ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೈ ಅಪ್ಪಿದ್ರು ಯೋಗೇಶ್ವರ್ ರಾಜೂಗೌಡ್ರದ್ದು ಡೌಟು

ಶುಕ್ರವಾರ ಮಧ್ಯಾಹ್ನ ಮಡಿಕೇರಿಯಲ್ಲಿರುವ ಸ್ಪೀಕರ್ ಬೋಪಯ್ಯ ಅವರ ಕಚೇರಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್...

Parashurama
Updated On : 23 Feb 2013, 1:18 am

ಮಡಿಕೇರಿ/ರಾಮನಗರ: ಶುಕ್ರವಾರ ಮಧ್ಯಾಹ್ನ ಮಡಿಕೇರಿಯಲ್ಲಿರುವ ಸ್ಪೀಕರ್ ಬೋಪಯ್ಯ ಅವರ ಕಚೇರಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಸಾಯಂಕಾಲ ರಾಮನಗರಕ್ಕೆ ಹಿಂದಿರುಗಿ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದರು.
ಮತ್ತೊಂದೆಡೆ, ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದ ಮಾಜಿ ಸಚಿವ ರಾಜೂಗೌಡ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದ್ದು, ಕಾಂಗ್ರೆಸ್‌ನಿಂದ ಇನ್ನೂ ಟಿಕೆಟ್ ಖಚಿತವಾಗದ್ದರಿಂದ ಶಾಸಕ ಸ್ಥಾನಕ್ಕೆ ಶುಕ್ರವಾರ ನೀಡಬೇಕಿದ್ದ ರಾಜಿನಾಮೆನಿರ್ಧಾರ ಮುಂದೂಡಿದ್ದಾರೆ.          
ಇದೇ ವೇಳೆ, ವಿಧಾನಸಭಾ ಕಾರ್ಯದರ್ಶಿ ರಜೆಯಲ್ಲಿರುವುದರಿಂದ ಅವರು ಕರ್ತವ್ಯಕ್ಕೆ ಬಂದ ಬಳಿಕ ರಾಜಿನಾಮೆ ಪತ್ರವನ್ನು ಪರಿಶೀಲಿಸುವುದಾಗಿ ಬೋಪಯ್ಯ ಅವರು ಯೋಗೇಶ್ವರ್ ಅವರಿಗೆ ತಿಳಿಸಿದ್ದಾರೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ಯೋಗೇಶ್ವರ್, 'ನಾನು ಬಿಜೆಪಿ ಆಡಳಿತದ ಬಗ್ಗೆ ಭ್ರಮನಿರಸನಗೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ' ಎಂದು ತಿಳಿಸಿದ್ದರು.
ರಾಮನಗರದಲ್ಲಿ ಕಾಂಗ್ರೆಸ್ ಸೇರ್ಪಡೆ: ಮಡಿಕೇರಿಯಿಂದ ಸಂಜೆ ರಾಮನಗರಕ್ಕೆ ಆಗಮಿಸಿದ ಯೋಗೇಶ್ವರ್, ಇಲ್ಲಿನ ಕಾಂಗ್ರೆಸ್ ಕಚೇರಿಗೆ ತೆರಳಿ, ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪಕ್ಷದ ಬಾವುಟ ಪಡೆದು, ಕಾಂಗ್ರೆಸ್‌ಗೆ ಸೇರ್ಪಡೆಯಾದರು. ನಂತರ ಮಾತನಾಡಿದ ಯೋಗೇಶ್ವರ್, 'ಬೇರೇಡೆಯಿಂದ ಬಂದವರು ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿನವರ ಮತ ಪಡೆದು, ಜಿಲ್ಲೆಯನ್ನು ಕಡೆಗಣಿಸಿ ಮೋಸ ಮಾಡುತ್ತಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಅಲ್ಲದೆ, ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗುವುದು ಎಂದೂ ತಿಳಿಸಿದರು.
ಟಿಕೆಟ್ ಗ್ಯಾರಂಟಿ ಇಲ್ಲ: ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ವೆಂಕಟಪ್ಪ ನಾಯಕ ಅವರಿಗೆ ಪಕ್ಷದ ಟಿಕೆಟ್ ಕೊಡಿಸಲು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯತ್ನಿಸುತ್ತಿದ್ದಾರೆ. ಇದು ಯಶಸ್ವಿಯಾದರೆ ರಾಜೂಗೌಡ ಕಾಂಗ್ರೆಸ್ ಸೇರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement