ್ ಹೆದ್ದಾರಿಯಲ್ಲಿ ನಡೆಯುವ ಕಾಮಗಾರಿಗಳಿಗೆ ಲೆಕ್ಕವೇ ಇಲ್ಲ. ಕಾಮಗಾರಿಗಳು ನಡೆದ ಬಗ್ಗೆ ಇಲ್ಲಿ ಯಾವುದೇ ಫಲಕಗಳನ್ನು ಹಾಕಿದ...

Rashmi Kasaragodu
Updated On : 30 Dec 2013, 12:50 pm

ಕನ್ನಡಪ್ರಭ ವಾರ್ತೆ    ಮಂಗಳೂರು    ಡಿ.29
ಶಿರಾಡಿ ಘಾಟ್ ಹೆದ್ದಾರಿಯಲ್ಲಿ ನಡೆಯುವ ಕಾಮಗಾರಿಗಳಿಗೆ ಲೆಕ್ಕವೇ ಇಲ್ಲ. ಕಾಮಗಾರಿಗಳು ನಡೆದ ಬಗ್ಗೆ ಇಲ್ಲಿ ಯಾವುದೇ ಫಲಕಗಳನ್ನು ಹಾಕಿದ ಉದಾಹರಣೆಯೂ ಇಲ್ಲ. ಗುತ್ತಿಗೆದಾರರು ಡಾಂಬರು ಮಿಶ್ರಣದಲ್ಲಿ ವಂಚನೆ ಮಾಡಿದರೆ ಎಂಜಿನಿಯರ್‌ಗಳು ಡಾಂಬರು ಮಿಶ್ರಣದ ಎಸ್ಟಿಮೇಟ್‌ನಲ್ಲೇ ಮೋಸ ಮಾಡುತ್ತಿದ್ದಾರೆ.
2007-08ರಲ್ಲಿ 7 ತಿಂಗಳ ಕಾಲ ಶಿರಾಡಿ ಘಾಟಿಯನ್ನೇ ಬಂದ್ ಮಾಡಿ 18 ತಿರುವುಗಳಲ್ಲಿ 8 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣ ಕಾಮಗಾರಿ ಮಾಡಲಾಗಿತ್ತು. ಮೂರೇ ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದ್ದ ಗುತ್ತಿಗೆದಾರರು 2007 ಡಿಸೆಂಬರ್‌ನಿಂದ 2008 ಜೂನ್‌ವರೆಗೆ ಸಮಯ ತೆಗೆದುಕೊಂಡಿದ್ದರು. ಆದರೆ ಈಗ ಅಲ್ಲಿ ಕಾಂಕ್ರೀಟೀಕರಣಗೊಳಿಸಿದ ಯಾವುದೇ ಕುರುಹುಗಳು ಕಾಣುವುದಿಲ್ಲ. ರಸ್ತೆಗಳಲ್ಲಿ ಜಲ್ಲಿಗಳ ಹುಡಿಗಳು ಮಾತ್ರ ಕಾಣ ಸಿಗುತ್ತವೆ.
ಈ ಬಗ್ಗೆ ಎಂಜಿನಿಯರ್‌ಗಳನ್ನು ಪ್ರಶ್ನಿಸಿದಾಗ, ಕಾಂಕ್ರೀಟೀಕರಣ ಚೆನ್ನಾಗಿ ಮಾಡಲಾಗಿದೆ. ಮಾಸ್ಟಿಕ್ ಬೆಟಮಿನ್ ತಂತ್ರಜ್ಞಾನ ಅಳವಡಿಸಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಕಾಂಕ್ರೀಟ್ ಮಾಡಿದ ಬಳಿಕ ಅದರ ಮೇಲೆ ಮತ್ತೊಂದು ಬಾರಿ ಡಾಂಬರು ಹಾಕಿ ಮಧ್ಯೆಮಧ್ಯೆ ಜಲ್ಲಿಕಲ್ಲುಗಳನ್ನು ಹಾಕಲಾಗುತ್ತದೆ. ಹೀಗಾಗಿ ಕಾಂಕ್ರೀಟ್ ಕಾಮಗಾರಿ ನಡೆಸಿದ್ದು ಕಾಣುವುದಿಲ್ಲ ಎನ್ನುತ್ತಾರೆ.
ಉತ್ತರವಿಲ್ಲ: ಆದರೆ ಶಿರಾಡಿ ಘಾಟಿಯ 20 ಕಿ.ಮೀ. ಉದ್ದಕ್ಕೂ ರಸ್ತೆಯೇ ಕಾಣುತ್ತಿಲ್ಲ. ಹೊಂಡ ಗುಂಡಿಗಳು ಮಾತ್ರ ಕಾಣುತ್ತಿವೆ. ಹೀಗೆ ರಸ್ತೆಯೇ ಕಾಣದಂತೆ ಮಾಡಲು ಗುತ್ತಿಗೆದಾರರು, ಎಂಜಿನಿಯರ್‌ಗಳು ಯಾವ ಹೈಟೆಕ್ ತಂತ್ರಜ್ಞಾನ ಬಳಸಿದ್ದಾರೆ ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ.        


