ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಟ್ವಿಭಾಷಿತದ ಹಾಸ್ಯದ ಝಲಕ್ನ ಕೆಲ ತುಣುಕುಗಳು

ಜೀವನದಲ್ಲಿ ಹಾಕಿಕೊಂಡಿರುವ ಮಿತಿ ದಾಟದಿದ್ದರೆ ಅಪೇಕ್ಷಿತ ವಸ್ತು ದಕ್ಕಲು ಸಾಧ್ಯವೇ ಇಲ್ಲ. ಪ್ರಶ್ನೆಯನ್ನೇ ಕೇಳದಿದ್ದರೆ ಉತ್ತರ...

Rashmi Kasaragodu
Updated On : 1 Jan 2014, 1:30 am

ಸುಪ್ರಭಾತದ ಸಲಹೆ ಜೊತೆಗೆ ವಕ್ರತುಂಡೋಕ್ತಿಯ ವ್ಯಂಗ್ಯ, ಟ್ವಿಭಾಷಿತದ ಹಾಸ್ಯದ ಝಲಕ್ನ ಕೆಲ ತುಣುಕುಗಳು ಇಲ್ಲಿವೆ. ವರ್ಷದ ಎಲ್ಲವನ್ನೂ ಹಾಕಬೇಕೆನ್ನುವ ಆಸೆ ನಮಗಿತ್ತು. ಆದರೆ ಜಾಗದ ಕೊರತೆಯಿಂದ ಕೆಲವನ್ನಷ್ಟೇ ಕೊಡಲಾಗಿದೆ.


ಜೀವನದಲ್ಲಿ ಹಾಕಿಕೊಂಡಿರುವ ಮಿತಿ ದಾಟದಿದ್ದರೆ ಅಪೇಕ್ಷಿತ ವಸ್ತು ದಕ್ಕಲು ಸಾಧ್ಯವೇ ಇಲ್ಲ. ಪ್ರಶ್ನೆಯನ್ನೇ ಕೇಳದಿದ್ದರೆ ಉತ್ತರವೂ ಸಿಗಲ್ಲ. ಹಾಗೆಯೇ ಜೀವನದಲ್ಲಿ ಮುಂದಡಿ ಇಡದಿದ್ದರೆ ನೀವು ನಿಂತಲ್ಲೇ ಇರುತ್ತೀರಿ. ಚಲನಶೀಲತೆ ಸದಾ ಒಳ್ಳೆಯದು.


ಜೀವನದಲ್ಲಿ ನೀವು ಏನನ್ನಾದರೂ ಕಳೆದುಕೊಂಡಾಗ ಬೇಸರಿಸಿಕೊಳ್ಳಬೇಡಿ. ಮರದಿಂದ ಎಲೆ ಉದುರಿದಾಗ ಹೊಸ ಎಲೆ ಚಿಗುರುತ್ತದಲ್ಲ, ಹಾಗೆಯೇ ಕಳೆದುಹೋದದ್ದು ಸಹ ಪುನಃ ಸಿಗುತ್ತದೆಂಬ ಆಶಾಭಾವನೆ ಹೊಂದಿದರೆ ಅಷ್ಟರಮಟ್ಟಿಗಿನ ಸಮಾಧಾನ ನಿಮ್ಮದಾಗುತ್ತದೆ.


ಮರದಿಂದ ಬಿದ್ದ ಎಲೆಗಳು ಪ್ರತಿದಿನವೂ ಹಸಿರಾಗಿ ಕಾಣಲು ಸಾಧ್ಯವಿಲ್ಲ. ಗಿಡದಿಂದ ಕಿತ್ತ ಹೂ ನಿತ್ಯವೂ ಆಕರ್ಷಿಸುವುದಿಲ್ಲ. ಆದನೆ ದಿನದ ಆರಂಭದ ನಮ್ಮ ಮುಗುಳ್ನಗು ಮಾತ್ರ ಸದಾ ಹೊಸತಾಗಿಯೇ ಇರುತ್ತದೆ.


