ಕೊಡಗಿಗೆ 80ನೇ ಸಮ್ಮೇಳನ ಕೊಡುಗೆ (ಸಮ್ಮೇಳನದ ಚುಟುಕು...)
ಬಿಜಾಪುರ: ಕನ್ನಡ ಸಾಹಿತ್ಯ ಸಮ್ಮೇಳನ ಬರದ ನಾಡು ಬಿಜಾಪುರದಿಂದ ನೇರವಾಗಿ ಪ್ರಕೃತಿ ಸಂಪತ್ತಿನ ಬೀಡಾದ, ಕಾವೇರಿ ನಾಡು ಕೊಡಗಿಗೆ ಜಿಗಿದಿದೆ. ಭಾನುವಾರ ಸಂಜೆ ನಡೆದ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಡಗಿನಲ್ಲಿ ನಡೆಸುವ ಬಗ್ಗೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. 'ಕೊಡಗಿನಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಯಲಿದೆ' ಎಂದು 'ಕನ್ನಡಪ್ರಭ' ಭಾನುವಾರದ ಸಂಚಿಕೆಯಲ್ಲೇ ಸುದ್ದಿ ಪ್ರಕಟಿಸಿತ್ತು. ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಕೊಡಗಿನಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಉತ್ಸುಕರಾಗಿದ್ದರು. ಭಾನುವಾರ ನಡೆದ ಸಭೆಯಲ್ಲಿ ಒಟ್ಟು 41 ಮಂದಿ ಭಾಗವಹಿಸಿದ್ದರು. ಅದರಲ್ಲಿ 25 ಮಂದಿ ಕೊಡಗಿನ ಪರ ಮತಚಲಾಯಿಸುವ ಮೂಲಕ 80ನೇ ಸಾಹಿತ್ಯ ಸಮ್ಮೇಳನ ಕೊಡಗಿಗೆ ಲಭಿಸಿತು. ಬಳ್ಳಾರಿ, ಹಾವೇರಿ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳು 80ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಬೇಡಿಕೆ ಮುಂದಿಟ್ಟದ್ದವು. ಕಳೆದ ಕೆಲವು ವರ್ಷಗಳಿಂದ ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯಲ್ಲೇ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು. ಅದಕ್ಕೆ ಮುಂದಿನ ವರ್ಷ ಬ್ರೇಕ್ ಬೀಳಲಿದೆ.
ಮೂಗು ತೂರಿಸುವ ಅಧಿಕಾರ ಯಾರಿಗೂ ಇಲ್ಲ: ಹಾಲಂಬಿ
ಡಾ.ಫ.ಗು. ಹಳಕಟ್ಟಿ ವೇದಿಕೆ, ಬಿಜಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಮೂಗು ತೂರಿಸುವ ಅಧಿಕಾರ ಯಾರಿಗೂ ಇಲ್ಲ ಎನ್ನುವ ಮೂಲಕ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ಬೆಂಬಲಿಗರನ್ನು ಪರೋಕ್ಷವಾಗಿ ಎಚ್ಚರಿಸಿದರು. ಶನಿವಾರ ಸಂಜೆ ಗಝಲ್ ಗೋಷ್ಠಿ ನಡೆದ ವೇಳೆ ಸಚಿವರ ಹಂತಿ ಹಾಡಿಗಾಗಿ ಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಸಚಿವರ ಬೆಂಬಲಿಗರು ದಾಂಧಲೆ ಮಾಡಿದ ಘಟನೆ ಕುರಿತಂತೆ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ಅವರು, ಇಂಥ ನಡವಳಿಕೆಯನ್ನು ಪರಿಷತ್ತು ಸಹಿಸುವುದಿಲ್ಲ. ಸಾಹಿತಿಗಳ ಗೌರವಕ್ಕೆ ಧಕ್ಕೆ ತರುವ ಯತ್ನವನ್ನು ಯಾರೂ ಮಾಡಬಾರದು. ಅಷ್ಟಾಗಿಯೂ ಮುಂದಾದರೇ ಪರಿಷತ್ತು ತಕ್ಕ ಉತ್ತರ ನೀಡಲಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದರು.
