ವೀರಪ್ಪನ್ ಸಹಚರರಿಗೆ ಯಾವ ಕ್ಷಣದಲ್ಲೂ ಗಲ್ಲು
ವೀರಪ್ಪನ್ನ ನಾಲ್ವರು ಸಹಚರರ ವಿರುದ್ಧ ಡೆತ್ ವಾರೆಂಟ್ ಇದ್ದರೂ ಗಲ್ಲಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹಿಂಡಲಗಾ ಜೈಲಿನ ಸಿಬ್ಬಂದಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ...
ಬೆಳಗಾವಿ: ವೀರಪ್ಪನ್ನ ನಾಲ್ವರು ಸಹಚರರ ವಿರುದ್ಧ ಡೆತ್ ವಾರೆಂಟ್ ಇದ್ದರೂ ಗಲ್ಲಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹಿಂಡಲಗಾ ಜೈಲಿನ ಸಿಬ್ಬಂದಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
22 ಪೊಲೀಸರ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಾದ ವೀರಪ್ಪನ್ನ ಸಹೋದರ ಜ್ಞಾನಪ್ರಕಾಶ್, ಮೀಸೆ ಮಾದಯ್ಯ, ಬಿಲವೇಂದ್ರ ಮತ್ತು ಸೈಮನ್ ಅವರನ್ನು ಭಾನುವಾರ ಗಲ್ಲಿಗೇರಿಸಲಾಗುತ್ತದೆ ಎಂಬ ಸುದ್ದಿ ಹರಡಿತ್ತು.
ಏತನ್ಮಧ್ಯೆ, ರಾಷ್ಟ್ರಪತಿಯಿಂದ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿರುವ ವಿಷಯವನ್ನು ಈ ನಾಲ್ವರಿಗೆ ಜೈಲಿನ ವೈದ್ಯರು ತಿಳಿಸಿದ್ದಾರೆ. ಪ್ರತಿದಿನ ಮೂರು ಸಲ ಕೈದಿಗಳ ರಕ್ತದೊತ್ತಡ ಪರೀಕ್ಷಿಸಲಾಗುತ್ತಿದೆ. ನಾಲ್ವರೂ ಆರೋಗ್ಯವಾಗಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಗಲ್ಲು ಶಿಕ್ಷೆ ವಿಧಿಸುವಾಗ ಬೇಕಾಗುವ ಕೊಂಡಿ, ಕೈಕಾಲು ಅಲುಗಾಡದಂತೆ ತೋಡಿಸಬೇಕಾದ ಬೆಲ್ಟ್ಗಳನ್ನು ತರಿಸಲಾಗಿದೆ. ನೇಣುಗಂಬಕ್ಕೆ ಏರಿಸುವ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು, ಜೈಲಿನ ಮುಖ್ಯ ಅಧೀಕ್ಷಕರು, ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಇರುತ್ತಾರೆ. ಗಲ್ಲಿಗೇರಿಸುವ ಮುನ್ನಾ ದಿನವೇ ಅವರಿಗೆ ವಿಷಯ ಮುಟ್ಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕ್ರೈಸ್ತ ಸಮುದಾಯಕ್ಕೆ ಸೇರಿದ ಈ ನಾಲ್ವರನ್ನು ಹಿಂಡಲಗಾ ಕಾರಾಗೃಹದ ಹಿಂಭಾಗದಲ್ಲಿರುವ ಸ್ಮಶಾನ ಭೂಮಿಂುಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು. ಅದಕ್ಕೆ ಬೇಕಾದ ಶವಪೆಟ್ಟಿಗೆಂುನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೇಲ್ಮನವಿಗೆ ಅವಕಾಶ?
