ಕಿರುಕದನ ಸಿದ್ಧತೆ
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯಕ್ಕೆ ಶನಿವಾರ ಚಾಲನೆ ಸಿಕ್ಕಿದೆ.
ಇದರ ಬೆನ್ನ ಹಿಂದೆಯೇ ರಾಜಕೀಯ ಚಟುವಟಿಕೆಗಳೂ ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆಗೆ ರಾಜಕೀಯ ಪಕ್ಷಗಳ ಕಸರತ್ತು ಆರಂಭವಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬೆನ್ನ ಹಿಂದೆಯೆ ವಿಧಾನಸಭಾ ಚುನಾವಣೆಗಳೂ ನಡೆಯಲಿರುವುದರಿಂದ ಇದನ್ನು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲಾ ಪಕ್ಷಗಳು ಹೆಚ್ಚು ಬಿರುಸಿನೊಂದಿಗೆ ಚುನಾವಣಾ ಕಣಕ್ಕೆ ಧುಮುಕಲು ಸಿದ್ಧವಾಗಿವೆ.
ಆದರೆ, ಅಭ್ಯರ್ಥಿಗಳ ಆಯ್ಕೆ ವಿಚಾರ ಕಗ್ಗಂಟಾಗುವ ಸಾಧ್ಯತೆಗಳಿವೆ. ಜತೆಗೆ ವಿಧಾನಸಭೆ ಚುನಾವಣೆ ಮೇಲೂ ಇದು ಪರಿಣಾಮ ಬೀರಲಿದೆ. ಆದ್ದರಿಂದ ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲೇ ಶಾಸಕರು ಮತ್ತು ಜಿಲ್ಲಾ ಮಟ್ಟದ ಮುಖಂಡರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ರಾಜಕೀಯ ಪಕ್ಷಗಳು ಮುಂದಾಗಿವೆ. ಫೆ.23 ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದ್ದು, ಅದಕ್ಕೆ ಮುನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಬೇಕಿದೆ. ಪ್ರತಿ ವಾರ್ಡ್ನಲ್ಲಿ ನಾಲ್ಕೈದು ಟಿಕೆಟ್ ಆಕಾಂಕ್ಷಿಗಳಿದ್ದು, ಇವರೆಲ್ಲರನ್ನೂ ಸಂಬಾಳಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ಮಾಡಬೇಕಾಗಿದೆ. ಸ್ವಲ್ಪ ಎಡವಟ್ಟಾದರೂ ಬಂಡಾಯದ ಭೀತಿ ಕಾಣಿಸಿಕೊಳ್ಳಲಿದ್ದು, ಅದು ವಿಧಾನಸಭೆ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲಾ ಪಕ್ಷಗಳು ಎಚ್ಚರಿಕೆಯಿಂದಲೇ ಕೆಲಸ ಮಾಡುತ್ತಿವೆ.
ಪಕ್ಷಗಳ ಸಿದ್ಧತೆ: ನಗರ ಸ್ಥಳೀಯ ಸಂಸ್ಥೆಗಳಿಗೆ ಅಭ್ಯರ್ಥಿಗಳ ಆಯ್ಕೆ, ಪ್ರಣಾಳಿಕೆ ಬಿಡುಗಡೆ, ಚುನಾವಣಾ ಪ್ರಚಾರ ಮುಂತಾದ ಕೆಲಸಗಳಿಗೆ ಈಗಾಗಲೇ ತರಾತುರಿಯ ಸಿದ್ಧತೆ ಆರಂಭವಾಗಿದೆ. ಸಭೆ, ಸಮಾಲೋಚನೆ ನಡೆಯುತ್ತಿವೆ.
ಬಿಜೆಪಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತಂತೆ ಚರ್ಚಿಸಲು ಶನಿವಾರ ಬಿಜೆಪಿ ಬೆಂಗಳೂರಿನಲ್ಲಿ ಶಾಸಕರು ಮತ್ತು ಮುಖಂಡರ ಸಭೆ ನಡೆಸಿದ್ದು, ಮಂಗಳವಾರ ಅಥವಾ ಬುಧವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಫೆ.21ರಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ, ಫೆ.28ರಿಂದ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್: ಚುನಾವಣೆಗೆ ತೀವ್ರಗತಿಯ ಸಿದ್ಧತೆ ನಡೆಸುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಬಿಕ್ಕಟ್ಟು, ಭ್ರಷ್ಟಾಚಾರಗಳಿಂದಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂಬ ನಿರೀಕ್ಷೆಯಿದೆ. ಈ ನಿರೀಕ್ಷೆ ನಿಜವಾಗುತ್ತದೋ, ಸುಳ್ಳಾಗುತ್ತದೋ ಎಂಬುದು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಹೀಗಾಗಿ ಕೊಂಚ ಹೆಚ್ಚೇ ಚುನಾವಣೆಯತ್ತ ಗಮನಹರಿಸಿರುವ ಕಾಂಗ್ರೆಸ್ ಶತಾಯ- ಗತಾಯ ಹೋರಾಟಕ್ಕೆ ಸಿದ್ಧವಾಗುತ್ತಿದೆ.
ಕೆಜೆಪಿ: ಚುನಾವಣಾ ಸಿದ್ಧತೆಯಲ್ಲಿ ಕೆಜೆಪಿಯೂ ಹಿಂದೆ ಬಿದ್ದಿಲ್ಲ. ಅಭ್ಯರ್ಥಿಗಳ ಆಯ್ಕೆ ಮತ್ತು ಸ್ಥಳೀಯ ಮಟ್ಟದಲ್ಲಿ ಪಕ್ಷ ಬಲಪಡಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಈಗಾಗಲೇ 20 ಜಿಲ್ಲೆಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಸ್ವತಃ ಯಡಿಯೂರಪ್ಪ ಅವರೇ ಶನಿವಾರದಿಂದ ಜಿಲ್ಲಾ ಪ್ರವಾಸ ಆರಂಭಿಸಿದ್ದಾರೆ.
ಜೆಡಿಎಸ್: ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದು, ಈಗಾಗಲೇ ಜಿಲ್ಲಾ ಮಟ್ಟದಿಂದ ಮಾಹಿತಿ ತರಿಸಿಕೊಳ್ಳುತ್ತಿದೆ. ಮಂಗಳವಾರ ಪಕ್ಷದ ಮುಖಂಡರು ಮತ್ತು ಶಾಸಕರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ. ಶಾಸಕರು ಮತ್ತು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳಿಂದ ಮಾಹಿತಿ ತರಿಸಿಕೊಂಡು ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಬಳ್ಳಾರಿ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಕೂಡ ತನ್ನ ಬಲವರ್ಧನೆಗೆ ಈ ಚುನಾವಣೆಯನ್ನು ವೇದಿಕೆಯನ್ನಾಗಿಸಿಕೊಳ್ಳುವ ಹವಣಿಕೆಯಲ್ಲಿದೆ.
ಒಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎನಿಸಿಕೊಂಡಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಎಲ್ಲಾ ಪಕ್ಷಗಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಇಲ್ಲಿ ಎಡವಿದವರು ವಿಧಾನಸಭೆ ಚುನಾವಣೆಯಲ್ಲೂ ಎಡವಿ ಬೀಳುವುದು ಖಚಿತ. ಆದ್ದರಿಂದ ಎಲ್ಲಾ ಮುಖಂಡರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಟದ ಅಖಾಡಕ್ಕೆ ಇಳಿದಿದ್ದಾರೆ. ಶಾಸಕ ಸ್ಥಾನದ ಟಿಕೆಟ್ ಆಕಾಂಕ್ಷಿಗಳು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಮತ್ತು ಅವರನ್ನು ಗೆಲ್ಲಿಸುವ ಬಗ್ಗೆ ಯೋಜನೆ ರೂಪಿಸಲಾರಂಭಿಸಿದ್ದಾರೆ.