ಒಂದು ಕ್ಯಾಂಡಲ್ನಿಂದ ನೂರಾರು ಕ್ಯಾಂಡಲ್ ಹೊತ್ತಿಸಬಹುದು. ಇದರಿಂದ ಕ್ಯಾಂಡಲ್ನ ಕಾಂತಿಯೇನೂ ಕಡಿಮೆಯಾಗಲ್ಲ. ಅಂತೆಯೇ ಸಂತಸ ಕೂಡ. ನಿಮ್ಮಲ್ಲಿರುವ ಸಂತಸವನ್ನು ಇತರರೊಂದಿಗೂ ಹಂಚಿಕೊಳ್ಳಿ. ಇದರಿಂದ ನಿಮ್ಮ ಸಂತಸಕ್ಕೇನೂ ಕುಂದು ಬರಲ್ಲ.


ನೀವು ಸೂರ್ಯನಂತೆ ಪ್ರಕಾಶಿಸಬೇಕು ಎಂದು ಅಂದುಕೊಂಡರೆ, ಅವನಂತೆ ಉರಿಯಲು ಸಹ ಸಿದ್ಧರಿರಬೇಕು. ಜೀವನ ನಾವು ಅಂದುಕೊಂಡಂತೆ ಸುಲಭವಾಗಿರುವುದಿಲ್ಲ. ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ತಯಾರಿರಬೇಕು.


ನಮ್ಮ ಭವಿಷ್ಯವನ್ನು ಬೇರೆಯವರ ಬುನಾದಿಯ ಮೇಲೆ ಕಟ್ಟಬಾರದು. ನಮ್ಮ ಏಳಿಗೆಗೆ ಬೇರೆಯವರನ್ನು ಆಧರಿಸಬಾರದು. ಬೇರೆಯವರ ಆಶ್ರಯದ ಮೇಲೆ ಕಟ್ಟಿದ್ದು ಶಾಶ್ವತ ಅಲ್ಲ.


ಜೀವನವೆಂಬ ಆಟದಲ್ಲಿ ಒಮ್ಮೊಮ್ಮೆ ಜನ ಫುಟ್ಬಾಲ್ ಆಡುತ್ತೇವೆಂದು ಭಾವಿಸಿ ನಮಗೆ ಒದೆಯುತ್ತಾರೆ. ಆದರೆ ಅವರಿಗೆ ಗೊತ್ತಿರುವುದಿಲ್ಲ ಅವರು ನಮ್ಮನ್ನು ಗೋಲ್ಗೆ ಹತ್ತಿರ ತಲುಪಿಸುತ್ತಿದ್ದಾರೆಂದು. ಎಲ್ಲ ಹಿನ್ನಡೆಯೂ ನಿಮಗೆ ಕೆಡುಕಾಗುವುದಿಲ್ಲ.  
 


 ಒಂದು ಘಟನೆ ಹೇಗೆ ನಡೆಯಿತು ಎಂಬುದು ಮುಖ್ಯ ಅಲ್ಲ. ಆ ಘಟನೆಗೆ ನಾವು ಹೇಗೆ ಪ್ರತಿಕ್ರಿಯಿಸಿದ್ದೇವೆ ಎಂಬುದು ಬಹಳ ಮುಖ್ಯ. ಹಲವು ಸಲ ಕ್ರಿಯೆಗಿಂತ ಪ್ರತಿಕ್ರಿಯೆಯೇ ಜೋರಾಗಿರುತ್ತದೆ. ನಮ್ಮ ಪ್ರತಿಕ್ರಿಯೆ ಸದಾ ಕ್ರಿಯೆಗಿಂತಲೂ ಭಯಂಕರವಾಗಿರಬಾರದು.


 ಕೆಲಸದ ಮುಕ್ತಾಯಕ್ಕೆ ಅವಧಿ ವಿಧಿಸುವುದನ್ನು ಕಿರಿಕಿರಿ ಎಂದು ಭಾವಿಸುವ ಅಗತ್ಯವಿಲ್ಲ. ಇದರಿಂದಾಗಿ ನಮ್ಮ ಅಗತ್ಯತೆ ಮತ್ತು ಸಮಯ ನಿರ್ಧರಿಸಲು ಅನುಕೂಲವಾಗುತ್ತದೆ.


ಮಿತ್ರತ್ವ ಎಂಬುವುದು ಗುಲಾಬಿ ಹೂವಿನಂತೆ. ಅದು ಬಾಡಿ ಹೋದ ನಂತರವೇ ಅದರ ಮೌಲ್ಯ ಗೊತ್ತಾಗುತ್ತದೆ. ಕೆಲವೊಂದು ಬಾರಿ ಜೀವನದಲ್ಲಿ ಮಿತ್ರರ ಲಾಭವೂ ಅದೇ ರೀತಿ. ಬಾಂಧವ್ಯ ಕಡಿದುಹೋದ ನಂತರವೇ ಅವರ ಪ್ರಾಮುಖ್ಯತೆ ಗೊತ್ತಾಗುತ್ತದೆ.


ಜಗತ್ತಿನಲ್ಲಿ ನೀವು ನೋಡುತ್ತಿರುವ ಸಂಗತಿಗಳು ನಿಮ್ಮ ಯೋಚನೆಯ ಪ್ರತಿಫಲನಗಳಷ್ಟೇ. ನೀವು ಒಳ್ಳೆಯ ರೀತಿಯಲ್ಲಿ ಯೋಚಿಸಿದರೆ ಜಗತ್ತು ಒಳ್ಳೆಯದಾಗಿರುತ್ತದೆ. ಕೆಟ್ಟ ರೀತಿಯಲ್ಲಿ ಯೋಚಿಸಿದರೆ ಅದೂ ಕೆಟ್ಟದಾಗಿರುತ್ತದೆ.


ಕ್ರಿಯೆ ಮತ್ತು ಯಶಸ್ಸಿನ ನಡುವೆ ಅವಿನಾಭಾವ ಸಂಬಂಧವಿದೆ. ನೀವು ಕೆಲಸವನ್ನೇ ಆರಂಭಿಸದಿದ್ದರೆ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಹೀಗಾಗಿ ಯಶಸ್ಸಿನ ಬೆನ್ನು ಹತ್ತುವ ಮೊದಲು ಯಾವುದಾದರೊಂದು ಕೆಲಸ ಆರಂಭಿಸಿ.


ನಿಮ್ಮಲ್ಲಿರುವ ಜ್ಞಾನ ಎಂದರೆ ಡಬ್ಬದಲ್ಲಿರುವ ಪೈಂಟ್ ಇದ್ದಂತೆ. ಅದನ್ನು ಗೋಡೆಗೆ ಬಳಿದಾಗಲೇ ಅದರ ಮಹತ್ವ ತಿಳಿಯೋದು. ಬರೀ ಡಬ್ಬದಲ್ಲಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮ ಜ್ಞಾನದಿಂದ ಸುತ್ತಲಿನ ಗೋಡೆಗೆ ವಿವೇಕದ ಬಣ್ಣ ಬಳಿಯಿರಿ.


ಜೀವನದ ಸಾರ್ಥಕ್ಯ ನೀವು ಎಷ್ಟು ಖುಷಿಯಲ್ಲಿದ್ದೀರಿ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಆದರೆ ನಿಮ್ಮಿಂದ ಬೇರೆಯವರು ಎಷ್ಟು ಸಂತೋಷಪಡುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಹೀಗಾಗಿ ನಿಮ್ಮ ಸುತ್ತ ಇರುವವರನ್ನು ಖುಷಿಯಾಗಿಡಲು ಪ್ರಯತ್ನಿಸಿ.


ನಿಮಗೆ ಹಾರಲು ಸಾಧ್ಯವಿಲ್ಲವೇ? ಹಾಗಾದರೆ ಓಡಿ. ನಿಮ್ಮಲ್ಲಿ ಓಡಲು ಶಕ್ತಿ ಇಲ್ಲವೇ, ನಡೆದಾಡಿ. ನಿಮಗೆ ನಡೆಯಲೂ ಆಗದಿದ್ದರೆ ತೆವಳಿಕೊಂಡು ಹೋಗಿ. ನೀವು ಏನೇ ಮಾಡಿ, ಮುನ್ನಡೆಯುತ್ತಲೇ ಇರಿ. ಎಲ್ಲಿಯೂ ನಿಲ್ಲಬೇಡಿ.


 ಸುಗಮ ರಸ್ತೆಯಿಂದ ಉತ್ತಮ ಚಾಲಕರಾಗಲು ಸಾಧ್ಯವಿಲ್ಲ. ಮೋಡಗಳಿಲ್ಲದ ಆಕಾಶ ಉತ್ತಮ ಪೈಲಟ್ಗಳನ್ನು ತರಬೇತುಗೊಳಿಸದು. ತೊಂದರೆರಹಿತ ಜೀವನ ಉತ್ತಮ ಮನುಷ್ಯರನ್ನು ರೂಪಿಸಲಾರದು. ಹೀಗಾಗಿ ನನಗೇ ಏಕೆ ಸಮಸ್ಯೆಗಳು ಎಂದು ಕೇಳಬೇಡಿ.


ಸ್ನೇಹ ಎಂದರೆ ತಾಜ್ಮಹಲ್ ಇದ್ದಂತೆ. ಎಲ್ಲರೂ ಅದರ ಚೆಂದಕ್ಕೆ ಬೆರಗಾಗುತ್ತಾರೆ. ಆದರೆ ಯಾರೂ ಅದನ್ನು ಕಟ್ಟಲು ಎಷ್ಟು ಕಷ್ಟವಾಯಿತೆಂಬುದನ್ನು ಯೋಚಿಸುವುದಿಲ್ಲ. ಸ್ನೇಹವನ್ನು ಸದಾ ಜೋಪಾನವಾಗಿ ಕಾಪಾಡಬೇಕು.
 


ನೀವು ಅಂದುಕೊಂಡಂತೆ ಜೀವನ ಸಾಗುತ್ತಿಲ್ಲವೆಂದಾದರೆ ನೀವು ಭವಿಷ್ಯಕ್ಕಿಂತ ಹೆಚ್ಚಾಗಿ ಭೂತಕಾಲದ ಬಗ್ಗೆಯೇ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಕಳೆದುಹೋದ ಸಂಗತಿ ಬಿಟ್ಟು ಮುಂದಿನ ಜೀವನದ ಬಗ್ಗೆ ಗಮನಹರಿಸಿ.



ಅದೃಷ್ಟವೆಂಬುದು ನಿಮ್ಮ ಮನೆಯ ಬಾಗಿಲನ್ನು ಬಡಿಯದಿದ್ದರೆ ಬೇಸರಿಸಿಕೊಳ್ಳಬೇಡಿ. ಬಡಿಯಲು ನಿಮ್ಮ ಮನೆಗೆ ಬಾಗಿಲೇ ಇಲ್ಲದಿರಬಹುದು. ಮೊದಲು ಬಾಗಿಲನ್ನು ನಿಲ್ಲಿಸುವ ಕೆಲಸ ಮಾಡಿ. ಪರಿಶ್ರಮಪಡದಿದ್ದರೆ ಅದೃಷ್ಟವೂ ನಿಮ್ಮ ಮನೆ ತನಕ ಬರುವುದಿಲ್ಲ.


ನಿಮಗೇನು ಅನ್ನಿಸುತ್ತೆ ಎಂಬುದರ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆದರೆ ನೀವು ಏನು ತಿಳಿದುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಆ ನಿರ್ಧಾರ ಹೆಚ್ಚು ಗಟ್ಟಿಯಾಗಿರುತ್ತದೆ.
 

ಕೆಲವರು ಇಂದಿಗೂ ಮನೆಯಲ್ಲಿ ಲ್ಯಾಂಡ್ ಲೈನ್ ಫೋನ್ ಇಟ್ಟುಕೊಂಡಿರುವುದು, ಮೊಬೈಲ್ ಫೋನ್ ಅನ್ನು  ಹುಡುಕುವುದಕ್ಕಾಗಿ.
-ಮಿ. ಫನ್ನಿ

ಶೀಲಾ ದೀಕ್ಷಿತ್ ತಮ್ಮ ಕೆಲಸದಾಕೆಯನ್ನು ವಜಾ ಮಾಡಿದರಂತೆ. ಕಾರಣ, ಆಕೆ ಪೊರಕೆ ತೆಗೆದುಕೊಂಡು ಕ್ಲೀನ್ ಮಾಡ್ತಾ ಇದ್ಲು.
-ಮಸಾಲಾ ಟ್ವೀಕ್ಸ್

ತೇಜ್ಪಾಲ್ ತಮ್ಮ ಕೃತ್ಯವನ್ನು ಲಘುಚೇಷ್ಟೆ ಎಂದು ಕರೆದುಕೊಳ್ಳುವುದಾದರೆ, ಇನ್ನು ಗಂಭೀರವಾಗಿದ್ದಾಗ ಎಂಥ ಪಾತಕಕ್ಕೆ ಇಳಿಯಬಹುದು.
-ಮಧು ಕಿಶ್ವರ್ ಪೂರ್ಣಿಮಾ