ಮಕ್ಕಳನ್ನು ಕಳೆದುಕೊಂಡು ಪಾಲಕರ ಪರದಾಟ
ಬಿಜಾಪುರ: ಬಿಜಾಪುರದಲ್ಲಿ ನಡೆಯುತ್ತಿರುವ ಎರಡನೇ ದಿನದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹರಿದು ಬರುತ್ತಿರುವ ಅಪಾರ ಜನಸ್ತೋಮದಲ್ಲಿ ತಂದೆ, ತಾಯಿಗಳು ತಮ್ಮ ಮಕ್ಕಳನ್ನು ಕಳೆದುಕೊಂಡು ಆತಂಕದ ಕ್ಷಣಗಳನ್ನು ಅನುಭವಿಸಬೇಕಾಯಿತು. ಸಮ್ಮೇಳನದ ಆರಂಭ ದಿನ ಜನಸಂದಣಿಯಲ್ಲಿ ಮಕ್ಕಳು ತಮ್ಮ ತಂದೆ, ತಾಯಿಗಳಿಂದ ದೂರಾಗಿ ಅಳುತ್ತ ನಿಂತಿರುವುದು ಕಂಡಂತೆ, ಎರಡನೇ ದಿನವೂ ಕಾಣುತ್ತಿತ್ತು. ತಂದೆ- ತಾಯಿಗಳನ್ನು ಕಳೆದುಕೊಂಡ ಮಕ್ಕಳನ್ನು ಸಂಘಟಕರು ವೇದಿಕೆ ಹತ್ತಿರ ಕರೆದುಕೊಂಡು ಹೋಗಿ ಧ್ವನಿವರ್ಧಕದ ಮೂಲಕ ಕಾಣೆಯಾದ ಮಕ್ಕಳ ಹೆಸರನ್ನು ಕೂಗಿ ಹೇಳುತ್ತಿದ್ದರು. ಧ್ವನಿವರ್ಧಕದ ಮೂಲಕ ಕಾಣೆಯಾದ ಮಗುವಿನ ಹೆಸರು ಘೋಷಿಸಿದರೂ ಪೋಷಕರು ಆಗಮಿಸದೇ ಇದ್ದಾಗ ವೇದಿಕೆಯ ಅಕ್ಕ ಪಕ್ಕದ ಕ್ಯಾಮೆರಾ ಪರದೆಯ ಮೇಲೆಯೂ ತೋರಿಸುತ್ತಿದ್ದರು. ನಂತರ ಪೋಷಕರು ತಮ್ಮ ಮಕ್ಕಳನ್ನು ಗುರುತಿಸಿ ಪರಸ್ಪರ ಎದೆಗಪ್ಪಿಕೊಂಡು ಕೊಂಡೊಯ್ಯುತ್ತಿದ್ದ ದೃಶ್ಯ ಹೃದಯ ಸ್ಪರ್ಶಿಯಾಗಿತ್ತು.
ಸಮ್ಮೇಳನಕ್ಕೆ ಚಕ್ಕರ್ ವಿಶ್ವರೂಪಂಗೆ ಹಾಜರ್
ಬಿಜಾಪುರ: ನಗರದ ಹೊರ ವಲಯದಲ್ಲಿರುವ ಸೈನಿಕ ಶಾಲೆ ಮೈದಾನದಲ್ಲಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಡಿಂಡಿಮ ಸದ್ದು ಮಾಡುತ್ತಿದ್ದರೆ, ಇತ್ತ ಬಿಜಾಪುರ ನಗರದಲ್ಲಿ ವಿಶ್ವರೂಪಂ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಕನ್ನಡದ ಸವಿಯುಣ್ಣಲು ಬಂದವರು ಸಮ್ಮೇಳನಕ್ಕೆ ಚಕ್ಕರ್ ಹಾಕಿ ವಿಶ್ವರೂಪಂ ಚಿತ್ರ ನೋಡುತ್ತಿದ್ದಾರೆ. ಬಿಜಾಪುರದಲ್ಲಿ ಒಟ್ಟು 7 ಚಿತ್ರಮಂದಿರಗಳಲ್ಲಿ ತೆಲಗು, ತಮಿಳು ಸೇರಿದಂತೆ ಅನ್ಯ ಭಾಷೆಗಳ ಚಿತ್ರಗಳಿಗೆ ಅಷ್ಟೊಂದು ಪ್ರೋತ್ಸಾಹವಿಲ್ಲ. ಆದರೂ ಭರ್ಜರಿ ಹವಾ ಹಾಗೂ ವಿವಾದದೊಂದಿಗೆ ತೆರೆಗೆ ಬಂದಿರುವ ವಿಶ್ವರೂಪಂ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ತನ್ಮೂಲಕ ತೆಲುಗು ರೂಪವಾದರೂ ಸರಿ ಚಿತ್ರದಲ್ಲೇನಿದೆ ಎನ್ನುವ ಕುತೂಹಲದಿಂದಾಗಿ ಚಿತ್ರರಸಿಕರು ವಿಶ್ವರೂಪಂ ನೋಡಲು ಮುಗಿಬಿದ್ದಿದ್ದಾರೆ. ಅದರಲ್ಲಿಯೂ ಸಮ್ಮೇಳನಕ್ಕೆಂದು ಬಂದ ಜನರೇ ಹೆಚ್ಚಾಗಿದ್ದಾರೆ. ಇಲ್ಲಿನ ತ್ರಿಪುರಸುಂದರಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಮೊದಲು ಪ್ರದರ್ಶನವೊಂದಕ್ಕೆ ಸುಮಾರು 100 ರಿಂದ 150 ಟಿಕೆಟ್ ಬಿಕರಿಯಾಗುತ್ತಿತ್ತು. ಆದರೆ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೊಂಡ ನಂತರ ಆರಂಭದ ದಿನವೇ ಚಿತ್ರ ನೋಡಲು ಜನ ಮುಗಿ ಬಿದ್ದಿದ್ದಾರೆ.
ಕನ್ನಡ ಧ್ವಜಕ್ಕೆ ಹೆಚ್ಚಿದ ಬೇಡಿಕೆ
ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಧ್ವಜ, ಧ್ವಜ ಬಣ್ಣದ ಶಾಲು, ರುಮಾಲಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ. ಬಹುತೇಕ ಕನ್ನಡಾಭಿಮಾನಿಗಳು ಕನ್ನಡ ಧ್ವಜ, ಶಾಲುಗಳನ್ನು ಖರೀದಿಸುತ್ತಿದ್ದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಜನರು ಬರುವಾಗಲೇ ಧ್ವಜ, ಶಾಲು, ರುಮಾಲು, ಟೊಪ್ಪಿಯನ್ನು ಕೊಂಡು ಬಂದಿದ್ದರೆ, ಇನ್ನು ಕೆಲವರು ಸಮ್ಮೇಳನದ ಸಂದರ್ಭದಲ್ಲೇ ಖರೀದಿಸುತ್ತಿದ್ದುದು ಕಂಡು ಬಂತು. ಬಿಜಾಪುರದ ತುಂಬೆಲ್ಲ ಕನ್ನಡ ಧ್ವಜ, ಶಾಲು, ರುಮಾಲುಗಳೇ ಕಾಣುತ್ತಿದ್ದವು. ಕೆಲ ಯುವಕರು ಒಂದೇ ರೀತಿಯ ಶಾಲು ಹೆಗಲಿಗೆ ಹೊದ್ದು, ತಲೆಗೆ ರುಮಾಲು ಸುತ್ತಿಕೊಂಡು 'ಕನ್ನಡಾಂಬೆಗೆ ಜಯವಾಗಲಿ' ಎಂದು ಕೂಗುತ್ತಿದ್ದರು. ಸಮ್ಮೇಳನ ಆರಂಭವಾದ ಶನಿವಾರ ಹಾಗೂ ಭಾನುವಾರ ಸೇರಿ ಒಟ್ಟು 30 ಸಾವಿರದಷ್ಟು ಬಾವುಟ ಹಾಗೂ ಶಾಲುಗಳು ಮಾರಾಟವಾಗಿವೆ ಎಂದು ಬಾವುಟ, ಶಾಲು ಮಾರಾಟ ಮಾಡುತ್ತಿದ್ದ ಬೆಳಗಾವಿಯ ರೇಖಾ ಪದ್ಮರಾಜ ಪಾಟೀಲ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.