ಗಮನ ಸೆಳೆದ ಸರ್ವಾಧ್ಯಕ್ಷರ ಮೆರವಣಿಗೆ
-ರುದ್ರಪ್ಪ ಆಸಂಗಿ
ಬಿಜಾಪುರ: ಕಣ್ಣು ಹಾಯಿಸಿದಷ್ಟು ದೂರ ಕನ್ನಡಾಂಬೆಯ ಮಕ್ಕಳ ಬೃಹತ್ ಮೆರವಣಿಗೆ. 'ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ' ಎಂಬ ಉದ್ಘೋಷ. ಜಾನಪದ ಕಲಾ ತಂಡಗಳ ಸೊಬಗು, ಸೊಗಡು. ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್, ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಬ್ಯಾಂಡ್ನ ಮನಮೋಹಕ ಸಂಗೀತ, ಎಲ್ಲೆಲ್ಲೂ ಸಾಂಸ್ಕೃತಿಕ ಕಲರವ, ಬೀದಿ ಬೀದಿಯಲ್ಲಿ ಕನ್ನಡದ ಕಹಳೆ. ಇವೆಲ್ಲದರ ಮಂಚೂಣಿಯಲ್ಲಿ 90ರ ಹಿರಿಯಜ್ಜ ಕನ್ನಡಿಗರ ಆತ್ಮಸಾಕ್ಷಿಯ ಪ್ರತೀಕವಾದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋ. ಚನ್ನಬಸಪ್ಪ ಅವರನ್ನು ಹೊತ್ತ ಕನ್ನಡದ ತೇರು...
ಶನಿವಾರ ಬಿಜಾಪುರದಲ್ಲಿ ಆರಂಭಗೊಂಡ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಿವು. ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಕನ್ನಡದ ಸಹಸ್ರಾರು ಅಭಿಮಾನಿಗಳು ಉರಿ ಬಿಸಿಲು ಲೆಕ್ಕಿಸದೆ ಪಾಲ್ಗೊಂಡಿದ್ದರು. ಕನ್ನಡಿಗರ ಹಬ್ಬಕ್ಕೆ ನೆರೆದ ಜನರಲ್ಲಿ ಎಲ್ಲೆಲ್ಲೂ ಅಮಿತೋತ್ಸಾಹ ಮಿತಿ ಮೀರಿತ್ತು.
ಮೂರು ತಂಡಗಳಲ್ಲಿ: ನಗರದ ಕನಕ ವೃತ್ತದಿಂದ ಡೋಣಿ ಕಲಾ ಸಮೂಹ, ಸಿದ್ದೇಶ್ವರ ದೇವಸ್ಥಾನದಿಂದ ಭೀಮಾ ಕಲಾ ಸಮೂಹ, ಕೇಂದ್ರ ಬಸ್ ನಿಲ್ದಾಣದಿಂದ ಕೃಷ್ಣಾ ಕಲಾ ಸಮೂಹಗಳ ಕಲಾ ತಂಡಗಳ ಮೆರವಣಿಗೆ ಏಕ ಕಾಲದಲ್ಲಿ ಬೆಳಿಗ್ಗೆ 8ಕ್ಕೆ ಆರಂಭಗೊಂಡಿದ್ದವು.
ಮೈಸೂರು, ಬೆಂಗಳೂರು, ಗುಲ್ಬರ್ಗ, ಶಿಗ್ಗಾಂವಿ, ಬೆಳಗಾವಿ ಪೊಲೀಸ್ ಇಲಾಖೆಯ ಅಶ್ವದಳಗಳು ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಿದವು. ಕುದುರೆಗಳ ಮೇಲೆ ಭರ್ಚಿ ಹಿಡಿದು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿರುವುದು ರಾಜರ ಕಾಲದ ದಿನಗಳನ್ನು ನೆನಪಿಗೆ ತರುತ್ತಿತ್ತು.
ಜಮಖಂಡಿಯ ಪಾಂಡುರಂಗಪ್ಪ ಅಮಜಗೋಳ ಅವರ ಕಲಾ ತಂಡದ ಮೀನಿನ ಸೋಗು ಅತ್ಯಂತ ನಯನ ಮನೋಹರವಾಗಿತ್ತು. ಮೀನಿನ ವೇಷ ಧರಿಸಿದ ವ್ಯಕ್ತಿಯನ್ನು ಮೀನುಗಾರರು ಬಲೆ ಹಾಕಿ ಹಿಡಿಯುವ ರೂಪಕ ಜನರ ಕಣ್ಮನ ಸೆಳೆಯಿತು. ನದಿದಂಡೆಯಲ್ಲಿ ಮೀನುಗಾರರ ನೈಜ ದೃಶ್ಯಾವಳಿಯಂತೆ ಇದು ಕಂಡು ಬಂತು.
