ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗೆ ಸ್ಪೆಷಲ್ ಟ್ರೀಟ್
ಮಾನವನ ಆರ್ಭಟಕ್ಕೆ ಹಲವು ಪ್ರಾಣಿ, ಪಕ್ಷಿಗಳ ಸಂತತಿ ಕಣ್ಮರೆಯಾಗುತ್ತಿವೆ. ಇವುಗಳ ಸಾಲಿನಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕೂಡಾ ಒಂದು. ಭಾರತ ಮತ್ತು ...
ಬಳ್ಳಾರಿ: ಮಾನವನ ಆರ್ಭಟಕ್ಕೆ ಹಲವು ಪ್ರಾಣಿ, ಪಕ್ಷಿಗಳ ಸಂತತಿ ಕಣ್ಮರೆಯಾಗುತ್ತಿವೆ. ಇವುಗಳ ಸಾಲಿನಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕೂಡಾ ಒಂದು. ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಕಾಣಸಿಗುವ ಈ ಪಕ್ಷಿ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯು ದೇಶದ ಮಧ್ಯಪ್ರದೇಶ, ಕರ್ನಾಟಕ ಅದರಲ್ಲೂ ಬಳ್ಳಾರಿ, ರಾಣಿಬೆನ್ನೂರು, ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶದಲ್ಲಿ ಮಾತ್ರ ಕಂಡು ಬರುತ್ತದೆ. 21ನೇ ಶತಮಾನದ ಆರಂಭದಲ್ಲಿ 31 ಸಾವಿರ ಇದ್ದ ಪಕ್ಷಿಗಳು 2008ರಲ್ಲಿ ನಡೆದ ಪಕ್ಷಿ ಗಣತಿಯಲ್ಲಿ ಕೇವಲ 250ಕ್ಕೆ ಬಂದು ನಿಂತಿದೆ. ಕಳ್ಳಬೇಟೆಯಿಂದಾಗಿ ಸಂತತಿ ಕಣ್ಮರೆಯಾಗುತ್ತಿದೆ. ಹುಲ್ಲುಗಾವಲಿನಲ್ಲಿಯೇ ಹೆಚ್ಚಾಗಿ ಕಂಡು ಬರುವ ಇಂತಹ ಪಕ್ಷಿಗಳು, ಕೆಲವು ದಿನಗಳ ಹಿಂದೆಯೇ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಹಾಗೂ ಚೇಳ್ಳಗುರ್ಕಿಯಲ್ಲಿ ಕಂಡು ಬಂದಿದ್ದವು.
ರಾಷ್ಟ್ರೀಯ ಪಕ್ಷಿ ಆಯ್ಕೆಗೆ ಪ್ರಸ್ತಾವನೆ ಇತ್ತು!
ಕೃಷ್ಣಮೃಗಗಳು ಹೆಚ್ಚಾಗಿರುವ ಸ್ಥಳದಲ್ಲಿ ಇಂಡಿಯನ್ ಬಸ್ಟರ್ಡ್ ಸಂತತಿಯ ಪಕ್ಷಿಗಳು ಕಾಣಸಿಗುತ್ತವೆ. ಬಿಟ್ಲ್ಸ್ ಜಾತಿ ಹುಳು, ಗುಂಗಾಡಿ, ಹುಲ್ಲಿನ ಬೀಜಗಳು, ವಿವಿಧ ರೀತಿಯ ತೆನೆಗಳೇ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ಆಹಾರ. ಮೊಗಲ್ ರಾಜ ಬಾಬರನಿಗೆ ಅತ್ಯಂತ ಪ್ರಿಯವಾದದ್ದು ಈ ಪಕ್ಷಿಯ ಮಾಂಸವಾಗಿದೆ ಎಂಬುದು ಇತಿಹಾಸ ಹೇಳುತ್ತದೆ. ಹಿಂದೆ ಈ ಪಕ್ಷಿಯು ಮೋಜಿನ ಬೇಟೆಯಿಂದಾಗಿ ಸಂತತಿ ಅವನತಿಯ ಅಂಚಿನಲ್ಲಿದೆ. ಇನ್ನು ಹೆಸರಾಂತ ಪಕ್ಷಿ ತಜ್ಞ ಸಲೀಂ ಅಲಿ ಅವರು, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ರಾಷ್ಟ್ರೀಯ ಪಕ್ಷಿಯಾಗಿ ಮಾಡಬೇಕೆಂಬ ಪ್ರಸ್ತಾವನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರು.4.5 ಕೋಟಿ ವೆಚ್ಚದಲ್ಲಿ ಯೋಜನೆ
ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯು ಅವನತಿಯ ಅಂಚಿನಲ್ಲಿರುವ ಪ್ರಮುಖ ಪಕ್ಷಿಗಳಲ್ಲಿ ಇದು ಒಂದು ಎಂದು ಐಯುಸಿಎನ್ ಅವರು ಗುರುತಿಸಿದ್ದಾರೆ. ಇಂತಹ ಪಕ್ಷಿಗಳ ಸಂತತಿ ರಕ್ಷಣೆಗೆ ರಾಜ್ಯದ ರಾಣಿಬೆನ್ನೂರಿನಲ್ಲಿ ಧಾಮ, ಸೊಲ್ಲಾಪುರ ಸಮೀಪದಲ್ಲಿ ನನಾಜ್ ಧಾಮ, ದೇಶದ ಇತರ ಕಡೆಗಳಲ್ಲಿ ಬ್ಲಾಕ್ ಓಕ್ ಸೆಂಚುರಿ, ರೊಲ್ಲಾಪಾಡ್ ಸೆಂಚುರಿ, ನಾಗಪುರ ಸಮೀಪದ ಕರೇರಾ ವಲ್ಡ್ ಲೈಫ್ ಸೆಂಚುರಿ, ಇನ್ನು ಗುಜರಾತ್ ಹಾಗೂ ರಾಜಸ್ಥಾನಗಳಲ್ಲಿ ಇಂತಹ ಪಕ್ಷಿಗಳ ಧಾಮವನ್ನು ಹೊಂದಿವೆ. ಇನ್ನು ರಾಜಾಸ್ಥಾನದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಸಂತತಿಯ ರಕ್ಷಣೆಗೆ 4.5 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಪಕ್ಷಿ ವಾಸಿಸುವ ಸ್ಥಳಗಳನ್ನು ಗುರುತಿಸಿ ರು. 8 ಕೋಟಿ ವೆಚ್ಚದಲ್ಲಿ ಸಂತತಿ ರಕ್ಷಣೆಗೆ ಮುಂದಾಗಿದೆ.
ರಾಜ್ಯದಲ್ಲೂ ಸಮಿತಿ ರಚನೆ
ಇದೀಗ ರಾಜ್ಯದಲ್ಲಿ ಅತಿ ಅಪರೂಪವಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಸಂತತಿಯ ರಕ್ಷಣೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ವಿಭಾಗ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಈ ಹಿಂದಿನ ಪಿಸಿಸಿಎಫ್ ಜಿ.ಎಸ್. ಪ್ರಭು ಅವರು ಇದ್ದಾಗ ರಚನೆ ಮಾಡಲಾಗಿತ್ತು. ಇದೀಗ ಪಿಸಿಸಿಎಫ್ಗೆ ವಿಯನ್ ಲಾಥೂರ್ ಅವರು ಇದ್ದು, ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಬಳ್ಳಾರಿ, ರಾಣಿಬೆನ್ನೂರು ಹಾಗೂ ಧಾರವಾಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪಕ್ಷಿ ಕುರಿತಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಸಂತತಿ ರಕ್ಷಣೆಗೆ ಅನುಸರಿಸುವ ಕ್ರಮಗಳು, ಸಂತತಿಗಳ ಬಗೆಗಿನ ಸಂಪೂರ್ಣ ಮಾಹಿತಿಯ ವರದಿ ತಯಾರಿಸಿ ನೀಡುವಂತೆ ಸೂಚಿಸಿದ್ದು, ವರದಿ ಸಲ್ಲಿಸಿದರೆ, ಸಂತತಿ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ.
ಎರೆಭೂತ, ಎರಲಾಡ
ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ. ನಮ್ಮ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ 'ಎರೆಭೂತ' ಎಂದು ಕರೆದರೆ, ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕಿನಲ್ಲಿ 'ಎರಲಾಡ' ಎಂದು ಗುರುತಿಸುತ್ತಾರೆ.
ಬೇಟೆಯಾಡಿದರೆ 7 ವರ್ಷ ಜೈಲು
ವನ್ಯ ಜೀವಿಗಳ ರಕ್ಷಣಾ ಕಾಯ್ದೆ- 1972ರ ಕಾಯ್ದೆ ಪ್ರಕಾರ ಮೊದಲ ಅನುಸೂಚಿಯಲ್ಲಿಯೇ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ಗುರುತಿಸಲಾಗಿದೆ. ದೇಶದಲ್ಲಿ ಇಂತಹ ಪಕ್ಷಿ ಇರುವುದು ಹೆಗ್ಗಳಿಕೆಯಾಗಿದ್ದು, ಈ ಪಕ್ಷಿ ಸಂತತಿಯ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸಂತತಿ ರಕ್ಷಣೆಗೆ ಮತ್ತಷ್ಟು ಜಾಗೃತಿಗೊಳ್ಳಬೇಕಾಗಿದೆ. ಇಂತಹ ಪಕ್ಷಿಯನ್ನು ಬೇಟೆಯಾಡಿದರೆ 7 ವರ್ಷ ಶಿಕ್ಷೆ, ರು. 10 ಸಾವಿರ ದಂಡವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಶಶಿಧರ ಮೇಟಿ