ಬಿಜಾಪುರ: ದುಡ್ಡು ಕೊಟ್ಟು ಕರೆದರೆ ಕನ್ನಡಾಭಿಮಾನ. ಇಲ್ಲವಾದಲ್ಲಿ ಬರೀ ಬಿಗುಮಾನ. ಹಣ ಕೊಟ್ಟರೆ ಕನ್ನಡ ಪ್ರೀತಿಯ ಬಗ್ಗೆ ಉಗ್ರ ಭಾಷಣ. ಇಲ್ಲವಾದಲ್ಲಿ ಮನೆಯೇ ಭೂಷಣ. ಇದು ಕನ್ನಡದ ಖ್ಯಾತನಾಮ ಸಾಹಿತಿಗಳ ಬಣ್ಣ.
ನಮ್ಮ ಭಾಷೆಗೆ ಹೆಮ್ಮೆ ತಂದು ಕೊಟ್ಟ ಜ್ಞಾನಪೀಠ ಪುರಸ್ಕೃತ ಸಾಹಿತಿಗಳನ್ನು ಅವರು ಜೀವಂತ ಇರುವಾಗಲೇ ಕೇವಲ ಚಿತ್ರದಲ್ಲೇ ನೋಡಿ ಜನ ಧನ್ಯರಾಗಬೇಕಾದ ಅನಿವಾರ್ಯವೇಕೆ?
ಗೋಳಗುಮ್ಮಟ ನಗರಿ ಬಿಜಾಪುರದಲ್ಲಿ ಎಲ್ಲ ಅವ್ಯವಸ್ಥೆಗಳನ್ನೂ ಮೀರಿದ ಜನ ಬೆಂಬಲದೊಂದಿಗೆ ಮೂರು ದಿನಗಳ ಕಾಲ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೋಮವಾರ ತೆರೆ ಬಿದ್ದಿದೆ. ಸಾಹಿತಿಗಳ ಅನುಪಸ್ಥಿತಿ ಮತ್ತು ಸಾಹಿತ್ಯ ಸಮ್ಮೇಳನ ಬಗೆಗಿನ ನಿರಾಸಕ್ತಿ ಎದ್ದು ಕಾಣಿಸಿದೆ. ಇದನ್ನು ಲೆಕ್ಕಿಸದೆ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು ಜನರ ಕನ್ನಡ ಪ್ರೀತಿ. ಜನರಿಗೆ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ. ಸಾಹಿತಿಗಳ ಬಗ್ಗೆ ಗೌರವವಿದೆ. ಆದರೆ, ಸಾಹಿತಿಗಳಿಗೆ ಸಾಹಿತ್ಯ ಸಮ್ಮೇಳನದ ಬಗ್ಗೆ ಆಸಕ್ತಿಯಿಲ್ಲ. ತಮ್ಮ ಅಭಿಮಾನಿ ಜನರೊಂದಿಗೆ ಬೆರೆಯಬೇಕೆಂಬ ಆಸಕ್ತಿಯಿಲ್ಲ.
ಸಾಹಿತಿಗಳ ಅನುಪಸ್ಥಿತಿ: 3 ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳ ಅನುಪಸ್ಥಿತಿ ಢಾಳಾಗಿ ಕಾಣುತ್ತಿತ್ತು. ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಸಾಹಿತಿಗಳು ದೂರುತ್ತಾರೆ. ಆದರೆ ಹಾಗೆ ದೂರುವ ಸಾಹಿತಿಗಳೇ ಸಾಹಿತ್ಯ ಸಮ್ಮೇಳನದಿಂದ ದೂರ ಉಳಿದಿದ್ದಾರೆ. ಗೋಷ್ಠಿ, ಸನ್ಮಾನ, ಕವನ, ಭಾಷಣಗಳಿಗೆ ಅಹ್ವಾನವಿಲ್ಲದ ಸಾಹಿತಿಗಳು ಸಾಹಿತ್ಯ ಸಮನ್ಮೇಳನದತ್ತ ಕಣ್ಣೆತ್ತಿಯೂ ನೋಡಲಿಲ್ಲ. ಕನ್ನಡಕ್ಕೆ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದು ಜನ ಹೆಮ್ಮೆಯಿಂದ ಬೀಗುತ್ತಾರೆ. ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ ಎಂದು ಬೊಬ್ಬೆ ಹೊಡೆದು ಬೀಗುತ್ತೇವೆ. ಅಂಥ ಭಾಷೆಯ ಸಮ್ಮೇಳನದಲ್ಲಿ ಎಷ್ಟು ಜನ ಜ್ಞಾನಪೀಠಿಗಳು ಭಾಗವಹಿಸಿದ್ದರು ಅಂತ ಯಾರಾದರೂ ತಿರುಗಿ ಕೇಳಿದರೆ ಮುಖಮುಚ್ಚಿಕೊಳ್ಳುವಂತಾಗುತ್ತದೆ.