ತಮ್ಮತ್ತ ಎಸೆಯುವುದಕ್ಕೆ ಜನರು ಟೊಮೆಟೊ, ಮೊಟ್ಟೆಗಳನ್ನು ಖರೀದಿಸಲಾಗದಷ್ಟು ದುಬಾರಿಯಾಗಿಸಿದ ಯುಪಿಎ ಬುದ್ಧಿವಂತಿಕೆ ನೀತಿಗೆ ತಲೆಬಾಗಲೇಬೇಕು
- ದ ಫಿಂಗರ್



ಯಾರೂ ಇಲ್ಲದ ಏಕಾಂತದ ಜಾಗಕ್ಕೆ ತೆರಳೋಣ ಎಂದು ಗೆಳತಿ ಹೇಳಿದರೆ, ರಾಹುಲ್ ಗಾಂಧಿ ಚುನಾವಣೆ ಸಭೆಗೆ ಕರೆದುಕೊಂಡು ಹೋಗಬಹುದು.
- ಶ್ರೀಹರ್ಷ ಹೆಗಡೆ, ದೋಹಾ, ಕತಾರ್


ಸಚಿನ್ಗೆ ಪ್ರಧಾನಿ ಫೋನ್ ಮಾಡಿ ಅಭಿನಂದಿಸಿದರಂತೆ. ಈ ಮೂಲಕ ಪ್ರಧಾನಿ ಮೌನ ಮುರಿದ ದಾಖಲೆಯೂ ಸಚಿನ್ಗೆ.
- ಪ್ರೀತಿಯ ಜನಾರ್ದನ



ತಮ್ಮತ್ತ ಎಸೆಯುವುದಕ್ಕೆ ಜನರು ಟೊಮೆಟೊ, ಮೊಟ್ಟೆಗಳನ್ನು ಖರೀದಿಸಲಾಗದಷ್ಟು ದುಬಾರಿಯಾಗಿಸಿದ ಯುಪಿಎ ಬುದ್ಧಿವಂತಿಕೆ ನೀತಿಗೆ ತಲೆಬಾಗಲೇಬೇಕು
- ದ ಫಿಂಗರ್

ನರೇಂದ್ರ ಮೋದಿ ಪ್ರತಿವಾರ ಟಾಪಿಕ್ ಕೊಡುತ್ತಾರೆ ಹಾಗೂ ಕಾಂಗ್ರೆಸ್ ಅದರ ಮೇಲೆ ಪ್ರಬಂಧ ಬರೆಯುತ್ತದೆ. ಈ ವಾರದ ವಿಷಯ- ಸರ್ದಾರ್ ಪಟೇಲ್.
-ಚೇತನ್ ಭಗತ್


ಚೀನಾ ಮಹಾಗೋಡೆಯೇನಾದರೂ ನಮ್ಮ ದೇಶದಲ್ಲಿದ್ದಿದ್ದರೆ ಜಗತ್ತಿನ ಅತಿ ಉದ್ದದ ಶೌಚಾಲಯ ಹೊಂದಿರುವ ಖ್ಯಾತಿ ನಮ್ಮದೇ ಆಗಿರುತ್ತಿತ್ತು.
-ಮಸಾಲಾ ಟ್ವೀಕ್ಸ್


 ಏಕಕಾಲಕ್ಕೆ ಒಳ್ಳೆಯ ಹಾಗೂ ಕೆಟ್ಟ ಸುದ್ದಿ ಯಾವುದು ಗೊತ್ತೇ? ನಿನ್ನೆಲ್ಲ ಸ್ನೇಹಿತರ ಪೈಕಿ ನೀನೇ ಚೆನ್ನಾಗಿ ಚುಂಬಿಸುತ್ತೀಯಾ ಎಂದು ನಿಮ್ಮ ಗರ್ಲ್ಫ್ರೆಂಡ್ ನಿಮಗೆ ಹೇಳುವುದು.

ಮದುವೆ ಅಂದ್ರೆ ಮನುಷ್ಯನಿಗೆ ಸೆವೆಂಥ್ ಸೆನ್ಸ್ ಇದ್ದಂತೆ. ಅದು ಎಲ್ಲ ಆರೂ ಸೆನ್ಸ್ಗಳನ್ನು ನಾಶ ಮಾಡಿ, ವಧು-ವರರನ್ನು ನಾನ್ಸೆನ್ಸ್ ಮಾಡಿಬಿಡುತ್ತದೆ.


ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡ ಅಂದುಕೊಳ್ಳುತ್ತಾನೆ.


ಸಮಾಜದಲ್ಲಿ ವೇಶ್ಯೆಯರೂ, ಡಾಕ್ಟರ್ಗಳು ಇರಬೇಕು. ಅವರಿದ್ದಾರೆ ಎಂದ ಮಾತ್ರಕ್ಕೆ ಅವರ ಬಳಿ ಹೋಗಲೇಬೇಕು ಎಂದಿಲ್ಲ.

ತಾಯ್ತನ ಎಂಬುದು ಎಲ್ಲ ಸ್ತ್ರೀಯರೂ ಬಯಸುವ ಅವಕಾಶ. ಹಾಗಂತ ಅವಕಾಶ ಸಿಕ್ಕಿತೆಂದು ತಾಯಿಯಾಗಬಾರದು.


ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?


ಅಕಸ್ಮಾತ್ತಾಗಿ ಹಾವನ್ನು ತುಳಿದು ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು ಕಡಿ, ಕಡಿ  ಎಂದು ಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್.


ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ.


ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.


ಓ ದೇವರೇ, ನೀನು ನನ್ನನ್ನು ಡಿಸ್ಮಿಸ್ ಮಾಡಲು ಸಾಧ್ಯವಿಲ್ಲ, ನಾನೇ ರಾಜಿನಾಮೆ ಕೊಡುತ್ತೇನೆ ಎಂದು ದೇವರಿಗೆ ಸವಾಲು ಹಾಕುವುದಕ್ಕೆ ಆತ್ಮಹತ್ಯೆ ಎನ್ನಬಹುದು.



ತೆಂಡುಲ್ಕರ್ ಔಟಾಗುತ್ತಲೇ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಮರಳುತ್ತಿದ್ದರು. ಅಯ್ಯೋ.. ಇನ್ನು ಶಾಶ್ವತವಾಗಿ ನಾವೆಲ್ಲ ಕೆಲಸಕ್ಕೆ ಮರಳಬೇಕಲ್ಲ.
ರಮೇಶ್ ಶ್ರೀವಸ್ತ


ಹೆಣ್ಣು ಸುಂದರವಾಗಿದ್ದಾಳೆ ಎಂದು ಹೇಳಿ. ಹಾಟ್ ಇದ್ದಾಳೆ ಅನ್ನೋಕೆ ಅವಳೇನು ತಾಪಮಾನವಾ?
- ಅನುಪಮಾ ರಾಜ್


ಟಿ.ವಿ. ಧಾರಾವಾಹಿಗಳೇ 80 ಪ್ರತಿಶತ ಕೌಟುಂಬಿಕ ಜಗಳಕ್ಕೆ ಕಾರಣ ಎನ್ನುತ್ತದೆ ಸಂಶೋಧನೆ. ಶೇ. 20 ಜಗಳಕ್ಕೆ ರಿಪೀಟ್ ಟೆಲಿಕಾಸ್ಟ್ ಕಾರಣವೇ?-ಪ್ರಿಯಾಂಕಾ ನಾಯಕ್



ಲಿಬಿಯಾದಲ್ಲಿ ಪ್ರಧಾನಿಯನ್ನೇ ಕಿಡ್ನಾಪ್ ಮಾಡಿದರಂತೆ. ನಮ್ಮ ಪ್ರಧಾನಿ ಹುಷಾರಾಗಿರಬೇಕು. ಇವರು ನಾಪತ್ತೆಯಾದರೆ ಹುಡುಕಲು ಯಾರಿಗೂ ಆಸಕ್ತಿ ಇದ್ದಂತಿಲ್ಲ.
-ಬಾಬು ಭಯ್ಯಾ



ಭಾರತದಲ್ಲಿ ಎಲ್ಲರೂ ಮೊಬೈಲ್ ತಜ್ಞರೇ. ಯಾವುದೇ ಸಮಸ್ಯೆ ಇರಲಿ  ಸ್ವಿಚ್ ಆಫ್ ಮಾಡಿ ಆನ್ ಮಾಡಿ ಸರಿಹೋಗುತ್ತೆ  ಎಂಬ ಸಲಹೆ ಕೊಡುತ್ತಾರೆ.
- ಶಂಕರ್ ಪಾಂಡೆ


ದೆಹಲಿ ಹೆಂಗಸರಿಗೆ ಸುರಕ್ಷಿತವಲ್ಲ. ನೋಡಿ ಶೀಲಾ ದೀಕ್ಷಿತ್ ಅವರಿಗೇನಾಯಿತು.
-ಫಣೀಶ್ ಬಸವಾನಿ

ವಾದ್ರಾ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ. ಭೂಮಿ ಬಗ್ಗೆ ಈ ವ್ಯಕ್ತಿಯ ಹಸಿವನ್ನು ನೋಡಿದರೆ, ಕಾಶ್ಮೀರ ಹಾಗಿರಲಿ, ಲಾಹೋರ್- ಇಸ್ಲಾಮಾಬಾದ್ಗಳನ್ನು ಉಳಿಸಿಕೊಡಿ ಅಂತ ಪಾಕಿಸ್ತಾನ ಕೇಳಬಹುದು.
-ಜಲ್ ಕುಡ್ಕಿ


ಭಾರತೀಯ ರಾಜಕಾರಣಿಗಳನ್ನು ಮೂರ್ಖರು ಎನ್ನುವಂತಿಲ್ಲ. ಜನಕ್ಕೆ ಹಾಗೆ ಹೇಳಬಹುದು. ಪ್ರತಿಬಾರಿಯೂ ನೂರು ಕೋಟಿ ಮಂದಿಯನ್ನು ಅವರು ನಂಬಿಸುತ್ತಾರೆ.
- ಪ್ರೀಸ್ಟ್


ಹೆಂಗಸರ ಬಳಿ ಉಳಿದುಕೊಳ್ಳಬಹುದಾದ ಒಂದೇ ಒಂದು ರಹಸ್ಯ ಎಂದರೆ- ಅವರ ವಯಸ್ಸು.
-ಮಸಾಲಾ ಟ್ವೀಕ್ಸ್


ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.


ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.


ಮಲಗುವಾಗ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯ ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಜತೆಯೇ ಮಲಗುತ್ತಾರೆ.

ಕೆಲವು ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.


ಕಾಲೇಜಿನ ಮುಂದೆ ಹುಡುಗಿಗೆ ಪ್ರಪೋಸ್ ಮಾಡುವುದು ಸಭ್ಯತೆ. ದೇವಸ್ಥಾನದ ಮುಂದೆ ಸಂಸ್ಕೃತಿ. ಹುಡುಗಿಯ ಮನೆಯ ಮುಂದೆ ಧಿಮಾಕು. ಗಂಡನ ಮುಂದೆ ಮಾಡಿದರೆ ಎದೆಗಾರಿಕೆ.


ದಾಂಪತ್ಯ ಚೆನ್ನಾಗಿ ಇರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.

ನಿಮ್ಮ ಮನೆಗೆ ಹೆಚ್ಚು ನೆಂಟರು ಬರಬಾರದು ಎಂಬ ಆಸೆ ನಿಮಗಿದ್ದರೆ ಎಲ್ಐಸಿ ಏಜೆಂಟ್ ಆಗುವ ಬಗ್ಗೆ ಯೋಚಿಸಬಹುದು.


ಯಾವತ್ತೂ ರೈಟ್ ಎಂದು ಹೇಳುತ್ತಲೇ ಇರುವ ಬಸ್ ನಿರ್ವಾಹಕನನ್ನು ಮುಲಾಜಿಲ್ಲದೆ ಬಲಪಂಥೀಯರ ಸಾಲಿಗೆ ಸೇರಿಸಬಹುದು.

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಗಾದೆ ಮಾತಿದೆ. ಹಾಗೆಂದು ತುಪ್ಪ ತಿನ್ನಬೇಕು ಎಂದೆನಿಸಿದಾಗಲೆಲ್ಲ ಸಾಲ ಮಾಡಬಾರದು.

ಮಿಷನ್ ಇಂಪಾಸಿಬಲ್ ಚಿತ್ರವನ್ನು ಕನ್ನಡದಲ್ಲಿ ಮಾಡುವುದಾದರೆ 'ಇದು ಅಸಾಧ್ಯ' ಎಂಬ ಹೆಸರಿಡಬಹುದು. ಮಿಷನ್ ಇಂಪಾಸಿಬಲ್-2 ಮಾಡುವುದಾದರೆ ಆ ಚಿತ್ರಕ್ಕೆ ಇಡಬಹುದಾದ ಹೆಸರು, ನಾವು ಮೊದ್ಲೇ ಹೇಳಿದ್ವಿ ಇದು ಅಸಾಧ್ಯ ಅಂತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement