ಕನ್ನಡಪ್ರಭ ಕಾಳಜಿಗೆ ಸ್ಪಂದಿಸಿದ ಕೇಂದ್ರ ಸಚಿವ ಆಸ್ಕರ್, ತಿಂಗಳಲ್ಲಿ ಶಿರಾಡಿ ದುರಸ್ತಿ
ಅಂತೂ ಜನವರಿ ಕೊನೆ ಹೊತ್ತಿಗೆ ಶಿ'ರಾಡಿ' ದರ್ಶನಕ್ಕೆ ಮುಕ್ತಿ ಸಿಗುವ ಸಾಧ್ಯತೆ ಇದೆ. ಮಂಗಳೂರು..
ಮಂಗಳೂರು: ಅಂತೂ ಜನವರಿ ಕೊನೆ ಹೊತ್ತಿಗೆ ಶಿ'ರಾಡಿ' ದರ್ಶನಕ್ಕೆ ಮುಕ್ತಿ ಸಿಗುವ ಸಾಧ್ಯತೆ ಇದೆ.
ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್‌ನ ನುಜ್ಜುಗುಜ್ಜು ನಿವಾರಿಸಲು ಕೊನೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಕಲ್ಪ ಮಾಡಿವೆ. 'ಕನ್ನಡಪ್ರಭ'ದಲ್ಲಿ ನಿರಂತರವಾಗಿ ಪ್ರಕಟವಾದ 'ಶಿ'ರಾಡಿ' ದರ್ಶನ' ವಿಶೇಷ ವರದಿಯಿಂದ ಮೈಕೊಡವಿ ಮೇಲೆದ್ದ ಕೇಂದ್ರ ಹಾಗೂ ರಾಜ್ಯ ಹೆದ್ದಾರಿ ಸಚಿವರು ಸೋಮವಾರ ಮಂಗಳೂರಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಶಿ'ರಾಡಿ'ಯನ್ನು ಹೊಂಡಮುಕ್ತಗೊಳಿಸುವ ಭರವಸೆ ನೀಡಿದ್ದಾರೆ.
ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಒಂದೂವರೆ ಗಂಟೆ ಕಾಲ ಹೆದ್ದಾರಿ ಅಧಿಕಾರಿಗಳ ಸಭೆ ನಡೆಸಿದರು. 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಶಿರಾಡಿ ಘಾಟ್ ಕುರಿತು ಸರಣಿ ವರದಿಯನ್ನು ಸಭೆಯಲ್ಲಿ ಅಧಿಕಾರಿಗಳ ಮುಂದಿಟ್ಟು ಎಚ್ಚರಿಕೆ ನೀಡಿದರು. ಇದೇ ವೇಳೆ ಅಧಿಕಾರಿಗಳು ತಾವು ಸಿದ್ಧಪಡಿಸಿದ 18 ತಿಂಗಳ ಕಾಮಗಾರಿ ಯೋಜನೆಯ ರೂಪುರೇಷೆ ಮುಂದಿಟ್ಟಿದ್ದಾರೆ. ಕೇಂದ್ರ ಹಾಗೂ ರಾಜ್ಯ ಹೆದ್ದಾರಿ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ ಈ ಸಭೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾಧಿಕಾರಿ ಇಬ್ರಾಹಿಂ ಮತ್ತಿತರರಿದ್ದರು.
ಸುದ್ದಿಗೋಷ್ಠಿಯ ಪೂರ್ಣಪಾಠ
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆಸ್ಕರ್ ಫರ್ನಾಂಡಿಸ್ ಮತ್ತು ಡಾ. ಮಹದೇವಪ್ಪ, ಶಿರಾಡಿ ಘಾಟ್ ದುರಸ್ತಿಗೆ ಕೇಂದ್ರ ಸರ್ಕಾರ 95 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಥಮ ಹಂತದಲ್ಲಿ ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಸುಗಮಗೊಳಿಸುವ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದ್ದು, ಜ.31ರೊಳಗೆ ಈ ಪ್ರಕ್ರಿಯೆ ಪೂರ್ಣವಾಗಲಿದೆ.
