ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತೆರೆಮರೆ ಸಂಧಾನ?

ಪಕ್ಷದಿಂದ ಸಿಡಿದು ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆಗೆ ಬಿಜೆಪಿ ಚಿಂತನೆ ನಡೆಸಿದೆ.

Parashurama
Updated On : 18 Feb 2013, 12:39 pm

ಬೆಂಗಳೂರು/ನವದೆಹಲಿ: ಪಕ್ಷದಿಂದ ಸಿಡಿದು ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ. ರಾಜ್ಯ ಮಟ್ಟದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆಯದೇ ಇದ್ದರೂ ರಾಷ್ಟ್ರೀಯ ಅಧ್ಯಕ್ಷರು ಇಂತಹ ಸುಳಿವು ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಯಡಿಯೂರಪ್ಪ ಅವರೊಂದಿಗೆ ಒಪ್ಪಂದ ಏರ್ಪಡುವ ಸಾಧ್ಯತೆ ಕುರಿತು ಭಾನುವಾರ ಭರವಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಒಂದು ಸವಾಲು ಎಂಬುದನ್ನು ರಾಜನಾಥ್‌ಸಿಂಗ್ ಒಪ್ಪಿಕೊಂಡಿದ್ದಾರೆ. ಜತೆಗೆ  ಬಿಎಸ್‌ವೈ ಇಲ್ಲದೆ  ಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದ್ದರೂ, ವಿಧಾನಸಭೆ ಚುನಾವಣೆಗೆ ಮುನ್ನ ಯಡಿಯೂರಪ್ಪ ಜತೆ ಹೊಂದಾಣಿಕೆ ಏರ್ಪಡುವ ಸಾಧ್ಯತೆ ಇದೆ. ಇದಕ್ಕಾಗಿ ಯಡಿಯೂರಪ್ಪ  ಕಡೆಯಿಂದ ಬರುವ ಪ್ರಸ್ತಾಪಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ ಬರುವುದು ಪಕ್ಷದ ಗುರಿ ಎಂದಿರುವ ರಾಜನಾಥ್ ಸಿಂಗ್, ಈ ಬಗ್ಗೆ ವಿವರಣೆ ನೀಡಲು ನಿರಾಕರಿಸಿದ್ದಾರೆ. ಅದೇ ವೇಳೆ ಯಡಿಯೂರಪ್ಪ  ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತ ಚಿಂತನೆ ಮತ್ತು ಅವರ ಬೆಂಬಲಿಗರ ಜತೆ ಮಾತುಕತೆ ನಡೆಸುತ್ತಿರುವ ವಿಚಾರ ಬಹಿರಂಗಪಡಿಸಿದ್ದಾರೆ.
ಏಕೆ ಹೀಗೆ?: ಯಡಿಯೂರಪ್ಪ  ಬಿಜೆಪಿಯಲ್ಲಿದ್ದ ಸಂದರ್ಭದಲ್ಲಿ  ಸಿಂಗ್  ಆಪ್ತರಲ್ಲಿ ಒಬ್ಬರಾಗಿದ್ದರು. ಮೇಲಾಗಿ ಯಡಿಯೂರಪ್ಪ ದೈಹಿಕವಾಗಿ ಬಿಜೆಪಿಯಿಂದ ದೂರವಾಗಿದ್ದರೂ ಮಾನಸಿಕವಾಗಿ ಪೂರ್ಣ ಹೊರಗೆ ಹೋಗಿಲ್ಲ. ಆತ್ಮೀಯರಾಗಿದ್ದ ರಾಜನಾಥ್ ಸಿಂಗ್ ಬಿಜೆಪಿ ಅಧ್ಯಕ್ಷರಾದ ಬಳಿಕ ಅವರನ್ನು ಸಂಪರ್ಕಿಸಿ ಅಭಿನಂದನೆ ಹೇಳಿಲ್ಲ. ಈ ಕುರಿತು ತಮ್ಮ ಆಪ್ತರು ಪ್ರಶ್ನಿಸಿದಾಗ, ರಾಜನಾಥ್ ಸಿಂಗ್‌ರಂಥ ನಾಯಕರೊಂದಿಗೆ ಚರ್ಚಿಸಿದರೆ ಬಿಜೆಪಿ ಬಗ್ಗೆ ಇರುವ ತಮ್ಮ ಕೋಪ ತಣ್ಣಗಾಗಬಹುದು. ಬಿಜೆಪಿ ಬಗ್ಗೆ ಮೃದು ಧೋರಣೆ ತಳೆಯಬಹುದು. ಇದು ಕೆಜೆಪಿ ಸಂಘಟನೆಗೆ ತೊಡಕಾಗಲಿದೆ ಎಂದು ಬಿಎಸ್‌ವೈ ಹೇಳಿಕೊಂಡಿದ್ದಾರೆ.
