ಮಂಡಳಿಗೆ ಬ್ರೇಕ್ ಹಾಕಲು ಒಂದಾದ ರಾಜ್ಯದ ಸಂಸದರು
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ವಿರೋಧ. ರಾಜ್ಯವನ್ನು ಪ್ರತಿನಿಧಿಸುವ ಸಂಸದರು, ಸಚಿವರ ಜತೆ ಸಿಎಂ ಸಭೆ. ಮಂಡಳಿ ರಚಿಸದಂತೆ ಪ್ರಧಾನಿ ಮೇಲೆ ಒತ್ತಡ ತರಲು ಸಂಸದರು ಸಿದ್ಧ...
ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ರಚಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಕರ್ನಾಟಕ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸತ್ ಸದಸ್ಯರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬುಧವಾರ ಕರ್ನಾಟಕ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು, ಪಕ್ಷ ಭೇದ ಮರೆತು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ವಿಷಯ ಪ್ರಸ್ತಾಪವಾದಾಗ ಮಂಡಳಿ ರಚಿಸುವುದಕ್ಕೆ ಕರ್ನಾಟಕದ ವಿರೋಧವನ್ನು ಸದನಕ್ಕೆ ತರುವುದು ಮಂಡಳಿ ರಚಿಸದಂತೆ ಪ್ರಧಾನಿ ಮೇಲೆ ಒತ್ತಡ ತರುವುದಕ್ಕೆ ಸಂಸದರು ಸಮ್ಮತಿಸಿದ್ದಾರೆ. ರಾಜ್ಯದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅನುಮೋದನೆ ಪಡೆಯಲು ಒತ್ತಡ ಹೇರಬೇಕೆಂಬ ಸಿಎಂ ಮನವಿಗೂ ಸಂಸದರು ಸ್ಪಂದಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶೆಟ್ಟರ್, ನೀರು ಹಂಚಿಕೆಗೆ ಇರುವ ತಕರಾರುಗಳು ಹಾಗೂ ಅಂತಿಮ ಐತೀರ್ಪಿನ ಅಧಿಸೂಚನೆ ಪ್ರಕಟಿಸಿದ ನಂತರ ಆಗಿರುವ, ಆಗಲಿರುವ ಪರಿಣಾಮಗಳ ಬಗ್ಗೆ ಸಂಸತ್ ಸದಸ್ಯರಿಗೆ ವಿವರಿಸಿದರು.
ಐತೀರ್ಪನಿಂದ ಅನ್ಯಾಯ-ಶೆಟ್ಟರ್: ಕಾವೇರಿ ನ್ಯಾಯಾಧಿಕರಣದ ಐತೀರ್ಪಿನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಆ ಅರ್ಜಿಗಳು ಇತ್ಯರ್ಥವಾಗಬೇಕಿದೆ. ಅದಕ್ಕೂ ಮುನ್ನ ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗದಂತೆ ನೋಡಿಕೊಳ್ಳಬೇಕಿದೆ. ಅದಕ್ಕೆ ಸಂಸದರಾದ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು. ಮುಖ್ಯಮಂತ್ರಿಗಳ ಕೋರಿಕೆಗೆ ಸ್ಪಂದಿಸಿದ ಕೇಂದ್ರ ಸಚಿವರು ಹಾಗೂ ಸಂಸದರು ರಾಜ್ಯದ ಹಿತಾಸಕ್ತಿ ಕಾಯುವಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಮತ್ತು ವೀರಪ್ಪ ಮೊಯ್ಲಿ ಅವರೂ ಕಾವೇರಿ ನ್ಯಾಯಾಧಿಕರಣದ ಅಧಿಸೂಚನೆ ಕಾನೂನು ಪ್ರಕ್ರಿಯೆ. ಆದರೆ, ಮುಂದೆ ಕಾನೂನಿಗನುಗುಣವಾಗಿ ಕೇಂದ್ರ ಸರ್ಕಾರದಿಂದ ರಾಜ್ಯದ ಹಿತಾಸಕ್ತಿ ಕಾಪಾಡುವುದಾಗಿ ತಿಳಿಸಿದ್ದಾರೆ.
ಕಾವೇರಿ ಕಣಿವೆ ಸಂಸದರೇ ಗೈರು!
ಕಾವೇರಿ ನಿರ್ವಹಣಾ ಮಂಡಳಿ ರಚಿಸದಂತೆ ಒತ್ತಡ ಹೇರಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕರೆದಿದ್ದ ಸಭೆಗೆ ಕಾವೇರಿ ಕಣಿವೆ ಪ್ರತಿನಿಧಿಸುವ ಸಂಸದರಾದ ಎಚ್. ವಿಶ್ವನಾಥ್, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಚಲುವರಾಯ ಸ್ವಾಮಿ ಅವರೇ ಗೈರು ಹಾಜರಾಗಿದ್ದರು. ಹೀಗಾಗಿ ಕಾವೇರಿ ಸಮಸ್ಯೆ ಪ್ರಸ್ತಾಪವಾದಾಗ ವಿಷಯ ಕುರಿತು ಹೆಚ್ಚಿನ ಚರ್ಚೆಗಳೇನೂ ಆಗಲಿಲ್ಲ.
ವಕೀಲ ನಾರಿಮನ್‌ರ ಭೇಟಿ
ಕಾನೂನು ತಜ್ಞ ಫಾಲಿ ನಾರಿಮನ್ ಅವರನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅಧಿಸೂಚನೆ ಪ್ರಕಟವಾಗಿರುವ ನಂತರದ ಪರಿಸ್ಥಿತಿ ಬಗ್ಗೆ ಸಮಾಲೋಚಿಸಲಾಯಿತು. ರಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ತಕರಾರು ಅರ್ಜಿಗಳು ಆಗಸ್ಟ್‌ನಲ್ಲಿ ಚರ್ಚೆಗೆ ಬರಲಿವೆ. ಅಲ್ಲಿವರೆಗೆ ರಾಜ್ಯ ಕೈಗೊಳ್ಳಬೇಕಾದ ಕ್ರಮಗಳು ಮತ್ತು ನಿರ್ವಹಣಾ ಮಂಡಳಿ ರಚನೆ ತಡೆಗೆ ಇರುವ ಕಾನೂನು ಹೋರಾಟದ ಅವಕಾಶಗಳ ಕುರಿತಂತೆಯೂ ಚರ್ಚಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.