ಎರಡನೇ ಹಂತದಲ್ಲಿ ನೀರಿನ ಒಸರು ಇರುವಲ್ಲಿ ಕಾಂಕ್ರೀಟ್ ಹಾಗೂ ಇತರ ಕಡೆಗಳಲ್ಲಿ ಡಾಂಬರೀಕರಣ ಕಾಮಗಾರಿ ನಡೆಸಲಾಗುವುದು. ಜ.20ಕ್ಕೆ ಟೆಂಡರ್ ಕರೆದು ಫೆ.20ರ ವೇಳೆಗೆ ಶಾಶ್ವತ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದನ್ನು ಮೇ ಒಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. 18 ತಿಂಗಳ ಕಾಮಗಾರಿಗೆ ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿದ್ದಾರೆ. ಇದನ್ನು ಆದಷ್ಟು ಕಡಿಮೆ ಅವಧಿಗೆ ಇಳಿಸುವಂತೆ ಹೇಳಿದ್ದೇವೆ. ಒಟ್ಟು 47 ಕಿ.ಮೀ. ಹೆದ್ದಾರಿ ಪೈಕಿ 21 ಕಿ.ಮೀ. ರಸ್ತೆಯನ್ನು 17.76 ಕೋಟಿ ವೆಚ್ಚದಲ್ಲಿ ಗಟ್ಟಿಗೊಳಿಸಲಾಗುವುದು. 13 ಕಿ.ಮೀ. ರಸ್ತೆಯನ್ನು 46.43 ಕೋಟಿಯಲ್ಲಿ ಕಾಂಕ್ರೀಟ್‌ಗೊಳಿಸಲಾಗುವುದು. 31.30 ಕೋಟಿ ವೆಚ್ಚದಲ್ಲಿ 12.38 ಕಿ.ಮೀ. ಇಡಿ ರಸ್ತೆ ಡಾಂಬರೀಕರಣಗೊಳ್ಳಲಿದೆ ಎಂದರು.
ಚಾರ್ಮಾಡಿ ಪರ್ಯಾಯ: ಶಿರಾಡಿ ಘಾಟ್ ದುರಸ್ತಿ ವೇಳೆ ವಾಹನ ಸಂಚಾರ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಬರಲಿದೆ. ಹಾಗಾಗಿ ಪರ್ಯಾಯ ಮಾರ್ಗವಾಗಿ ಚಾರ್ಮಾಡಿ ಘಾಟ್ ರಸ್ತೆ ದುರಸ್ತಿಪಡಿಸುವ ಕೆಲಸ ನಡೆಯುತ್ತಿದೆ. 3ನೇ ಎರಡಂಶ ಕಾಮಗಾರಿ ಮುಕ್ತಾಯವಾಗಿದ್ದು, ಉಳಿದ ಕಾಮಗಾರಿ ಶೀಘ್ರ ಪೂರ್ತಿಯಾಗಲಿದೆ ಎಂದರು.
ಸುರಂಗ ಮಾರ್ಗ ಪ್ರಸ್ತಾಪ: ಶಾಶ್ವತ ಕಾಮಗಾರಿಯೊಂದಿಗೆ ಸುರಂಗ ಮಾರ್ಗ ರಚನೆಗೆ ಜಪಾನ್‌ನ ಜೈಕಾ ಕಂಪನಿ ಜತೆ ಚರ್ಚಿಸಲಾಗಿದೆ. ಅದಿನ್ನೂ ಅಂತಿಮ ರೂಪಕ್ಕೆ ಬಂದಿಲ್ಲ. ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗಳ ತಂಡವೂ ಈ ಕುರಿತು ಮಾತುಕತೆ ನಡೆಸಲಿದೆ. ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶಿರಾಡಿ ದುರಸ್ತಿಗೆ 18 ತಿಂಗಳ ಕಾಮಗಾರಿ ರೂಪುರೇಷೆ ಮುಂದಿಟ್ಟ ಕೇಂದ್ರ ಸಚಿವ
- ರು. 17.76 ಕೋಟಿ ವೆಚ್ಚದಲ್ಲಿ 21ಕಿ.ಮೀ. ರಸ್ತೆ ಗಟ್ಟಿಗೊಳಿಸಲು ಕ್ರಮ
- ರು. 46.43 ಕೋಟಿಯಲ್ಲಿ 13 ಕಿ.ಮೀ. ರಸ್ತೆಗೆ ಕಾಂಕ್ರೀಟ್ ವ್ಯವಸ್ಥೆ
- ರು. 31.30 ಕೋಟಿ ವೆಚ್ಚದಲ್ಲಿ 12.38 ಕಿ.ಮೀ ರಸ್ತೆಗೆ ಡಾಂಬರು