ಪ್ರತ್ಯೇಕತೆಯ ಕೂಗು ಕೇಳಬಾರದು: ಕೋ.ಚ
ಡಾ.ಫ.ಗು.ಹಳಕಟ್ಟಿ ವೇದಿಕೆ, ಬಿಜಾಪುರ: ಕರ್ನಾಟಕದ ಜನ ಒಂದಾಗಿ ಬಾಳಬೇಕು. ಕ್ವಿಕ್ಫಿಕ್ಸ್ ಎಂಬ ಅಂಟಿನಂತೆ ಕರ್ನಾಟಕದ ಎಲ್ಲ ಪ್ರದೇಶಗಳು ಮತ್ತು ಜನತೆ ಅಂಟಿಕೊಂಡಿರಬೇಕು. ಯಾವತ್ತಿಗೂ ಪ್ರತ್ಯೇಕತೆಯ ಕೂಗು ಕೇಳಬಾರದು ಎಂದು 79ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚನ್ನಬಸಪ್ಪ ಹೇಳಿದರು.
ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮನ್ನಾಳುವವರೂ ಕೇವಲ ರಾಜಕಾರಣಿಗಳಾಗದೇ, ಮುತ್ಸದ್ಧಿಗಳಾದರೆ ಎಲ್ಲ ಪ್ರದೇಶಗಳ ಸಮಾನ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುತ್ತಾರೆ. ಕೃಷ್ಣಾ ನದಿ ನೀರಿನ ವಿಷಯವನ್ನೇ ಗಮನಿಸಿ, ಕೃಷ್ಣಾ ಮೊದಲ ಹಂತದಲ್ಲಿ ಕರ್ನಾಟಕಕ್ಕೆ ಸಾಕಷ್ಟು ನೀರು ಲಭ್ಯವಿತ್ತು. ಅದನ್ನು 2000ನೇ ಇಸವಿಯೊಳಗೆ ನಾವು ಬಳಸಿಕೊಳ್ಳಬೇಕಿತ್ತು. ಹಾಗೆ ಮಾಡಲು ನಮ್ಮ ಸರ್ಕಾರ ವಿಫಲವಾಯಿತು. ಇಂಥ ನಿಷ್ಕಾಳಜಿಗಳಿಗೆ ಅವಕಾಶ ಇರಬಾರದು. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿ ಕುರಿತು ಅಸಮಾಧಾನ ಇದ್ದಿದ್ದು ನಿಜ. ಆದರೆ ವಿಶೇಷ ಸ್ಥಾನಮಾನ ಸಿಕ್ಕನಂತರ ಅವರು ಸಂತೋಷಗೊಂಡಿದ್ದಾರೆ. ಏನೇ ಅಸಮಾಧಾನಗಳಿದ್ದರೂ ಇಲ್ಲಿಗೇ ಕೊನೆಯಾಗಲಿ ಎಂದರು.
ಡಾ.ಸರಸ್ವತಿ ಚಿಮ್ಮಲಗಿಯವರಂತೂ ನೀವು ನ್ಯಾಧೀಶರಾಗಿದ್ದಾಗ ಎಷ್ಟು ಜನ ಮಹಿಳೆಯರಿಗೆ ನ್ಯಾಯ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿ ಪ್ರೇಕ್ಷಕರನ್ನು ಹಾಗೂ ಅಧ್ಯಕ್ಷರನ್ನು ಬೆಚ್ಚಿ ಬೀಳಿಸಿದರು.
ಡಾ. ಕೃಷ್ಣಮೂರ್ತಿ, ಡಾ. ವಿಶ್ವನಾಥ, ಡಾ. ರಾಜಶೇಖರ ಇಚ್ಚಂಗಿ, ಮೇ.ಕೃ. ಮೇಗಾಡೆ, ಶಿವಯೋಗಿ, ಡಾ. ಎಚ್.ಎಸ್. ನಿರಂಜನಾರಾಧ್ಯ, ಡಾ. ವೂಡೇ, ಪಿ. ಕೃಷ್ಣ, ಡಾ. ಪ್ರದೀಪಕುಮಾರ ಹೆಬ್ರಿ, ಚೆಲುವೇಗೌಡ, ಪ್ರಕಾಶ ಖಾಡೆ, ಮ. ನರಸಿಂಹಮೂರ್ತಿ, ಇಬ್ರಾಹಿಂ ಮುಲ್ಲಾ ಸೇರಿದಂತೆ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.
ಒಮ್ಮೆಗೆ ಎಲ್ಲ ಪ್ರಶ್ನೆಗಳನ್ನು ಕೇಳಿ ನಂತರ ಅಧ್ಯಕ್ಷರು ಉತ್ತರಿಸುವುದು ಎಂಬ ವ್ಯವಸ್ಥೆಯಿಂದ ಯಾವ ಪ್ರಶ್ನೆಗೆ ಅಧ್ಯಕ್ಷರು ಯಾವ ಉತ್ತರಕೊಟ್ಟರು ಎಂಬುದನ್ನು ಹೊಂದಿಸಿ ಬರೆಯುವ ಜವಾಬ್ದಾರಿ ಪತ್ರಕರ್ತರು ಹಾಗೂ ಪ್ರೇಕ್ಷಕರಿಗೇ ಒಪ್ಪಿಸಲಾಯಿತು.
ಏನೂ ಕೇಳಾಕ್ಹತ್ತಿಲ್ರಿ.... ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ಹೆಚ್ಚು ಕಡಿಮೆ ಮೈಕಾಸುರನ ಹಾವಳಿಗೆ ಬಲಿಯಾಯಿತು. ಆರಂಭದಲ್ಲಿ 2-3 ಪ್ರಶ್ನೆಗಳಿಗೆ ಅಧ್ಯಕ್ಷರು ಏನು ಉತ್ತರ ಹೇಳಿದರು ಎಂಬುದು ಬಹುತೇಕರಿಗೆ ಗೊತ್ತಾಗಲಿಲ್ಲ. ಮೂರು ಮೈಕ್ಗಳನ್ನು ಅಳವಡಿಸಿದರೂ ಅಧ್ಯಕ್ಷರ ಸ್ವರ ಜನರಿಗೆ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ನಂತರ ಮೈಕ್ ಕುಂಯ್ಗುಡುವ ರೋಗ ಆರಂಭವಾಯಿತು. ಯಾವಾಗ ಜನರು ಸಹನೆ ಕಳೆದುಕೊಂಡು ಇಲ್ಲಿ ಏನೂ ಕೇಳಾಕ್ಹತ್ತಿಲ್ರೀ... ಎಂದು ಬೊಬ್ಬೆ ಹೊಡೆದಾಗ ಸಂಘಟಕರು ಎಚ್ಚೆತ್ತುಕೊಂಡರು.
ಸನ್ಮಾನದಲ್ಲಿ ಮುಳುಗೆದ್ದ ಜನ: ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಿಗೆ ಸನ್ಮಾನ ಎಂಬ ನೂತನ ಯೋಜನೆಯಿಂದಾಗಿ, 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯ ಪ್ರೇಮಿಗಳು ತೀವ್ರ ಕಿರಿಕಿರಿ ಅನುಭವಿಸಿದರು. ಪ್ರತಿ ಗೋಷ್ಠಿಯ ನಂತರವೂ ಒಂದೊಂದು ಜಿಲ್ಲೆಯ ತಾಲೂಕು ಅಧ್ಯಕ್ಷರಿಗೆ ಮುಖ್ಯ ವೇದಿಕೆಯಲ್ಲಿ ಸನ್ಮಾನ ಮಾಡಲಾಗುತ್ತಿತ್ತು. ಇದು ಕಸಾಪ ಅಧ್ಯಕ್ಷ ಹಾಲಂಬಿ ಅವರ ಹೊಸ ಯೋಜನೆ. ಇದರಿಂದ ಅನಗತ್ಯವಾಗಿ ಸಾಕಷ್ಟು ಸಮಯ ವ್ಯರ್ಥವಾಯಿತು. ಅಲ್ಲದೇ ಸಾಹಿತ್ಯ ಪ್ರೇಮಿಗಳಿಗೆ ನಡು ನಡುವೆ ರಸಭಂಗದ ಅನುಭವವಾಗುತ್ತಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.