ವೀರಪ್ಪನ್ ಸಹಚರರಿಗೆ ಕುಣಿಕೆ ಬಿಗಿ
22 ಜನರನ್ನು ಹತ್ಯೆ ಮಾಡಿ ಗಲ್ಲು ಶಿಕ್ಷೆಗೆ ಒಳಗಾಗಿರುವ ವೀರಪ್ಪನ್‌ನ ನಾಲ್ವರು ಸಹಚರರನ್ನು ಭಾನುವಾರ ಅಥವಾ ಸೋಮವಾರ ನೇಣಿಗೇರಿಸುವ ಸಾಧ್ಯತೆ ಇದೆ...
ಕನ್ನಡಪ್ರಭ ವಾರ್ತೆ ಬೆಳಗಾವಿ ಫೆ.16
22 ಜನರನ್ನು ಹತ್ಯೆ ಮಾಡಿ ಗಲ್ಲು ಶಿಕ್ಷೆಗೆ ಒಳಗಾಗಿರುವ ವೀರಪ್ಪನ್‌ನ ನಾಲ್ವರು ಸಹಚರರನ್ನು ಭಾನುವಾರ ಅಥವಾ ಸೋಮವಾರ ನೇಣಿಗೇರಿಸುವ ಸಾಧ್ಯತೆ ಇದೆ.
ಜ್ಞಾನಪ್ರಕಾಶ, ಬಿಲ್ವವೆಂದ್ರ, ಸೈಮನ್ ಅಂಥೋಣೆಪ್ಪ, ಮೀಸೆ ಮಾದಯ್ಯ ಅವರು ಮಾಡಿಕೊಂಡ ಎಲ್ಲ ಮನವಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ನೇಣುಗಂಬ ಏರುವುದು ಖಚಿತವಾಗಿದೆ.
ಇದಕ್ಕಾಗಿ ಕಳೆದ 2-3 ದಿನಗಳಿಂದ ಹಿಂಡಲಗಾ ಜೈಲಿನ ಅಧಿಕಾರಿಗಳು ನಾಲ್ವರನ್ನು 'ಫಾಶಿ ಶಿಕ್ಷೆ'ಗೆ ಒಳಪಡಿಸಲು ತಾಲೀಮು ನಡೆಸುತ್ತಿದ್ದಾರೆ. ರಾಷ್ಟ್ರಪತಿಗೆ ಮತ್ತು ಸುಪ್ರೀಂ ಕೋರ್ಟ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ 14 ದಿನಗಳೊಳಗಾಗಿ ಗಲ್ಲಿಗೇರಿಸುವ ಬಗ್ಗೆ ಮಾಹಿತಿ ನೀಡಬೇಕಾದ ಅಗತ್ಯತೆ ಇದೆ. ಈ ನಾಲ್ವರನ್ನು ಗಲ್ಲಿಗೇರಿಸುವುದಕ್ಕೆ ಕೆಲವರು ತಡೆಯಾಜ್ಞೆ ತಂದು ಸ್ಥಗಿತಗೊಳಿಸುವ ಸಾಧ್ಯತೆ ಇರುವ ಕಾರಣ ಆದಷ್ಟು ಬೇಗನೇ ಅವರನ್ನು ನೇಣುಗಂಬಕ್ಕೆ ಏರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಗಲ್ಲು ಶಿಕ್ಷೆ ವಿಧಿಸಿದ್ದು ಏಕೆ?: ಹಿಂಡಲಗಾ ಕಾರಾಗೃಹದಲ್ಲಿರುವ ವೀರಪ್ಪನ್ ಸಹಚರರಾದ ನಾಲ್ವರು ಕೈದಿಗಳು 1993ರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸಮೀಪದ ಪಾಲಾರ್ ಎಂಬಲ್ಲಿ 22 ಜನ ಪೊಲೀಸರನ್ನು ಹತ್ಯೆ ಮಾಡಿದ್ದರು. 2003ರ ಜ.21ರಂದು ಟಾಡಾ ನ್ಯಾಯಾಲಯ ಹಾಗೂ ಹೈಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿದ್ದವು.
30 ವರ್ಷಗಳ ಹಿಂದೆ ಗಲ್ಲಿಗೇರಿಸಿದ್ದು: ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಏಕಕಾಲಕ್ಕೆ ಮೂವರನ್ನು ಗಲ್ಲಿಗೇರಿಸುವ ಸೌಲಭ್ಯವಿದೆ. 1983ರಲ್ಲಿ ಸರಿಯಾಗಿ 30 ವರ್ಷಗಳ ಹಿಂದೆ ಹನುಮಂತ ಮಲ್ಯಾರ್ ಎಂಬ ಅಪರಾಧಿಯನ್ನು ಗಲ್ಲಿಗೇರಿಸಿದ್ದೆ ಕೊನೆ ಪ್ರಕರಣವಾಗಿದೆ.