ಸ್ಫೋಟದಲ್ಲಿ ಕನ್ನಡಿಗನ ಸಾವು, ಒಬ್ಬನಿಗೆ ಗಾಯ
ಹೈದಾರಾಬಾದಿನಲ್ಲಿ ಗುರುವಾರ ಸಂಜೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸತ್ತವರ ಪೈಕಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಟಸಾಂಗ್ವಿ ಗ್ರಾಮದ ನಿವಾಸಿಯೂ ಸೇರಿದ್ದಾರೆ.
ಬೀದರ್: ಆಂಧ್ರದ ಹೈದಾರಾಬಾದಿನಲ್ಲಿ ಗುರುವಾರ ಸಂಜೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಸತ್ತವರ 16 ಜನರ ಪೈಕಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಟಸಾಂಗ್ವಿ ಗ್ರಾಮದ ನಿವಾಸಿಯೂ ಸೇರಿದ್ದಾರೆ. ಅಲ್ಲದೆ, ಕೆರೂರು ಗ್ರಾಮದ ಯುವಕ ಕೂಡಾ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತನನ್ನು ಪದ್ಮಾಕರ್ ನರಸಿಂಗರಾವ್ ಕುಲಕರ್ಣಿ(52) ಎಂದು ಗುರುತಿಸಲಾಗಿದೆ. ಪಾರ್ಥೀವ ಶರೀರವನ್ನು ಶುಕ್ರವಾರ ಸ್ವಗ್ರಾಮಕ್ಕೆ ತಂದು, ಸಂಜೆ ವೇಳೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಗಾಯಗೊಂಡಿರುವ ಯುವಕ ಮಾರುತಿ ಕೆರೂರು(17) ಎಂದು ಗುರುತಿಸಲಾಗಿದ್ದು, ಇವರು ಸಾಯಿ ಮಂದಿರದ ಬಳಿ ತಳ್ಳು ಗಾಡಿಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಪದ್ಮಾಕರ್ ರೀತಿಯಲ್ಲಿ ಮಾರುತಿ ಅವರೂ ಆನಂದ್ ಹೊಟೇಲ್ನಲ್ಲಿ ತಿಂಡಿಗೆ ಹೋಗಿದ್ದರು. ಆ ವೇಳೆ ನಡೆದ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಾರುತಿ ಅವರನ್ನು ಹೈದರಾಬಾದ್ನ ಯಶೋದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃತ್ತಿಯಲ್ಲಿ ಬಾಣಸಿಗರಾಗಿರುವ ಪದ್ಮಾಕರ್, ಅಲ್ಲಲ್ಲಿ ಅಡುಗೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. 15 ದಿನಗಳ ಹಿಂದಷ್ಟೇ ಹೈದರಾಬಾದ್ಗೆ ತೆರಳಿ ಅಲ್ಲಿನ ದಿಲ್ಸುಖ್ ನಗರದ ಸಾಯಿ ಮಂದಿರದ ಬಳಿ ತಳ್ಳುವ ಗಾಡಿಯ ಮೇಲೆ ಜಿಲೇಬಿ ವ್ಯಾಪಾರ ಮಾಡುತ್ತಿದ್ದರು.
ಆಧಾರ್ ಕಾರ್ಡ್ನಿಂದ ಗುರುತು ಪತ್ತೆ: ಗುರುವಾರ ಸಂಜೆ ಪದ್ಮಾಕರ್ ಅವರು ದಿಲ್ಸುಖ್ ನಗರದ ಸಾಯಿ ಮಂದಿರದ ಬಳಿ ಇರುವ ಆನಂದ್ ಹೋಟೆಲ್ಗೆ ತಿಂಡಿ ತಿನ್ನಲು ಹೋದದ್ದೇ ಇವರ ಪಾಲಿಗೆ ಮುಳುವಾಯಿತು. ತಿಂಡಿ ತಿನ್ನುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಪದ್ಮಾಕರ್ ಗುರುತು ಪತ್ತೆಯಾದದ್ದು ಅವರ ಜೇಬಿನಲ್ಲಿದ್ದ ಆಧಾರ್ ಕಾರ್ಡ್ನಿಂದ. ತಡ ರಾತ್ರಿಯಾದ್ರೂ ಪದ್ಮಾಕರ್ ಮನೆಗೆ ಬಾರದಿದ್ದನ್ನು ಕಂಡು ಗಾಬರಿಗೊಂಡ ಸಹೋದರಿ ಸುಧಾ ಜೋಶಿ, ಜಿಲೇಬಿ ಮಾರಾಟ ಮಾಡುತ್ತಿದ್ದ ಸ್ಥಳದ ಅಕ್ಕಪಕ್ಕದಲ್ಲಿಯೇ ಬಾಂಬ್ ಸ್ಫೋಟಗೊಂಡಿದ್ದನ್ನು ಅರಿತು, ಸ್ಥಳಕ್ಕೆ ತೆರಳಿ ಪೊಲೀಸರನ್ನು ವಿಚಾರಿಸಿದ್ದಾರೆ. ಆಗ ಗಾಯಾಳು ಹಾಗೂ ಮೃತ ದೇಹಗಳು ಉಸ್ಮಾನಿಯಾ ಆಸ್ಪತ್ರೆಯಲ್ಲಿದ್ದು ಗುರುತು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ. ನಂತರ ಆಸ್ಪತ್ರೆಯಲ್ಲಿದ್ದ ಪೊಲೀಸರು ತೋರಿಸಿದ ಆಧಾರ ಕಾರ್ಡ್ನಿಂದ ಪದ್ಮಾಕರ್ ಮೃತಪಟ್ಟಿದ್ದು ಸುಧಾ ಅವರಿಗೆ ಖಚಿತವಾಗಿದೆ.
ಮೃತ ಪದ್ಮಾಕರ್ ಕುಲಕರ್ಣಿ ಅವರ ಮನೆಗೆ ಭಾಲ್ಕಿ ಡಿವೈಎಸ್ಪಿ ಬಿಎಸ್ ಮಾಲಗತ್ತಿ ಹಾಗೂ ತಹಸೀಲ್ದಾರ್ ಅರುಣ ಕುಲಕರ್ಣಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.