ಶಿಕ್ಷೆಗೆ ತಡೆಯಾಜ್ಞೆ ಕೋರಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಒಂದು ವೇಳೆ ಆರೋಪಿ ಪರ ವಕೀಲರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಅದನ್ನು ನ್ಯಾಯಾಲಯ ಮನ್ನಿಸಲು ಸಂವಿಧಾನದಲ್ಲಿ ಅವಕಾಶ ನೀಡಿಲ್ಲ. ಹೀಗಾಗಿ ನ್ಯಾಯಾಧೀಶರು ಅಂತಹ ಅರ್ಜಿಗಳನ್ನು ಮನ್ನಿಸಿದರೆ ರಾಷ್ಟ್ರಪತಿಗಳ ಸ್ಥಾನಕ್ಕೆ ಅರ್ಥವೇ ಇರುವುದಿಲ್ಲ ಎಂದು ನ್ಯಾಯವಾದಿ ಮೋಹನ್ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
14 ದಿನದಲ್ಲಿ ಜಾರಿ
ಸರ್ವೋಚ್ಚ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೊಳಗಾದ ಆರೋಪಿಗೆ ರಾಷ್ಟ್ರಪತಿ ಕ್ಷಮಾದಾನ ನೀಡಲು ನಿರಾಕರಿಸಿದರೆ, ಅದಾದ 14 ದಿನಗಳ ಒಳಗಾಗಿ ಅಪರಾಧಿಯನ್ನು ಗಲ್ಲಿಗೇರಿಸಬೇಕು. ರಾಷ್ಟ್ರಪತಿ ಅರ್ಜಿ ತಿರಸ್ಕರಿಸಿದ ವಿಷಯವನ್ನು ಸರ್ಕಾರ ಹಾಗೂ ಸಂಬಂಧಪಟ್ಟ ನ್ಯಾಯಾಲಯಕ್ಕೆ ತಲುಪಿಸಲಾಗುತ್ತದೆ. ಆದೇಶ ಪ್ರತಿ ತಲುಪಿದ 14 ದಿನಗಳ ಒಳಗಾಗಿ ನ್ಯಾಯಾಧೀಶರು ಅಪರಾಧಿಗಳಿರುವ ಜೈಲಿನ ಅಧೀಕ್ಷಕರನ್ನು ನ್ಯಾಯಾಲಯಕ್ಕೆ ಕರೆಯಿಸಿ ಗಲ್ಲು ಶಿಕ್ಷೆಯ ದಿನಾಂಕವನ್ನು ನಿಗದಿಪಡಿಸುತ್ತಾರೆ. ನಿಗದಿಯಾದ ದಿನದಂದು ಸೂರ್ಯೋದಯವಾಗುತ್ತಿದ್ದಂತೆ ಆಪರಾಧಿ ನೇಣು ಕುಣಿಕೆಗೆ ಏರಿಸಲಾಗುತ್ತದೆ. ಕನಿಷ್ಠ ಅರ್ಧ ತಾಸು ನೇಣುಗಂಬದಲ್ಲೇ ಬಿಡಲಾಗುತ್ತದೆ. ಈ ಪ್ರಕ್ರಿಯೆಗೆ ಜೈಲಿನ ವೈದ್ಯಕೀಯ ಅಧಿಕಾರಿ, ಜೈಲು ಅಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಆ ಭಾಗದ ಉಸ್ತುವಾರಿ ಮ್ಯಾಜಿಸ್ಟ್ರೇಟ್ ಸಾಕ್ಷಿಯಾಗುತ್ತಾರೆ. ಬಳಿಕ ಅಪರಾಧಿ ಮೃತಪಟ್ಟಿರುವ ಬಗ್ಗೆ ಒಂದು ಪ್ರಮಾಣಪತ್ರ ತಯಾರಿಸಿ ಅದನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ.
ಒಟ್ಟಿಗೆ ನೇಣಿಗೆ
ಹಿಂಡಲಗಾ ಜೈಲಿನಲ್ಲಿ ಒಂದೇ ಬಾರಿಗೆ ಮೂವರನ್ನು ನೇಣಿಗೆ ಏರಿಸಲು ಅವಕಾಶವಿದೆ. ಹೀಗಾಗಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಒಂದು ತಾಸು ಸಮಯ ಬೇಕಾಗುತ್ತದೆ.