ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅತ್ಯಾಚಾರಿಗಳಿಗೆ ಗೂಂಡಾ ಅಸಾಧ್ಯ

ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯಿದೆ ಬಳಸುವುದಾಗಿ ಸರ್ಕಾರವೇನೋ...

Parashurama
Updated On : 17 Feb 2013, 9:49 am

ಬೆಂಗಳೂರು: ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯಿದೆ ಬಳಸುವುದಾಗಿ ಸರ್ಕಾರವೇನೋ ಹೇಳಿಕೊಂಡು ತಿರುಗುತ್ತಿದೆ. ಹೀಗೆ ಮಾಡಿದ ದೇಶದ ಮೊದಲ ಸರ್ಕಾರ ಎಂದೂ ಸೇರಿಸುತ್ತಿದೆ.
ಆದರೆ ಕರ್ನಾಟಕ ಗೂಂಡಾ ಕಾಯಿದೆಗೆ ತಿದ್ದುಪಡಿ ತರದ ಹೊರತು ಸರ್ಕಾರದ ಹೇಳಿಕೆ ಕೇವಲ ಹೆದರಿಸುವ ಮಾತಾಗಲಿದೆ. ಅಚ್ಚರಿಯೆಂದರೆ ಸರ್ಕಾರದ ಡೋಂಗಿತನವನ್ನು ವಿರೋಧಪಕ್ಷಗಳು ಕೂಡ ಪ್ರಶ್ನಿಸುತ್ತಿಲ್ಲ!
ಸರ್ಕಾರದ ಈ ನಿರ್ಧಾರ ಪೊಲೀಸರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಸಾಕಷ್ಟು ಮಂದಿ ಪೊಲೀಸ್ ಅಧಿಕಾರಿಗಳು ಕೂಡ 'ಅತ್ಯಾಚಾರಿಗಳಿಗೆ ಗೂಂಡಾ ಕಾಯಿದೆ ಅನ್ವಯವಾಗುವುದು ಅನುಮಾನ' ಎಂದೇ ಅಭಿಪ್ರಾಯಪಡುತ್ತಿದ್ದಾರೆ. ಆದರೂ ಸರ್ಕಾರದ ನಿರ್ಧಾರ ಎಂಬ ಕಾರಣಕ್ಕೆ ಒಟ್ಟು 6 ಆರೋಪಿಗಳಿಗೆ ಗೂಂಡಾಕಾಯಿದೆ ಅನ್ವಯ ಮಾಡಲಾಗಿದೆ.
ದಿಲ್ಲಿ ಪ್ರಕರಣದ ನಂತರ ಅತ್ಯಾಚಾರ ಪ್ರಕರಣಗಳು ತೀವ್ರ ಗಮನಸೆಳೆಯಲಾರಂಭಿಸಿದವು. ಇದರಿಂದ ತಾವು ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ಎಂಬುದನ್ನು ಬಿಂಬಿಸಲು ಹೊರಟ ರಾಜ್ಯ ಸರ್ಕಾರ, 'ಅತ್ಯಾಚಾರಿಗಳಿಗೆ' ಗೂಂಡಾ ಕಾಯಿದೆ ಹಾಕುವುದಾಗಿ ಘೋಷಿಸಿದೆ. ಆದರೆ ಸರ್ಕಾರ ಕರ್ನಾಟಕ ಗೂಂಡಾ ಕಾಯಿದೆಗೆ (ದಿ ಕರ್ನಾಟಕ ಪ್ರಿವೆನ್ಷನ್ ಆಫ್ ಡೇಂಜರಸ್ ಆಕ್ಟಿವಿಟೀಸ್ ಆಫ್ ಬೂಟ್‌ಲೆಗ್ಗರ್ಸ್, ಡ್ರಗ್ ಅಫೆಂಡರ್ಸ್, ಗ್ಯಾಂಬ್ಲರ್ಸ್, ಗೂಂಡಾಸ್, ಇಮ್ಮಾರಲ್ ಟ್ರಾಫಿಕ್ ಅಫೆಂಡರ್ಸ್ ಆ್ಯಂಡ್ ಸ್ಲಂ ಗ್ರಾಬರ್ಸ್ ಆ್ಯಕ್ಟ್) ತಿದ್ದುಪಡಿ ತರಬೇಕು. ಇಲ್ಲವಾದಲ್ಲಿ ಇದು ಪರಿಣಾಮಕಾರಿಯಾಗದು.
ಕಾಯ್ದೆಯ ಹೆಸರಿನಲ್ಲೇ ಹೇಳಿರುವಂತೆ ಇದು ಅಕ್ರಮ ಮದ್ಯ ತಯಾರಕರು, ಮಾದಕದ್ರವ್ಯ ಆರೋಪಿಗಳು, ಜೂಜಾಡುವವರು, ಗೂಂಡಾಗಳು, ಅನೈತಿಕ ಕಳ್ಳಸಾಗಾಣಿಕೆ, ಜಾಗ ಕಬಳಿಸಿ ಕೊಳೆಗೇರಿ ನಿರ್ಮಿಸುವವರನ್ನು ನಿಯಂತ್ರಿಸಲು, ಬಂಧಿಸಲು ಇರುವ ಕಾನೂನು. ಅತ್ಯಾಚಾರಕ್ಕೆ ಪ್ರತ್ಯೇಕ ಕಾನೂನಿದೆ. ಕೆಲವು ಆರೋಪಿಗಳನ್ನು ವಶದಲ್ಲಿರಿಸಿಕೊಳ್ಳಲು ಅಥವಾ ಬಂಧನದಲ್ಲಿಡಲು ಸರ್ಕಾರಕ್ಕೆ ಕೆಲವು ತಾಂತ್ರಿಕ ತೊದರೆಗಳಿದ್ದವು. ಅವುಗಳನ್ನು ನಿವಾರಿಸಿ, ಅಂತಹ ಅಪರಾಧದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧನದಲ್ಲಿಡಲು ಅನುಕೂಲವಾಗುವಂತೆ ಈ ಕಾನೂನನ್ನು ರಚಿಸಲಾಗಿದೆ.       
ಇದರಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿಯೂ ಆರೋಪಿಗಳನ್ನು ಬಂಧಿಸಲು ಅವಕಾಶವಿದೆ. ಆದರೆ ಸಂಪೂರ್ಣ ಕಾನೂನಿನಲ್ಲಿ ಎಲ್ಲೂ ಅತ್ಯಾಚಾರದ ಪ್ರಸ್ತಾಪವಿಲ್ಲ.
ಈ ಕಾಯಿದೆಯಲ್ಲಿ 'ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿರಬೇಕು ಅಥವಾ ಧಕ್ಕೆಯಾಗುವಂತಿರಬೇಕು. ಈ ಕಂಡಿಕೆಯಲ್ಲಿ ಹೇಳಿರುವ ವ್ಯಕ್ತಿ ನೇರವಾಗಿ ಅಥವಾ ಪರೋಕ್ಷವಾಗಿ ಸಮಾಜ ಅಥವಾ ಸಮಾಜದ ಒಂದು ವರ್ಗದಲ್ಲಿ ಭಯ, ಅಭದ್ರತೆಯ ಭಾವನೆ ಸೃಷ್ಟಿಸಿರಬೇಕು ಅಥವಾ ಸೃಷ್ಟಿಸುವಂತಿರಬೇಕು' ಎಂದು ಒಂದು ಕಡೆ ಹೇಳಲಾಗಿದೆ. ಇದೇ ಅಂಶದ ಆಧಾರದ ಮೇಲೆ ಅತ್ಯಾಚಾರಿ ಆರೋಪಿಗೆ ಗೂಂಡಾ ಕಾಯಿದೆ ಅನ್ವಯಿಸಬಹುದು. ಆದರೆ ಅತ್ಯಾಚಾರಕ್ಕೆ ಬೇರೆ ಕಾಯಿದೆ ಇದೆ. ಅಲ್ಲದೇ ಅತ್ಯಾಚಾರ ಒಬ್ಬ ವ್ಯಕ್ತಿಗೆ ಹಾನಿಮಾಡುವಂತಹ ಅಪರಾಧ. ಈಗ ಅದು ಸಮಾಜದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಪೊಲೀಸರು ಸರ್ಕಾರದ ಮಾತಿಗೆ ಬೆಲೆಕೊಟ್ಟು ಅತ್ಯಾಚಾರ ಆರೋಪಿಗಳ ಮೇಲೆ ಗೂಂಡಾ ಕಾಯಿದೆ ಅಳವಡಿಸಬಹುದು. ಆದರೆ ನ್ಯಾಲಯದಲ್ಲಿ ಅದು ನಿಲ್ಲುವುದಿಲ್ಲ ಎಂದೇ ಬಹುತೇಕರು ಅಭಿಪ್ರಾಯಪಡುತ್ತಿದ್ದಾರೆ. ಆರೋಪಿಗಳು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಆಗ ಸರ್ಕಾರದ 'ಗೂಂಡಾ ಕಾಯಿದೆಯ' ನಿಜಬಣ್ಣ ಬಯಲಾಗಲಿದೆ.
ಆರೋಪಿ ಮೇಲೆ ಗೂಂಡಾ ಕಾಯಿದೆ ಹಾಕುವುದರಿಂದ ಆತನಿಗೆ ಕನಿಷ್ಠ 3 ತಿಂಗಳ ಜಾಮೀನು ಸಿಗದಂತೆ ಮಾಡಬಹುದು. 3 ತಿಂಗಳ ನಂತರವೂ ಆತನನ್ನು ಬಂಧನದಲ್ಲಿರಬೇಕು ಎಂದರೆ ಗೂಂಡಾ ಕಾಯಿದೆಗೆಂದು ನೇಮಿಸಲಾಗಿರುವ ಸಮಿತಿ ಒಪ್ಪಿಗೆ ಸೂಚಿಸಬೇಕು. ಅಲ್ಲದೇ ಪೊಲೀಸರು ಆತನಿಂದ ಸಮಾಜಕ್ಕೆಹಾನಿ ಉಂಟಾಗಬಹುದು ಮತ್ತು ಆತನಿಂದ ಸಮಾಜಕ್ಕೆ ಅಥವಾ ಸಮಾಜದ ಒಂದು ವರ್ಗಕ್ಕೆ ಅಭದ್ರತೆ ಕಾಡುತ್ತಿದೆ ಎಂಬುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕಾಗುತ್ತದೆ. ಇದನ್ನು ಮಾಡಬೇಕಾದರೆ ಆತ ಅತ್ಯಾಚಾರಕ್ಕೂ ಮೊದಲು ಕೆಲವು ಅಪರಾಧಗಳಲ್ಲಿ ಭಾಗಿಯಾದ ಆರೋಪಿಯಾಗಿದ್ದರೆ, ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಹಕಾರಿ. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಇದು ನಿಲ್ಲಲಾರದು.
ಖ್ಯಾತ ನ್ಯಾಯವಾದಿ ರವಿ ಬಿ. ನಾಯಕ್ ಅವರ ಪ್ರಕಾರ, 'ಸಮಾಜಕ್ಕೆ ಹಾನಿ ಉಂಟುಮಾಡಬಹುದು ಅಥವಾ ಒಂದು ವರ್ಗದಲ್ಲಿ ಅಭದ್ರತೆ ಭಾವನೆ ಮೂಡಿಸಬಹುದು ಎಂಬ ಆಧಾರದಲ್ಲಿ ಅತ್ಯಾಚಾರಿಗಳ ಮೇಲೆ ಗೂಂಡಾ ಕಾಯಿದೆ ಹಾಕಬಹುದು. ಆದರೆ ಅದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕಾಗುತ್ತದೆ' ಎಂದು ಹೇಳಿದ್ದಾರೆ. ಇದನ್ನೆಲ್ಲ ಗಮನಿಸಿದರೆ 'ಅತ್ಯಾಚಾರಿಗಳಿಗೆ ಗೂಂಡಾ' ಕಾಯಿದೆ ಎಂದು ಕೇವಲ ಜನರ ಕಣ್ಣೊರೆಸುವ ತಂತ್ರವಷ್ಟೇ ಎಂಬುದು ಸ್ಪಷ್ಟವಾಗುತ್ತಿದೆ.

- ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement