ಸ್ಕೀಯಿಂಗ್ ಅಪಘಾತ ಶುಮಾಕರ್ ತಲೆಗೆ ಪೆಟ್ಟು
7 ಬಾರಿ ಫಾರ್ಮುಲಾ-1 ವಿಶ್ವ ಚಾಂಪಿಯನ್‌ಷಿಪ್ ಅನ್ನು ಮುಡಿಗೇರಿಸಿಕೊಂಡ ರೇಸಿಂಗ್ ಡ್ರೈವರ್ ಮೈಕೆಲ್ ಶುಮಾಕರ್ ಸ್ಕೀಯಿಂಗ್ ಅಪಘಾತದಲ್ಲಿ ಗಂಭೀರ ...
ಪ್ಯಾರಿಸ್: 7 ಬಾರಿ ಫಾರ್ಮುಲಾ-1 ವಿಶ್ವ ಚಾಂಪಿಯನ್‌ಷಿಪ್ ಅನ್ನು ಮುಡಿಗೇರಿಸಿಕೊಂಡ ರೇಸಿಂಗ್ ಡ್ರೈವರ್ ಮೈಕೆಲ್ ಶುಮಾಕರ್ ಸ್ಕೀಯಿಂಗ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಭಾನುವಾರ ಫ್ರಾನ್ಸ್‌ನ ಮೆರಿಬಲ್‌ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಶುಮಾಕರ್ ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಕೀಯಿಂಗ್(ಹಿಮಹಾವುಗೆ) ಎಂದರೆ ಶುಮಾಕರ್ ಅವರಿಗೆ ಪಂಚಪ್ರಾಣ. ಹೀಗಾಗಿ ಅವರು ಬೆಳಗ್ಗೆಯೇ ಸ್ಕೀಯಿಂಗ್‌ನಲ್ಲಿ ತೊಡಗಿದ್ದರು. ಈ ವೇಳೆ ಅಪಘಾತ ಸಂಭವಿಸಿ, ಅವರು ಕೆಳಕ್ಕೆ ಬಿದ್ದಿದ್ದಾರೆ. ಅವರ ಮೆದುಳಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ಗ್ರೆನೋಬಲ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಒಯ್ಯುವಾಗ ಅವರು ಪ್ರಜ್ಞಾವಸ್ಥೆಯಲ್ಲಿದ್ದರು ಎನ್ನಲಾಗಿದೆ. ಆದರೆ, ನಂತರದ ಅವರ ಸ್ಥಿತಿ ಬಗ್ಗೆ ಅಧಿಕೃತ ವರದಿ ಬಿಡುಗಡೆಯಾಗಿಲ್ಲ. ವಿಶ್ವದಲ್ಲೇ ಅಪ್ರತಿಮ ರೇಸ್ ಕಾರು ಚಾಲಕ ಎಂದೇ ಪ್ರಸಿದ್ಧಿ ಗಳಿಸಿರುವ ಶುಮಾಕರ್ 2012ರಲ್ಲಿ ತಮ್ಮ ವೃತ್ತಿಗೆ ವಿದಾಯ ಹೇಳಿದ್ದರು.