ಸಾಹಿತ್ಯ ಜಾತ್ರೆಯಲ್ಲಿನ್ನು ಊಟವಿಲ್ಲ!
ಡಾ.ಫ.ಗು.ಹಳಕಟ್ಟಿ ವೇದಿಕೆ, ಬಿಜಾಪುರ: ಮುಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಸಾರ್ವಜನಿಕ ಸಾಮೂಹಿಕ ದಾಸೋಹ (ಭೋಜನ) ವ್ಯವಸ್ಥೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈ ಬಿಡಲು ನಿರ್ಧರಿಸಿದೆ
ಏನಿದ್ದರೂ ಸಮ್ಮೇಳನದ ವಿವಿಧ ಕಾರ್ಯಕ್ರಮ, ಗೋಷ್ಠಿಗಳಲ್ಲಿ ಭಾಗವಹಿಸುವವರು ಮತ್ತು ಪ್ರತಿನಿಧಿಗಳಾಗುವ ಸಾಹಿತ್ಯಾಸಕ್ತರಿಗೆ ಮಾತ್ರ ಸಮರ್ಪಕ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಇಂಥ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಊಟದ ಅವ್ಯವಸ್ಥೆಯ ಅಪಸ್ವರಕ್ಕೆ ತಿಲಾಂಜಲಿ ಹಾಡುವುದು ಕಸಾಪ ಉದ್ದೇಶ.
ಗದಗ, ಬೆಂಗಳೂರು, ಗಂಗಾವತಿ ಸಮ್ಮೇಳನಗಳಲ್ಲಿ ಊಟದ ಅವ್ಯವಸ್ಥೆ ಬಗ್ಗೆ ಅಪಸ್ವರ ಕೇಳಿ ಬಂದಿರಲಿಲ್ಲ. ಸದ್ಯ ಬಿಜಾಪುರದಲ್ಲಿ ನಡೆಯುತ್ತರುವ 79ನೇ ಸಮ್ಮೇಳನದಲ್ಲಿ ಮಾತ್ರ ಆರಂಭದ ದಿನವೇ ಊಟದ ವಿಚಾರವಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಸಾರ್ವಜನಿಕರ ಟೀಕೆಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಸಾಪ ಊಟ ನೀಡುವ ಪದ್ಧತಿಗೇ ತಿಲಾಂಜಲಿಯನ್ನಿಡಲು ತೀರ್ಮಾನಿಸಿದೆ.
ಜ್ಞಾನದ ಹಸಿವು ನೀಗಿಸುವುದು: ಊಟದ ಮೆನು ಹೇಳಲು ಹಿಂದೇಟು ಹಾಕುತ್ತಿದ್ದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, 'ಕನ್ನಡ ಸಾಹಿತ್ಯ ಸಮ್ಮೇಳನ ಜ್ಞಾನದ ಹಸಿವು ನೀಗಿಸುವ ಕಾರ್ಯಕ್ರಮವೇ ಹೊರತು ಸುಗ್ರಾಸ ಭೋಜನ ಹಾಕುವ ಧಾರ್ಮಿಕ ಕಾರ್ಯಕ್ರಮವಲ್ಲ' ಎಂದು ಹೊಸ ವ್ಯಾಖ್ಯಾನ ಮಾಡಿದ್ದರು. ಹಾಗಾಗಿ ಈ ಬಾರಿ ಬಹುತೇಕ ಮಾಧ್ಯಮಗಳಲ್ಲಿ ಊಟದ ಮೆನು ಅಷ್ಟಾಗಿ ಮಹತ್ವ ಪಡೆದುಕೊಳ್ಳಲಿಲ್ಲ. ಸಮ್ಮೇಳನದ ಆರಂಭದ ದಿನ ಊಟಕ್ಕಾಗಿ ನಡೆದ ಗದ್ದಲ, ಗೊಂದಲದಿಂದ ವಿಚಲಿತರಾಗಿರುವ ಹಾಲಂಬಿ, ಸಮ್ಮೇಳನಕ್ಕೆ ಬಂದವರಿಗೆಲ್ಲ ಊಟ ಹಾಕುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ, ಎನ್ನುವ ಅಭಿಮತಕ್ಕೆ ಬಂದಿದ್ದಾರೆ. ಆಸಕ್ತಿಯಿಂದ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿರುವ ಪ್ರತಿನಿಧಿಗಳನ್ನು ಗೌರವದಿಂದ ಆದರಿಸಿದರೆ ಸಾಕು. ಅದರಿಂದ ಸಮ್ಮೇಳನ ಅರ್ಥಪೂರ್ಣವಾಗುತ್ತದೆ. ಗದ್ದಲದಿಂದ ಮುಕ್ತವಾಗುತ್ತದೆ ಎಂದು ಹಾಲಂಬಿ 'ಕನ್ನಡಪ್ರಭ'ದೊಂದಿಗೆ ತಮ್ಮ ಆಲೋಜನೆಯನ್ನು ವ್ಯಕ್ತಪಡಿಸಿದರು.
ಸಮ್ಮೇಳನದ ವಿಷಯ, ಚರ್ಚೆಗಳಿಗಿಂತ ಊಟದ ಅವ್ಯವಸ್ಥೆಯೇ ಮಾಧ್ಯಮಗಳಲ್ಲಿ ದೊಡ್ಡ ದನಿಯಲ್ಲಿ ಕೇಳಿ ಬರುತ್ತಿದ್ದರಿಂದ ಇಂಥ ಸಾರ್ವಜನಿಕ ಸಾಮೂಹಿಕ ದಾಸೋಹ ಪರಂಪರೆಗೆ ಕಡಿವಾಣ ಹಾಕಲೇಬೇಕಿದೆ ಎನ್ನುತ್ತಾರೆ ಹಾಲಂಬಿ.
ಸಮ್ಮೇಳನ ಎಂದರೆ ಊಟ ನೀಡುವ ಜಾತ್ರೆ ಎನ್ನುವ ಮನೋಭಾವ ತಪ್ಪಬೇಕು. ಕನ್ನಡದ ಕಾರ್ಯ ಶಿಸ್ತಿನಿಂದ ಸಾಗಬೇಕಿದ್ದರೆ ಇಂಥ ಕಟ್ಟಳೆಗಳು ಅನಿವಾರ್ಯ. ಹಾಗಾಗಿ ಕಸಾಪ ಕಾರ್ಯಕ್ರಮಗಳ ವಿಸ್ತಾರತೆಯನ್ನು ಗಮನಿಸಿ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡು ಮುಂದಿನ ಸಮ್ಮೇಳನದಲ್ಲಿ ಜಾರಿಗೆ ತರಲಿದೆ. ಆ ಸಮ್ಮೇಳನಗಳನ್ನು ಅರ್ಥಪೂರ್ಣ, ಅದ್ಭುತ ಎನ್ನುವ ರೀತಿಯಲ್ಲಿ ಯಶಸ್ವಿಗೊಳಿಸುತ್ತೇವೆ ಎಂದು ಹಾಲಂಬಿ ವಿಶ್ವಾಸ ವ್ಯಕ್ತಪಡಿಸಿದರು.
ಸಮ್ಮೇಳನಕ್ಕೆ ಜನರೇ ಬುತ್ತಿ ತರಬೇಕು: ಡಾ.ಕಲ್ಬುರ್ಗಿ
ಸಾಹಿತ್ಯ ಸಮ್ಮೇಳನಗಳು ಬರೀ ಊಟದ ಸಮ್ಮೇಳನಗಳಾಗಬಾರದು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನರು ತಮ್ಮ ಬುತ್ತಿ ತಾವೇ ಕಟ್ಟಿಕೊಂಡು ಅಕ್ಷರ ಜಾತ್ರೆಗೆ ಬರಬೇಕು ಎಂದು ಹಿರಿಯ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿ ಹೇಳಿದರು. ಭಾನುವಾರ ಬೆಳಗ್ಗೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಊಟದಿಂದ ಸಾಹಿತ್ಯ ಸಮ್ಮೇಳನವಾಗದೇ ಊಟದ ಸಮ್ಮೇಳನವಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ಊಟದ ವ್ಯವಸ್ಥೆ ಕೈಬಿಡಬೇಕು. ರಾಜ್ಯದ 30 ಜಿಲ್ಲೆಗಳ ಕನ್ನಡಿಗರು ತಮ್ಮ ಬುತ್ತಿ ತಾವೇ ಕಟ್ಟಿಕೊಂಡು ಭಾಗವಹಿಸಬೇಕು. ಎಲ್ಲರೂ ಬುತ್ತಿ ಕಟ್ಟಿಕೊಂಡು ಯಲ್ಲಮ್ಮದೇವಿ ಜಾತ್ರೆ ಸವದತ್ತಿಗೆ ಹೇಗೆ ಹೋಗುತ್ತಾರೋ ಹಾಗೇ ಸಮ್ಮೇಳನಕ್ಕೂ ಬರಬೇಕು ಎಂದರು.
ರಾಜಕಾರಣಿಗಳಿಗೆ ಮಣೆ: ಸಮ್ಮೇಳನದಲ್ಲಿ ರಾಜಕೀಯ ನುಸುಳುವುದು ಹೊಸದೇನಲ್ಲ. ಎಲ್ಲ ಸಮ್ಮೇಳನಗಳಲ್ಲಿ ಇದೇ ಅಪಸ್ವರ ಕೇಳಿ ಬರುತ್ತಿದೆ. ಸಮ್ಮೇಳನದ ವೇದಿಕೆಯಲ್ಲಿ ಆಹ್ವಾನಿತರ ಪಟ್ಟಿಯಲ್ಲಿ ಇದ್ದವರನ್ನು ಬಿಟ್ಟು ಬೇರೆಯವರು ವೇದಿಕೆಯನ್ನು ಅಲಂಕರಿಸಿದ್ದರು. ವೇದಿಕೆಯ ಆಹ್ವಾನಿತರ ಪಟ್ಟಿಯಲ್ಲಿ 23 ಸಾಹಿತಿಗಳ ಪೈಕಿ ಮೂರೇ ಜನರು ಭಾಗವಹಿಸಿದ್ದರು ಎಂದು ಹೇಳಿದರು.
- ಮಲ್ಲಿಕಾರ್ಜುನ ಸಿದ್ದಣ್ಣವರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.