ಪಾತಕಿಗಳಿಗೆ ಎನ್ಕೌಂಟರ್ ಬಿಸಿ ಮುಟ್ಟಿಸಿದ ಉಕ ಪೊಲೀಸರು
ವಸಂತಕುಮಾರ್ ಕತಗಾಲ
ಕ.ಪ್ರ.ವಾರ್ತೆ ಕಾರವಾರ ಡಿ.29
ಈಚೆಗೆ ಅನಿರೀಕ್ಷಿತವಾಗಿ ದಾಳಿ ನಡೆಸಿದ ಭೂಗತಲೋಕದ ಪಾತಕಿಯನ್ನು ಎನ್ಕೌಂಟರ್ ಮೂಲಕ ಬಲಿಹಾಕಿದ್ದ ಇಲ್ಲಿನ ಪೊಲೀಸರು, ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭೂಗತಲೋಕಕ್ಕೂ ಸವಾಲೆಸೆದಿದ್ದಾರೆ.
ಅಂಕೋಲಾದ ಉದ್ಯಮಿ, ಬಿಜೆಪಿ ಮುಖಂಡ ಆರ್.ಎನ್.ನಾಯಕ ಅವರನ್ನು ನಾಲ್ವರು ಸುಪಾರಿ ಕಿಲ್ಲರ್ಗಳು ಹೊಂಚು ಹಾಕಿ ಗುಂಡೇಟಿನಿಂದ ಹತ್ಯೆ ಮಾಡುತ್ತಿದ್ದಂತೆ, ಜೀವದ ಹಂಗು ತೊರೆದು ಬೆನ್ನಟ್ಟಿದ ಅವರ ಅಂಗರಕ್ಷಕ ರಮೇಶಗೌಡ ಹಂತಕನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದು ಉತ್ತರ ಕನ್ನಡ ಪೊಲೀಸ್ ಇಲಾಖೆ ಭೂಗತಲೋಕದ ಪಾತಕಿಗಳ ಎದುರು ಕೈಕಟ್ಟಿಕೊಂಡು ಕುಳಿತುಕೊಂಡಿಲ್ಲ. ಎನ್ಕೌಂಟರ್ಗೆ ನಾವೂ ರೆಡಿಯಾಗಿದ್ದೇವೆ ಎಂಬ ಸಂದೇಶವನ್ನು ಭೂಗತ ಲೋಕಕ್ಕೆ ಮುಟ್ಟಿಸುವಲ್ಲಿ ಸಫಲವಾಗಿದೆ.
ಈ ಹಿಂದೆ ಭಟ್ಕಳ ಶಾಸಕ ಚಿತ್ತರಂಜನ್, ಕಾರವಾರ ಶಾಸಕ ವಸಂತ ಅಸ್ನೋಟಿಕರ್, ಭಟ್ಕಳ ಬಿಜೆಪಿ ಮುಖಂಡ ತಿಮ್ಮಪ್ಪ ನಾಯ್ಕ ಹತ್ಯೆಯಾದಾಗ ಹಂತಕರನ್ನು ಬೇಟೆಯಾಡಲು ಸಾಧ್ಯವಾಗಿರಲಿಲ್ಲ. ಈಗ ಕಾರವಾರ ಶಾಸಕರಾಗಿರುವ ಸತೀಶ ಸೈಲ್ ನಿವಾಸದ ಎದುರು ಗುಂಡಿನ ಹಾರಾಟ ನಡೆಸಿದರಾದರೂ ಆರೋಪಿ ಯಾರೆಂದು ಇದುವರೆಗೂ ಪತ್ತೆಯಾಗಿಲ್ಲ. ಆದರೆ, ಇದೆ ಮೊದಲ ಬಾರಿಗೆ ಪೊಲೀಸರು ಇಂಥ ಸಾಧನೆ ಮಾಡಿದ್ದಾರೆ.
4 ವರ್ಷದ ಹಿಂದೆನಿಂದಲೂ ಬೆದರಿಕೆ: ಹಾಗೆ ನೋಡಿದರೆ ಆರ್.ಎನ್.ನಾಯಕ ಅವರಿಗೆ 4 ವರ್ಷಗಳ ಹಿಂದಿನಿಂದ ಬೆದರಿಕೆ ಇತ್ತು. ಇದಕ್ಕಾಗಿಯೇ ಪೊಲೀಸ್ ಇಲಾಖೆ ಅಂಗರಕ್ಷಕನನ್ನು ನೀಡಿತ್ತು. ನಾಯಕ್ ಅವರಿಗೆ ಅಂಗರಕ್ಷಕರಾಗಿದ್ದ ರಮೇಶಗೌಡ ಎಂಬಾತನಿಗೆ ವಿಶೇಷ ತರಬೇತಿ ನೀಡಲಾಗಿತ್ತು. ಆದರೆ, ಇತ್ತೀಚಿನವರೆಗೂ ನಾಯಕ್ ಅವರಿಗೆ ಬೆದರಿಕೆ ಕರೆಯೂ ಬಂದಿರಲಿಲ್ಲ. ಜೊತೆಗೆ ಗುಪ್ತದಳದ ಯಾವೊಂದು ಸೂಚನೆಯೂ ಇರದೆ ಹಠಾತ್ ದಾಳಿಯಾದಾಗ ಅಂಗರಕ್ಷಕ ಪ್ರತಿದಾಳಿ ನಡೆಸುವಲ್ಲಿ ಸಫಲವಾಗಿದ್ದ. ಜಿಲ್ಲೆಯ ಪೊಲೀಸರು ಈಗ ಎನ್ಕೌಂಟರ್ ಮಾಡಲೂ ಹೇಸುವುದಿಲ್ಲ. ಯಾವುದೆ ಸಂದರ್ಭ ಬಂದರೂ ಎದುರಿಸಲು ಸಜ್ಜಾಗಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ವಿಶ್ವಾಸ ತುಂಬಿದರು: ಮಾಧ್ಯಮಗಳ ಮೂಲಕ ಭೂಗತಲೋಕದ ವ್ಯಕ್ತಿ ತಾನೇ ನಾಯಕ ಅವರನ್ನು ಹತ್ಯೆ ಮಾಡಿಸಿದ್ದು ಎಂದು ಹೇಳಿಕೊಂಡಾಗ ಆರ್.ಎನ್. ನಾಯಕ್ ಅವರ ಮನೆಗೆ ಹೆಚ್ಚಿನ ಈಚೆಗೆ ಅನಿರೀಕ್ಷಿತವಾಗಿ ದಾಳಿ ನಡೆಸಿದ ಭೂಗತಲೋಕದ ಭದ್ರತೆ ಒದಗಿಸಿ, ಅವರ ಕುಟುಂಬದವರಿಗೆ ಆತ್ಮವಿಶ್ವಾಸ ಮೂಡುವಂತೆ ಮಾಡುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಆರ್. ದಿಲೀಪ್ ಸ್ವತಃ ಅಂಕೋಲಾದಲ್ಲಿ ನಿಂತು ಪೊಲೀಸರಿಗೆ ಹಾಗೂ ನಾಯಕ ಅವರ ಕುಟುಂಬದವರಿಗೆ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸ್ವತಃ ನಾಯಕ ಕುಟುಂಬದವರೂ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಆರ್.ದಿಲೀಪ್ ಅಧಿಕಾರ ವಹಿಸಿಕೊಂಡ ತರುವಾಯ ಎಲ್ಲ ಪ್ರಕರಣಗಳನ್ನೂ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರವಾರದ ಉದ್ಯಮಿ ಉಲ್ಲಾಸ ನೇತಲಕರ್ ಹಾಗೂ ಕುಟುಂಬದವರ ಮೇಲೆ ಗುಂಡಿನ ದಾಳಿ ನಡೆಸಿ ಉತ್ತರ ಭಾರತದ ಆಗ್ರಾಕ್ಕೆ ಪಲಾಯನ ಮಾಡಿದ ಎಲ್ಲ ಆರೋಪಿಗಳನ್ನು ಬಂಧಿಸಿದ್ದು ಮಹತ್ವದ ಸಾಧನೆಯಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ, ತರಬೇತಿ, ಆತ್ಮವಿಶ್ವಾಸ ತುಂಬಿ ಯಾವುದೆ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಇಡಿ ಇಲಾಖೆಯನ್ನು ಸಜ್ಜುಗೊಳಿಸುತ್ತಿದ್ದಾರೆ ಆರ್.ದಿಲೀಪ್.
ನುಂಗಲಾರದ ತುತ್ತು!: ಜಿಲ್ಲೆಯಲ್ಲಿ ನಡೆಯುತ್ತಿರುವ ಜೂಜಾಟ, ಅಕ್ರಮ, ಅಪರಾಧಗಳ ವಿರುದ್ಧ ತಿರುಗಿ ಬಿದ್ದಿರುವ ಜಿಲ್ಲಾ ಪೊಲೀಸ್ ವರಿಷ್ಠರು ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ಈ ಅಕ್ರಮಗಳ ಪೋಷಕರು, ಸೂತ್ರಧಾರರಿಗೆ ನುಂಗಲಾರದ ತುತ್ತಾಗಿದ್ದಾರೆ. ಯಾವುದೆ ಘಟನೆ ನಡೆದಾಗ ದುಷ್ಕೃತ್ಯ, ದುಷ್ಕರ್ಮಿಗಳ ವಿರುದ್ಧ ಇಡಿ ಸಮಾಜ ಒಂದಾಗಿ ನಿಂತು ನಮ್ಮ ಆಡಳಿತ ವ್ಯವಸ್ಥೆಗೆ ಪೂರಕವಾಗಿ ನಿಲ್ಲುವುದನ್ನು ಬಿಟ್ಟು ಪೊಲೀಸರ ಹಾಗೂ ಸಂಬಂಧಪಟ್ಟ ಇಲಾಖೆಯ ಆತ್ಮವಿಶ್ವಾಸವನ್ನೇ ಕುಗ್ಗಿಸುವ ಮಾತುಗಳು ಕೇಳಿಬರುವುದನ್ನು ಪ್ರಜ್ಞಾವಂತ ನಾಗರಿಕರು ಖಂಡಿಸುತ್ತಿದ್ದಾರೆ. ರಾಜಕೀಯ ಪ್ರೇರಿತವಾದ ಕೆಲ ಹೇಳಿಕೆಗಳು ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವ ಮಟ್ಟಕ್ಕೂ ಹೋಗುತ್ತಿರುವುದು ವಿಪರ್ಯಾಸವಾಗಿದೆ.
ಏನೇ ಆಗಲಿ. ಜಿಲ್ಲೆಯ ಪೊಲೀಸರು ಪ್ರಥಮ ಬಾರಿಗೆ ಸಿಡಿದು ನಿಂತಿದ್ದಾರೆ. ಭೂಗತ ಲೋಕದ ಪಾತಕಿಗಳ ವಿರುದ್ಧವೂ ಎದೆ ಸೆಟೆದು ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂಬ ಸಂದೇಶವನ್ನು ಬುಲೆಟ್ ಮೂಲಕವೇ ನೀಡಿದ್ದಾರೆ.