ಶಿ'ರಾಡಿ'ಗೆ ಆಮ್ ಆದ್ಮಿ ಕಿಡಿ
ಶಿ'ರಾಡಿ' ದರ್ಶನ ಜನಪ್ರತಿನಿಧಿಗಳ ವೈಫಲ್ಯದ ವಿರುದ್ಧ 'ಕನ್ನಡಪ್ರಭ'ದ ಅಭಿಯಾನಕ್ಕೆ ಇಲ್ಲಿನ ಸಾಮಾನ್ಯ ನಾಗರಿಕರು ಸೇರಿದಂತೆ ಅನಿವಾಸಿ ಕನ್ನಡಿಗರೂ...
ಮಂಗಳೂರು: ಶಿ'ರಾಡಿ' ದರ್ಶನ ಜನಪ್ರತಿನಿಧಿಗಳ ವೈಫಲ್ಯದ ವಿರುದ್ಧ 'ಕನ್ನಡಪ್ರಭ'ದ ಅಭಿಯಾನಕ್ಕೆ ಇಲ್ಲಿನ ಸಾಮಾನ್ಯ ನಾಗರಿಕರು ಸೇರಿದಂತೆ ಅನಿವಾಸಿ ಕನ್ನಡಿಗರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ಐದು ವರ್ಷದವರೆಗೆ ಕಾಯುವ ತಾಳ್ಮೆ ಇಲ್ಲ. ಅವರಿಗೆ ಘೇರಾವ್ ಹಾಕಿ ಬೇಡಿಕೆಯನ್ನು ಈಡೇರಿಸಬೇಕಾದ ಸಮಯ ಬಂದಿದೆ. ಇದು ಸಾಧ್ಯವಾಗದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಜನಸಾಮಾನ್ಯರು ಎಚ್ಚರಿಸಿದ್ದಾರೆ.
'ಶಿರಾಡಿಯಲ್ಲಿ ರಾತ್ರಿ ವೇಳೆ ಕಾರು ಪಂಕ್ಚರ್ ಆಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದವರನ್ನೇ ಕೈ ಕಡಿದು ದರೋಡೆ ಮಾಡಿದ್ದಾರೆ. ಜನಪ್ರತಿನಿಧಿಗಳೇ ಒಂದು ವೇಳೆ ರಾತ್ರಿ ಹೊತ್ತು ನೀವೇನಾದರೂ ನಿಮ್ಮ ಹೆಂಡತಿ ಮಕ್ಕಳ ಜೊತೆ ಶಿರಾಡಿ ಘಾಟ್ನಲ್ಲಿ ಹೋಗುವಾಗ ವಾಹನ ಪಂಕ್ಚರ್ ಆದರೆ ಮುಂದಿನ ಅನಾಹುತವನ್ನು ಊಹಿಸಿಕೊಳ್ಳಿ. ಆದರೆ, ನಿಮಗೆ ಅಂಥ ಪರಿಸ್ಥಿತಿ ಬರುವುದಿಲ್ಲ. ಯಾಕೆಂದರೆ ನೀವು ಹೆಲಿಕಾಪ್ಟರ್, ವಿಮಾನ, ಬೆಂಗಾವಲು ಪಡೆಯ ವಾಹನದೊಂದಿಗೆ ಹೋಗುತ್ತೀರಿ. ನಮ್ಮಂಥ ಆಮ್ ಆದ್ಮಿಯ ಸಮಸ್ಯೆ ನಿಮಗೆಲ್ಲಿ ಅರ್ಥವಾಗುತ್ತದೆ' ಎಂದು ಗುಂಡ್ಯದ ಮಹಿಳೆ ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಬ್ಬ ಮಹಿಳೆಯ ಆಕ್ರೋಶದ ಮಾತಲ್ಲ. ಇದು ಸಮಸ್ತ ಕನ್ನಡಿಗರ ಕೂಗು. ನಮ್ಮ ಕೂಗನ್ನು ಯಾರೂ ಕೇಳುವವರಿಲ್ಲ. ಶಿರಾಡಿ ಘಾಟ್ಗೆ ಪರಿಹಾರವೇ ಸಾಧ್ಯವಿಲ್ಲ. ಅಂಥ ಸಮಯದಲ್ಲಿ 'ಕನ್ನಡಪ್ರಭ' ನಮ್ಮೆಲ್ಲರ ಕೂಗನ್ನು ಒಟ್ಟುಗೂಡಿಸಿ ಹೋರಾಟದ ಕಹಳೆಯನ್ನಾಗಿಸಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಲಂಡನ್ ವಿಪ್ರೋ ಟೆಕ್ನಾಲಜಿಯಲ್ಲಿನ ಉದ್ಯೋಗಿ ಕಿಶೋರ್ ಭಾಗವತ್, ಶಿರಾಡಿ ಘಾಟ್ ದುರವಸ್ಥೆಯ ಬಗ್ಗೆ ನೋವು, ಅಕ್ರೋಶ ವ್ಯಕ್ತಪಡಿಸಿದ್ದಾರೆ. ಶಿರಾಡಿಯಲ್ಲಿ ಪ್ರಯಾಣ ಎಂಬುವುದು ದುಸ್ವಪ್ನ. ನಾವು ಸುತ್ತಿ ಬಳಸಿ ನಮ್ಮೂರಿಗೆ ಹೋಗಬೇಕು. ಕೇಂದ್ರದ ಹೆದ್ದಾರಿ ಸಚಿವರು ಉಡುಪಿಯವರೇ ಆಗಿರುವುದು ವಿಪರ್ಯಾಸ. ಯುವಕರೇ ಇದು ಜನಪ್ರತಿನಿಧಿಗಳ ಉದಾಸೀನದ ವಿರುದ್ಧ ಬಂಡೇಳಲು ತಕ್ಕ ಕಾಲ ಎಂದು ಪ್ರತಿಕ್ರಿಯಿಸಿದ್ದಾರೆ.
ಶಿರಾಡಿಯ ಗುಂಡ್ಯ ಗ್ರಾಪಂ ಸದಸ್ಯ ಜೋಸೆಫ್ ಪ್ರತಿಕ್ರಿಯಿಸಿ, 'ನಮಗೆ ಪ್ರತಿಭಟನೆ ಮಾಡಿ ಮಾಡಿ ಸಾಕಾಗಿದೆ. ಸಮಸ್ಯೆ ಪರಿಹರಿಸಬೇಕಾದ ಲೋಕಸಭೆ ಸದಸ್ಯ ನಳಿನ್ ಕುಮಾರ್ ಕಟೀಲು ಅವರನ್ನು ಕರೆಸಿ ಪ್ರತಿಭಟಿಸುವಂಥ ಪರಿಸ್ಥಿತಿ ಇದೆ. ನಾವು ಯಾರಲ್ಲಿ ಹೇಳುವುದು? ನಾವು ಪ್ರತಿಭಟನೆ ಮಾಡಿದಾಗ ಇಲ್ಲಿಗೆ ಬಂದ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡುತ್ತಾರೆ ಅಷ್ಟೆ ಎಂದರು. ಇದುವರೆಗೆ ಎಷ್ಟು ಶಾಸಕರು, ಸಂಸದರು ವಿದೇಶಕ್ಕೆ ಹೋಗಿ ಬಂದಿಲ್ಲ. ಆದರೆ, ನಮ್ಮ ರಸ್ತೆಗಳ ದುಃಸ್ಥಿತಿ ಇನ್ನೂ ಹಾಗೇ ಇದೆ ಎಂದು ಅಮೆರಿಕ ನ್ಯೂಜೆರ್ಸಿಯಲ್ಲಿರುವ ನಾಗರಾಜ್ ಹೇಳುತ್ತಾರೆ. ಜನರು ಕೈ ಎತ್ತುವ, ದಂಗೆ ಏಳುವ ಮೊದಲು ದಯವಿಟ್ಟು ರಸ್ತೆ ದುರಸ್ತಿ ಮಾಡಿ ಎಂದು ಮಂಜು ಛಾಯಾಗ್ರಾಹಕ ನೀರೇಶ್ವಾಲ್ಯ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಮನವಿ ಮಾಡಿದ್ದಾರೆ.
ಚಳಿಯಲ್ಲೂ ಮೈ ಬಿಸಿ
ಅಪ್ಘಾನಿಸ್ತಾನದ ಅಮೆರಿಕ ಬೇಸ್ ಕ್ಯಾಂಪ್ನಲ್ಲಿರುವ ಕಾರ್ಕಳ ಹಿರ್ಗಾನಾದ ಗಣೇಶ್ ನಾಯಕ್ ಹೇಳುವುದು ಹೀಗೆ... 'ಅಂತರ್ಜಾಲದಲ್ಲಿ 'ಕನ್ನಡಪ್ರಭ'ದ ಶಿರಾಡಿ ದರ್ಶನ ಓದಿದೆ. ಇಲ್ಲಿ ಮೈನಸ್ 15 ಡಿಗ್ರಿ ಮೈ ಕೊರೆಯುವ ಚಳಿಯಿದ್ದರೂ ಶಿರಾಡಿ ದುರವಸ್ಥೆ ಬಗ್ಗೆ ಜನಪ್ರತಿನಿಧಿಗಳ ಅಸಡ್ಡೆಯನ್ನು ನೋಡುವಾಗ ಮೈ ಬಿಸಿಯಾಗುತ್ತದೆ. 'ಕನ್ನಡಪ್ರಭ' ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ನಾವು ಅಲ್ಲಿಗೆ ಬಂದು ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ಆದರೆ, ಅಂತರ್ಜಾಲ, ಫೇಸ್ಬುಕ್ ಮೂಲಕ ನಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ' ಎಂದು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಶಿ'ರಾಡಿ' ವಿಷಯವಾಗಿ 'ಕನ್ನಡಪ್ರಭ'ದ ಕಾಳಜಿಗೆ ಧನ್ಯವಾದ ಹೇಳಲೇಬೇಕು. ವಾರಕ್ಕೆ ಕನಿಷ್ಠ 2 ಬಾರಿ ಈ ಹಾದಿಯಲ್ಲಿ ಸಾಗಬೇಕಾದ ಕರ್ಮ ನನ್ನದು. ಈ ಹಾದಿಯಲ್ಲಿ ಸಾಗಿದ ತಪ್ಪಿಗೆ ಪಕ್ಕೆಲುಬು ಮುರಿದು ಆಸ್ಪತ್ರೆಗೆ ಸೇರಿದ ವೃದ್ಧರೊಬ್ಬರು ನೆನಪಾಗಿ ಹೆದರಿಕೆಯಾಗುತ್ತದೆ. ಕೆಲವು ತಿಂಗಳ ಹಿಂದೆ ನಾನು ಈ ರಸ್ತೆ ಉನ್ನತೀಕರಣಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಆರ್ಟಿಐನಲ್ಲಿ ಪ್ರಶ್ನಿಸಿದ್ದೆ. ಆದರೆ ಸಮಾಧಾನಕರ ಮಾಹಿತಿ ಸಿಗಲಿಲ್ಲ. ಖಾಸಗಿ ಬಸ್ಗಳ ಮಾಲೀಕರ ಲಾಭಿಯು ಮಂಗಳೂರಿಗೆ ಬರುತ್ತಿದ್ದ ರೈಲನ್ನು ಸಲೇಂಗೆ ತಲುಪಿಸಲು ಶಕ್ತವಾಗುತ್ತವೆ. ಆದರೆ ಶಿರಾಡಿ ರಸ್ತೆ ಸರಿಪಡಿಸುವಂತೆ ಮಾಡುವಲ್ಲಿ ಮಾತ್ರ ಸೋಲುತ್ತವೆ ಎಂಬುದು ಆಶ್ಚರ್ಯಕರ ವಿಷಯ.