ಇದರಿಂದ ರಾಜನಾಥ್ ಸಿಂಗ್, ಯಡಿಯೂರಪ್ಪ ಅವರೊಂದಿಗೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಅಂಥ ಪರಿಸ್ಥಿತಿ ಇಲ್ಲ: ಆದರೆ, ರಾಜನಾಥ್ ಸಿಂಗ್ ಅವರ ಅಭಿಪ್ರಾಯವನ್ನು ಯಡಿಯೂರಪ್ಪ ಅವರು ತಳ್ಳಿಹಾಕಿದ್ದಾರೆ. ಯಡಿಯೂರಪ್ಪ  ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೆ ಮುಂದೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಬಹುದಿತ್ತು. ಆದರೆ, ಬಿಎಸ್‌ವೈ ಇನ್ನಷ್ಟು ಶಾಸಕರನ್ನು ರಾಜಿನಾಮೆ ಕೊಡಿಸಿ ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈಹಾಕಿ ಅದರಲ್ಲಿ ವಿಫಲರಾಗಿದ್ದರು. ಹೀಗಿರುವಾಗ ಹೊಂದಾಣಿಕೆ ಬಗ್ಗೆ ಹೇಗೆ ಚರ್ಚಿಸಲು ಸಾಧ್ಯ ಎನ್ನುತ್ತಾರೆ ಬಿಜೆಪಿಯ ರಾಜ್ಯ ಮುಖಂಡರು.
ಈಗಾಗಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿ ರಾಜ್ಯದಲ್ಲಿ ಬಿಎಸ್‌ವೈ ಮತ್ತು ಕೆಜೆಪಿ ವಿರುದ್ಧ ಸಮರ ಸಾರಿದೆ. ಈಗ  ಹಿಂದೆ ಸರಿದರೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವಾದ ಯಡಿಯೂರಪ್ಪ ಮತ್ತು  ಬೆಂಬಲಿಗರದ್ದೂ ಆಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ
ಮೂಲಗಳ ಪ್ರಕಾರ ವಿಧಾನಸಭಾ ಚುನಾವಣಾ ಹೊಂದಾಣಿಕೆ ಬಗ್ಗೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಬಳಿಕವೇ ಬಿಜೆಪಿ ಮತ್ತು ಕೆಜೆಪಿ ಯೋಚನೆ ಮಾಡಲಿವೆ. ಯಡಿಯೂರಪ್ಪ ಅವರಿಲ್ಲದ ಬಿಜೆಪಿಗೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಒಂದು ಸವಾಲು. ಹೀಗಿದ್ದರೂ 2007ರ ಚುನಾವಣೆಯಲ್ಲಿ 3ನೇ ಸ್ಥಾನದಲ್ಲಿದ್ದ ಪಕ್ಷ ಈ ಬಾರಿ ಮೊದಲ ಅಥವಾ 2ನೇ ಸ್ಥಾನ ಪಡೆಯುವ ಭರವಸೆಯೊಂದಿಗೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ಕೆಜೆಪಿ ಕೂಡ ಬಿಜೆಪಿಗೆ ಸೆಡ್ಡು ಹೊಡೆಯಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದು ಏಕಾಂಗಿಯಾಗಿ ವಿಧಾನಸಭೆಯಲ್ಲೂ ಅಧಿಕಾರಕ್ಕೆ ಬರಬಹುದು ಎಂಬ ಪರಿಸ್ಥಿತಿ ಉದ್ಭವವಾದರೆ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಮತ್ತು ಯಡಿಯೂರಪ್ಪ ಯೋಚನೆ ಮಾಡಬಹುದು ಎನ್ನುತ್ತವೆ ಮೂಲಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement