ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೈ ಸ್ಫೋಟ ಐಎಂ ಕೈವಾಡ

ಹೈದರಾಬಾದ್‌ನ ದಿಲ್‌ಸುಖ್‌ನಗರ ಅವಳಿ ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದೀನ್(ಐಎಂ) ಕೈವಾಡ ಇರುವುದು ಬಹುತೇಕ ಸ್ಪಷ್ಟವಾಗಿದೆ...

Parashurama
Updated On : 23 Feb 2013, 2:15 am

ನವದೆಹಲಿ/ಹೈದರಾಬಾದ್: ಹೈದರಾಬಾದ್‌ನ ದಿಲ್‌ಸುಖ್‌ನಗರ ಅವಳಿ ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದೀನ್(ಐಎಂ) ಕೈವಾಡ ಇರುವುದು ಬಹುತೇಕ ಸ್ಪಷ್ಟವಾಗಿದೆ. ಈ ಹಿಂದೆ ದೇಶದ ವಿವಿಧೆಡೆ ಸಂಭವಿಸಿದ ಸ್ಫೋಟಗಳು ಹಾಗೂ ಬಾಂಬ್‌ನಲ್ಲಿ ಬಳಸಿದ ಸ್ಫೋಟಕಗಳನ್ನು ಆಧರಿಸಿ ಘಟನೆಯಲ್ಲಿ ಐಎಂ ಕೈವಾಡ ಇರುವುದನ್ನು ಪ್ರಾಥಮಿಕ ತನಿಖೆಗಳು ಖಚಿತಪಡಿಸಿವೆ.
ಈ ಹಿನ್ನೆಲೆಯಲ್ಲಿ ಪುಣೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ ಐಎಂ ಉಗ್ರ ಸಯೀದ್ ಮಕ್ಬೂಲ್‌ನನ್ನು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.  ತಿಹಾರ್ ಜೈಲಿನಲ್ಲಿರುವ  ಮಕ್ಬೂಲ್ ದಾಳಿ ಕುರಿತು ಈ ಹಿಂದೆಯೇ ಸುಳಿವು ನೀಡಿದ್ದ. ಉಗ್ರ ರಿಯಾಜ್ ಭಟ್ಕಳ್ ಸೂಚನೆ ಮೇರೆಗೆ ಈತ 2012ರ ಜುಲೈನಲ್ಲಿ ದಿಲ್‌ಸುಖ್‌ನಗರ ಹಾಗೂ ಬೇಗಂ ಬಜಾರ್‌ನಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಬಾಂಬ್ ಇಡಲು ಸೂಕ್ತ ಸ್ಥಳ ಗುರುತಿಸಿದ್ದ. ಆದರೆ, ಹೈದರಾಬಾದ್‌ಗೂ ಮೊದಲು ಐಎಂ ಉಗ್ರ ಸಿದ್ದಿಕಿ ಹತ್ಯೆಗೆ ಪ್ರತೀಕಾರವಾಗಿ ಪುಣೆ ಬಾಂಬ್ ಸ್ಫೋಟ ನಡೆಸುವಂತೆ ಉಗ್ರ ರಿಯಾಜ್ ಭಟ್ಕಳ್ ಸೂಚಿಸಿದ್ದ. ಅದರಂತೆ ಮಕ್ಬೂಲ್ ಹಾಗೂ ಇನ್ನೊಬ್ಬ ಬಂಧಿತ ಉಗ್ರ ಇಮ್ರಾನ್ ಪುಣೆ ಸ್ಫೋಟ ಕಾರ್ಯತಂತ್ರ ಸಿದ್ಧಪಡಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ಈ ನಡುವೆ, ಪೊಲೀಸರು ಘಟನೆಗೆ ಸಂಬಂಧಿಸಿ ಶಂಕಿತನೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ, ಬೆಂಗ್ಳೂರು ಟಾರ್ಗೆಟ್
ಬೆಂಗಳೂರು, ಹುಬ್ಬಳ್ಳಿ ಜತೆ ಮುಂಬೈ,  ಕೊಯಮುತ್ತೂರು ಕೂಡ ಸಂಭಾವ್ಯ ದಾಳಿಯ ಪಟ್ಟಿಯಲ್ಲಿತ್ತು. ಕೇಂದ್ರ ಗೃಹ ಸಚಿವಾಲಯ ಬುಧವಾರ ಆಂಧ್ರ ಕೇರಳ, ಕರ್ನಾಟಕ,  ಮಹಾರಾಷ್ಟ್ರಗಳಿಗೆ  ಸಂಚಿನ ಕುರಿತು ಮಾಹಿತಿ ನೀಡಿತ್ತು. ಉಗ್ರ  ಕಸಬ್ ಮತ್ತು ಅಫ್ಜಲ್ ನೇಣಿಗೆ ಪ್ರತಿಯಾಗಿ ದಾಳಿ ನಡೆಸಲು ಲಷ್ಕರ್  ಮತ್ತು ಐಎಂ ಸಂಚು ರೂಪಿಸಿದ್ದ ಬಗ್ಗೆ ರಾಜ್ಯಗಳಿಗೆ ಫೆ.19, 20ರಂದು  ಸೂಚಿಸಲಾಗಿತ್ತು.

ಮೂವರ ಮೇಲೆ ಶಂಕೆ
ಸ್ಫೋಟಕ್ಕೆ ಸಂಬಂಧಿಸಿ ತನಿಖಾ ಸಂಸ್ಥೆಗಳಿಗೆ ಖಚಿತ ಸುಳಿವು ಸಿಕ್ಕಿಲ್ಲ. ಆದರೆ, ಉತ್ತರಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನ 3 ವ್ಯಕ್ತಿಗಳು ಈ ದಾಳಿಯಲ್ಲಿ ಪಾಲ್ಗೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹೈದರಾಬಾದ್ ಪೊಲೀಸರು ಜ.18ರಂದು ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿದ್ದರು. ಆದರೆ ಅವರು ಕೆಲವು ಗಂಟೆಗಳ ಮೊದಲು ತಪ್ಪಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement