ಧೋನಿ ಬಳಗಕ್ಕೆ ನಿರೀಕ್ಷಿತ ಜಯ
ಚೆನ್ನೈ: ನಿರೀಕ್ಷೆಯಂತೆ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎಂಟು ವಿಕೆಟ್ಗಳ ದೊಡ್ಡ ಜಯ ಪಡೆದಿದೆ. ಇದರಿಂದಾಗಿ, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1-0ಯ ಮುನ್ನಡೆ ಪಡೆದುಕೊಂಡಿದೆ.
ಈ ಪಂದ್ಯದ ಮತ್ತೊಂದು ವಿಶೇಷವೆಂದರೆ, ಆಸೀಸ್ನ 2 ಇನಿಂಗ್ಸ್ಗಳಿಂದ ಉರುಳಿದ ಎಲ್ಲಾ 20 ವಿಕೆಟ್ಗಳು, ಭಾರತೀಯ ಸ್ಪಿನ್ ಪಡೆಗೇ ಲಭ್ಯವಾಗಿವೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಮಟ್ಟಿಗೆ ಹೀಗೆ ಸಂಭವಿಸಿರುವುದು ಇದು 3ನೇ ಬಾರಿ.
1972-73ರಲ್ಲಿ ಇಂಗ್ಲೆಂಡ್ ಹಾಗೂ ಭಾರತ ನಡುವೆ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ನರ್ಗಳು ಇಂಗ್ಲೆಂಡ್ ತಂಡದ 20 ವಿಕೆಟ್ಗಳನ್ನು ಕಬಳಿಸಿದ್ದರು.
1975-76ರಲ್ಲಿ ಆಕ್ಲೆಂಡ್ನಲ್ಲಿ ನಡೆದಿದ್ದ ನ್ಯೂಜಿಲೆಂಡ್- ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿಯೂ ಭಾರತೀಯ ಸ್ಪಿನ್ನರ್ಗಳೇ ಭಾರತದ ಎಲ್ಲಾ ವಿಕೆಟ್ಗಳನ್ನೂ ಉರುಳಿಸಿದ್ದರು.
ಅಜೇಯರಾಗೇ ಉಳಿದ ಹೆನ್ರೀಕೆಸ್: ಸೋಮವಾರ ದಿನಾಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಲಯಾನ್ ಹಾಗೂ ಹೆನ್ರೀಕೆಸ್ - ಇಬ್ಬರೂ ಮಂಗಳವಾರ ತಮ್ಮ ತಂಡದ ದ್ವಿತೀಯ ಇನಿಂಗ್ಸ್ ಮುಂದುವರೆಸಿದರು. ಸೋಮವಾರವೇ 9 ವಿಕೆಟ್ ಕಳೆದುಕೊಂಡಿದ್ದ ಆಸೀಸ್ ತಂಡದ ಇನ್ನೊಂದು ವಿಕೆಟ್ ಉರುಳಿಸಲು ಭಾರತೀಯರು 25 ನಿಮಿಷಗಳವರೆಗೆ ಕಾಯಬೇಕಾಯಿತು. ಕೊನೆಯ ವಿಕೆಟ್ಗೆ 66 ರನ್ಗಳ ಜೊತೆಯಾಟವಾಡಿದ್ದ ಹೆನ್ರೀಕೆಸ್ ಹಾಗೂ ಲಯಾನ್ ಜೋಡಿ, ಅಂತೂ ಇನಿಂಗ್ಸ್ನ 93ನೇ ಓವರ್ನಲ್ಲಿ ಮುರಿಯಿತು. ವೈಯಕ್ತಿಕವಾಗಿ 11 ರನ್ ಗಳಿಸಿದ್ದ ಲಯಾನ್, ಜಡೇಜಾ ಎಸೆತದಲ್ಲಿ ಮುರಳಿ ವಿಜಯ್ಗೆ ಕ್ಯಾಚ್ ನೀಡುವ ಮೂಲಕ, ಆಸೀಸ್ ತಂಡದ 10ನೇ ವಿಕೆಟ್ ಉರುಳಿತು.
ಆದರೆ, ಕ್ರೀಸ್ನ ಮತ್ತೊಂದು ತುದಿಯಲ್ಲಿ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಹೆನ್ರೀಕೆಸ್ ಅವರ ವಿಕೆಟ್ ಉರುಳಿಸಲು ಭಾರತಕ್ಕೆ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ, ಹೆನ್ರೀಕೆಸ್ 81 ರನ್ ಗಳಿಸಿ ಅಜೇಯರಾಗಿ ಉಳಿದರು.
ಆಸೀಸ್, ತನ್ನ ದ್ವಿತೀಯ ಇನಿಂಗ್ಸ್ನಲ್ಲಿ ಒಟ್ಟು 241 ರನ್ ಗಳಿಸಿದ ಪರಿಣಾಮವಾಗಿ ಭಾರತಕ್ಕೆ ಪಂದ್ಯ ಗೆಲ್ಲಲು 50 ರನ್ಗಳ ಗುರಿ ಸಿಕ್ಕಿತು. ಈ ಗುರಿಯನ್ನು ಸಾಧಿಸುವಲ್ಲಿ ಕ್ರೀಸ್ಗೆ ಇಳಿದ ಭಾರತ, ಆರಂಭಿಕರಾದ ಮುರಳಿ ವಿಜಯ್ ಹಾಗೂ ವೀರೇಂದ್ರ ಸೆಹ್ವಾಗ್ ಅವರನ್ನು ಕಳೆದುಕೊಂಡಿತಾದರೂ, ಚೇತೇಶ್ವರ ಪೂಜಾರ ಹಾಗೂ ಸಚಿನ್ ತೆಂಡೂಲ್ಕರ್ ಅವರಿಬ್ಬರ ನೆರವಿನೊಂದಿಗೆ ಗೆಲುವಿನ ದಡ ಸೇರಿತು.
ನಥಾನ್ ಲಯಾನ್ ಮಾಡಿದ 11.3ನೇ ಎಸೆತದಲ್ಲಿ, ಚೇತೇಶ್ವರ ಗಳಿಸಿದ ಒಂದು ರನ್ ಭಾರತದ ಪಾಳಯದಲ್ಲಿ ಗೆಲುವಿನ ಅಲೆ ಮೂಡಿಸಿತು.
ಧೋನಿ ಪಂದ್ಯಶ್ರೇಷ್ಠ: ನಿರೀಕ್ಷೆಯಂತೆ, ಪಂದ್ಯ ಶ್ರೇಷ್ಠ ಪ್ರಶಸ್ತಿ ಧೋನಿ ಅವರ ಪಾಲಾಯಿತು. ವೈಯಕ್ತಿಕವಾಗಿ 224 ರನ್ಗಳ ಗರಿಷ್ಠ ಮೊತ್ತ ಗಳಿಸಿ, ಹೊಸ ಸಾಧನೆ ಮಾಡಿದ ಧೋನಿ ಅವರು ಈ ಗೌರವ ಪಡೆದರು.
ಕಾಡಿದ ಹೆನ್ರೀಕೆಸ್: ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಭಾರತ ಗಳಿಸಿದ್ದ 192 ರನ್ಗಳ ಮುನ್ನಡೆಯನ್ನು ಬೆನ್ನಟ್ಟಿದ್ದ ಆಸೀಸ್, ದಿನಾಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಇನ್ನೊಂದು ವಿಕೆಟ್ ಉರುಳಿದ್ದರೆ, ಭಾರತಕ್ಕೆ ಗೆಲುವು ಸೋಮವಾರವೇ ಸಿಗುತ್ತಿತ್ತು. ಆದರೆ, ಆಸೀಸ್ನ ಮಧ್ಯಮ ಕ್ರಮಾಂಕದ ಹೆನ್ರೀಕೆಸ್, ಭಾರತದ ಈ ಗೆಲುವಿಗೆ ಅಡ್ಡಗಾಲು ಹಾಕಿದ್ದರು. ದಿನದಾಟ ಮುಗಿಯುವವರೆಗೂ ಬ್ಯಾಟ್ ಬೀಸುತ್ತಾ ಸಾಗಿದ್ದ ಹೆನ್ರೀಕೆಸ್ 75 ರನ್ ಗಳಿಸಿ, 8 ರನ್ ಗಳಿಸಿದ್ದ ಲಯಾನ್ ಜೊತೆ ಅಜೇಯರಾಗಿ ಉಳಿದಿದ್ದರು. ಅವರಿಬ್ಬರಲ್ಲೊಬ್ಬರು ಬೇಗನೇ ವಿಕೆಟ್ ಒಪ್ಪಿಸಿದ್ದರೆ, ಭಾರತದ ಗೆಲುವು ಸೋಮವಾರವೇ ಸಾಧ್ಯವಾಗುತ್ತಿತ್ತು.
ಮಹತ್ವದ ಗೆಲುವು: ಇತ್ತೀಚೆಗೆ ನಡೆದ ಟೆಸ್ಟ್ ಸರಣಿಗಳಲ್ಲಿ ಭಾರತ ಉತ್ತಮ ಪ್ರದರ್ಶನವನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ, ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ದಾಖಲಿಸಿರುವ ಈ ಗೆಲುವು ಆ ತಂಡದ ಆತ್ಮವಿಶ್ವಾಸ ವೃದ್ಧಿಗೆ ಸಹಾಯಕವಾಗಿದೆ. ಅಲ್ಲದೇ, ವೈಯಕ್ತಿಕವಾಗಿ ಧೋನಿ ಅವರಿಗೆ ನೆಮ್ಮದಿ ತಂದಿದೆ.
ಏಕೆಂದರೆ, ಸತತ ವೈಫಲ್ಯಗಳ ಹಿನ್ನೆಲೆಯಲ್ಲಿ, ಧೋನಿ ಅವರ ಮೂರೂ ಮಾದರಿಯ ಕ್ರಿಕೆಟ್ (ಟೆಸ್ಟ್, ಏಕದಿನ ಹಾಗೂ ಟ್ವೆಂಟಿ)ಗಳಲ್ಲಿ ಒಂದರ ನಾಯಕತ್ವವನ್ನು ಬಿಡಬೇಕು ಎಂಬ ಕೂಗು ಕೇಳಿಬಂದಿತ್ತು.
ಇದೀಗ, ಈ ಜಯ ಟೀಕಿಸುತ್ತಿದ್ದವರ ಬಾಯಿಗೆ ತಾತ್ಕಾಲಿಕವಾಗಿಯಾದರೂ ಬೀಗ ಜಡಿದಿದೆ.
ಅತ್ತ, ಹಲವಾರು ಟೀಕೆಗಳ ಮಧ್ಯೆಯೂ ಧೋನಿ ಅವರನ್ನೇ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ನಾಯಕರನ್ನಾಗಿ ಮುಂದುವರೆಸಿದ ಬಿಸಿಸಿಐ ಆಯ್ಕೆ ಮಂಡಳಿಗೂ ತನ್ನ ಆಯ್ಕೆಗೆ ಸಮರ್ಥನೆ ನೀಡುವ ಅವಕಾಶವನ್ನು ಕಲ್ಪಿಸಿದೆ.