ತುರ್ತು ವಿಚಾರಣೆ ನಡೆಸಲ್ಲ: ಸುಪ್ರೀಂ
ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂಬ ಕಾಡುಗಳ್ಳ ವೀರಪ್ಪನ್ನ ನಾಲ್ವರು ಸಹಚರರ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಶನಿವಾರ ನಿರಾಕರಿಸಿದೆ...
ನವದೆಹಲಿ: ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂಬ ಕಾಡುಗಳ್ಳ ವೀರಪ್ಪನ್ನ ನಾಲ್ವರು ಸಹಚರರ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಶನಿವಾರ ನಿರಾಕರಿಸಿದೆ.
ಈ ನಾಲ್ವರನ್ನು ಭಾನುವಾರವೇ ಗಲ್ಲಿಗೇರಿಸಲಾಗುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಅರ್ಜಿ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಮುಖ್ಯನ್ಯಾಯಮೂರ್ತಿ ಅಲ್ತಮಸ್ ಕಬೀರ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆ ಭೀತಿಯಲ್ಲಿರುವ ವೀರಪ್ಪನ್ ಸಹಚರರು ಸೋಮವಾರ ಮತ್ತೊಮ್ಮೆ ನ್ಯಾಯಾಲಯದ ಕದ ಬಡಿಯುವ ಸಾಧ್ಯತೆ ಇದೆ.
'ನಾಲ್ವರನ್ನು ಭಾನುವಾರ ಗಲ್ಲಿಗೇರಿಸಲಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದೆವು. ಆದರೆ, ಮುಖ್ಯನ್ಯಾಯಮೂರ್ತಿಗಳು ಈ ಪ್ರಕರಣದ ತ್ವರಿತ ವಿಚಾರಣೆಗೆ ನಿರಾಕರಿಸಿದ್ದಾರೆ. ಹಾಗಾಗಿ ಭಾನುವಾರ ಗಲ್ಲುಶಿಕ್ಷೆ ಜಾರಿಗೊಳಿಸಲಿಕ್ಕಿಲ್ಲ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬೇಕಷ್ಟೆ' ಎಂದು ಈ ನಾಲ್ವರ ಪರ ವಕೀಲರಾದ ಕಾಲಿನ್ ಗೊನ್ಸಾಲ್ವೆಸ್ ಅವರು ಮಾಹಿತಿ ನೀಡಿದ್ದಾರೆ.