ಉತ್ತರವಿಲ್ಲ: ಆದರೆ ಶಿರಾಡಿ ಘಾಟಿಯ 20 ಕಿ.ಮೀ. ಉದ್ದಕ್ಕೂ ರಸ್ತೆಯೇ ಕಾಣುತ್ತಿಲ್ಲ. ಹೊಂಡ ಗುಂಡಿಗಳು ಮಾತ್ರ ಕಾಣುತ್ತಿವೆ. ಹೀಗೆ ರಸ್ತೆಯೇ ಕಾಣದಂತೆ ಮಾಡಲು ಗುತ್ತಿಗೆದಾರರು, ಎಂಜಿನಿಯರ್‌ಗಳು ಯಾವ ಹೈಟೆಕ್ ತಂತ್ರಜ್ಞಾನ ಬಳಸಿದ್ದಾರೆ ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. 'ಗುತ್ತಿಗೆದಾರ ಕಾಮಗಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದಾನೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಗೋಜಿಗೇ ಎಂಜಿನಿಯರ್‌ಗಳು ಹೋಗುವುದಿಲ್ಲ. ಜನಪ್ರತಿನಿಧಿಗಳು ಇದು ಗೊತ್ತಿದ್ದರೂ ಗೊತ್ತಿಲ್ಲದವರಂತೆ ಇರುತ್ತಾರೆ' ಎಂದು ಮಂಗಳೂರಿನ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಆರೋಪಿಸುತ್ತಾರೆ.  
ಕಾಮಗಾರಿಯ ಫಲಕಗಳೇ ಇಲ್ಲ : ಹಳ್ಳಿ ಹಳ್ಳಿಯಲ್ಲಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣವಾಗುವ ರಸ್ತೆಗಳಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರನ ಹೆಸರು, ಕಾಮಗಾರಿಯ ವೆಚ್ಚ, ಅನುದಾನಗಳ ವಿವರವನ್ನು ಕಡ್ಡಾಯವಾಗಿ ಫಲಕದಲ್ಲಿ ನಮೂದಿಸಲಾಗುತ್ತದೆ. ಈಗ ರಸ್ತೆಯ ಉದ್ದ ಮತ್ತು ಅಗಲದ ಎಲ್ಲ ವಿವರಗಳನ್ನೊಳಗೊಂಡ ನಕ್ಷೆಯನ್ನೂ ಹಾಕಬೇಕು. ಹೀಗಿರುವಾಗ ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡುವ ಹೆದ್ದಾರಿ ಕಾಮಗಾರಿಯ ವಿವರ, ಗುತ್ತಿಗೆದಾರನ ಹೆಸರಿನ ನಾಮಫಲಕ ಹಾಕಬೇಕಲ್ಲವೇ? ಆದರೆ ಶಿರಾಡಿ ಘಾಟ್‌ನ ರಸ್ತೆಯುದ್ದಕ್ಕೂ ಕಾಮಗಾರಿ ನಡೆಸಿದ ಯಾವೊಂದು ಫಲಕವೂ ಕಾಣಸಿಗುವುದಿಲ್ಲ. ವಿಶೇಷ ಎಂದರೆ ಅಪಾಯಕಾರಿ ತಿರುವುಗಳ ಸೂಚನಾ ಫಲಕಗಳೇ ಇಲ್ಲ. ಇನ್ನು ಕಾಮಗಾರಿಗಳ ವಿವರಗಳ ಫಲಕ ಹಾಕಿದರೆ ಗುತ್ತಿಗೆದಾರರಿಗೆ, ಎಂಜಿನಿಯರ್‌ಗಳಿಗೆ ಅಪಾಯ ಖಚಿತ. ಈ ಕಾರಣಕ್ಕೇ ಕಾಮಗಾರಿಗಳ ವಿವರಗಳನ್ನೊಳಗೊಂಡ ಫಲಕ ಹಾಕದೇ ಇರಬಹುದು ಎಂದು ಅಭಿಪ್ರಾಯ ಪಡುತ್ತಾರೆ ಉಜಿರೆಯ ಬಾಲಕೃಷ್ಣ ಗೌಡ.


ಡಾಂಬರು ಮಿಶ್ರಣ ಅನುಪಾತದಲ್ಲಿ ಮೋಸ



ಇಂಡಿಯನ್ ರೋಡ್ ಕಾಂಗ್ರೆಸ್(ಐಆರ್‌ಸಿ). ಇದು ರಸ್ತೆಗಳ ನಿರ್ಮಾಣದ ಕುರಿತ ದೇಶದ ಪರಮೋಚ್ಛ ಪ್ರಾಧಿಕಾರ. ರಸ್ತೆ ನಿರ್ಮಾಣಕ್ಕೆ ಈ ಪ್ರಾಧಿಕಾರ ಸೂಚಿಸಿದ ಮಾರ್ಗದರ್ಶಿ ಸೂತ್ರವೇ ಅಂತಿಮ ಹಾಗೂ ಅತ್ಯುತ್ತಮ. ಆದರೆ ಕೇಂದ್ರ ಸರ್ಕಾರದ ಎಂಆರ್‌ಡಿ ವಿಭಾಗವು ಇವರ ಮಾರ್ಗದರ್ಶನ ಪಾಲಿಸದೆ ಡಾಂಬರು ಮಿಶ್ರಣ ಅನುಪಾತವನ್ನು ವ್ಯತ್ಯಾಸ ಮಾಡಿದೆ. ಮರು ಡಾಂಬರೀಕರಣ ಕಾಮಗಾರಿ ಸಂದರ್ಭದಲ್ಲಿ ಚದರ ಮೀಟರ್‌ಗೆ 750 ಗ್ರಾಂ. ಡಾಂಬರು ಬಳಸಬೇಕು ಎಂಬುದು ಐಆರ್‌ಸಿ ಮಾರ್ಗದರ್ಶಿ ಸೂತ್ರ. ಆದರೆ ಹೆದ್ದಾರಿ ಪ್ರಾಧಿಕಾರ ಅಥವಾ ಲೋಕೋಪಯೋಗಿ ಇಲಾಖೆಯು ಕಾಮಗಾರಿ ಎಸ್ಟಿಮೇಟ್ ಮಾಡುವಾಗ ಚದರ ಮೀಟರ್‌ಗೆ 250 ಗ್ರಾಂ ಡಾಂಬರು ಬಳಸಿದರೆ ಸಾಕು ಎಂದು ಸೂಚಿಸುತ್ತದೆ. ಇದು ಆರಂಭದಲ್ಲೇ ಮಾಡುವ ದೇಶ ದ್ರೋಹ.
ಇನ್ನು ಹೊಸದಾಗಿ ಡಾಂಬರೀಕರಣ ಮಾಡುವಾಗ ಚದರ ಮೀಟರ್‌ಗೆ 1.2 ಕಿ.ಲೋ. ಡಾಂಬರು ಬಳಸಬೇಕು. ಆದರೆ 700 ಗ್ರಾಂ ಡಾಂಬರು ಬಳಸುವಂತೆ ಎಸ್ಟಿಮೇಟ್ ಮಾಡಲಾಗುತ್ತದೆ. ಇದು ಸರ್ಕಾರವೇ ಮಾಡುತ್ತಿರುವ ತಪ್ಪು. ಗುತ್ತಿಗೆದಾರರು ಇಲಾಖೆ ನೀಡಿದ್ದ ಈ ಪ್ರಮಾಣದಷ್ಟಾದರೂ ಡಾಂಬರು ಹಾಕಿ ಕಾಮಗಾರಿ ನಡೆಸಿದ್ದರೂ ಹಲವು ವರ್ಷಗಳ ಕಾಲವಾದರೂ ರಸ್ತೆಗಳು ಬಾಳಿಕೆ ಬರುತ್ತಿದ್ದವು. ಆದರೆ ಗುತ್ತಿಗೆದಾರರ ಹಣದಲ್ಲೂ ಪಾಲು ಕೇಳುವವರು ಇರುವುದರಿಂದ ಅವರು ಮತ್ತಷ್ಟು ಪ್ರಮಾಣ ಕಡಿಮೆ ಮಾಡುತ್ತಾರೆ. ಇದರ ನಡುವೆ ಇಲಾಖೆಯು ಡಾಂಬರಿನ ಬೆಲೆಯನ್ನು ಮಾರ್ಕೆಟ್ ದರಕ್ಕಿಂತ ಕಡಿಮೆಗೊಳಿಸಿ ಎಸ್ಟಿಮೇಟ್‌ನಲ್ಲಿ ನಮೂದಿಸುತ್ತಾರೆ. ಹೀಗಾಗಿ ಗುತ್ತಿಗೆದಾರ ಮೋಸ ಮಾಡುವುದು ಅನಿವಾರ್ಯವಾಗುತ್ತದೆ. ಹೀಗಾಗಿ ರಸ್ತೆಗಳು ಕಳಪೆಯಾಗುತ್ತವೆ.  'ರಸ್ತೆ ಕಾಮಗಾರಿ ನಡೆಸುವಾಗ ಜಲ್ಲಿಯ ಮೇಲೆ ಪ್ರೈಮ್ ಕೋಟ್ (ಪ್ರಾಥಮಿಕ ಲೇಪ) ಹಾಕಿದ ಬಳಿಕ ಅದರ ಮೇಲೆ ಮೂರು ಇಂಚು ಡಾಂಬರು ಹಾಕಬೇಕು. ಆದರೆ ಎಲ್ಲೆಡೆ 2 ಇಂಚು ಮಾತ್ರ ಹಾಕುತ್ತಾರೆ. ಹೀಗಾಗಿ ಅವೈಜ್ಞಾನಿಕ ಮಿಶ್ರಣದಿಂದ ರಸ್ತೆಗಳು ಬಹುಬೇಗ ಹಾಳಾಗುತ್ತವೆ' ಎಂದು ಸುಳ್ಯ ಎಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಸುಮಿತ್ರ ಹೇಳುತ್ತಾರೆ.
ಇಲಾಖೆಗಳು ಮಾಡುವ ತಪ್ಪನ್ನು ನಾವು ಅವರ ಗಮನಕ್ಕೆ ತಂದಾಗ ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸುವಂತೆ  ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಸವಾಲು ಹಾಕಿದ್ದರು. ಅದರಂತೆ ಇತ್ತೀಚೆಗೆ ಶಿರಾಡಿ- ಉಪ್ಪಿನಂಗಡಿ ನಡುವಿನ ಪೆರ್ನೆಯಲ್ಲಿ ಗ್ಯಾಸ್ ಟ್ಯಾಂಕರ್ ಅಪಘಾತಕ್ಕೀಡಾದ ಸ್ಥಳದಲ್ಲಿ ಐಆರ್‌ಸಿ ಸೂಚಿಸಿದ ಮಾರ್ಗದರ್ಶನದಂತೆ ಡಾಂಬರು ಮಿಶ್ರಣದಂತೆ ರಸ್ತೆ ಮಾಡಿ ತೋರಿಸಿದ್ದೆವು. ಆ ರಸ್ತೆಯ ಗುಣಮಟ್ಟ ಅತ್ಯುತ್ತಮವಾಗಿದೆ ಎನ್ನುತ್ತಾರೆ ಎಂಜಿನಿಯರ್ ಡಿ.ಎಂ. ಸುಮಿತ್ರ.



'ಇಲ್ಲಿನ ಪ್ರತಿಭಟನೆಗಳು ಕೇವಲ ಮಿಂಚಿನ ಕಾರ್ಯಾಚರಣೆ ಮಾತ್ರ ಮತ್ತೆ ಬದುಕಿನ ಜಂಜಾಟದಲ್ಲಿ ಮರೆತೇ ಹೋಗುತ್ತಾರೆ. ಕೇರಳ ರೀತಿಯ ಪ್ರತಿಭಟನೆ ಅಗತ್ಯ. ಅಲ್ಲಿ ಜನಪ್ರತಿನಿಧಿಗಳೂ ಕೂಡಾ ಒಳ್ಳೆ ವ್ಯವಸ್ಥೆಗಾಗಿ ಪಕ್ಷಭೇದ ಮರೆತು ಒಟ್ಟಾಗುತ್ತಾರೆ. ಇಲ್ಲಿ ಜನಪ್ರತಿನಿಧಿಗಳು ಕೋಮು ಗಲಭೆಯಲ್ಲಿಯೂ ರಾಜಕೀಯ ಮಾಡುತ್ತಾರೆ ಎಂದೂ ಒಟ್ಟಾಗುವುದಿಲ್ಲ, ಹೀಗಾಗಿ ಅಧಿಕಾರಿಗಳು ಬೇಳೆ ಬೇಯಿಸಿಕೊಳ್ಳುತ್ತಾರೆ. ಇಲ್ಲಿ ಸರ್ಕಾರಿ ವ್ಯವಸ್ಥೆ ಸರಿ ಆಗುವುದೇ ಇಲ್ಲ'
- ಹನುಮಂತ ಕಾಮತ್, ನಾಗರಿಕ ಹಿತರಕ್ಷಣೆ ಸಮಿತಿ ಅಧ್ಯಕ್ಷ, ಮಂಗಳೂರು



ಕಳೆದ 5-6 ವರ್ಷಗಳಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಕೇಂದ್ರದಲ್ಲಿಯೂ ಕಾಂಗ್ರೆಸ್ ಆಡಳಿತ ನಡೆಸಿದೆ. ಯಾರೂ ಅಭಿವೃದ್ಧಿ ಕಾಮಗಾರಿ ಮಾಡುತ್ತಿಲ್ಲ, ಕೇವಲ ಜಾತಿ, ಧರ್ಮಗಳ ಆಧಾರದಲ್ಲಿ ರಾಜಕೀಯ ನಡೆಯುತ್ತಿದೆ, ಅಭಿವೃದ್ಧಿ ಅಧಾರಿತ ರಾಜಕೀಯ ಮಾಡಿದಾಗ ಮಾತ್ರ ಇಂಥ ಸಮಸ್ಯೆ ಪರಿಹಾರ ಸಾಧ್ಯ. ಹೋರಾಟ ನಡೆಸುವವರ ಜತೆ ನಾವು ಕೈ ಜೋಡಿಸುತ್ತೇವೆ. ಇಲ್ಲವಾದರೆ ನಾವೇ ಹೋರಾಟ ನಡೆಸುತ್ತೇವೆ.
- ಸುದತ್ತ ಜೈನ್ ಶಿರ್ತಾಡಿ, ಅಖಿಲ ಭಾರತ ಕಾರ್ಮಿಕ ಸಂಘ ಪ್ರಧಾನ ಕಾರ್ಯದರ್ಶಿ


ಧರ್ಮಸ್ಥಳ- ಸುಬ್ರಹ್ಮಣ್ಯಕ್ಕೆ ಬಾಡಿಗೆ ಬಂದಿತ್ತು. ಬೇಡ ಎಂದು ಬಿಟ್ಟುಬಿಟ್ಟೆ. ಶಿರಾಡಿ ಘಾಟಿ ಮೂಲಕ ಬಾಡಿಗೆಗೆ ಹೋದರೆ ವಾಪಸ್ ಬರೋವಷ್ಟರಲ್ಲಿ ಬಾಡಿಗೆ ಬಂದ ಹಣಕ್ಕಿಂತ ಹೆಚ್ಚು ಖರ್ಚು ಬರುತ್ತೆ. ವಾಹನ ಹಾಳಾಗಿ ನಷ್ಟ ಮಾಡಿಕೊಳ್ಳಬೇಕು ಎಂದರೆ ಮಾತ್ರ ಆ ರಸ್ತೆಯಲ್ಲಿ ಹೋಗಬೇಕು.
- ಜಿ.ಕಿರಣ್‌ಕುಮಾರ್, ಟ್ಯಾಕ್ಸಿ ಮಾಲೀಕ


ರಸ್ತೆಯಲ್ಲಿ ಗುಂಡಿ ಬಿದ್ದು ಪ್ರಯಾಣಿಕರ ಬೆನ್ನುಮೂಳೆ ಮುರಿದಂತಾಗುತ್ತದೆ. ಕನ್ನಡಪ್ರಭ ಸಂಪಾದಕರಾದ ಭಟ್ ಅವರು ಈ ದಾರಿಯಲ್ಲಿ ಪ್ರಯಾಣಿಸಿದ್ದು ಒಳ್ಳೇಯದಾಯಿತು. ಸರ್ಕಾರ ಗಮನ ಸೆಳೆಯುವ ಶೈಲಿಯಲ್ಲಿ ಲೇಖನ ಬರೆದಿರುವ ಭಟ್ ಅವರಿಗೆ ನನ್ನ ಅಭಿನಂದನೆಗಳು.
- ದೀಪಕ್ ಕಿಣಿ, ಹಾಸನ


ನಾನು ಸಣ್ಣವನಿರುವಾಗಲೇ ಶಿರಾಡಿ ಘಾಟಿ ರಸ್ತೆ ಹಾಳಾಗಿದೆ ಎಂದು ಹೇಳುತ್ತಿದ್ದರು, ಈಗಲೂ ಹಾಳಾಗಿಯೇ ಇದೆ, ಕಾಂಕ್ರಿಟ್ ರಸ್ತೆ, ಚತುಷ್ಪಥ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ ಇದುವರೆಗೆ ಆಗಿಲ್ಲ. ಏನು ಮಾಡೋದು ಇಂಥ ನಾಯಕರನ್ನು ಪಡೆದದ್ದು ನಮ್ಮ ದುರದೃಷ್ಟ.
-ಅಭಿಲಾಷ್ ಜೈನ್, ಸರ್ಕಾರಿ ಡಿಪ್ಲೊಮ ಐಟಿಐ ಕಾಲೇಜ್ ಆದಿಉಡುಪಿ


ಮಂಗಳೂರಿನವರು ಹೋರಾಟಗಳಲ್ಲಿ ಯಾವತ್ತೂ ಹಿಂದೆ. ನಮ್ಮೂರಿನ ಜನಪ್ರತಿನಿಧಿಗಳು ಜನಪರ ಹೋರಾಟ ಮಾಡಿಲ್ಲ. ಪರ್ಯಾಯ ರಸ್ತೆಯಾದ ಮೈಸೂರು, ಮಡಿಕೇರಿ, ಸುಳ್ಯ, ಪುತ್ತೂರು ರಸ್ತೆಯೂ ಕೆಟ್ಟು ಹೋಗಿದೆ. ಹೋರಾಟ ಮಾಡಿಲ್ಲ ಅಂದರೆ ಆ ಭಾಗದಲ್ಲಿ ಪ್ರಯಾಣಿಸುವವರ ಬದುಕು 25 ವರ್ಷ ಕಡಿಮೆ ಆಗುತ್ತದೆ.
-ಸತೀಶ ರೈ, ಕರಾವಳಿ ಕಲಾ ಪ್ರತಿಷ್ಠಾನ, ದೊಡ್ಡಕಲ್ಲಸಂದ್ರ, ಪುತ್ತೂರು


