ಹಗರಣ ದಾಖಲೆ ನಾಶಕ್ಕೆ ಪ್ರಯತ್ನ
ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ರಹಸ್ಯ ಬಯಲು ಮಾಡಲು ನೆರವಾದದ್ದು ಮಧ್ಯವರ್ತಿ ಗಿಡೋ ಹಷ್ಕೆ ತಾಯಿ ಮನೆಯಲ್ಲಿ ಸಿಕ್ಕ ಕಂಪ್ಯೂಟರ್ ಹಾರ್ಡ್‌ಡ್ರೈವ್ ಮತ್ತು ದಾಖಲೆಪತ್ರಗಳು ಎನ್ನುವ ಸತ್ಯ ಇದೀಗ ಬಹಿರಂಗವಾಗಿದೆ...
ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ರಹಸ್ಯ ಬಯಲು ಮಾಡಲು ನೆರವಾದದ್ದು ಮಧ್ಯವರ್ತಿ ಗಿಡೋ ಹಷ್ಕೆ ತಾಯಿ ಮನೆಯಲ್ಲಿ ಸಿಕ್ಕ ಕಂಪ್ಯೂಟರ್ ಹಾರ್ಡ್‌ಡ್ರೈವ್ ಮತ್ತು ದಾಖಲೆಪತ್ರಗಳು ಎನ್ನುವ ಸತ್ಯ ಇದೀಗ ಬಹಿರಂಗವಾಗಿದೆ.
ಆದರೆ, ಹಗರಣದ ಕುರಿತು ತನಿಖೆ ಆರಂಭವಾಗುವ ವೇಳೆಗೆ ಒಪ್ಪಂದಕ್ಕೆ ಸಂಬಂಧಿಸಿದ ಕಂಪ್ಯೂಟರ್ ದಾಖಲೆಗಳನ್ನು ಹಷ್ಕೆ ಅಳಿಸಿಹಾಕಿದ್ದ. ಕಾಗದಪತ್ರಗಳನ್ನು ತನ್ನ ತಾಯಿ ಮನೆಯಲ್ಲಿ ಸೂಟ್‌ಕೇಸ್‌ವೊಂದರಲ್ಲಿ ಅಡಗಿಸಿಟ್ಟಿದ್ದ. ಇನ್ನು ಮುಂದೆ ಹಗರಣದ ಕುರಿತ ಸತ್ಯ ಹೊರಬರಲು ಸಾಧ್ಯವೇ ಇಲ್ಲ ಎಂದು ಭಾವಿಸಿ ನಿರಾಳವಾಗಿದ್ದ.
ಆದರೆ, ದುರದೃಷ್ಟವೇನೆಂದರೆ ದಾಳಿ ವೇಳೆ ತನಿಖಾಧಿಕಾರಿಗಳು ಆತನ ತಾಯಿ ಮನೆಯಿಂದ ವಶಪಡಿಸಿಕೊಂಡ ಕಂಪ್ಯೂಟರ್ ಹಾರ್ಡ್‌ಡ್ರೈವ್ ಹಾಗೂ ಸೂಟ್‌ಕೇಸ್ ಅವನ ಎಲ್ಲಾ ನಂಬಿಕೆಯನ್ನು ತಲೆಕೆಳಗು ಮಾಡಿತು. ಅವನು ಬಚ್ಚಿಟ್ಟಿದ್ದ ಎಲ್ಲಾ ಸತ್ಯಗಳನ್ನು ಒಂದೊಂದಾಗಿಯೇ ಹೊರಹಾಕಿತು.
ಆತ ಅಳಿಸಿ ಹಾಕಿದ್ದ ದಾಖಲೆಗಳನ್ನು ಕಂಪ್ಯೂಟರ್‌ನ ಹಾರ್ಡ್‌ಡ್ರೈವ್ ಮೂಲಕ ತನಿಖಾಧಿಕಾರಿಗಳು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಈ ಡ್ರೈವ್‌ನಲ್ಲಿ ಭಾರತೀಯ ಮಧ್ಯವರ್ತಿಗಳ ಜತೆಗಿನ ಮಾತುಕತೆಯ ವಿವರ, ಫಿನ್‌ಮೆಕಾನಿಕಾ ಸೇರಿ ಅನೇಕ ಅಂತಾರಾಷ್ಟ್ರೀಯ ವ್ಯವಹಾರಗಳ ವಿವರ ದಾಖಲಾಗಿತ್ತು. ಇದರ ಜತೆಗೆ ಸೂಟ್‌ಕೇಸ್‌ನಲ್ಲಿದ್ದ ಕಾಗದಪತ್ರಗಳು ಹಗರಣದ ಕುರಿತು ಇನ್ನಷ್ಟು ಮಾಹಿತಿ ನೀಡಿತು. ಇದನ್ನೇ ಆಧಾರವಾಗಿಟ್ಟುಕೊಂಡು ಹಗರಣದ ಹಿಂದಿನ ಒಂದೊಂದೇ ಸತ್ಯವನ್ನು ಬಯಲಿಗೆಳೆಯುವುದು ಸಾಧ್ಯವಾಯಿತು ಎನ್ನುತ್ತಾರೆ ತನಿಖಾಧಿಕಾರಿಗಳು. ಈಗ ಈ ದಾಖಲೆಗಳು ಹಾಗೂ ಕಡತಗಳು ಪ್ರಾಸಿಕ್ಯೂಟರ್ ಬುಸ್ಟೋ ಅರ್ಸಿಜಿಯೋ, ಇಜಿನಿಯೋ ಫುಸ್ಕೋ ಅವರ ಮುಂದಿದೆ. ಈ ದಾಖಲೆಗಳೇ ಫಿನ್‌ಮೆಕಾನಿಕಾ ಸಂಸ್ಥೆಯ ಮುಖ್ಯಸ್ಥ ಗಿಸೆಪ್ಪಿ ಒರ್ಸಿ ಭವಿಷ್ಯವನ್ನು ನಿರ್ಧರಿಸಲಿವೆ.