ಜ್ಞಾನಪೀಠ ಪುರಸ್ಕೃತರೂ ಸುಳಿಯಲಿಲ್ಲ: ಯಾಕೆಂದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸಾಹಿತ್ಯ ಸಮ್ಮೇಳನವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಒಬ್ಬ ಜ್ಞಾನಪೀಠ ಪುರಸ್ಕೃತರೂ ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಸಿಕೊಂಡಿಲ್ಲ. ಉತ್ತರ ಕರ್ನಾಟಕದವರೇ ಆದ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರು ಸಾಹಿತ್ಯ ಸಮ್ಮೇಳನ ತಮಗೆ ಸಂಬಂಧಿಸಿದ್ದಲ್ಲ ಎಂದು ಭಾವಿಸಿದಂತಿದೆ. ಘಟಾನುಘಟಿಗಳನ್ನು ಬಿಡಿ, ಸ್ವಲ್ಪ ಹೆಸರು ಮಾಡಿದ ಸಾಹಿತಿಗಳು ಕೂಡ ಸಾಹಿತ್ಯ ಸಮ್ಮೇಳನದಿಂದ ದೂರ ಉಳಿದಿದ್ದಾರೆ.
ಚಂಪಾ, ವಸುಧೇಂದ್ರ ಅವರಂಥ ಸಾಹಿತಿಗಳು ಪುಸ್ತಕ ಮಳಿಗೆಯಲ್ಲಿ ಕುಳಿತು ಪುಸ್ತಕ ಮಾರಾಟ ಮಾಡಿದರು. ಸಂಸದ ಎಚ್. ವಿಶ್ವನಾಥ್, ಬಿ.ಟಿ. ಲಲಿತಾ ನಾಯಕ್ ಅವರಂಥ ದ್ವಿಪಾತ್ರ ನಿಭಾಯಿಸುವ ಸಾಹಿತಿಗಳು ಯಾವುದೇ ಕಾರ್ಯಕ್ರಮ ಇಲ್ಲದಿದ್ದರೂ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಘಟಾನುಘಟಿ ಸಾಹಿತಿಗಳಿಗೆ ಮಾದರಿಯಾದರು. ಆದರೆ ಉಳಿದ ಸಾಹಿತಿಗಳು ಕೇವಲ ಮಳಿಗೆಗಳಲ್ಲಿದ್ದ ಪುಸ್ತಕಗಳಿಗೇ ಸೀಮಿತರಾದರು.
ಸಾಹಿತ್ಯ ಸಮ್ಮೇಳಕ್ಕೆ ಜನ ಬರುವುದೇ ಸಾಹಿತ್ಯಾಸಕ್ತಿಯಿಂದ. ತಮ್ಮ ನೆಚ್ಚಿನ ಸಾಹಿತಿಗಳು ನೋಡಬೇಕು, ಸಾಧ್ಯವಾದರೆ ಮಾತನಾಡಿಸಬೇಕು ಎಂಬ ಆಸಕ್ತಿಯಿಂದ. ಸಾಕಷ್ಟು ಅಭಿಮಾನಿಗಳು ತಮ್ಮ ನೆಚ್ಚಿನ ಸಾಹಿತಿಯ ಪುಸ್ತಕ ಖರೀದಿಸಿ, ಅವರಿಂದ ಅದಕ್ಕೊಂದು ಹಸ್ತಾಕ್ಷರ ಪಡೆಯಬೇಕು ಎಂಬ ಆಸೆ ಹೊತ್ತು ಬಂದಿರುತ್ತಾರೆ. ಆದರೆ ಸಾಹಿತಿಗಳೇ ಸಮ್ಮೇಳನದಿಂದ ದೂರ ದೂರ.