- ತಿಲಕ್
'ಕನ್ನಡಪ್ರಭ' ಸರಣಿ ವರದಿ ಪ್ರತಿಧ್ವನಿ
ಶಿರಾಡಿ ಘಾಟ್ ಸಭೆಯಲ್ಲಿ 'ಕನ್ನಡಪ್ರಭ' ಸರಣಿ ವರದಿಯನ್ನು ಪ್ರದರ್ಶಿಸಿದ ಸಚಿವ ಆಸ್ಕರ್ ಫರ್ನಾಂಡಿಸ್, ನಾನು ಎರಡೆರಡು ಬಾರಿ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಈಗ ತೇಪೆ ಕಾಮಗಾರಿ ಹೊರತೂ ಹೆದ್ದಾರಿ ಪೂರ್ತಿ ಗಬ್ಬೆದ್ದು ಹೋಗಿರುವ ಬಗ್ಗೆ ಸಚಿತ್ರ ವರದಿಯಾಗಿದೆ. ಇನ್ನಾದರೂ ಹೆದ್ದಾರಿ ದುರಸ್ತಿಗೆ ಸೂಕ್ತ ರೂಪುರೇಷೆ ತಯಾರಿಸಿ ಎಂದು ತಾಕೀತು ಮಾಡಿದರು.
ಶಿರಾಡಿ ವಿಷಯದಲ್ಲಿ ಕನ್ನಡಪ್ರಭ ಜನಸಾಮಾನ್ಯರ ಪ್ರತಿನಿಧಿಯಾಗಿ ಉತ್ತಮ ವಿಸ್ತರಣಾ ಬರಹಗಳನ್ನು ನೀಡಿ ಬೆಳಕು ಚೆಲ್ಲಿರುವುದು ಸ್ವಾಗತಾರ್ಹ. ನಿಮ್ಮ ಸಾಮಾಜಿಕ ಬದ್ಧತೆಯನ್ನು ಮೆಚ್ಚಲೇಬೇಕು. ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಚೆನ್ನಾಗಿ ತೆರೆದಿಟ್ಟಿದ್ದೀರಿ. ಯಾವುದೇ ಸರ್ಕಾರವಿದ್ದರೂ ಅವೆಲ್ಲವೂ ರಾಜ್ಯದ ಅಭಿವೃದ್ಧಿಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳಲಾರವು. ಇದು ಅಧಿಕಾರಿಗಳು ತಲೆ ತಗ್ಗಿಸಬೇಕಾದ ವಿಷಯ. ಈ ಕಾರಣವಾಗಿಯೇ ಕೇಜ್ರಿವಾಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾದದ್ದು. ನಾನು ಯಾವಾಗಲೂ ಬೀದಿಗಿಳಿದು ಪ್ರತಿಭಟನೆ ಮಾಡುವ ಸಾಮಾನ್ಯ ಮನುಷ್ಯರಿಂದ ದೇಶದಲ್ಲಿ ಮಹತ್ತರ ಬದಲಾವಣೆಯೇನೋ ಆಗುತ್ತದೆ ಎಂದೇ ನಂಬಿಕೆ ಇಡುತ್ತೇನೆ. ಜನಪ್ರತಿನಿಧಿಗಳು ಹಿಂದಿನ ಸರ್ಕಾರಗಳೆಡೆಗೆ ಕೈ ತೋರುವುದನ್ನು ನಿಲ್ಲಿಸಲಿ. ಪತ್ರಿಕೆ ತನ್ನ ಸಾಮಾಜಿಕ ಕಳಕಳಿಯನ್ನು ಹೀಗೆಯೇ ಮುಂದುವರೆಸಲಿ. ದಿನದ 24 ಗಂಟೆಯೂ ಇಲಿ ಹೋದದ್ದನ್ನು ಹುಲಿ ಎಂಬಂತೆ ತೋರಿಸುವ ಸುದ್ದಿವಾಹಿನಿಗಳಿಗೆ ಪತ್ರಿಕೆ ಮಾದರಿಯಾಗಲಿ.
-ಮಂಜುನಾಥ್
ಬೆಂಗಳೂರಿಗೆ ಪ್ರಯಾಣಿಸುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ನಮ್ಮ ಜನಪ್ರತಿನಿಧಿಗಳಿಗೆ ನಿದ್ದೆ ಬಿಟ್ಟಿಲ್ಲ. ಬೆಂಗಳೂರಿಗೆ ಪರೀಕ್ಷೆ, ಇಂಟರ್ವ್ಯೂ ಇನ್ನಿತರ ತುರ್ತು ಕೆಲಸಗಳಿಗೆ ಹೋಗುವವರಿಗೆ ರಸ್ತೆಯ ದುರವಸ್ಥೆಯಿಂದಾಗಿ ಸಮಸ್ಯೆಗಳಾಗುತ್ತಿದೆ. ಓಲ್ವೋ ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಭಯದಿಂದಲೇ ಪ್ರಯಾಣಿಸಬೇಕಾಗಿದೆ. ರಸ್ತೆಯ ಬಗ್ಗೆ ಕಾಳಜಿಯಿಲ್ಲದ ಸಂಸದರು ಮತ್ತು ಸಚಿವರಿಗೆ ಧಿಕ್ಕಾರವಿರಲಿ.
-ಮಂಜುನಾಥ್, ಕೆಮ್ಮಿಂಜೆ, ಪುತ್ತೂರು
ಸುರಂಗ ಮಾರ್ಗ ನಿರ್ಮಾಣ ಯೋಜನೆ ಸರಿಯಲ್ಲ. ಅದು ಇನ್ನೂ 50 ವರ್ಷ ಕಳೆದರೂ ಆಗುವ ವಿಚಾರ ಅಲ್ಲ. ಪರಿಸರ ಇಲಾಖೆಯ ಅನುಮತಿ ಕೂಡ ಅದಕ್ಕೆ ದೊರೆಯುವುದಿಲ್ಲ. ಅದರ ಬದಲು ರಸ್ತೆಯ ಒಂದು ಪಕ್ಕದ ದ್ವಿಪಥ ಕಾಂಕ್ರಿಟೀಕರಣ ಪೂರ್ಣಗೊಳಿಸಿ ನಂತರ ಇನ್ನೊಂದು ಪಕ್ಕದ ದ್ವಿಪಥ ಪೂರ್ಣಗೊಳಿಸಬೇಕು. ಆಗ ಪ್ರತಿ ವರ್ಷ ಹಣ ಬಿಡುಗಡೆ, ಅವ್ಯವಹಾರಕ್ಕೆ ಅವಕಾಶವಾಗುವುದಿಲ್ಲ.
-ಎಚ್. ಶಾಂತಾರಾಮ್ ಐತಾಳ್, ನಿವೃತ್ತ ಎಂಜಿನಿಯರ್, ಉಡುಪಿ
ನಮ್ಮ ದೇಶದಲ್ಲಿ ಹಲವು ತಂತ್ರಜ್ಞಾನಗಳು ಬಂದಿವೆ. ಆದರೆ, ಶಿರಾಡಿ ಘಾಟ್ ಹೆದ್ದಾರಿಯ ಸಮಸ್ಯೆಗೆ ಪರಿಹಾರ ಸಾಧ್ಯವಾಗಲಿಲ್ಲ ಎಂದರೆ ನಾಚಿಕೆಗೇಡು. ಸರ್ಕಾರ ಮನಸ್ಸು ಮಾಡಿದ್ರೆ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ತಂದು ಈ ಸಮಸ್ಯೆಗೆ ಪರಿಹಾರ ಮಾಡಬಹುದು. ಆದರೆ, ಇದರ ಹಿಂದೆ ಬೇರೆ ಏನೋ ಕಾರಣ ಇದೆ ಅಂತ ಅನ್ನಿಸುತ್ತದೆ.
- ಗಣೇಶರಾಜ್ ಸರಳೇಬೆಟ್ಟು, ಸಮಾಜ ಸೇವಕ
ಒಂದು ಸಲ ಕ್ಯಾನ್ಸರ್ ಪೀಡಿತ ತಂಗಿಯನ್ನು ನಾನೇ ಡ್ರೈವಿಂಗ್ ಮಾಡುತ್ತಾ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಕರೆದುಕೊಂಡು ಶಿರಾಡಿ ಘಾಟ್ ರಸ್ತೆಯಲ್ಲಿ ಬಂದಿದ್ದೆ. ರಸ್ತೆಯ ಗುಂಡಿಗಳ ಮೇಲಿನ ಸಂಚಾರದಿಂದ ಅವಳಿಗೆ ಬ್ಲೀಡಿಂಗ್ ಆಯಿತು. ಆದರೂ ನಿಧಾನವಾಗಿ ಚಲಿಸುತ್ತಾ ಘಾಟ್ ದಾಟಲು 2 ಗಂಟೆ ತಗುಲಿತು. ಸಚಿವರು ವಿಮಾನದಲ್ಲಿ ತೆರಳುತ್ತಾರೆ. ಜನರಲ್ವಾ ಓಡಾಡೋದು ನಮಗೇನು ಎಂಬ ಅಸಡ್ಡೆಯಿಂದಲೇ ಈ ಪರಿಸ್ಥಿತಿ ಬಂದೊದಗಿದೆ.
