ಇಂದು ದೆಹಲಿಗೆ ಸರ್ವಪಕ್ಷ ನಿಯೋಗ
ಹುಬ್ಬಳ್ಳಿ: ಕಾವೇರಿ ವಿಷಯವಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಸೋಮವಾರ(ಫೆ.18) ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಶೆಟ್ಟರ್, 'ಈ ಹಿಂದೆ ಎರಡು ಬಾರಿ ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಎಲ್ಲರ ಒತ್ತಾಸೆ ಮೇರೆಗೆ ಮತ್ತೊಮ್ಮೆ ಪ್ರಧಾನಿ ಭೇಟಿ ಮಾಡಲಿದ್ದೇವೆ. ಪ್ರಧಾನಿ ನಮ್ಮ ಸಮಸ್ಯೆಯನ್ನು ಅರಿತುಕೊಳ್ಳುತ್ತಾರೆ' ಎಂಬ ವಿಶ್ವಾಸವಿದೆ ಎಂದರು.
ನಾರಿಮನ್ ಬದಲಾವಣೆ ಇಲ್ಲ: ನಾರಿಮನ್ ನೇತೃತ್ವದ ವಕೀಲರ ತಂಡವನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಕಳೆದ 20 ವರ್ಷಗಳಿಂದ ಕಾವೇರಿ ವಿಷಯದಲ್ಲಿ ಹೋರಾಡುತ್ತಿರುವ ನಾರಿಮನ್‌ಗೆ ಅಪಾರ ಜ್ಞಾನವಿದೆ. ಈ ವಕೀಲರ ತಂಡವನ್ನು ಬದಲಾಯಿಸಿದಲ್ಲಿ ಕಾವೇರಿ ವಿಷಯವಾಗಿ ಹೋರಾಟಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಶೆಟ್ಟರ್ ಅವರು ತಿಳಿಸಿದರು.