ಸಾಹಿತ್ಯ ಸಮ್ಮೇಳನಗಳಿಗೆ ಜನ ಬರುವುದಿಲ್ಲ ಎಂದು ದೂರುವಂತಿಲ್ಲ. ಏಕೆಂದರೆ ಮೊದಲೆರಡು ದಿನ ಜನ ಸಾಗರವೇ ಇಲ್ಲಿತ್ತು. ಆದರೆ ಸಾಹಿತಿಗಳದ್ದೇ ಸುಳಿವಿರಲಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ದೊಡ್ಡ ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಆಗಮಿಸುತ್ತಾರೆ. ಅವರಿಗೆ ಅವರ ಪಠ್ಯದಲ್ಲಿರುವ, ಪಠ್ಯ ಬರೆದಿರುವ ಸಾಹಿತಿಗಳನ್ನು ನೋಡಲು ಇದು ಸದವಕಾಶವಲ್ಲವೇ, ಅವರೆಲ್ಲ ತಮ್ಮನ್ನು ಕೇವಲ ಚಿತ್ರದಲ್ಲೇ ನೋಡಬೇಕು ಎಂಬ ನಿಲುವೇಕೆ.
ಸಾಹಿತಿಗಳನ್ನು ಕರೆಯಬೇಕು. ವೇದಿಕೆ ಮೇಲೆ ಕೂರಿಸಬೇಕು. ಭಾಷಣಕ್ಕೆ ಅವಕಾಶ ನೀಡಬೇಕು. ಸಾಹಿತ್ಯ ಸಮ್ಮೇಳನಕ್ಕೆ ಬಂದು-ಹೋಗುವ ವೆಚ್ಚ ಕೊಡಬೇಕು. ಅಂದರೆ ಮಾತ್ರ ಸಾಹಿತಿಗಳು ಸಮ್ಮೇಳನಕ್ಕೆ ಆಗಮಿಸುತ್ತಾರೆ ಎಂಬಂತಾಗಿದೆ. ಸಾಹಿತ್ಯ ಸಮ್ಮೇಳನಗಳು ಸಾಹಿತಿಗಳ ಮತ್ತು ಜನರ ಸಮ್ಮಿಲನವಾಗುವ ಬದಲು ಜನರ ಸಮ್ಮೇಳನವಾಗುತ್ತಿದೆ. ಜನರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿದೆ. ಆದರೆ ಸಾಹಿತಿಗಳಲ್ಲೇ ಸಾಹಿತ್ಯ ಸಮ್ಮೇಳನದ ಬಗ್ಗೆ ನಿರಾಸಕ್ತಿ ಹೆಚ್ಚುತ್ತಿದೆ ಎಂಬುದನ್ನು 79ನೇ ಸಾಹಿತ್ಯ ಸಮನ್ಮೇಳನ ಸಾಬೀತುಪಡಿಸಿದೆ.
79ನೇ ಸಾಹಿತ್ಯ ಸಮ್ಮೇಳನವೊಂದೇ ಅಲ್ಲ ಬಹುತೇಕ ಸಾಹಿತ್ಯ ಸಮ್ಮೇಳನಗಳದ್ದು ಇದೇ ಕತೆ. 79ನೇ ಸಾಹಿತ್ಯ ಸಮ್ಮೇಳನದ ಮೊದಲೆರಡು ದಿನದ ಜನರ ಬೋರ್ಗರೆತ ಅಂತಿಮ ದಿನವಾದ ಸೋಮವಾರ ಕೊಂಚ ಕಡಿಮೆ ಇತ್ತು. ಆದರೂ ಜನಕ್ಕೆ ಕೊರತೆ ಇರಲಿಲ್ಲ. ಕೊರತೆಯೇನಾದರೂ ಇದ್ದರೆ ಅದು ಸಾಹಿತಿಗಳ ಉಪಸ್ಥಿತಿಯದ್ದು ಮತ್ತು ವ್ಯವಸ್ಥೆಯದ್ದು.
- ವಿನಾಯಕ ಭಟ್ಟ ಮೂರೂರು