-ಆಶಾ ನಾಯಕ್, ಮಂಗಳೂರು
ರಸ್ತೆಯ ಅಭಿವೃದ್ಧಿಗೆಂದು ವಿನಿಯೋಗಿಸಿ ನಡೆಸಲಾದ ಕಾಮಗಾರಿ ಕುರುಹು ಇಲ್ಲದಂತೆ ಪ್ರಕೃತಿಯಲ್ಲಿ ಲೀನವಾಗಿದೆ ಎಂದಾದರೆ ಕಾಮಗಾರಿಯ ಗುಣಮಟ್ಟವೇನು? ಸರ್ಕಾರಿ ದುಡ್ಡು ನುಂಗುವುದೆಂದರೆ ಯಾವ ಭೀತಿಯೂ ಕಾಡದ ವ್ಯವಸ್ಥೆ ಇಲ್ಲಿದೆಯೇ? ಸಾರ್ವಜನಿಕರ ಹಣ ಪೋಲು ಮಾಡುವ ಇಲಾಖಾಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಜ್ಜ ನಡೆ ಎದ್ದು ಕಾಣಿಸುತ್ತಿದೆ.
-ಕಂಗ್ವೆ ವಿಶ್ವಾನಾಥ ಶೆಟ್ಟಿ, ಅಧ್ಯಕ್ಷರು, ಹರಿಶ್ಚಂದ್ರ ಘಾಟ್ ಸ್ಮಶಾನ ಸಮಿತಿ, ಉಪ್ಪಿನಂಗಡಿ
ಆಡಳಿತಗಾರರಿಂದ ಮತ್ತು ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪರಿಣಾಮ, ಜನತೆ ದಿನ ನಿತ್ಯ ಬವಣೆಗೆ ತುತ್ತಾಗುತ್ತಿದೆ. ತಿಂಗಳ ಹಿಂದೆ ಸಂಸದರ ನೇತೃತ್ವದಲ್ಲಿ ಈ ಬಗ್ಗೆ ನಮ್ಮ ಪಕ್ಷ ಭಾರಿ ಪ್ರತಿಭಟನೆ ನಡೆಸಿದಾಗ ಮೂರು ದಿನಗಳ ಒಳಗಾಗಿ ಹೆದ್ದಾರಿ ದುರಸ್ತಿಗೆ ಕ್ರಮ ಜರುಗಿಸುತ್ತೇವೆ ಎಂದ ಅಧಿಕಾರಿಗಳು 30 ದಿನಗಳು ಕಳೆದರೂ ಕ್ರಮಕ್ಕೆ ಮುಂದಾಗಿಲ್ಲ.
-ಎನ್. ಉಮೇಶ್ ಶೆಣೈ, ಉಪ್ಪಿನಂಗಡಿ ತಾಪಂ ಸದಸ್ಯ
ಬೆಂಗಳೂರಿಗೆ ಹೋಗಿ ಬರುವ ಸುಮಧುರ ಪ್ರಯಾಣದ ಕಲ್ಪನೆಯೇ ಮಾಸಿದೆ. ಶಿರಾಡಿ ಘಾಟ್ ಯಾತನೆಯನ್ನು ಅನುಭವಿಸುವುದೇ ಒಂದು ದೊಡ್ಡ ಸಮಸ್ಯೆ. ಬಾಡಿಗೆ ಗೊತ್ತುಪಡಿಸಿ ಹೋಗೋಣವೆಂದರೆ ಯಾವೊಬ್ಬ ಕಾರಿನ ಚಾಲಕನೂ ಕೆಟ್ಟ ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ. ಈ ಪರಿಯ ದುಃಸ್ಥಿತಿ ನಮ್ಮ ದೇಶದಲ್ಲಿ ಇಷ್ಟು ದೀರ್ಘ ಕಾಲ ಯಾಕೆ ಇದೆ ಎನ್ನುವುದೇ ಅರ್ಥವಾಗದ ವಿಚಾರ.
- ಪ್ರಶಾಂತ್ ಡಿ'ಕೋಸ್ಟ, ಅಧ್ಯಕ್ಷರು, ವರ್ತಕರ ಸಂಘ, ಉಪ್ಪಿನಂಗಡಿ
ಶಿರಾಡಿ ಘಾಟ್ನಲ್ಲಿ ನಾನು ಸಂಚರಿಸಿದಾಗ ಪರಿಸ್ಥಿತಿಯನ್ನು ಅನುಭವಿಸಿ ಅತೀವ ದುಃಖಿತನಾದೆ. ಯಾವನಾದರೂ ಒಬ್ಬ ಮಂತ್ರಿ ಈ ರಸ್ತೆಯಲ್ಲಿ ಪ್ರಯಾಣಿಸಿದ್ದರೆ ಹೆದ್ದಾರಿಗೆ ಈ ದುಃಸ್ಥಿತಿ ಬರುತ್ತಿರಲಿಲ್ಲ. ಅವರೆಲ್ಲರೂ ಆಕಾಶ ಮಾರ್ಗವಾಗಿ ವಿಮಾನದಲ್ಲಿ ಸಂಚರಿಸುತ್ತಿದ್ದರೆ ರಸ್ತೆ ಮಾರ್ಗವಾಗಿ ಸಂಚರಿಸುವ ಜನ ಸಾಮಾನ್ಯರ ಬವಣೆ ಅವರಿಗೆಲ್ಲಿ ಅರ್ಥವಾದೀತು?
-ಯು.ಕೆ. ಇಸುಬು ಪೆದಮಲೆ, ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷರು, ಬೆಳ್ತಂಗಡಿ ತಾಲೂಕು
ಈ ಹೆದ್ದಾರಿ ಮಂಗಳೂರು- ಬೆಂಗಳೂರು ರಸ್ತೆಯಾಗಿ ಮಾತ್ರವಲ್ಲದೆ ರಾಜ್ಯದ ಪ್ರಮುಖ ಯಾತ್ರಾ ಸ್ಥಳವಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆ. ಈ ರಸ್ತೆಯಲ್ಲಿ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಕುಲಗೆಟ್ಟು ಹೋಗಿರುವ ಈ ರಸ್ತೆಯಿಂದಾಗಿ ಅನ್ಯ ರಾಜ್ಯಗಳ ಪ್ರಯಾಣಿಕರು ನಮ್ಮ ರಾಜ್ಯದ ರಸ್ತೆಯ ಸ್ಥಿತಿಯ ಬಗ್ಗೆ ಮಾತನಾಡುವಂತಾಗಿದೆ. ಕರಾವಳಿಯ ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು.
- ಪ್ರತಿಮಾ ರೈ, ಬನ್ನೂರು ಪುತ್ತೂರು
ಈ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯುವುದರಿಂದ ಹಾಗೂ ಭೂ ಒರತೆ ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ಡಾಂಬರ್ ಕಿತ್ತು ಹೋಗುತ್ತಿದೆ. ರಸ್ತೆ ಹಾಳಾಗುತ್ತಿರುವುದನ್ನು ತಡೆಯಲು ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಕಾಂಕ್ರಿಟ್ ರಸ್ತೆ ಅಥವಾ ಹೊಸ ತಂತ್ರಜ್ಞಾನ ಅಳವಡಿಸಿ ರಸ್ತೆ ಹಾಳಾಗದಂತೆ ಕಾಪಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಯಬೇಕು.
- ಲ್ಯಾನ್ಸಿ ಮಸ್ಕರೇನಸ್, ಉದ್ಯಮಿ ಪುತ್ತೂರು
- ಜಿತೇಂದ್ರ ಕುಂದೇಶ್ವರ