ಅನ್ನದ ಬಟ್ಟಲಲ್ಲಿ ವಿಷವಿಟ್ಟು ಆಲೂ ಬೆಳೆಗಾರರ ಪ್ರತಿಭಟನೆ
ಆಲೂಗಡ್ಡೆ ಬೆಳೆದು ನಷ್ಟ ಅನುಭವಿಸಿದ ರೈತರಿಗೆ 2 ಕೋಟಿಗೂ ಅಧಿಕ ಪರಿಹಾರ ನೀಡಲು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...
ಬೆಳಗಾವಿ: ಆಲೂಗಡ್ಡೆ ಬೆಳೆದು ನಷ್ಟ ಅನುಭವಿಸಿದ ರೈತರಿಗೆ 2 ಕೋಟಿಗೂ ಅಧಿಕ ಪರಿಹಾರ ನೀಡಲು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಅನ್ನದ ಪಾತ್ರೆಯಲ್ಲಿ ವಿಷ ಇಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜ.7ರ ಒಳಗೆ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಜಾನುವಾರು, ಚಕ್ಕಡಿಗಳ ಸಮೇತ ಕುಟುಂಬದೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನೂರಾರು ರೈತರು ಅನ್ನದ ಪಾತ್ರೆಯಲ್ಲಿ ವಿಷದ ಬಾಟಲಿ (ಬೆಳೆಗೆ ಹೊಡಿಯುವ ಕೀಟನಾಶಕ) ಇಟ್ಟುಕೊಂಡು ಆಗಮಿಸಿದ್ದರು. ಇದನ್ನು ಗಮನಿಸಿದ ಕರ್ತವ್ಯನಿರತ ಮಾರ್ಕೆಟ್ ಪಿಎಸ್ಐ ಕಾಲೀ ಮಿರ್ಚಿ ಕೂಡಲೆ ರೈತರ ಮನವೊಲಿಸಿ ವಿಷದ ಬಾಟಲಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಅಪ್ಪಾ ಸಾಹೇಬ ದೇಸಾಯಿ, ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಸರ್ಕಾರ ಪರಿಹಾರ ನೀಡುವ ಬದಲು ಬದುಕಿದ್ದಾಗ ಅವನ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.