ಪ್ರವಾಸಿಗರು ಇನ್ನುಮುಂದೆ ಸಾವಿರ ರುಪಾಯಿ ಅಧಿಕ ಕೊಟ್ಟರೂ ನಾನು ಈ ರಸ್ತೆಯಲ್ಲಿ ಬರೋದಿಲ್ಲ, ಮುಗ್ದರ ಜೀವ ಹೋಗೋ ಸಂಭವವೇ ಹೆಚ್ಚು.
- ವೆಂಕಟೇಶ್,  ಟೆಂಪೊ ಟ್ರಾವೆಲ್ಸ್ ಚಾಲಕ, ಮೈಸೂರು


ಇಂತಹ ಕಚಡಾ ರೋಡ್‌ನ ನಾನು ಎಲ್ಲೂ ನೋಡಿಲ್ಲ. ಈ ಭಾಗದ ಕೇಂದ್ರ ಹಾಗೂ ರಾಜ್ಯ ಮಂತ್ರಿಗಳು ಒಂದ್ಸಾರಿ ಈ ರಸ್ತೆಯಲ್ಲಿ ತಮ್ಮ ಫ್ಯಾಮಿಲಿ ಜತೆ ಬರಲಿ, ಕಷ್ಟ ಅನ್ನೋದು ಗೊತ್ತಾಗುತ್ತೆ.
- ಪ್ರಕಾಶ್,  ಬೆಂಗಳೂರು


ಸಾಮಾಜಿಕ ಕಳಕಳಿ ಹೊಂದಿ ಶಿರಾಡಿ ರಸ್ತೆಯ ದುಸ್ಥಿತಿಯ ಬಗ್ಗೆ ಕನ್ನಡ ಪ್ರಭದ ಕಾಳಜಿಗೆ ಅನಂತ ಧನ್ಯವಾದಗಳು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ದುರಸ್ತಿ ಮಾಡಲಿ.
-ದಿನೇಶ್ ಮಯ್ಯ, ಪುತ್ತೂರು.


ರಸ್ತೆ ತೆರೆಗಿಯನ್ನು ಪ್ರತಿವರ್ಷ ಸರಿಯಾಗಿ ಪಾವತಿಸ್ತೀವಿ, ಅದರ ಮೇಲೆ ಹತ್ತು ಕಿ.ಮೀ.ಗೆ  ಟೋಲ್ ಬೇರೆ? ಇದನ್ನು ಕಟ್ಟೋದು ಯಾವ ರಸ್ತೆಗೆ ?
- ಮಹೇಶ್ ಕುಮಾರ್, ಲಾರಿ ಚಾಲಕ, ಮಂಗಳೂರು


ರಸ್ತೆಯೇ ಇಲ್ಲ ಬಾಸ್, 20 ಕಿ.ಮೀ. ಅಂತರದಲ್ಲಿ ರಸ್ತೆಯೇ ಕಾಣೆಯಾಗಿದೆ. ರಸ್ತೆ  ಹುಡುಕಿಕೊಡುವಂತೆ ನ್ಯಾಯಲಯಕ್ಕೆ ಮನವಿ  ಮಾಡಬೇಕು.
- ಸುಭಾಷ್,  ಮಂಗಳೂರು.


ಶಿರಾಡಿ ರಸ್ತೆ ಮೃತ್ಯುವಿಗೆ ಆಹ್ವಾನ  ನೀಡಿದಂತಿದೆ. ಇದನ್ನು ರಾಷ್ಟ್ರೀಯ ರಸ್ತೆ ಎನ್ನಲು ಹೇಸಿಗೆಯಾಗುತ್ತದೆ. ನಮ್ಮ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು.
 - ಚೇತನ್, ಪ್ರಯಾಣಿಕ



ಪ್ರತಿ ಬಾರಿ ಬೆಂಗಳೂರಿಂದ ಮಂಗಳೂರಿಗೆ ಹೋಗುವಾಗ ಶಿರಾಡಿ ಘಾಟ್ ದುಃಸ್ವಪ್ನದಂತೆ ಕಾಡುತ್ತದೆ. ಬೆಂಗಳೂರಲ್ಲಿ ಹೊಸ ಕಾರು ಖರೀದಿಸಿ ಊರಿಗೆ ಹೋದಾಗ ಹಳತಾಗಿ ಹೋಗುತ್ತದೆ. ನಮಗೆ ಹೋರಾಟ ಮಾಡಲು ನಾಯಕ ಸಿಕ್ಕಿರಲಿಲ್ಲ. ಈಗ 'ಕನ್ನಡಪ್ರಭ' ಆ ಸ್ಥಾನದಲ್ಲಿ ನಿಂತಿದೆ. ನಾವು ಕರಾವಳಿಯವರು ಒಟ್ಟಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಣಯ ಮಾಡಿದ್ದೇವೆ.
- ಛಾಯಾಪತಿಕೆ, ಸೃಷ್ಟಿಕಲಾ ವಿದ್ಯಾಲಯ, ವಿದ್ಯಾಪೀಠ (ಬೆಂಗಳೂರು), ಮೂಡುಬಿದಿರೆ


ನಮ್ಮೂರಿನ ಹಳ್ಳಿ ರಸ್ತೆಗಳೇ ಡಾಂಬರೀಕರಣಗೊಂಡು ಸಂಚರಿಸಲು ಯೋಗ್ಯವಾಗುತ್ತಿರುವ ಈ  ಸಂದರ್ಭದಲ್ಲಿ ರಸ್ತೆಗಳಿಗೆ ರಾಜನಾಗಿರುವ ಶಿರಾಡಿ ರಸ್ತೆ ಗುಂಡಿಮಯವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿ ಸಾಕಷ್ಟು ಅಪಘಾತಗಳಾಗಿದ್ದರೂ ಸರ್ಕಾರಕ್ಕೆ ಇನ್ನೂ ಬುದದ್ಧಿ ಬಂದಿಲ್ಲ. ಈ ಬಗ್ಗೆ ಕನ್ನಡಪ್ರಭ ಬೆಳಕು ಚೆಲ್ಲುವ ಮೂಲಕ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ.
- ರೂಪ ಜಗದೀಶ್, ಹಾಸನ

ಶಿರಾಡಿ ಘಾಟಿ ಹಾಳಾಗಿ ನನ್ನ ಒಂದು ದಿನದ ರಜೆ ಹಾಳಾಗುತ್ತೆ. ಬೆಂಗಳೂರಿನ ಮನೆಯಿಂದ ರಾತ್ರಿ ಮಂಗಳೂರಿಗೆ ಹೊರಟರೆ ಮರುದಿನ ಬೆಳಗ್ಗೆ ಕಾಲೇಜ್‌ಗೆ (ಎಸ್‌ಡಿಎಂ) ಹೋಗೋಕೆ ಆಗೋಲ್ಲ. ಹೀಗಾಗಿ ಒಂದು ದಿನ ಮುಂಚಿತವಾಗಿ ಬರುತ್ತೇನೆ. ಘಾಟಿ ಬೇಗ ದುರಸ್ತಿಯಾದರೆ ನಾನು ಒಂದು ದಿನ ಹೆಚ್ಚು ಮನೆಯಲ್ಲಿ ಕಳೆಯಬಹುದು.
- ಶ್ರುತಿ ಎ.ಎಚ್.,ಎಸ್‌ಡಿಎಂ ಕಾಲೇಜ್, ಮಂಗಳೂರು


ಶಿರಾಡಿ ಘಾಟಿ ನಿರ್ಲಕ್ಷ್ಯದ ಪರಮಾವಧಿ. ಜಿಲ್ಲೆಯಲ್ಲಿಯೇ 5 ಸಚಿವರಿದ್ದುಕೊಂಡು ಕೈಲಾಗದವರಂತೆ ಇದ್ದಾರೆ. ಇವರು ಸ್ವಂತ ಅಭಿವೃದ್ಧಿಗೆ ಮಾತ್ರ ಸಚಿವರು. ಸಾಮೂಹಿಕ ಧಂಗೆ ಹೇಳಬೇಕು, ಧಾರ್ಮಿಕ ವಿಚಾರವಾಗಿ ಒಟ್ಟಾಗುವ ಸಂಘಟನೆಗಳು ಅದೇ ಹುಮ್ಮಸ್ಸಿನಲ್ಲಿ ಸಾಮಾಜಿಕ ಸಂಘಟನೆಗಳ ಜತೆ ಸೇರಿ ಹೋರಾಟಕ್ಕೆ ಧುಮುಕಬೇಕು.
- ಡಾ.ಅಣ್ಣಯ್ಯ ಕುಲಾಲ್, ಮಂಗಳೂರಿನ ಕನ್ನಡ ಕಟ್ಟೆ ಅಧ್ಯಕ್ಷ 



ರಾಡಿ ಎಬ್ಬಿಸಿರುವ ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರಯಾಣ ಮಾಡುವುದೆಂದರೆ ನಿಜಕ್ಕೂ 'ಭೀಕರ ಅನುಭವ'. ಡಿ.23ರಂದು ನಾನು ನನ್ನ ಕುಟುಂಬ ಜತೆ ಪುತ್ತೂರಿನಿಂದ ಬೆಂಗಳೂರಿಗೆ ಬರುತ್ತಿದೆ. 20 ಕಿಮೀ ದೂರ ಹಳ್ಳದಿಂದ ಕೂಡಿದ ರಸ್ತೆಯನ್ನು ಕ್ರಮಿಸಲು ನಮಗೆ ಬೇಕಾಗಿದ್ದ ಸಮಯ ಬರೋಬ್ಬರಿ ಒಂದು ಗಂಟೆ ಐವತ್ತು ನಿಮಿಷ. ನಮ್ಮ ಟ್ಯಾಕ್ಸಿಯ ಚಾಲಕ ಪ್ರಸಾದ್ ಈ ಸಂದರ್ಭದಲ್ಲಿ ಹೇಳಿದ ಮಾತು ಗಮನಾರ್ಹವಾಗಿತ್ತು. ಈಗ ಬೆಳಗ್ಗೆ 7 ಗಂಟೆಗೆ ಮಂಗಳೂರು ಅಥವಾ ಪುತ್ತೂರಿನಿಂದ ಬೆಂಗಳೂರಿಗೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಲ್ಲಿ ಅನ್ನ ರೆಡಿ ಮಾಡಿಕೊಂಡು ಊಟ ಮಾಡುವ ದಿನವಿದು. ಅಂಥದ್ದರಲ್ಲಿ 20 ಕಿ.ಮೀ ದೂರ ಕ್ರಮಿಸಲು ಒಂದು ಗಂಟೆ ಐವತ್ತು ನಿಮಿಷ ನಿಜಕ್ಕೂ ನಾಚಿಕೆ ವಿಚಾರ ಎನ್ನುತ್ತಾರೆ ಅವರು. ಶಿರಾಡಿ ಘಾಟ್ ರಸ್ತೆ ಹಾಳಾಗಿದ್ದ ಬಗ್ಗೆ ಕೇಳಿದ್ದೆ. ಪ್ರಯಾಣದ ದಿನ ಮೊಣಕಾಲು ನಿಲ್ಲುವ ವರೆಗೆ ಗುಂಡಿ ಬಿದ್ದದ್ದು ಕಂಡು ದಂಗಾದೆ. ರಾಜ್ಯದ ಪ್ರಮುಖ ಬಂದರು ನಗರಿ ಮಂಗಳೂರನ್ನು ಸಂಪರ್ಕಿಸುವ ರಸ್ತೆ ದಶಕದಿಂದ ಹಾಳಾಗಿದ್ದರೂ ಯಾರೂ ಮುತುವರ್ಜಿ ವಹಿಸುತ್ತಿಲ್ಲ ಎಂದಾದರೆ ಅಂಥ ನಾಯಕರು ಯಾವ ದಂಡಕ್ಕೆ ಇರಬೇಕು? ಮಂಗಳೂರು ಮತ್ತು ಹಾಸನ ಪರಿಸರದಲ್ಲಿ ಮಾತೆತ್ತಿದ್ದರೆ ಮಾರುದ್ದ ಭಾಷಣ ಮಾಡುವವರು ಸಮಸ್ಯೆ ಗಮನಿಸುವರೇ?
- ಸದಾಶಿವ ಕೆ. ಸಂಪ್ಯ, ಪುತ್ತೂರು




ಶಿರಾಡಿ ಘಾಟ್ ಹೆದ್ದಾರಿ ದುರಸ್ತಿಗೆ ಕೇಂದ್ರ 100 ಕೋಟಿ ಬಿಡುಗಡೆ ಮಾಡಿದೆ. ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದಲ್ಲದೆ ತುರ್ತು ದುರಸ್ತಿಗೆ 4 ಕೋಟಿ ನೀಡಲಾಗಿದೆ. ದುರಸ್ತಿ ನಡೆಯುತ್ತಿದೆ. ಡಿ.30ಕ್ಕೆ ಕೇಂದ್ರ ಭೂಸಾರಿಗೆ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ದುರಸ್ತಿ ವಿಚಾರದಲ್ಲಿ ಅಧಿಕಾರಿಗಳ ಸಭೆ ಕರೆಯಲಿದ್ದಾರೆ.
- ರಮಾನಾಥ ರೈ, ಉಸ್ತುವಾರಿ ಸಚಿವರು, ದ.ಕ.ಜಿಲ್ಲೆ



ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಶಿರಾಡಿ ಘಾಟಿ ದುರಸ್ತಿಗೆ ಕೂಡಲೇ ಎರಡು ಬಾರಿ ಅನುದಾನ ನೀಡಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ. ಬಿಜೆಪಿ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದಾಗ ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳು ತ್ವರಿತ ಸ್ಪಂದಿಸುವ ಭರವಸೆ ನೀಡಿದ್ದರು. 10 ದಿನ ಗಡುವು ನೀಡುತ್ತೇವೆ. ಇಲ್ಲದಿದ್ದರೆ ಹೆದ್ದಾರಿ ಬಂದ್ ಮಾಡುತ್ತೇವೆ
- ನಳಿನ್ ಕುಮಾರ್ ಕಟೀಲ್, ಸಂಸದ, ದ.ಕ.



ಶಿರಾಡಿ ಘಾಟ್‌ಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಕಳೆದ ತಿಂಗಳು ಭೇಟಿ ನೀಡಿದ್ದರು. ಹೆದ್ದಾರಿ ದುಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈಗ ಕಾಮಗಾರಿಗೆ ಮೊತ್ತ ಬಿಡುಗಡೆ ಮಾಡಿದ್ದು, ಶೀಘ್ರವೇ ಟೆಂಡರ್ ಆಗಿ ಕಾಮಗಾರಿ ಪ್ರಾರಂಭಿಸುವ ವಿಶ್ವಾಸವಿದೆ.
- ಶಕುಂತಳಾ ಶೆಟ್ಟಿ, ಶಾಸಕರು, ಪುತ್ತೂರು

ಬೆಂಗಳೂರಿಂದ ಹಾಸನಕ್ಕೆ 2 ಗಂಟೆ ದಾರಿ, ಸಕಲೇಶಪುರದಿಂದ ಗುಂಡ್ಯವರೆಗೆ 40 ಕಿ.ಮೀ. ಕಾರ್‌ನಲ್ಲಿ ಹೋಗಲು 2 ಗಂಟೆ ಸಾಕಾಗುವುದಿಲ್ಲ. ಕಾರುಗಳು ಗುಂಡಿಯಲ್ಲಿಯೇ ಕುಳಿತು ಬಿಡುತ್ತವೆ. ಎಷ್ಟೋ ಬಾರಿ ಇಲ್ಲಿನ ಟ್ರಾಫಿಕ್ ಜಾಮ್‌ನಿಂದ ಕೆಲಸಕ್ಕೆ ಹೋಗಲು ಕಷ್ಟವಾಗಿದೆ.
- ಗುರುಪ್ರಸಾದ್ ಭಟ್, ಸಾಫ್ಟ್‌ವೇರ್ ಎಂಜಿನಿಯರ್


ಸಕಲೇಶಪುರದಿಂದ ಶಿರಾಡಿ ಘಾಟ್ ರಸ್ತೆ ದಾಟುವುದರೊಳಗೆ ಕಾರಿನ ಟಯರ್‌ಗೆ ಕನಿಷ್ಠ 1 ಪಂಕ್ಚರ್ ಗ್ಯಾರಂಟಿ. ತೀರಾ ಕೆಟ್ಟಿರುವ ಆ ರಸ್ತೆಯಲ್ಲಿ ವಾಹನ ಸಾಗಿದರೆ ಟಯರ್ ಬಾಳಿಕೆ ಬರುವುದಿಲ್ಲ. ಸಸ್ಪೆನ್ಷನ್ ಕೈಕೊಡುತ್ತದೆ.
-ರಮೇಶ್, ಶ್ರೀಗುರು ಟ್ರಾವೆಲ್ಸ್


ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸಿದರೆ ವಾಹನ ಮಾತ್ರವಲ್ಲ, ಆರೋಗ್ಯವೂ ಹಾಳು. ಆ ಮಾರ್ಗದಲ್ಲಿ ಒಂದು ಬಾರಿ ಸಂಚರಿಸಿದವರಿಗೆ ಕೆಲದಿನಗಳ ಮಟ್ಟಿಗೆ ಬೆನ್ನುನೋವು ಬೋನಸ್ ಆಗಿ ಸಿಗುತ್ತದೆ.
-ಕಾರ್ತಿಕ್ ಪ್ರಸಾದ್, ಎಂಜಿನಿಯರ್, ಬೆಂಗಳೂರು


ಪ್ರತಿಭಟನೆ ಮಾಡಲು ಈಗ ಜನ, ಹಣ, ಸಮಯ ಒಟ್ಟಾಗುವುದು ಇಲ್ಲಿ ದುರ್ಲಭ. ಕೋರ್ಟ್‌ನಲ್ಲಿಯೇ ಸರ್ಕಾರವನ್ನು ಪ್ರಶ್ನಿಸಬೇಕು. ಇದೇ ಸುಲಭದ ದಾರಿ. ಹೈಕೋರ್ಟ್‌ಗೆ ಹೋಗುವವರಿಗೆ ಮಾರ್ಗದರ್ಶನ ನೀಡಬೇಕು.
- ರವೀಂದ್ರನಾಥ ಶ್ಯಾನ್‌ಭಾಗ್, ಬಳಕೆದಾರರ ಹಕ್ಕು ಹೋರಾಟಗಾರ, ಉಡುಪಿ

ವೋಲ್ವೋ ಬಸ್ಸನ್ನು ಶಿರಾಡಿ ಮಾರ್ಗದಲ್ಲಿ ಚಲಾಯಿಸುವುದೇ ದೊಡ್ಡ ರಿಸ್ಕ್. ಆ ರಸ್ತೆಯಲ್ಲಿ ಬಸ್ಸಿನ ಕೆಳಭಾಗ ಒಂದಲ್ಲ ಒಂದು ಕಡೆ ನೆಲಕ್ಕೆ ತಾಗಿ ಬಿಡುತ್ತದೆ. ಹೊಂಡಗಳಿಗಿಳಿದು ಸಾಗುವ ಬಸ್ಸಿನ ಓಲಾಟಕ್ಕೆ ಆ್ಯಂಟಿ ರೋಲ್ ಬಾರ್ ತುಂಡಾಗುತ್ತದೆ. ನಮ್ಮಿಂದಲೇ ದಂಡ ವಸೂಲಿ ಮಾಡುಲಾಗುತ್ತದೆ. ಹಾನಿಗಾಗಿ ಪ್ರತಿ ತಿಂಗಳ ವೇತನದಲ್ಲೂ 1 ಸಾವಿರಕ್ಕೂ ಅಧಿಕ ಹಣ ದಂಡಕ್ಕೆ ಕಡಿತವಾಗುತ್ತಿದೆ.
- ಕೆಎಸ್‌ಆರ್‌ಟಿಸಿ ಬಸ್ ಚಾಲಕ (ಹೆಸರು ಮುದ್ರಿಸಬೇಡಿ ಎಂದಿದ್ದಾರೆ)



ಶಿರಾಡಿ ಘಾಟ್‌ನಲ್ಲಿ ರಸ್ತೆ ಎಲ್ಲಿದೆ? ಅಲ್ಲಿರುವುದು ಬರೀ ಹೊಲ ಅಷ್ಟೇ. ರಸ್ತೆ ಎಷ್ಟು ಕೆಟ್ಟಿದೆ ಎಂದರೆ ಅಲ್ಲಿನ 30 ಕಿ.ಮೀ. ಉದ್ದದ 'ಘಾಟಿ' ರಸ್ತೆ ಕ್ರಮಿಸಲು ಮೂರೂವರೆ ಗಂಟೆ ಬೇಕು. ಮಳೆಗಾಲದಲ್ಲಂತೂ ಯಾವಾಗ ಮಣ್ಣು ಕುಸಿಯುತ್ತೆ, ಮರ ವಾಹನದ ಮೇಲೆ ಬೀಳುತ್ತೆ ಎನ್ನುವುದೇ ಕಷ್ಟ.

- ನಟೇಶ್, ಕಾರು ಚಾಲಕ




ಆಸ್ಕರ್, ವೀರಪ್ಪ ಮೊಯ್ಲಿ, ಜಯಪ್ರಕಾಶ್ ಹೆಗ್ಡೆ ಮುಂತಾದ ಪ್ರಬಲ ನಾಯಕರು ರಾಜಕೀಯದಲ್ಲಿದ್ದೂ ಶಿರಾಡಿ ಘಾಟ್ ರಸ್ತೆ ದುರಸ್ತಿ ಆಗಿಲ್ಲ ಎಂದರೆ ಅದು ದೊಡ್ಡ ದುರಂತ. ಅವರೆಲ್ಲ ಮನಸ್ಸು ಮಾಡಿದರೆ 30 ಕಿ.ಮೀ.ನಷ್ಟಿರುವ ಘಾಟ್ ರಸ್ತೆಯನ್ನು ಸುಸ್ಥಿತಿಗೆ ತರುವುದು ದೊಡ್ಡ ವಿಷಯವಲ್ಲ.

- ಕೆ.ರಾಧಾಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ



ಮೊನ್ನೆಯಷ್ಟೇ ಊರಿಂದ ಬಂದೆ. ಶಿರಾಡಿ ಘಾಟ್ ರಸ್ತೆ ದುರವಸ್ಥೆ ನೋಡಿ ಅದರ ಸಹವಾಸವೇ ಸಾಕೆನಿಸಿದೆ. ರಸ್ತೆ ಎಷ್ಟರಮಟ್ಟಿಗೆ ಕೆಟ್ಟಿದೆ ಎಂದರೆ ಸ್ವಂತ ವಾಹನದಲ್ಲಿ ಆ ರಸ್ತೆ ಮೂಲಕ ಸಾಗಬೇಕೆಂದರೆ ವ್ಯಥೆಯಾಗುತ್ತದೆ.  ಅಲ್ಲಿ ಪ್ರಯಾಣಿಸಲು ಬುಲ್‌ಡೋಜರ್ರೇ ಸರಿ.

- ಸುಧಾಕರ ಶೆಟ್ಟಿ, ಹೊಟೇಲ್ ಉದ್ಯಮಿ, ಬೆಂಗಳೂರು


ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಆಗಿದ್ದ ವ್ಯಕ್ತಿಯೊಬ್ಬರು 15 ದಿನಗಳ ಹಿಂದೆ ಬೇರೆ ಸಂಸ್ಥೆಯ ಬಸ್ಸಿನಲ್ಲಿ ಇದೇ ದಾರಿಯಲ್ಲಿ ಮಂಗಳೂರಿಗೆ ಹೋಗುತ್ತಿದ್ದರು. ಸಕಲೇಶಪುರದವರೆಗೆ ಚೆನ್ನಾಗೇ ಇದ್ದರು. ಆದರೆ, ಶಿರಾಡಿ ಘಾಟ್‌ನ ಪ್ರಯಾಣ ಮುಗಿಸಿ ಮಂಗಳೂರು ತಲುಪುವಷ್ಟರಲ್ಲಿ ಅವರು ಸತ್ತೇ ಹೋಗಿದ್ದರು.


- ಕೆ.ವಿ.ತಾರಾನಾಥ್,  ವಿಆರ್‌ಎಲ್ ಬಸ್ ಚಾಲಕ

ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement