ಪ್ರಣಾಳಿಕೆ ಬಿಡುಗಡೆ
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 'ಭರವಸೆಯ ಬೆಳಕು' ಕಲ್ಪಿಸುವ ಸಂಕಲ್ಪದೊಂದಿಗೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಬಿಜೆಪಿ ಸರ್ಕಾರದ ಐದು ವರ್ಷದ ಆಡಳಿತದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಆಧರಿಸಿ ಮುಂದಿನ ದೃಷ್ಟಿಯ ಬಗ್ಗೆ ನೀಲ ನಕಾಶೆ ಸಿದ್ಧಪಡಿಸಿರುವ ಬಿಜೆಪಿ, ಒಟ್ಟು ಒಂಭತ್ತು ಅಂಶಗಳ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.
ನಗರದ ಖಾಸಗಿ ಹೊಟೇಲ್ನಲ್ಲಿ ಬುಧವಾರ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಇದರಲ್ಲಿ ಸಾಂಸ್ಥಿಕ ಮತ್ತು ಆಡಳಿತಾತ್ಮಕ ಸುಧಾರಣೆ, ಮೂಲ ಸೌಕರ್ಯ ಸುಸ್ಥಿರ ಅಭಿವೃದ್ಧಿ, ನಗರ ಸಂಚಾರ, ಪರಿಸರ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಸಂಸ್ಕೃತಿ ಸಂವರ್ಧನೆ ವಿಚಾರಗಳನ್ನು ಆದ್ಯತಾ ವಲಯಗಳೆಂದು ಪರಿಗಣಿಸಲಾಗಿದೆ.
ಪ್ರಮುಖ ಭರವಸೆಗಳು
1. ರಾಜ್ಯದ ಎಲ್ಲಾ ನಗರ, ಪಟ್ಟಣಗಳಲ್ಲಿ ಬೆಂಗಳೂರು ಒನ್ ಮಾದರಿಯಲ್ಲಿ ಸಕಲ ನಾಗರಿಕ ಸೌಕರ್ಯ ಸೇವಾ ಕೇಂದ್ರಗಳ ಆರಂಭ.
2. ನಾಗರಿಕರ ದೂರು-ದುಮ್ಮಾನ ಆಲಿಸಲು ಆನ್ಲೈನ್ ಮತ್ತು ದೂರವಾಣಿ ನಿರ್ವಹಣಾ ಕೇಂದ್ರಗಳ ಸ್ಥಾಪನೆ.
3. ಪಾರದರ್ಶಕ ಆಡಳಿತಕ್ಕೆ ನಗರಪಾಲಿಕೆಗಳ ದೈನಂದಿನ ಆಡಳಿತದ ಕಂಪ್ಯೂಟರೀಕರಣ.
4. ಮನೆ, ಕಟ್ಟಡ ಮುಂತಾದ ನಿರ್ಮಾಣ ಪರವಾನಗಿ ನೀಡುವುದನ್ನು ಸರಳಗೊಳಿಸಿ ಗ್ರಾಹಕ ಸ್ನೇಹಿಯಾಗಿಸುವುದು.
5. ನಗರದ ಸಕಲ ಆಸ್ತಿಯನ್ನೂ ಭೌಗೋಳಿಕ ಸಮೀಕ್ಷೆ ಮೂಲಕ ವಿಂಗಡಿಸಿ ಪ್ರತಿ ಆಸ್ತಿಗೂ ಗುರುತು ಸಂಖ್ಯೆ ನೀಡುವುದು.
6. ಮುದ್ರಾಂಕ ಶುಲ್ಕ, ವಾಹನ ಸುಂಕ ಮುಂತಾದ ರಾಜ್ಯದ ತೆರಿಗೆ ಆದಾಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಪಾಲು.
7. ಆಸ್ತಿ ಸಕ್ರಮ ಸೌಲಭ್ಯವನ್ನು ಎಲ್ಲಾ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಿಗೆ ವಿಸ್ತರಿಸುವುದು.
8. ಸಮರ್ಪಕ ಕುಡಿಯುವ ನೀರು ವ್ಯವಸ್ಥೆ ಮತ್ತು ಹೊಸ ಜಲ ಸಂಗ್ರಹಾಗಾರ ನಿರ್ಮಾಣ.
9. ನಗರದ ಸುತ್ತಲಿನ ಪರಿಸರದಲ್ಲಿ ಆರ್ಥಿಕ ವಹಿವಾಟು ಚುರುಕುಗೊಳಿಸಲು ಪಟ್ಟಣ ಕ್ಲಸ್ಟರ್ ಅಭಿವೃದ್ಧಿ ಯೋಜನೆ ಜಾರಿ.
10. ಜಿಲ್ಲಾ ಕೇಂದ್ರಗಳಲ್ಲಿ ಮೇಲ್ಸೇತುವೆ ಹಾಗೂ ಸುರಂಗ ಮಾರ್ಗ, ಹೊರ ವರ್ತುಲ ರಸ್ತೆ ನಿರ್ಮಾಣ.
11. ಪ್ರತಿ ವಾರ್ಡ್ನಲ್ಲಿ ಸುಲಭ ಶೌಚಾಲಯ, ರೈಲು ಮೇಲು ಮತ್ತು ಕೆಳ ಸೇತುವೆಗಳ ನಿರ್ಮಾಣ.
12. ಮುಂದಿನ ಐದು ವರ್ಷಗಳಲ್ಲಿ ಕೊಳಗೇರಿ ಮುಕ್ತ ರಾಜ್ಯ ನಿರ್ಮಾಣ.
13. ನಗರ ಸಾರಿಗೆ ಸಂಚಾರ ಯೋಜನೆ, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರೀಪೇಡ್ ಆಟೋ ಮತ್ತು ಟ್ಯಾಕ್ಸಿ ಕೇಂದ್ರ.
14. ಹೊಸ ನಗರ ಅರಣ್ಯ ನಿರ್ಮಾಣ, ಮನೆಗೆರಡು ಮರ ಯೋಜನೆ ಅನುಷ್ಠಾನ, ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ.
15. ಚರಂಡಿಗಳಲ್ಲಿ ಮಳೆ ನೀರು ಇಂಗುಗುಂಡಿಗಳ ನಿರ್ಮಾಣ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆಯುರ್ವೇದ ಔಷಧೀಯ ಸಸ್ಯತೋಟಗಳ ನಿರ್ಮಾಣ.
16. ಮಹಾನಗರಗಳಲ್ಲಿ ಡಾ.ಎಂ.ಆರ್. ತಂಗಾ ಅವರ ಹೆಸರಿನಲ್ಲಿ ಡಯಾಲಿಸಿಸ್, ಡಯಾಬಿಟಿಕ್ ಮತ್ತು ಹೃದಯ ಸಂಬಂಧಿ ಸೇವೆಗಳ ಕೇಂದ್ರ ಸ್ಥಾಪನೆ.
17. ಪಟ್ಟಣಗಳಲ್ಲಿ ದೀನ್ ದಯಾಳ್ ಉಪಾಧ್ಯಾಯ ಕೌಶಲ್ಯ ತರಬೇತಿ ಕೇಂದ್ರ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ವಿವೇಕಾನಂದ ಕೇಂದ್ರ ಸ್ಥಾಪನೆ.
18. ಪ್ರತಿ ನಗರಗಳಲ್ಲೂ ಅಟಲ್ಜೀ ಕ್ರೀಡಾ ಸಮುಚ್ಛಯ ಸ್ಥಾಪನೆ.
19. ಐತಿಹಾಸಿಕ ಸ್ಥಳಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕ್ರಿಯಾಯೋಜನೆ ಮತ್ತು ಚಾರಿತ್ರಿಕ ವ್ಯಕ್ತಿಗಳ ಹೆಸರಿನಲ್ಲಿ ಥೀಮ್ ಪಾರ್ಕ್ಗಳ ನಿರ್ಮಾಣ.
ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಉಪಮುಖ್ಯಮಂತ್ರಿ ಆರ್. ಅಶೋಕ, ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಶ್ವತ್ಥನಾರಾಯಣ, ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಹಾಜರಿದ್ದರು.