ವಿಶ್ವಸುಂದರಿ ಐಶ್ವರ್ಯ ರೈ ಅಲ್ಲ, ನಮ್ಮ ಸಾಲು ಮರದ ತಿಮ್ಮಕ್ಕ: ಡಾ.ಸಬರದ
ಡಾ.ಫ.ಗು.ಹಳಕಟ್ಟಿ ವೇದಿಕೆ, ಬಿಜಾಪುರ: ವಿದೇಶಿ ವಸ್ತುಗಳ ಮಾರಾಟಕ್ಕಾಗಿ ತೆಳ್ಳಗೆ- ಬೆಳ್ಳಗೆ ಆಗಿರುವ ಐಶ್ವರ್ಯ ರೈ ನಮ್ಮ ವಿಶ್ವ ಸುಂದರಿಯಲ್ಲ. ಬದಲಾಗಿ ನೂರಾರು ಮರಗಳನ್ನು ನೆಟ್ಟು -ಪೋಷಿಸಿ ನೆರಳು ನೀಡಿದ, ಪರಿಸರ ಕಾಪಾಡಿದ ಸಾಲು ಮರದ ತಿಮ್ಮಕ್ಕ ನಮ್ಮ ನಿಜವಾದ ವಿಶ್ವ ಸುಂದರಿ.
79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಮೊದಲ ಗೋಷ್ಠಿ 'ವಚನ ಸಾಹಿತ್ಯ' ವಿಷಯದಲ್ಲಿ 'ನವ ವಸಾಹತುಕರಣ ಮತ್ತು ವಚನ ಸಾಹಿತ್ಯದ ಹೊಸ ಓದು' ಕುರಿತು ಮಾತನಾಡಿದ ಡಾ.ಬಸವರಾಜ ಸಬರದ, ಇಂಥದೊಂದು ಹೊಸ ಮನಸ್ಥಿತಿ ಬೆಳೆಸಿಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡಿದರು.
ಜಾಗತೀಕರಣ, ಔದ್ಯೋಗಿಕರಣ, ಆರ್ಥಿಕ ಉದಾರೀಕರಣಗಳು ಹುಟ್ಟು ಹಾಕಿರುವ ನವ ವಸಾಹತುಕರಣದಲ್ಲಿ ಸ್ಥಳೀಯ ಪ್ರತಿಭೆ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಬೆಲೆಯೇ ಇಲ್ಲ. ನಮ್ಮ ಭೂಮಿ, ಬೆಳೆ, ಉಪ ಉತ್ಪನ್ನ, ಶ್ರಮದ ಬೆವರು, ನಮ್ಮತನಗಳನ್ನು ಕೇಳುವವರೇ ಇಲ್ಲ. ನಮ್ಮದೇ ಉತ್ಪನ್ನಗಳು ಶ್ರೀಮಂತ ರಾಷ್ಟ್ರಗಳಿಗೆ ಹೋಗಿ ಬ್ರಾಂಡ್ ನೇಮ್ದಲ್ಲಿ ವಾಪಸ್ಸಾದರೆ ಹಾರ್ದಿಕವಾಗಿ ಸ್ವಾಗತಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಸ್ಥಳೀಯತನ ಕಳೆದುಕೊಂಡರೆ ನಾವು- ನಮ್ಮ ಬದುಕು ಎರಡೂ ಇಲ್ಲ ಎನ್ನುವುದನ್ನು ಶರಣರು ಬಹು ಹಿಂದೆಯೇ ಸಾರಿ ಹೇಳಿದ್ದಾರೆ ಎಂದರು.
ಮಾಂಸಾಹಾರಕ್ಕೆ ಶರಣರ ಉತ್ತರ: ಗೋಹತ್ಯೆ ನಿಷೇಧ ಮಾಡಬೇಕೆನ್ನುವ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಾ. ಸಬರದ, ಯಾವುದೇ ಸಮುದಾಯದ ಆಹಾರ ಪದ್ಧತಿ ಅಣಕಿಸುವ ಅಧಿಕಾರ ಯಾರಿಗೂ ಇಲ್ಲ. ಕಾನೂನಿನ ಮೂಲಕ ಅದನ್ನು ನಿಯಂತ್ರಿಸುತ್ತೇವೆ ಎನ್ನುವುದು ಕೂಡ ಅಷ್ಟೇ ಮೂರ್ಖತನ. ಒಂದು ರಾಜ್ಯದ ಪ್ರಜೆಗಳೆಂದ ಮೇಲೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆ ವಿನಾ ಯಾರದೋ ಆಚರಣೆ, ಚಿಂತನೆಗಳನ್ನು ಮತ್ತೊಬ್ಬರ ಮೇಲೆ ಒತ್ತಾಯದಿಂದ ಹೇರಲು ಕಾನೂನಿನ ಬಳಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ ಎಂದು ಎಚ್ಚರಿಸಿದರು. ಈ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಸ್ತ್ರೀವಾದ ಓದು ಕುರಿತು ಮಾತನಾಡಬೇಕಿದ್ದ ಡಾ. ಎಂ.ಎಸ್. ಆಶಾದೇವಿ, ವಚನ ಸಾಹಿತ್ಯದಲ್ಲಿ ಬಹುಮುಖ ನೆಲೆಗಳು ಕುರಿತು ಮಾತನಾಡಬೇಕಿದ್ದ ಮಲೆಯೂರು ಗುರುಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಎರಡೂ ವಿಷಯಗಳನ್ನು ಡಾ. ಸಾದರ್ ಮಂಡಿಸಿದರು. ಅಧ್ಯಕ್ಷೀಯ ಭಾಷಣವನ್ನೂ ಮಾಡಿದರು.
ಅನುಭವಕ್ಕೆ ಮೀರಿದ ಅಧ್ಯಾತ್ಮವಿಲ್ಲ: ಆರಂಭದಲ್ಲಿ ಆಶಯ ನುಡಿ ಹೇಳಿದ ಸಾದ್ವಿ ಡಾ. ವೀಣಾ ಬಣ್ಣಂಜೆ, ಅನುಭವಕ್ಕೆ ಮೀರಿದ ಅಧ್ಯಾತ್ಮ ಇಲ್ಲ. ಉತ್ತಮ, ಒಳ್ಳೆಯ ಅನುಭವ ಪಡೆಯುವುದೇ ದೇವ ಸನ್ನಿಧಿಯತ್ತದ ಪಯಣ ಎಂದು ಅಧ್ಯಾತ್ಮವನ್ನು ವಿಭಿನ್ನ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದರು.
ಮಹಾಂತೇಶ ಮಸ್ಕಿ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ನಿಂಗಪ್ಪ ಬೊಮ್ಮನಹಳ್ಳಿ, ಫ.ಗು. ಸಿದ್ಧಾಪುರ ಮತ್ತಿತರರು ವೇದಿಕೆಯಲ್ಲಿದ್ದರು.
- ಮಲ್ಲಿಕಾರ್ಜುನ ಸಿದ್ದಣ್ಣವರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.