ಕಾಮನಕೇರಿಯ ಕಸ್ತೂರಬಾ ಗಾಂಧಿ ಬಾಲಿಕಾ ಶಾಲೆ ಮಕ್ಕಳ ಡೊಳ್ಳು ಕುಣಿತ, ರಾಯಚೂರಿನ ಚಿನ್ನಪ್ಪ ಯಾಪಲಪರ್ವಿ ಕಲಾ ತಂಡದ ಹಗಲುವೇಷ ಜನರನ್ನು ಆಕರ್ಷಿಸಿತು. ಬಿಜಾಪುರ ತಾಲೂಕಿನ ಅಲ್ಲಾಪುರ ತಾಂಡಾದ ಲಂಬಾಣಿ ಮಹಿಳೆಯರ ನೃತ್ಯ ನೋಡುಗರಿಗೆ ಬಲು ಖುಷಿ ನೀಡಿತು. ತಾಳಕ್ಕೆ ತಕ್ಕಂತೆ ಲಂಬಾಣಿ ಮಹಿಳೆಯರು ತಮ್ಮ ವಿಶಿಷ್ಟ ಉಡುಗೆಯಲ್ಲಿ ನೋಡುಗರ ಕಣ್ಮನ ಸೆಳೆದರು.
ಸಾರವಾಡದ ಕೀಲು ಕುದುರೆ, ಜಮಖಂಡಿಯ ರುಕ್ಮವ್ವ ಕಲಾ ತಂಡದ ಚೌಡಕಿ ಪದ, ತುಮಕೂರಿನ ಕಲಾವಿದ ಸಣ್ಣಹೊನ್ನಯ್ಯ ಸಂಕಲಕೆರೆ ತಂಡದ ಸೋಮನಕುಣಿತ, ಮಂಡ್ಯ ಜಿಲ್ಲೆಯ ರಿವಾಯತ ಕಲಾ ತಂಡ, ಬಿಜಾಪುರದ ಹೆಜ್ಜೆಮೇಳ, ದಾಂಡಿಯಾ, ಲೇಜಿಮ, ಎಂ.ಕೃಷ್ಣಪ್ಪ ಹುಲ್ಲೂರ ತಂಡ ಸೇರಿ ರಾಜ್ಯದ ಎಲ್ಲೆಡೆಯಿಂದ ಆಗಮಿಸಿದ್ದ 54 ಕಲಾ ತಂಡಗಳು ಮೆರವಣಿಗೆಗೆ ಕಳೆ ತುಂಬಿದವು. ಹಸಿರು ತೋರಣ, ತೆಂಗಿನ ಗರಿ, ಕನ್ನಡದ ಧ್ವಜಗಳನ್ನು ಮೆರವಣಿಗೆ ರಸ್ತೆಯ ಇಕ್ಕೆಲಗಳಲ್ಲಿ ಅಲಂಕರಿಸಲಾಗಿತ್ತು. ಇದಕ್ಕೂ ಮುನ್ನ ಬಿಜಾಪುರ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷ ಕೋ. ಚೆನ್ನಬಸಪ್ಪ ಕನ್ನಡ ತೇರನ್ನೇರಿ ಕಲಾ ತಂಡಗಳ ಜೊತೆ ಜೊತೆಯಲ್ಲಿ ಸೈನಿಕ ಶಾಲೆಯತ್ತ ಸಾಗಿದರು. ಸುಮಾರು 2 ಕಿ.ಮಿ. ಉದ್ದದ ಮೆರವಣಿಗೆ ಕನಕ ವೃತ್ತದಿಂದ ಸಮ್ಮೇಳನ ನಡೆಯುವ ಸೈನಿಕ ಶಾಲೆ ತಲುಪಲು ಮೂರು ಗಂಟೆ ತೆಗೆದುಕೊಂಡಿತು.
ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಶಾಸಕ ವಿಠಲ ಕಟಕದೊಂಡ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.